IPL 2025 Final| ಸಿ.ಎಂ ಸೇರಿದಂತೆ ಹಲವು ರಾಜಕೀಯ ನಾಯಕರಿಂದ ಆರ್‌ಸಿಬಿಗೆ ಶುಭಾಶಯ
ಮೊದಲ ಆವೃತ್ತಿಯಿಂದ ಇಂದಿನವರೆಗೂ ಅದೇ ರೀತಿಯ ಪ್ರೀತಿ - ಸ್ಪೂರ್ತಿ ನೀಡುತ್ತಿರುವ ಕೋಟ್ಯಂತರ ಅಭಿಮಾನಿಗಳಿಗಾಗಿ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲಿ ಎನ್ನುವುದು ನನ್ನ ಅಂತರಾಳದ ಬಯಕೆ ಎಂದು ಸಿ.ಎಂ ಟ್ವೀಟ್ ಮಾಡಿದ್ದಾರೆ.;
ಆರ್‌ಸಿಬಿ ತಂಡಕ್ಕೆ ಸಿ.ಎಂ ಶುಭಾಶಯ ಕೋರಿದ್ದಾರೆ.
2025ರ ಐಪಿಎಲ್ ಫೈನಲ್ ಪಂದ್ಯ ಮಂಗಳವಾರ ಸಂಜೆ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿದೆ.
ಆರ್‌ಸಿಬಿ ಕಪ್ ಗೆಲ್ಲುವ 18 ವರ್ಷಗಳ ಕನಸು ನನಸಾಗಲು ಆರ್‌ಸಿಬಿ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಕೂಡ ಆರ್‌ಸಿಬಿ ತಂಡಕ್ಕೆ ಶುಭಕೋರಿದ್ದಾರೆ.
ಟ್ವೀಟ್ ಮೂಲಕ ಶುಭ ಹಾರೈಸಿದ ಸಿ.ಎಂ
ಪಂಜಾಬ್ ತಂಡದ ವಿರುದ್ಧ ಮಂಗಳವಾರ ಫೈನಲ್ ಪಂದ್ಯವಾಡುತ್ತಿರುವ ನಮ್ಮ ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆಗಳು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಆರ್‌ಸಿಬಿ ತಂಡದ ಸೋಲು - ಗೆಲುವು, ಏಳು - ಬೀಳುಗಳಲ್ಲಿ ಸದಾ ಜೊತೆ ನಿಂತು, ಮೊದಲ ಆವೃತ್ತಿಯಿಂದ ಇಂದಿನವರೆಗೂ ಅದೇ ರೀತಿಯ ಪ್ರೀತಿ - ಸ್ಪೂರ್ತಿ ನೀಡುತ್ತಿರುವ ಕೋಟ್ಯಂತರ ಅಭಿಮಾನಿಗಳಿಗಾಗಿ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲಿ ಎನ್ನುವುದು ನನ್ನ ಅಂತರಾಳದ ಬಯಕೆ ಎಂದವರು ಹೇಳಿದ್ದಾರೆ.
"ತಾಳ್ಮೆಯ ಫಲ ಸಿಹಿಯಾಗಿರುತ್ತದೆಯಂತೆ, ಆ ಸಿಹಿ ಇಂದು ಕನ್ನಡಿಗರ ಮತ್ತು ಜಗತ್ತಿನಾದ್ಯಂತ ಇರುವ ಆರ್‌ಸಿಬಿ ಅಭಿಮಾನಿಗಳ ಪಾಲಿಗಿರಲಿ ಎಂದು ಹಾರೈಸುತ್ತೇನೆ," ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆರ್‌ಸಿಬಿ ಜೆರ್ಸಿ ತೊಟ್ಟು ಆಟಗಾರರಿಗೆ ಶುಭಾಶಯ ಕೋರಿದ್ದಾರೆ. ಕಳೆದ 18 ವರ್ಷಗಳಿಂದ ಆರ್‌ಸಿಬಿ ತಂಡ ಐಪಿಎಲ್ ಚಾಂಪಿಯನ್‌ಶಿಪ್ ಗೆಲ್ಲಲಿ ಅಂತ ಹಾರೈಸುತ್ತಿದ್ದೇವೆ, ಇವತ್ತು ಮತ್ತೊಂದು ಅವಕಾಶ, ಇಡೀ ಕರ್ನಾಟಕ ಮಾತ್ರ ಅಲ್ಲ ಭಾರತವೂ ನಿಮ್ಮೊಂದಿಗಿದೆ, ನಿಮ್ಮ ಪರಿಶ್ರಮ ಗಮನಿಸುತ್ತಿದ್ದೇವೆ, ಗೆಲುವು ನಿಮ್ಮದೇ, ಈ ಸಲ ಕಪ್ ನಮ್ದೇ ಎಂದು ಶಿವಕುಮಾರ್ ಅವರು ಆರ್‌ಸಿಬಿ ತಂಡಕ್ಕೆ ವಿಡಿಯೋ ಮೂಲಕ ಶುಭ ಹಾರೈಸಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಈ ಬಗ್ಗೆ ತಮ್ಮ ಪಕ್ಷದ ಎಕ್ಸ್ ಖಾತೆಯಲ್ಲಿ ವಿಡಿಯೋ ಸಮೇತ ಹೆಚ್.ಡಿ ಕುಮಾರಸ್ವಾಮಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲಲಿ. ನಾಯಕ ರಜತ್ ಪಾಟಿದಾರ್ ಹಾಗೂ ವಿರಾಟ್ ಕೊಹ್ಲಿ ಸೇರಿ ಎಲ್ಲರು ಉತ್ತಮವಾಗಿ ಆಡಲಿ. ಐಪಿಎಲ್ ಫೈನಲ್ ತಲುಪಿರುವ ಆರ್‌ಸಿಬಿ ತಂಡ ಗೆದ್ದು ಬರಲಿ ಎಂದು ಪೋಸ್ಟ್ ಮಾಡಿದ್ದಾರೆ.
ಪಂಜಾಬ್ ಹಾಗೂ ಆರ್‌ಸಿಬಿ ನಡುವಿನ ಫೈನಲ್ ಪಂದ್ಯ ಮಂಗಳವಾರ ಸಂಜೆ 7:30ಕ್ಕೆ ನಡೆಯಲಿದೆ. ಫೈನಲ್ ಪಂದ್ಯವಾಗಿದ್ದರಿಂದ ಈಗಾಗಲೇ ಟಿಕೆಟ್ಗಳೆಲ್ಲಾ ಸೋಲ್ಡ್ ಔಟ್ ಆಗಿವೆ. ದುಬಾರಿ ಬೆಲೆಗಳಲ್ಲಿ ಐಪಿಎಲ್ ಟಿಕೆಟ್ ಮಾರಾಟ ಆಗಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವುದರಿಂದ ನರೇಂದ್ರ ಮೋದಿ ಸ್ಟೇಡಿಯಂ ಎಲ್ಲ ಭರ್ತಿಯಾಗಲಿದೆ. 1,30,000 ಜನ ಒಂದೇ ಬಾರಿಗೆ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಣೆ ಮಾಡಲಿದ್ದಾರೆ.