Paris Olympics 2024 |ನೀರಜ್ ಚೋಪ್ರಾಗೆ ಬೆಳ್ಳಿ
ನೀರಜ್ ಚೋಪ್ರಾ ಅವರ 89.45 ಮೀ ಎಸೆತವು ಚಿನ್ನವನ್ನು ಉಳಿಸಿಕೊಳ್ಳಲು ಸಾಕಾಗಲಿಲ್ಲ.ಏಕೆಂದರೆ, ಪಾಕಿಸ್ತಾನದ ಅರ್ಷದ್ ನದೀಮ್ ಅವರು 92.97 ಮೀ ಎಸೆದು ಹೊಸ ದಾಖಲೆ ಮಾಡಿ, ವಿಜೇತರಾದರು.
ಒಲಿಂಪಿಕ್ಸ್ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಅವರು ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಪಾತ್ರವಾಗಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಂ ಅವರು 92.97 ಮೀಟರ್ ದಾಖಲೆ ಎಸೆತದಿಂದ ಚಿನ್ನದ ಪದಕ ಗಳಿಸಿದ್ದಾರೆ.
ಚೋಪ್ರಾ(26) ಅವರು ತಮ್ಮ ಹಿಂದಿನ 10 ಮುಖಾಮುಖಿಯಲ್ಲಿ ನದೀಮ್‌ಗೆ ಸೋತಿರಲಿಲ್ಲ. ಚೋಪ್ರಾ ಎರಡನೇ ಪ್ರಯತ್ನದಲ್ಲಿ 89.45 ಮೀ ಎಸೆಯುವ ಮೂಲಕ ಬೆಳ್ಳಿ ಪಡೆದರು. ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ 87.58ಮೀ ದೂರ ಎಸೆದು ಚಿನ್ನ ಗೆದ್ದಿದ್ದರು.
ಅರ್ಷದ್ ನದೀಮ್ ಅವರ ಚಿನ್ನದ ಎಸೆತ: ನದೀಮ್(27) ಅವರ ದೈತ್ಯ ಪ್ರಯತ್ನ, ಇತಿಹಾಸದ ಆರನೇ ಅತಿ ಉದ್ದವಾದ ಎಸೆತವು ಎರಡನೇ ಪ್ರಯತ್ನದಲ್ಲಿ ಬಂದಿತು. ಆಗಸದಿಂದ ಬಂದ ಮಿಂಚಿನಂತೆ ಹೊಳೆಯಿತು. ನದೀಮ್ ಅವರು 2023 ರ ಬುಡಾಪೆಸ್ಟ್ ವಿಶ್ವ ಚಾಂಪಿ ಯನ್‌ಶಿಪ್‌ನಲ್ಲಿ ಚೋಪ್ರಾ ವಿರುದ್ಧದ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ. ಅವರು ಪಾಕಿಸ್ತಾನದ ಮೊದಲ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ವಿಜೇತರಾಗಿದ್ದಾರೆ.
ಹಿಂದಿನ ಒಲಿಂಪಿಕ್ ದಾಖಲೆ 90.57 ಮೀ. 2008 ರ ಬೀಜಿಂಗ್ ಕ್ರೀಡಾಕೂಟದಲ್ಲಿ ನಾರ್ವೆಯ ಆಂಡ್ರಿಯಾಸ್ ಥೋರ್ಕಿಲ್ಡ್ಸೆನ್ ಮೂಲಕ ಬಂದಿತ್ತು. ನದೀಮ್ ಅವರ ಕೊನೆಯ ಎಸೆತ 91.79 ಮೀಟರ್ ಇದ್ದಿತ್ತು.
ನೀರಜ್ ಸ್ವಾತಂತ್ರ್ಯಾನಂತರ ಅನೇಕ ಒಲಿಂಪಿಕ್ ಪದಕಗಳನ್ನು ಗೆದ್ದ ನಾಲ್ಕನೇ ಭಾರತೀಯ. ಶಟ್ಲರ್ ಪಿ.ವಿ. ಸಿಂಧು (ಒಂದು ಬೆಳ್ಳಿ, ಒಂದು ಕಂಚು), ಕುಸ್ತಿಪಟು ಸುಶೀಲ್ ಕುಮಾರ್ (ಒಂದು ಬೆಳ್ಳಿ, ಒಂದು ಕಂಚು), ಮತ್ತು ಶೂಟರ್ ಮನು ಭಾಕರ್ (ಎರಡು ಕಂಚು) ತಲಾ ಎರಡು ಪದಕ ಗೆದ್ದಿದ್ದಾರೆ.
ಗಾಯದಿಂದ ಹಿನ್ನಡೆ: ನದೀಮ್ ಅವರ ಎರಡನೇ ಪ್ರಯತ್ನದ 92.97 ಮೀ, ಚೋಪ್ರಾ ಸೇರಿದಂತೆ ಎಲ್ಲರಿಗೂ ಅತಿ ಎತ್ತರದ ಗುರಿ ನಿಗದಿಪಡಿಸಿತು. ಒತ್ತಡದಲ್ಲಿದ್ದ ಚೋಪ್ರಾ ಅವರ ಒಂದು ಎಸೆತ ಮಾತ್ರ ಸರಿಯಿತ್ತು. ಆದರೆ, ಅದು ಚಿನ್ನದ ಪದಕಕ್ಕೆ ಸಾಕಾಗುವಷ್ಟು ಹತ್ತಿರದಲ್ಲಿರಲಿಲ್ಲ.
ಎಸೆಯಲು ಹೋಗುತ್ತಿದ್ದಾಗ ಗಾಯದ ಬಗ್ಗೆ ಯೋಚಿಸುತ್ತಿದ್ದೆ ಎಂದು ಚೋಪ್ರಾ ಹೇಳಿದರು. ʻಎಸೆಯುತ್ತಿದ್ದಾಗ ಶೇ. 60-70 ರಷ್ಟು ಗಮನ ಗಾಯದ ಮೇಲೆ ಇದ್ದಿತ್ತು. ಎಸೆತಕ್ಕೆ ಮುನ್ನ ನನ್ನ ಓಟ ಚೆನ್ನಾಗಿರಲಿಲ್ಲ, ವೇಗವೂ ಕಡಿಮೆಯಾಗಿತ್ತು. ನನಗೆ ಶಸ್ತ್ರಚಿಕಿತ್ಸೆಗೆ ಸಮಯವಿರಲಿಲ್ಲ,ʼ ಎಂದು ಅವರು ಆನಂತರ ಹೇಳಿದರು.
ʻನನ್ನಲ್ಲಿ ಬಹಳಷ್ಟು ಆಟ ಉಳಿದಿದೆ. ನಾನು ಅದನ್ನು ಸಾಧಿಸಬೇಕು. ನಾನು ಅದನ್ನು ಸಾಧಿಸಬಲ್ಲೆ ಎಂಬ ವಿಶ್ವಾಸ ನನ್ನಲ್ಲಿದೆ. ಸಾಧಿಸದೆ ಇದ್ದಲ್ಲಿ ನಾನು ಶಾಂತಿಯಿಂದ ಇರುವುದಿಲ್ಲ,ʼ ಎಂದು ಸುದ್ದಿಗಾರರಿಗೆ ತಿಳಿಸಿದರು.
ಆಂಡರ್ಸನ್ ಪೀಟರ್ಸ್ ಅವರಿಗೆ ಕಂಚು: ಗ್ರೆನಡಾದ ಆಂಡರ್ಸನ್ ಪೀಟರ್ಸ್ 88.54 ಮೀ ಎಸೆದು ಕಂಚು, ಜೆಕ್ ಗಣರಾಜ್ಯದ ಯಾಕುಬ್ ವಡ್ಲೆಜ್ ನಾಲ್ಕನೇ (88.50 ಮೀ) ಮತ್ತು ಕೀನ್ಯಾದ ಜೂಲಿಯಸ್ ಯೆಗೊ (87.72 ಮೀ) ನಂತರದ ಸ್ಥಾನ ಪಡೆದರು. ಏಳು ಕ್ರೀಡಾಪಟುಗಳು 86 ಮೀ ಗುರಿಯನ್ನು ದಾಟಿದರು.
2010ರ ನಂತರ ಮೊದಲ ಸೋಲು: ಚೋಪ್ರಾ- ʻನಾನು 2010 ರಿಂದ ಅರ್ಷದ್ ಅವರೊಂದಿಗೆ ಸ್ಪರ್ಧಿಸುತ್ತಿದ್ದೇನೆ; ಇದೇ ಮೊದಲ ಬಾರಿಗೆ ಸೋತಿದ್ದೇನೆ. ಇದು ಕ್ರೀಡೆ; ನಾವು ಸೋಲು ಒಪ್ಪಿಕೊಳ್ಳಬೇಕು. ದೇಹದಲ್ಲಿ ಶಕ್ತಿ ಇರುವವರೆಗೆ ನಾವು ಏಷ್ಯಾದ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ,ʼ ಎಂದು ಚೋಪ್ರಾ ಹೇಳಿದರು.
ನದೀಮ್ 2022 ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲಲು 90.18 ಮೀ ಎಸೆದಿದ್ದರು. ಅವರು 90 ಮೀಟರ್ ಗುರಿ ದಾಟಿದ ಎರಡನೇ ಏಷ್ಯನ್; ಮೊದಲಿನವರು ಚೈನೀಸ್ ತೈಪೆಯ ಚಾವೊ ಸುನ್ ಚೆಂಗ್ (2017 ರಲ್ಲಿ 91.36 ಮೀ). 2023 ರ ಬುಡಾಪೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೋಪ್ರಾ ವಿರುದ್ಧದ ಸೋಲಿನ ಸೇಡು ತೀರಿಸಿಕೊಂಡರು.
ಗಾಯದಿಂದ ಚೋಪ್ರಾ 2022 ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿರಲಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ನಡೆದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚೋಪ್ರಾ ಅವರೊಂದಿಗೆ ನದೀಮ್ ಸ್ಪರ್ಧಿಸಬೇಕಿತ್ತು.ಆದರೆ, ಗಾಯದ ಕಾರಣ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಚೋಪ್ರಾ 2018 ರ ಏಷ್ಯನ್ ಗೇಮ್ಸ್ ಮತ್ತು 2018 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನದೀಮ್ ಅವರನ್ನು ಸೋಲಿಸಿದ್ದರು.
ಉತ್ಕೃಷ್ಟ ವ್ಯಕ್ತಿತ್ವ: ಪ್ರಧಾನಿ ಶ್ಲಾಘನೆ- ಚೋಪ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶ್ಲಾಘಿಸಿದ್ದಾರೆ.
ʻನೀರಜ್ ಚೋಪ್ರಾ ಒಬ್ಬ ಶ್ರೇಷ್ಠ ವ್ಯಕ್ತಿ! ಅವರು ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಬೆಳ್ಳಿ ಗೆದ್ದಿದ್ದಕ್ಕೆ ಅವರಿಗೆ ಅಭಿನಂದನೆಗಳು. ತಮ್ಮ ಕನಸುಗಳನ್ನು ಮುಂದುವರಿಸಲು ಮತ್ತು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಲು ಅವರು ಅಸಂಖ್ಯಾತ ಕ್ರೀಡಾಪಟುಗಳನ್ನು ಪ್ರೇರೇಪಿಸುವುದನ್ನು ಮುಂದುವರಿಸುತ್ತಾರೆ,ʼ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.
ʻ ಚೋಪ್ರಾ ಅವರಿಂದ ಹೆಚ್ಚಿನ ಪದಕಗಳನ್ನು ದೇಶ ಎದುರು ನೋಡುತ್ತದೆ,ʼ ಎಂದು ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ. ʻಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಕ್ಕಾಗಿ ನೀರಜ್ ಚೋಪ್ರಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್. ಅವರ ಸಾಧನೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ,ʼ ಎಂದು ಹೇಳಿದ್ದಾರೆ.
ಪ್ಯಾರಿಸ್ ಗೇಮ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸವನ್ನು ಸೃಷ್ಟಿಸಿರುವ ಶೂಟರ್ ಮನು ಭಾಕರ್ ಕೂಡ ಚೋಪ್ರಾ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.
ʻನಮ್ಮ ತಾರೆ ನೀರಜ್ ಚೋಪ್ರಾಗೆ ಒಂದರ ಹಿಂದೆ ಮತ್ತೊಂದು ಒಲಿಂಪಿಕ್ ಪದಕ! ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ. ನೀವು ಚಿನ್ನ ಗೆಲ್ಲದೆ ಇರಬುದು; ಆದರೆ ಫೈನಲ್‌ನಲ್ಲಿ ನಿಮ್ಮ ಬದ್ಧತೆ ಮತ್ತು ಪ್ರಯತ್ನ ನಿಜವಾಗಿಯೂ ಸ್ಪೂರ್ತಿದಾಯಕವಾಗಿತ್ತು!ʼ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಎಕ್ಸ್ ನಲ್ಲಿ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ಕೇಂದ್ರ ಸಚಿವರು, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ರಾಜಕಾರಣಿಗಳು ಚೋಪ್ರಾ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.
ನಿರಾಶೆಯಾಗಿಲ್ಲ: ಚೋಪ್ರಾ ಕುಟುಂಬ- ʻಒಲಿಂಪಿಕ್ಸ್ ಚಿನ್ನವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನಿರಾಶೆಗೊಂಡಿಲ್ಲ. ಬದಲಿಗೆ ದೇಶಕ್ಕಾಗಿ ಸತತ ಎರಡನೇ ಪದಕ ಗೆದ್ದ ಅವರ ಸಾಧನೆಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ,ʼ ಎಂದು ನೀರಜ್ ಅವರ ತಂದೆ ಸತೀಶ್ ಕುಮಾರ್ ಹೇಳಿದ್ದಾರೆ.
ಅವರ ತಾಯಿ ಸರೋಜ್ ದೇವಿ, ʼನೀರಜ್ ಉತ್ತಮ ಸಾಧನೆ ಮಾಡಿದ್ದಾರೆ. ಅವರಿಗೆ ಭವ್ಯ ಸ್ವಾಗತ ನೀಡುತ್ತೇವೆ. ಅವರು ಚುರ್ಮಾವನ್ನು ಇಷ್ಟಪಡುವುದರಿಂದ, ಅದನ್ನುಮಾಡುತ್ತೇನೆ,ʼ ಎಂದರು.