
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ
ವೈಫಲ್ಯ ಮುಚ್ಚಿಕೊಳ್ಳಲು ಆರ್‌ಎಸ್‌ಎಸ್ ವಿಷಯ ಕೆದಕಿದೆ: ಸರ್ಕಾರದ ವಿರುದ್ಧ ಎಚ್ಡಿಕೆ ಕಿಡಿ
ತಮ್ಮ ಖಾತೆಯ ಕಾರ್ಯವ್ಯಾಪ್ತಿ ಬಗ್ಗೆ ಸ್ಪಷ್ಟಪಡಿಸಿದ ಅವರು, "ನನ್ನದು ಕಾರ್ಖಾನೆ ತರುವ ಇಲಾಖೆಯಲ್ಲ, ಬದಲಾಗಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ನೀತಿಗಳನ್ನು ರೂಪಿಸುವ ಇಲಾಖೆ. ಆದರೂ, ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲು ನಿರ್ಧರಿಸಿದ್ದೇನೆ," ಎಂದರು.
ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ದಶಕಗಳಿಂದ ನಡೆದುಕೊಂಡು ಬರುತ್ತಿರುವ ಆರ್‌ಎಸ್‌ಎಸ್ ಪಥ ಸಂಚಲನದ ವಿಷಯವನ್ನು ಈಗ ಮುನ್ನೆಲೆಗೆ ತಂದಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ಆರ್‌ಎಸ್‌ಎಸ್ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡುವ ಬದಲು, ರಾಜ್ಯದ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳತ್ತ ಗಮನ ಕೊಡಿ" ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.
ಧರ್ಮಸ್ಥಳ ಪ್ರಕರಣ ಕಾಲಹರಣದ ತಂತ್ರ
"ಸ್ವಲ್ಪ ದಿನ ಧರ್ಮಸ್ಥಳದ ವಿಷಯದ ಮೇಲೆ ಬಿದ್ದಿರಿ. ಎಸ್‌ಐಟಿ ರಚಿಸಿ ಸುಮ್ಮನೆ ಕಾಲಹರಣ ಮಾಡಿದಿರಿ. ಈಗ ಆ ಪ್ರಕರಣದಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ರಿಲೀಫ್ ಸಿಕ್ಕಿದೆ. ಈ ಸರ್ಕಾರದ ಅವಧಿಯಲ್ಲಿ ಯಾವುದೇ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದಿಲ್ಲ. ಕೇವಲ ಜನರ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ," ಎಂದು ಕುಮಾರಸ್ವಾಮಿ ಆರೋಪಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ತೀಕ್ಷ್ಣ ತಿರುಗೇಟು
"ಕುಮಾರಸ್ವಾಮಿ ಫ್ಯಾಕ್ಟರಿ ಕಟ್ಟಲಿ, ಅನುಮತಿ ಕೊಡುತ್ತೇವೆ" ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, "ನಾನು ಸಿಎಂ ಆಗಿದ್ದಾಗ 'ಕಾಂಪಿಟ್ ವಿತ್ ಚೈನಾ' ಎಂಬ ಯೋಜನೆಯಡಿ 9 ಕ್ಲಸ್ಟರ್‌ಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ, ಲಕ್ಷಾಂತರ ಉದ್ಯೋಗ ಸೃಷ್ಟಿಸಲು ಮುಂದಾಗಿದ್ದೆ. ಕೈಗಾರಿಕಾ ಕ್ಷೇತ್ರಕ್ಕೆ 25 ಸಾವಿರ ಕೋಟಿ ಸಬ್ಸಿಡಿ ನೀಡುವ ಯೋಜನೆ ರೂಪಿಸಿದ್ದೆ. ಆದರೆ ಇವರೆಲ್ಲ ಸೇರಿ ನನ್ನ ಸರ್ಕಾರವನ್ನು ತೆಗೆದರು. ಇವರ ಯೋಗ್ಯತೆಗೆ ರಸ್ತೆ ಗುಂಡಿ ಮುಚ್ಚಲು ಆಗಿಲ್ಲ, ಇನ್ನು ಕಾರ್ಖಾನೆ ಕಟ್ಟಿಸುತ್ತಾರೆಯೇ?" ಎಂದು ಪ್ರಶ್ನಿಸಿದರು.
"ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕುವ ಡಿ.ಕೆ. ಶಿವಕುಮಾರ್‌ಗೆ ಚರ್ಚೆ ಮಾಡುವಷ್ಟು ಯೋಗ್ಯತೆ ಉಳಿದಿಲ್ಲ. ಅವರಂತೆ ದುಡ್ಡು ಹೊಡೆಯುವ ಕೆಲಸ ನಾನು ಮಾಡಿಲ್ಲ. ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಎಷ್ಟು ಸೊಸೈಟಿಗಳನ್ನು ನುಂಗಿದ್ದಾರೆ ಎನ್ನುವ ಪಟ್ಟಿಯನ್ನು ಧಾರಾವಾಹಿಯಂತೆ ಬಿಡುತ್ತೇನೆ," ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ತಮ್ಮ ಖಾತೆಯ ಕಾರ್ಯವ್ಯಾಪ್ತಿ ಬಗ್ಗೆ ಸ್ಪಷ್ಟಪಡಿಸಿದ ಅವರು, "ನನ್ನದು ಕಾರ್ಖಾನೆ ತರುವ ಇಲಾಖೆಯಲ್ಲ, ಬದಲಾಗಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ನೀತಿಗಳನ್ನು ರೂಪಿಸುವ ಇಲಾಖೆ. ಆದರೂ, ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲು ನಿರ್ಧರಿಸಿದ್ದೇನೆ," ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ
"ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಮುಂದೆ ಅನುದಾನ ಕೇಳುವುದಿಲ್ಲ" ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಜನ ನಿಮಗೆ 136 ಸ್ಥಾನ ಕೊಟ್ಟಿರುವುದು, ನಾನು ಯಾಕೆ ಕೇಳಲಿ? ನಾನು ಸಿಎಂ ಆಗಿದ್ದಾಗ ಕೇಂದ್ರ ಹಣ ಕೊಡಲಿಲ್ಲ ಎಂದು ಕೈಕಟ್ಟಿ ಕೂರಲಿಲ್ಲ. ಕೊಡಗಿನಲ್ಲಿ ಪ್ರವಾಹ ಬಂದಾಗ 1000 ಮನೆಗಳನ್ನು ಕಟ್ಟಿಸಿಕೊಟ್ಟೆ. ಇವರಿಗೆ ಅಂತಹ ಇಚ್ಛಾಶಕ್ತಿ ಇಲ್ಲ," ಎಂದು ಟೀಕಿಸಿದರು.
ಯಾರು ಬೇಕಾದರೂ ಸಿಎಂ ಆಗಬಹುದು
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, "ಸಂವಿಧಾನದ ಪ್ರಕಾರ ಯಾರು ಬೇಕಾದರೂ ಸಿಎಂ ಆಗಬಹುದು. ಅದು ಅವರ ಪಕ್ಷದ ಆಂತರಿಕ ವಿಚಾರ, ಅದನ್ನು ಕಟ್ಟಿಕೊಂಡು ನನಗೇನೂ ಆಗಬೇಕಿಲ್ಲ," ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಎಸ್.ಎಲ್. ಭೋಜೇಗೌಡ, ಜವರಾಯಿಗೌಡ, ವಿವೇಕಾನಂದ ಹಾಗೂ ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಉಪಸ್ಥಿತರಿದ್ದರು.

