ಶಾಸಕ ಮುನಿರತ್ನ ವಿರುದ್ಧ ವಾಗ್ದಾಳಿ; ವಿಧಾನಸೌಧದ ಮೂರನೇ ಮಹಡಿ ಅತ್ಯಾಚಾರ; ಗಂಭೀರ ಆರೋಪ ಮಾಡಿದ ಡಿ.ಕೆ. ಸುರೇಶ್
ತಮ್ಮ ವಿರುದ್ದ ಅಪಪ್ರಚಾರ ಮುಂದುವರೆಸಿದರೆ ಜನರ ಮುಂದೆ ಶಾಸಕರ ಎಲ್ಲಾ ಪ್ರಕರಣಗಳನ್ನು ತರೆದಿಡುವ ಕೆಲಸ ಮಾಡಬೇಕಾಗುತ್ತದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ.;
ಮಾಜಿ ಸಂಸದ ಡಿ.ಕೆ. ಸುರೇಶ್
ಬಿಜೆಪಿ ಶಾಸಕ ಮುನಿರತ್ನ ಹಾಗೂ ಬೆಂಗಳೂರು ಗ್ರಾಮಂತರ ಮಾಜಿ ಸಂಸದ ಡಿ.ಕೆ. ಸಹೋದರರ ನಡುವಿನ ರಾಜಕೀಯ ದ್ವೇಷ ಮುಂದುವರಿದಿದೆ.
"ವಿಧಾನಸೌಧದ ಮೂರನೇ ಮಹಡಿಯಲ್ಲಿ ಓರ್ವ ಮಹಿಳೆ ಮೇಲೆ ಐದು ಬಾರಿ ಅತ್ಯಾಚಾರ ಮಾಡಿರುವ ಬಗ್ಗೆ ವರದಿಗಳಿವೆ" ಎಂಬ ಗಂಭೀರ ಆರೋಪವನ್ನು ಮಾಜಿ ಸಂಸದ ಡಿ.ಕೆ. ಸುರೇಶ್ ಮಾಡಿದ್ದಾರೆ. ನಮ್ಮ ವಿರುದ್ಧ ಅಪಪ್ರಚಾರ ಮುಂದುವರೆಸಿದರೆ, ಶಾಸಕರ ವಿರುದ್ಧ ಇರುವ ಪ್ರಕರಣದ ಮಾಹಿತಿಗಳನ್ನು ರಾಜರಾಜೇಶ್ವರಿ ನಗರ ಕ್ಷೇತ್ರದ ಪ್ರತಿ ಮನೆ ಮನೆಗೆ ಹಂಚಬೇಕಾಗುತ್ತದೆ. ಇಷ್ಟೆಲ್ಲಾ ಆರೋಪಗಳಿದ್ದರೂ ಬಿಜೆಪಿಯವರು ಪಕ್ಷದಲ್ಲಿರಿಸಿಕೊಂಡಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಕಿಡಿಕಾರಿದ್ದಾರೆ.
ಮಂಗಳವಾರ (ಏಪ್ರಿಲ್ 22) ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು “ಶಾಸಕರ ಕರ್ಮಾಕಾಂಡಗಳನ್ನು ನಮ್ಮ ಕಾರ್ಯಕರ್ತರು ಕೇವಲ ಒಂದು ದಿನ ಹಂಚಿ ಸುಮ್ಮನಾಗುವುದಿಲ್ಲ, ನಿರಂತರವಾಗಿ ಹಂಚಲಿದ್ದಾರೆ. ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯಲು ಅವರಿಗೆ ನಾಚಿಕೆಯಾಗುವುದಿಲ್ಲವೇ?. ಮತಕ್ಕಾಗಿ ದಲಿತರನ್ನು ಬಳಸಿಕೊಂಡು ಅವರಿಗೆ ಅವಾಚ್ಯವಾಗಿ ನಿಂದಿಸುವುದು. ಮಾಧ್ಯಮದವರ ಎದರು ಮನಬಂದಂತೆ ಮಾತನಾಡುವುದು. ನಾನು ಮಾಧ್ಯಮ ನಡೆಸುತ್ತಿದ್ದೇನೆ, ನನ್ನ ಬಗ್ಗೆಯೇ ಮಾತನಾಡುತ್ತೀರಾ, ನನ್ನ ಮೇಲೆ ಕೇಸ್ ಹಾಕುತ್ತೀರಾ ಎಂದು ಬೆದರಿಕೆ ಹಾಕುತ್ತಾರೆ” ಎಂದು ಹರಿಹಾಯ್ದರು.
“ಮುನಿರತ್ನ ವಿರುದ್ಧ ಸಾಕಷ್ಟು ದಾಖಲೆಗಳಿದ್ದು ಚಾರ್ಜ್ ಶೀಟ್ ಗಳನ್ನು ಆರು ಆವೃತ್ತಿಗಳಾಗಿ ಜನರ ಮುಂದೆ ಇಟ್ಟಿದ್ದೇನೆ. ಶಾಸಕರ ವಿಚಾರವನ್ನು ಎಲ್ಲಿಂದ ಶುರು ಮಾಡಲಿ? ಆತನ ಕಾಮಗಾರಿಯ ಕಾಂಪೌಂಡ್ ಗೋಡೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟ ವಿಚಾರವಾಗಿ ಮಾತನಾಡಲೇ. ಆ ಸಂದರ್ಭದಲ್ಲಿ ಆತನ ವಿರುದ್ಧ ಪತ್ರಿಕೆಯಲ್ಲಿ ನೂರು ಸಂಚಿಕೆಗಳು ಬಂದಿದ್ದವು. ಬಿಬಿಎಂಪಿಯಲ್ಲಿ ಬೆಂಕಿ ಬಿದ್ದಿದ್ದರ ಬಗ್ಗೆ ಮಾತನಾಡಲೇ?” ಎಂದು ಸುರೇಶ್ ಸವಾಲು ಹಾಕಿದ್ದಾರೆ.
ಆಣೆ ಪ್ರಮಾಣ ಸವಾಲು ಸ್ವೀಕರಿಸಲಿಲ್ಲ ಯಾಕೆ?
“ಆತ ಯಾರ ಮೇಲೆ ಆಣೆ ಪ್ರಮಾಣ ಮಾಡಿಲ್ಲ? ನೀವು ಹೋದರೆ ನಿಮ್ಮ ಮೇಲೂ ಆಣೆ ಪ್ರಮಾಣ ಮಾಡುತ್ತಾರೆ. ಆತ ಆಣೆ ಪ್ರಮಾಣ ಮಾಡುವುದರಲ್ಲಿ ನಿಪುಣ. ದೂರುದಾರರೇ ಆದಿ ಚುಂಚನಗಿರಿ ಮಠದಲ್ಲಿ ಆಣೆ ಪ್ರಮಾಣಕ್ಕೆ ಕರೆದಿದ್ದರು. ಅಲ್ಲಿಗೆ ಹೋಗಿ ಆಣೆ ಪ್ರಮಾಣ ಮಾಡಬೇಕಿತ್ತು. ವಿಧಾನಸೌಧ ಕಟ್ಟಿರುವುದು ರಾಜ್ಯದ ಜನರ ಕಷ್ಟಸುಖ ನೋಡಲು, ರಾಜ್ಯದ ಹಿತ ಕಾಯಲು. ಹೀಗಾಗಿ ಅದು ರಾಜ್ಯದ ಹಿರಿಮೆಯ ಪ್ರತೀಕವಾಗಿದೆ. ಅಂತಹ ವಿಧಾನಸೌಧದಲ್ಲಿ ಹೀನ ಕೃತ್ಯ ಮಾಡಿದ್ದು. ಈ ಕಾರಣಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುನಿರತ್ನ ಅವರನ್ನು ʼ ಚಂಗ್ಲುʼ ಎಂದು ಕರೆದಿದ್ದಾರೆ. ಅವರನ್ನು ಜೊತೆಯಲ್ಲಿ ಇಟ್ಟುಕೊಳ್ಳಲು ಬಿಜೆಪಿಯವರಿಗೆ ನಾಚಿಕೆ ಇಲ್ಲವೇ?. ವಿರುದ್ಧ ಕ್ರಮ ತೆಗೆದುಕೊಳ್ಳಲು ಗೊತ್ತಿಲ್ಲವೇ? ಎಂದು ವಾಗ್ದಾಳಿ ನಡೆಸಿದರು.
ಏಡ್ಸ್ ಹರಿಡಿಸುವ ಶಾಸಕ
“ಏಡ್ಸ್ ಸೋಂಕಿತರನ್ನು ಬಳಸಿ ಬೇರೆಯವರಿಗೆ ಏಡ್ಸ್ ಹರಡಿಸಲು ಷಡ್ಯಂತ್ರ ರೂಪಿಸಿರುವ ಬಗ್ಗೆ ವರದಿಗಳಿವೆಯಲ್ಲ. ಆತ ಅಮಾನತುಗೊಂಡಿರುವ ಶಾಸಕ. ಆತನನ್ನು ಯಾವುದೇ ಅಧಿಕೃತ ಕಾರ್ಯಕ್ರಮಗಳಿಗೆ ಕರೆಯದೇ ಕೆಲಸ ಮಾಡಬೇಕು. ಉಪಮುಖ್ಯಮಂತ್ರಿಗಳು ಗೌರವಯುತವಾಗಿ ಎಲ್ಲಾ ಶಾಸಕರನ್ನು ಕರೆದಿದ್ದು. ಅಮಾನತುಗೊಂಡ ನಂತರ ಸಮಿತಿಗಳ ಸಭೆ, ಶಿಷ್ಟಾಚಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ” ಎಂದು ತಿಳಿಸಿದರು.
ಇಡಿ ಹೆಸರು ಹೇಳಿ ಅಧಿಕಾರಿಗಳಿಗೆ ಬೆದರಿಕೆ:
ಬೆಳಗಿನ ಜಾವ 4 ಗಂಟೆಯಲ್ಲೂ ಯಾರಿಗೆ ಏನು ಮಾಡಬೇಕು ಎಂದು ಯೋಜನೆ ಹಾಕುವ ನೀಚ ಪ್ರವೃತ್ತಿ ಇರುವಂತಹವರು. ವೋಟರ್ ಐಡಿ ಪ್ರಕರಣದಲ್ಲಿ ಏನೆಲ್ಲಾ ಆಗಿದೆ, ಅವರು ಯಾರಿಗೆಲ್ಲಾ ಲಂಚ ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಪ್ರತೀ ಬಾರಿ ರಾಜ್ಯಪಾಲರ ಕಚೇರಿ ಗೊತ್ತು, ಸಿಬಿಐ, ಇಡಿಯವರು ಗೊತ್ತು ಎಂದು ಹೇಳುತ್ತಿದ್ದು. ರಾಜ್ಯಪಾಲರು ಇವರನ್ನು ಗೇಟ್ ಒಳಗೂ ಬಿಟ್ಟುಕೊಳ್ಳಬಾರದಿತ್ತು. ಇಡಿ ತೋರಿಸಿ ಅಧಿಕಾರಿಗಳನ್ನು ಬೆದರಿಸುತ್ತಿದ್ದು. ಇಡಿಗೆ ದೂರು ನೀಡಲಿ, ನಾವು ಇಡಿ ನೋಡಿಲ್ಲವೇ? ಕ್ಷೇತ್ರದಲ್ಲಿ ಕೊಳವೆಬಾವಿ ಹಗರಣ ನಡೆದು, ಕೊಳವೆಬಾವಿ ಇಲ್ಲ ಎಂದು ಸಾಭೀತಾಯಿತು. ನಂತರ ರಾತ್ರೋರಾತ್ರಿ ಕೊಳವೆಬಾವಿ ಕೊರೆದರು. 250 ಕೋಟಿ ಅಕ್ರಮ ಬಿಲ್ ಪ್ರಕರಣದಲ್ಲಿ ಲೋಕಾಯುಕ್ತರ ತನಿಖೆಗೆ ಹೆದರಿ ರಾತ್ರೋರಾತ್ರಿ ರಸ್ತೆಗೆ ಡಾಂಬಾರ್ ಹಾಕಿಸಿದರು. ಇಷ್ಟೆಲ್ಲಾ ಮಾಡಿ ಇನ್ನೊಬ್ಬರ ಬಗ್ಗೆ ಮಾತನಾಡಲು ನಾಚಿಕೆಯಾಗುವುದಿಲ್ಲವೇ?” ಎಂದು ಕಿಡಿಕಾರಿದರು.