ವರ್ಗಾವಣೆ ಆಮಿಷವೊಡ್ಡಿ ಅತ್ಯಾಚಾರ: ಪ್ರಜ್ವಲ್ ವಿರುದ್ಧ ಮತ್ತೆರಡು ಎಫ್‌ಐಆ‌ರ್?

ಸಂತ್ರಸ್ತೆಯರನ್ನು ಸಂಪರ್ಕಿಸಲು ಹಾಗೂ ಹೇಳಿಕೆ ಪಡೆಯಲು ಪ್ರತ್ಯೇಕ ತಂಡ ರಚಿಸಲಾಗಿದೆ. ತಂಡದ ಅಧಿಕಾರಿಗಳು, ಸಂತ್ರಸ್ತೆಯರು ಇರುವ ಸ್ಥಳಗಳಿಗೆ ಹೋಗಿ ಮನವೊಲಿಕೆ ಮಾಡುತ್ತಿದ್ದಾರೆ.

Update: 2024-05-08 06:44 GMT
ಪ್ರಜ್ವಲ್‌ ರೇವಣ್ಣ

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸರ್ಕಾರದ ಮಹಿಳಾ ಅಧಿಕಾರಿಗಳಿಬ್ಬರು ಹೇಳಿಕೆ ನೀಡಲು ಮುಂದಾಗಿದ್ದು, ಸದ್ಯದಲ್ಲೇ ಪ್ರತ್ಯೇಕ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.

ಪ್ರಕರಣದಲ್ಲಿ ಸಂತ್ರಸ್ತರನ್ನು ಗುರುತಿಸಲು ಹಾಗೂ ಅವರಿಂದ ಹೇಳಿಕೆ ಪಡೆಯುವ ಉದ್ದೇಶದಿಂದ ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ (6360938947) ಆರಂಭಿಸಿದ್ದಾರೆ. ಕರೆ ಮಾಡಿದವರಿಗೆ ಧೈರ್ಯ ತುಂಬಿ ದೂರು ನೀಡುವಂತೆ ಮನವಿ ಮಾಡುತ್ತಿದ್ದಾರೆ.

'ವರ್ಗಾವಣೆ ವಿಚಾರವಾಗಿ ಮಾತನಾಡಲು ಹೋಗಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ. ವರ್ಗಾವಣೆ ಆಮಿಷವೊಡ್ಡುತ್ತಲೇ ಪದೇ ಪದೇ ದೌರ್ಜನ್ಯ ನಡೆಸಿದ್ದಾರೆ' ಎಂದು ಆರೋಪಿಸಿರುವ ಇಬ್ಬರು ಮಹಿಳಾ ಅಧಿಕಾರಿಗಳು, ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ವಿವರಣೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಸಂತ್ರಸ್ತೆಯರನ್ನು ಸಂಪರ್ಕಿಸಲು ಹಾಗೂ ಹೇಳಿಕೆ ಪಡೆಯಲು ಪ್ರತ್ಯೇಕ ತಂಡ ರಚಿಸಲಾಗಿದೆ. ತಂಡದ ಅಧಿಕಾರಿಗಳು, ಸಂತ್ರಸ್ತೆಯರು ಇರುವ ಸ್ಥಳಗಳಿಗೆ ಹೋಗಿ ಮನವೊಲಿಕೆ ಮಾಡುತ್ತಿದ್ದಾರೆ.

9 ಸಂತ್ರಸ್ತೆಯರು ಪತ್ತೆ: ಲೈಂಗಿಕ ದೌರ್ಜನ್ಯದ ವಿಡಿಯೊಗಳನ್ನು ಆಧರಿಸಿ 9 ಸಂತ್ರಸ್ತೆಯರನ್ನು ಪತ್ತೆ ಮಾಡಿರುವ ಎಸ್‌ಐಟಿ ಅಧಿಕಾರಿಗಳು, ಅವರಲ್ಲಿ ಕೆಲವರಿಂದ ಈಗಾಗಲೇ ಹೇಳಿಕೆ ಪಡೆದುಕೊಂಡಿದ್ದಾರೆ. ಉಳಿದವರನ್ನು ಆಪ್ತಸಮಾಲೋಚನೆಗೆ ಒಳಪಡಿಸಿ ಹೇಳಿಕೆ ಪಡೆಯುವ ಸಾಧ್ಯತೆ ಇದೆ.

'ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್‌ಗಳು ಈಗಾಗಲೇ ದಾಖಲಾಗಿವೆ. ಅದೇ ಪ್ರಕರಣದ ಜೊತೆಗೆ ಉಳಿದ ಹೇಳಿಕೆಗಳನ್ನು ಸೇರಿಸಿಕೊಳ್ಳಬೇಕೋ ಅಥವಾ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಳ್ಳಬೇಕೋ ಎಂಬುದರ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಬೇಕಿದೆ' ಎಂದು ಮೂಲಗಳು ಹೇಳಿವೆ.

Tags:    

Similar News