ರಾಹುಲ್ ಗಾಂಧಿಯವರನ್ನು ದೇಶದ ಜನ ಒಪ್ಪಿಕೊಂಡಿದ್ದಾರೆ: ಸಿದ್ದರಾಮಯ್ಯ
ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ದೇಶದ ಜನತೆ ಬಹಳ ದೊಡ್ಡ ಮಟ್ಟದಲ್ಲಿ ಒಪ್ಪಿಕೊಂಡಿದೆ.;
ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ದೇಶದ ಜನತೆ ಬಹಳ ದೊಡ್ಡ ಮಟ್ಟದಲ್ಲಿ ಒಪ್ಪಿಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ʻʻರಾಹುಲ್ ಗಾಂಧಿಯವರ ಎರಡು ಯಾತ್ರೆಗಳು ಫಲ ನೀಡಿವೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ದೇಶದ ಜನತೆ ಬಹಳ ದೊಡ್ಡ ಮಟ್ಟದಲ್ಲಿ ಒಪ್ಪಿಕೊಂಡಿದ್ದಾರೆ. ಎರಡೂ ಕ್ಷೇತ್ರಗಳಲ್ಲೂ ರಾಹುಲ್ ಗಾಂಧಿ ಭರ್ಜರಿ ಮತಗಳಿಂದ ಗೆದ್ದಿದ್ದಾರೆ. ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆʼʼ ಎಂದರು.
ʻʻಕೈಯಲ್ಲಿ ಸಂವಿಧಾನ ಹಿಡಿದೇ ರಾಹುಲ್ ಗಾಂಧಿಯವರು ಇಡೀ ದೇಶದಲ್ಲಿ ಚುನಾವಣಾ ಪ್ರಚಾರ ಮಾಡಿದರು. ದೇಶದ ಜನ ಸಂವಿಧಾನದ ಉಳಿವಿಗೆ, ಪ್ರಜಾಪ್ರಭುತ್ವ ಉಳಿವಿಗಾಗಿ ರಾಹುಲ್ ಗಾಂಧಿಯವರ ಕೈ ಹಿಡಿದಿದ್ದಾರೆʼʼ ಎಂದರು.
ಇನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮ ಏನಾಗಿದೆ ಎನ್ನುವ ಬಗ್ಗೆ ವಿಶ್ಲೇಷಣೆ ನಡೆಯಬೇಕಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಮತ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದ್ದರೂ ಬಿಜೆಪಿ ಮತ ಪ್ರಮಾಣ ಕುಸಿದಿದೆ. ಕಾಂಗ್ರೆಸ್ ಕಡಿಮೆ ಸೀಟು ಗೆದ್ದರೂ ಮತ ಪ್ರಮಾಣ ಹೆಚ್ಚಾಗಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಕೇರಳದ ವಯನಾಡ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಎರಡೂ ಕ್ಷೇತ್ರದಲ್ಲೂ ರಾಹುಲ್ ಗಾಂಧಿ ಭರ್ಜರಿ ಜಯ ಸಾಧಿಸಿದ್ದಾರೆ.