Paris Olympics 2024| ಹಾಕಿ: 52 ವರ್ಷಗಳ ನಂತರ ಆಸ್ಟ್ರೇಲಿಯವನ್ನು ಮಣಿಸಿದ ಭಾರತ
ಪ್ಯಾರಿಸ್: ಶುಕ್ರವಾರ ನಡೆದ ಬಿ ಗುಂಪಿನ ಅಂತಿಮ ಪಂದ್ಯದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಗಳಿಸುವ ಮೂಲಕ ಭಾರತ ಪುರುಷರ ಹಾಕಿ ತಂಡವು ಟೋಕಿಯೊ ಗೇಮ್ಸ್ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯ ವಿರುದ್ಧ 3-2 ಅಂತರದ ಜಯ ದಾಖಲಿಸಿತು.
ಈ ಪಂದ್ಯಕ್ಕೆ ಮುನ್ನವೇ ಕ್ವಾರ್ಟರ್‌ಫೈನಲ್ ಪ್ರವೇಶಕ್ಕೆ ಭಾರತ ಅರ್ಹತೆ ಗಳಿಸಿತ್ತು. ಭಾರತೀಯರು 1972 ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯ ಮೇಲೆ ಕೊನೆಯ ಬಾರಿಗೆ ಜಯ ಗಳಿಸಿದ್ದರು.
ಭಾರತ ತನ್ನ ಕೊನೆಯ ಗುಂಪು ಪಂದ್ಯಕ್ಕಾಗಿ ಅತ್ಯುತ್ತಮವಾದುದನ್ನು ಉಳಿಸಿಕೊಂಡಿತ್ತು ಎಂದು ತೋರುತ್ತಿದೆ. ಏಕೆಂದರೆ, ತಂಡ ಪ್ರಬಲ ಪ್ರದರ್ಶನವನ್ನು ನೀಡಿತು; ಆರಂಭದಿಂದಲೂ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿತು ಮತ್ತು ಉತ್ತಮ ರಕ್ಷಣೆ ಕಾಯ್ದುಕೊಂಡಿತು.
ಭಾರತ ಪರ ಅಭಿಷೇಕ್ (12ನೇ ನಿಮಿಷ), ನಾಯಕ ಹರ್ಮನ್‌ಪ್ರೀತ್ (13, 33ನೇ ನಿಮಿಷ) ಗೋಲು ಗಳಿಸಿದರು. ಆಸ್ಟ್ರೇಲಿಯ ಪರ ಟಾಮ್ ಕ್ರೇಗ್ (25ನೇ ನಿಮಿಷ) ಮತ್ತು ಬ್ಲೇಕ್ ಗೋವರ್ಸ್ (55ನೇ ನಿಮಿಷ) ಗೋಲು ದಾಖಲಿಸಿದರು.
ಭಾರತ ಈ ಗೆಲುವಿನೊಂದಿಗೆ ಒಂಬತ್ತು ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಬೆಲ್ಜಿಯಂ (12) ಮೊದಲ ಸ್ಥಾನದಲ್ಲಿದೆ. ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಬೆಲ್ಜಿಯಂ ಸೋತರೂ, ಅದರ ಸ್ಥಾನ ಬದಲಾಗುವುದಿಲ್ಲ. ಆದರೆ, ಈ ಪಂದ್ಯದ ನಂತರ ಗೋಲುಗಳಲ್ಲಿನ ವ್ಯತ್ಯಾಸವು ಅಂತಿಮ ಸ್ಥಾನವನ್ನು ನಿರ್ಧರಿಸುತ್ತದೆ.
ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಆಡುತ್ತಿರುವ ಭಾರತದ ಹಿರಿಯ ಗೋಲಿ ಪಿ.ಆರ್. ಶ್ರೀಜೇಶ್ ಅವರು ಗೋಲಿನ ಮುಂದೆ ಗಟ್ಟಿಯಾಗಿ ನಿಂತಿದ್ದರು. 11ನೇ ನಿಮಿಷದಲ್ಲಿ ಟಾಮ್ ವಿಕ್‌ಹ್ಯಾಮ್ ಅವರ ಚೆಂಡು ತಡೆದರು. ಇದು ಪೆನಾಲ್ಟಿ ಕಾರ್ನರ್‌ಗೆ ಕಾರಣವಾಯಿತು. ಆದರೆ, ಜೆರೆಮಿ ಹೇವಾರ್ಡ್ ಗುರಿ ತಪ್ಪಿದರು.
ನಂತರ ಜರ್ಮನ್‌ಪ್ರೀತ್ ಸಿಂಗ್ ಬಲ ಪಾರ್ಶ್ವದಿಂದ ಸುಖಜೀತ್ ಸಿಂಗ್‌ಗೆ ಪಾಸ್ ನೀಡಿದರು. ಅವರು ಚೆಂಡನ್ನು ಸಂಗ್ರಹಿಸಿ ಹೊಡೆಯಲು ಸಿದ್ಧರಾಗುವಷ್ಟರಲ್ಲಿ ಆಸ್ಟ್ರೇಲಿಯದ ಬಲಿಷ್ಠ ರಕ್ಷಣಾ ಪಡೆ ಅವರ ಪ್ರಯತ್ನವನ್ನು ವಿಫಲಗೊಳಿಸಿತು. ಆನಂತರ, ಆಸ್ಟ್ರೇಲಿಯ ಎರಡು ಅವಕಾಶಗಳನ್ನು ಸೃಷ್ಟಿಸಿತಾದರೂ, ಭಾರತದ ರಕ್ಷಣೆಯನ್ನು ದಾಟಲು ಆಗಲಿಲ್ಲ.
ಭಾರತ 12ನೇ ನಿಮಿಷದಲ್ಲಿ ಅಭಿಷೇಕ್ ಗೋಲಿನಿಂದ ಮುನ್ನಡೆ ಸಾಧಿಸಿತು. ಲಲಿತ್ ಚೆಂಡು ಹೊಡೆದರೂ, ಗೋಲಿ ಆಂಡ್ರ್ಯೂ ಚಾರ್ಟರ್ ತಡೆದರು. ಹಿಂದೆ ಚಿಮ್ಮಿದ ಚೆಂಡನ್ನು ಅಭಿಷೇಕ್ ಚೆಂಡನ್ನು ಗೋಲಿಗೆ ಹೊಡೆದರು.
ಒಂದು ನಿಮಿಷದ ನಂತರ ಜೇಕ್ ಹಾರ್ವಿ ಅವರ ಪಾದಕ್ಕೆ ಚೆಂಡು ತಗುಲಿ, ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಹರ್ಮನ್‌ಪ್ರೀತ್ ಗೋಲ್ ಹೊಡೆದರು.
ಎರಡನೇ ಸಮಯದ ಆರಂಭದಲ್ಲಿ ಟಿಮ್ ಬ್ರಾಂಡ್, ಸಿಕ್ಕ ಅವಕಾಶವನ್ನು ವ್ಯರ್ಥಗೊಳಿಸಿದರು. 19ನೇ ನಿಮಿಷದಲ್ಲಿ ಆಸ್ಟ್ರೇಲಿಯ ಎರಡನೇ ಪೆನಾಲ್ಟಿ ಕಾರ್ನರ್ ಗಳಿಸಿತು. ಆದರೆ, ಗೋವರ್ಸ್ ಹೊಡೆತವನ್ನು ಶ್ರೀಜೇಶ್ ತಡೆದರು. ಉಪನಾಯಕ ಹಾರ್ದಿಕ್ ಸಿಂಗ್ ಮಿಡ್ ಫೀಲ್ಡ್‌ನಲ್ಲಿ ಚುರುಕಾಗಿದ್ದು, ಫಾರ್ವರ್ಡ್‌ಗಳಿಗೆ ನಿರಂತರವಾಗಿ ಚೆಂಡು ಸಿಗುವಂತೆ ನೋಡಿಕೊಳ್ಳುತ್ತಿದ್ದರು.
25ನೇ ನಿಮಿಷದಲ್ಲಿ ಆಸ್ಟ್ರೇಲಿಯಕ್ಕೆ ಮೂರನೇ ಶಾರ್ಟ್ ಕಾರ್ನರ್ ಸಿಕ್ಕಿತು. ನಾಯಕ ಅರಾನ್ ಝಲೆವ್ಸ್ಕಿ ಮೂಲಕ ಚೆಂಡು ಪಡೆದ ಕ್ರೇಗ್, ಗೋಲ್ ಹೊಡೆದರು. ಭಾರತಕ್ಕೂ ಶೀಘ್ರದಲ್ಲೇ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಹರ್ಮನ್‌ಪ್ರೀತ್ ಅವರ ಹೊಡೆತವನ್ನು ಚಾರ್ಟರ್ ತಡೆದರು. ಭಾರತ 2-1 ಮುನ್ನಡೆ ಸಾಧಿಸಿತ್ತು. ಹರ್ಮನ್‌ಪ್ರೀತ್ ಅವರ ಮೂರನೇ ಪೆನಾಲ್ಟಿ ಕಾರ್ನರ್ ಹೊಡೆತವನ್ನು ಫ್ಲಿನ್ ಒಗಿಲ್ವಿ ಅಡ್ಡಿಪಡಿಸಿದರು. ಸಿಕ್ಕ ಪೆನಾಲ್ಟಿ ಹೊಡೆತವನ್ನು ಹರ್ಮನ್‌ಪ್ರೀತ್, ಗೋಲ್ ಆಗಿ ಪರಿವರ್ತಿಸಿದರು.
53 ನೇ ನಿಮಿಷದಲ್ಲಿ ಅಭಿಷೇಕ್ ಅವರ ಹೊಡೆತ ಗೋಲ್ ಆದರೂ, ನಿರಾಕರಿಸಲಾಯಿತು. ಆನಂತರ ಗೋವರ್ಸ್ ಪೆನಾಲ್ಟಿ ಸ್ಟ್ರೋಕ್‌ನಿಂದ ತಮ್ಮ ಏಳನೇ ಗೋಲು ಗಳಿಸಿ, ಅಂತರವನ್ನು ಕಡಿಮೆ ಮಾಡಿದರು.