Bihar Election 2025| ಬಹುಮತದತ್ತ ಎನ್‌ಡಿಎ; 10 ನೇ ಬಾರಿ ನಿತೀಶ್‌ಕುಮಾರ್‌ ಸಿಎಂ?

ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಹೇಳಿವೆ.

Update: 2025-11-14 06:07 GMT

ಬಿಹಾರ ಚುನಾವಣೆ ಮತ ಎಣಿಕೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಆರಂಭಿಲ ಮುನ್ನಡೆಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಹಾಗೂ ಬಿಜೆಪಿ ಅತಿ ದೊಡ್ಡ ಪಕ್ಷಗಳಾಗಿ ಹೊರಹೊಮ್ಮುತ್ತಿವೆ.

ಬೆಳಿಗ್ಗೆ 12 ರ ಹೊತ್ತಿಗೆ 75 ಕ್ಷೇತ್ರಗಳಲ್ಲಿ ಜೆಡಿಯು ಅ‌ಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಅಚ್ಚರಿಯ ಫಲಿತಾಂಶದ ಬೆನ್ನಲ್ಲೇ ನಿತೀಶ್‌ ಕುಮಾರ್‌ ಅವರು 10 ನೇ ಬಾರಿಗೆ ಮುಖ್ಯಮಂತ್ರಿ  ಸ್ಥಾನಕ್ಕೇರಲು ವೇದಿಕೆ ಸಜ್ಜಾಗಿದೆ ಎಂಬ ವಿಶ್ಲೇಷಣೆಗಳು ಶುರುವಾಗಿವೆ. ಈ ಮಧ್ಯೆ ಕಾಂಗ್ರೆಸ್‌-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ಭವಿಷ್ಯ ಕ್ಷೀಣಿಸುತ್ತಿದೆ.   

ಈಗಾಗಲೇ  ಚುನಾವಣೋತ್ತರ ಸಮೀಕ್ಷೆಗಳು ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಹೇಳಿವೆ. ಎನ್‌ಡಿಎ ಒಕ್ಕೂಟವು ಸುಲಭವಾಗಿ 122ರ ಬಹುಮತದ ಗುರಿ ತಲುಪುತ್ತದೆ ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ 67.13 ಶೇಕಡಾ ಮತದಾನ ದಾಖಲಾಗಿದ್ದು, ಇದು 1951ರ ಬಿಹಾರದ ಮೊದಲ ವಿಧಾನಸಭಾ ಚುನಾವಣೆ ನಂತರದ ಶೇ 65.08 ಮತದಾನ ದಾಖಲಾಗಿದೆ. ನವೆಂಬರ್ 11ರಂದು ನಡೆದ ಎರಡನೇ ಹಂತದಲ್ಲಿ ಶೇ 69.20 ಮತದಾರರು ಭಾಗವಹಿಸಿದ್ದಾರೆ.

ನಿತೀಶ್‌ ರಾಜಕೀಯ ಹಾದಿ

1975ರಲ್ಲಿ ಪ್ರಥಮ ಬಾರಿಗೆ ಬಿಹಾರ ವಿಧಾನಸಭೆಗೆ ಆಯ್ಕೆಯಾದ ನಿತೀಶ್ ಕುಮಾರ್‌ ಅವರು 1987ರಲ್ಲಿ ಯುವ ಲೋಕದಳದ ಅಧ್ಯಕ್ಷರಾಗಿ ಆಯ್ಕೆಯಾದರು. 1989ರಲ್ಲಿ ಬಿಹಾರ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಅದೇ ವರ್ಷ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಚುನಾಯಿತರಾದರು.

1990ರಲ್ಲಿ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಕೃಷಿ ಮತ್ತು ಸಹಕಾರ ಇಲಾಖೆಯ ರಾಜ್ಯ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1991ರಲ್ಲಿ 10ನೇ ಲೋಕಸಭೆಗೆ ಮರುಚುನಾಯಿತರಾದರು. 

ಜನತಾದಳದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಲೋಕಸಭೆಯಲ್ಲಿ ಜನತಾದಳದ ಉಪನಾಯಕರಾದರು. 1998-2000 ನೇ ಅವಧಿಯಲ್ಲಿ ಕೆಂದ್ರ ಮಂತ್ರಿಮಂಡಲದಲ್ಲಿ ರೈಲು, ರಸ್ತೆ ಸಾರಿಗೆ ಮತ್ತು ಕೃಷಿ ಖಾತೆ ನಿಭಾಯಿಸಿದ್ದರು.  2001ರಲ್ಲಿ ಕೇವಲ 7 ದಿನಗಳ ಕಾಲ ಬಿಹಾರದ ಮುಖ್ಯಮಂತ್ರಿಯಾದರು.

ಅದೇ ವರ್ಷ ಮತ್ತೆ ಕೇಂದ್ರ ಸಂಪುಟ ಸೇರಿದ ನಿತೀಶ್ ಅವರು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಸಂಪುಟದಲ್ಲಿ 2001ರಿಂದ 2004ರ ವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸೋಲು ಕಂಡರೂ ನಿತೀಶ್ 6ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿ ಸಂಸತ್ತಿನಲ್ಲಿ ಸಂಯುಕ್ತ ಜನತಾದಳದ ಶಾಸಕಾಂಗ ಪಕ್ಷದ ನಾಯಕರಾದರು.

ನವೆಂಬರ್ 2005ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಗೆಲುವಿನೆಡೆ ಕೊಂಡೊಯ್ದ ಲಾಲೂ ಪ್ರಸಾದ್‌ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳದ 15ವರ್ಷದ ಆಡಳಿತವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Tags:    

Similar News