ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ | ಖಾಸಗಿತನ, ರಕ್ಷಣೆ ಆತಂಕ: ಸಂತ್ರಸ್ತೆಯರ ಹಿಂಜರಿಕೆ
ಒಂದು ಕಡೆ ಅಪಹರಣದಂತಹ ಗಂಭೀರ ಪ್ರಕರಣ ದಾಖಲಾದರೂ ಆರೋಪಿ ರೇವಣ್ಣ ಬಂಧನಕ್ಕೆ ಮೀನಾಮೇಷ ಎಣಿಸುತ್ತಿರುವುದು, ಮತ್ತೊಂದು ಕಡೆ ಧೈರ್ಯವಾಗಿ ಮುಂದೆ ಬಂದು ದೂರು ನೀಡಿದವರ ವಿವರಗಳು ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿರುವುದು ಸಂತ್ರಸ್ತೆಯರನ್ನು ಇನ್ನಷ್ಟು ಎದೆಗುಂದಿಸುತ್ತಿದೆ.;
ಪ್ರಜ್ವಲ್ ರೇವಣ್ಣ ಲೌಂಗಿಕ ದೌರ್ಜನ್ಯ ಪ್ರಕರಣದ ಮೊದಲ ಎಫ್ ಐಆರ್ ದಾಖಲಾಗಿ ಮತ್ತು ಎಸ್ಐಟಿ ತನಿಖೆ ಆರಂಭವಾಗಿ ಒಂದು ವಾರ ಕಳೆದಿದೆ.
ಮುನ್ನೂರಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದೇ ಅಲ್ಲದೆ, ದೌರ್ಜನ್ಯದ ದೃಶ್ಯಗಳನ್ನು ವಿಡಿಯೋ ಮಾಡಿ, ಗನ್ ತೋರಿಸಿ, ಗಂಡ, ಮಕ್ಕಳ ಕೊಲೆ ಮಾಡುವುದಾಗಿ ಹೇಳಿ ಬೆದರಿಸಿ, ಬ್ಲ್ಯಾಕ್ ಮೇಲ್ ಮಾಡಿರುವ ಆರೋಪವಿದೆ. ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಪರಾರಿಯಾಗಿದ್ದಾರೆ. ಜೊತೆಗೆ ಆತನ ವಿರುದ್ಧ ಸಾಕ್ಷಿ ಹೇಳದಂತೆ ಬೆದರಿಸಿ ಅಪಹರಣ ಮಾಡಿದ, ಮನೆಕೆಲಸದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪಗಳೂ ಆರೋಪಿಯ ತಂದೆ ರೇವಣ್ಣ ಮೇಲಿವೆ.
ಪ್ರಮುಖ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಎಸ್ಐಟಿ ರಚನೆಗೆ ಮುನ್ನವೇ ವಿದೇಶಕ್ಕೆ ಹಾರಿದ್ದರೆ, ಅವರ ತಂದೆ ಮತ್ತು ಅಪಹರಣ ಪ್ರಕರಣದ ನಂಬರ್ ಒನ್ ಆರೋಪಿ ಎಚ್ ಡಿ ರೇವಣ್ಣ ಏ.4 ರಂದು ಬಂಧನವಾಗುವವರೆಗೆ ಒಂದು ವಾರ ಕಾಲ ತನಿಖಾ ಸಂಸ್ಥೆಗೆ ಚಳ್ಳೇಹಣ್ಣು ತಿನಿಸುತ್ತಿದ್ದರು ಅಪಹರಣದ, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಆರೋಪಿ ವಿರುದ್ಧ ಸಾಕ್ಷ್ಯ ಹೇಳದಂತೆ ಬೆದರಿಕೆಯಂತಹ ಗಂಭೀರ ಆರೋಪಗಳ ಹೊರತಾಗಿಯೂ ರೇವಣ್ಣ ಬಂಧನ ವಿಳಂಬವಾಯಿತು.
ಈ ನಡುವೆ, ಎಸ್ಐಟಿ ಮುಂದೆ ಹೇಳಿಕೆ ದಾಖಲಿಸಲು ಹಾಜರಾಗುತ್ತಿರುವ, ದೂರು ನೀಡಲು ಬರುತ್ತಿರುವ ಸಂತ್ರಸ್ತೆಯರ ಗುರುತು ಮತ್ತಿತರ ವಿವರಗಳು, ದೂರು ಪ್ರತಿಯ ವಿವರಗಳು ಮಾಧ್ಯಮಗಳಲ್ಲಿ ಸುದ್ದಿಯಾತ್ತಿವೆ. ಈಗಾಗಲೇ ವಿಡಿಯೋಗಳು ವೈರಲ್ ಆಗಿ ಕೋಟ್ಯಂತರ ಜನರಿಗೆ ತಲುಪಿರುವ ಹಿನ್ನೆಲೆಯಲ್ಲಿ ಎದೆಗುಂದಿರುವ ಸಂತ್ರಸ್ತೆಯರು, ಈ ಬೆಳವಣಿಗೆಯನ್ನು ಸಾವು ಬದುಕಿನ ಪ್ರಶ್ನೆಯಾಗಿ ಪರಿಗಣಿಸಿರುವ ಹೊತ್ತಲ್ಲಿ, ದೂರು ನೀಡಲು ಮುಂದೆ ಬಂದವರ ಗೌಪ್ಯತೆ ಕಾಯುವ ಮತ್ತು ಅವರ ವೈಯಕ್ತಿಕ ವಿವರಗಳು ಬಯಲಾಗದಂತೆ ಕಾಯುವ ಬದಲು ಮಾಧ್ಯಮ ವರದಿಗಳ ಮೂಲಕ ಇನ್ನಷ್ಟು ವಿವರಗಳು ಬಯಲಾಗುತ್ತಿವೆ.
ಒಂದು ಕಡೆ ಅಪಹರಣದಂತಹ ಗಂಭೀರ ಪ್ರಕರಣ ದಾಖಲಾದರೂ ಆರೋಪಿ ರೇವಣ್ಣ ಬಂಧನಕ್ಕೆ ಮೀನಾಮೇಷ ಎಣಿಸಿದ್ದು, ಮುಖ್ಯಮಂತ್ರಿ ಮತ್ತು ಸರ್ಕಾರ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಕುರಿತು ದಿಟ್ಟ ಹೇಳಿಕೆ ನೀಡದೇ ಇರುವುದು, ಪ್ರಕರಣದ ಸಂತ್ರಸ್ತೆಯರು ದೂರು ನೀಡಲು ಹಿಂಜರಿಯುವಂತೆ ಮಾಡುತ್ತಿದೆ. ಮತ್ತೊಂದು ಕಡೆ ಧೈರ್ಯವಾಗಿ ಮುಂದೆ ಬಂದು ದೂರು ನೀಡಿದವರ ವಿವರಗಳು ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿರುವುದು ಸಂತ್ರಸ್ತೆಯರನ್ನು ಇನ್ನಷ್ಟು ಎದೆಗುಂದಿಸುತ್ತಿದೆ. ಈ ಬೆಳವಣಿಗೆಗಳು ಪ್ರಕರಣದ ತನಿಖೆಗೆ ಸವಾಲಾಗುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ.
ಆರೋಪಿಗಳ ಬಂಧನಕ್ಕೆ ದಿಟ್ಟ ಕ್ರಮ ಆಗಲಿ
ಆ ಹಿನ್ನೆಲೆಯಲ್ಲಿ ಸಂತ್ರಸ್ತೆಯರಿಗೆ ಧೈರ್ಯ ಹೇಳಿ, ಅವರಲ್ಲಿ ತನಿಖೆಯ ಬಗ್ಗೆ ವಿಶ್ವಾಸ ತುಂಬಿ ಹೇಳಿಕೆ ನೀಡಲು ಮುಂದೆ ಬರುವಂತೆ ಪ್ರೇರೇಪಿಸುವ ಮತ್ತು ಅದೇ ಹೊತ್ತಿಗೆ ಅವರಿಗೆ ಅಗತ್ಯ ಆಪ್ತ ಸಮಾಲೋಚನೆ ನೀಡಿ ವಿಮುಖರಾಗದಂತೆ ಪ್ರಯತ್ನಿಸುತ್ತಿರುವ ಹಾಸನದ ಸಾಮಾಜಿಕ ಕಾರ್ಯಕರ್ತರೂ, ಲೇಖಕರೂ ಆದ ರೂಪ ಹಾಸನ ಅವರನ್ನು ʼದ ಫೆಡರಲ್ ಕರ್ನಾಟಕʼ ಮಾತನಾಡಿಸಿದೆ. “ಸಂಸಾರ, ಮನೆ, ಗಂಡ- ಮಕ್ಕಳು, ಹೊರಗಿನ ಸಮಾಜವನ್ನು ಎದುರಿಸಲಾಗದೆ ಎದೆಗುಂದಿರುವ ಸಂತ್ರಸ್ತೆಯರೊಂದಿಗೆ ಸಮಾಲೋಚನೆ ನಡೆಸಿ, ಧೈರ್ಯ ತುಂಬಿ, ತನಿಖೆ ಮತ್ತು ನ್ಯಾಯಾಂಗದ ಬಗ್ಗೆ ವಿಶ್ವಾಸ ಮೂಡಿಸಿ ದೂರು ನೀಡಲು ಮುಂದೆ ಬರುವಂತೆ ಮಾಡುವುದೇ ಸವಾಲು. ಇಂತಹ ಪರಿಸ್ಥಿತಿಯಲ್ಲಿ ಕೆಲವು ಮಹಿಳೆಯರು ಮುಂದೆ ಬಂದು ದೂರು ನೀಡಿದ್ದಾರೆ. ಇನ್ನಷ್ಟು ಮಹಿಳೆಯರು ಮುಂದುಬರುತ್ತಿದ್ದಾರೆ. ಆದರೆ, ಈ ನಡುವೆ ಮಾಧ್ಯಮಗಳಲ್ಲಿ ದೂರುದಾರ ಸಂತ್ರಸ್ತೆಯರ ವಿವರಗಳನ್ನು ಮರೆಮಾಚದೇ ರೋಚಕವಾಗಿ ವರದಿ ಮಾಡುತ್ತಿರುವುದು ಆಘಾತಕಾರಿ" ಎಂದರು.
"ನಿನ್ನೆಯ(ಮೇ 3) ಪ್ರಕರಣದಲ್ಲೂ ನಮ್ಮ ಮಾಧ್ಯಮಗಳು ಅವರ ಎಲ್ಲಾ ವೈಯಕ್ತಿಕ ವಿವರಗಳನ್ನು ಬಟ್ಟಂಬಯಲುಗೊಳಿಸಿ ವರದಿ ಮಾಡಿರುವುದು ದುರಾದೃಷ್ಟಕರ. ಜೊತೆಗೆ ಸರ್ಕಾರ ಕೂಡ ಆರೋಪಿಗಳ ಬಂಧನದ ವಿಷಯದಲ್ಲಿ ದಿಟ್ಟ ಕ್ರಮ ಕೈಗೊಳ್ಳುತ್ತಿಲ್ಲ. ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಆರೋಪಿ ಬಂಧನ ವಿಳಂಬ ಕೂಡ ಸಂತ್ರಸ್ತೆಯರು ದೂರು ನೀಡಲು ಹಿಂಜರಿಯುವಂತೆ ಮಾಡಿದೆ” ಎಂದು ಅವರು ವಿವರಿಸಿದರು.
ಹಾಗೇ ಮಾಧ್ಯಮಗಳು ಪ್ರಕರಣದ ಸಂತ್ರಸ್ತೆಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಹೊಣೆಗಾರಿಕೆಯಿಂದ ವರದಿ ಮಾಡಬೇಕು ಎಂದೂ ಅವರು ಮನವಿ ಮಾಡಿದರು.
ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್ ಸಂಘಟನೆಯ ರಾಜ್ಯ ಅಧ್ಯಕ್ಷೆ ಜ್ಯೋತಿ ಅನಂತಸುಬ್ಬರಾವ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ಪ್ರತಿಕ್ರಿಯಿಸಿ, “ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವವರು ಬೆಂಗಳೂರಿನಲ್ಲೇ ಅಡ್ಡಾಡಿಕೊಂಡಿದ್ದರೂ ಅವರನ್ನು ಸರ್ಕಾರ ದೂರು ದಾಖಲಾಗಿ ನಾಲ್ಕು ದಿನವಾದರೂ ಬಂಧಿಸಿಲ್ಲ. ಅವರ ಪ್ರಭಾವ ಮತ್ತು ಅಧಿಕಾರ ಹಾಸನ ಮತ್ತು ಹೊಳೆನರಸೀಪುರದಲ್ಲಿ ಯಾವ ಮಟ್ಟಿಗಿದೆ ಎಂಬುದಕ್ಕೆ ನೂರಾರು ಮಹಿಳೆಯರ ಮೇಲಿನ ಈ ದೌರ್ಜನ್ಯ, ಅತ್ಯಾಚಾರ ಪ್ರಕರಣವೇ ನಿದರ್ಶನ. ಅಷ್ಟಾಗಿಯೂ ಇಷ್ಟು ದಿನವೂ ಯಾವ ಹೆಣ್ಣುಮಗಳೂ ದೂರು ನೀಡುವ, ದನಿ ಎತ್ತುವ ಮನಸ್ಸು ಮಾಡಿರಲಿಲ್ಲ ಎಂದರೆ ಅವರ ಭಯ ಎಷ್ಟಿದೆ ಎಂದು ಊಹಿಸಬಹುದು. ಆದರೆ, ಸರಣಿ ದೂರು ದಾಖಲಾದ ಬಳಿಕವೂ ಸರ್ಕಾರ ಅವರ ಬಂಧನಕ್ಕೆ ಇಚ್ಛಾಶಕ್ತಿ ತೋರುತ್ತಿಲ್ಲ ಎಂದರೆ ಆ ಸಂತ್ರಸ್ತೆಯರು ಮತ್ತೆ ದೂರು ನೀಡಲು ಮುಂದೆ ಬರುವುದು ಹೇಗೆ? ಆದ್ದರಿಂದ ಸರ್ಕಾರ ಮತ್ತು ಮುಖ್ಯಮಂತ್ರಿಗಳು ತಮ್ಮ ವೈಯಕ್ತಿಕ ವಿಶ್ವಾಸ, ಬಾಂಧವ್ಯಗಳನ್ನು ಬದಿಗಿಟ್ಟು ಎಸ್ಐಟಿಗೆ ಸಂಪೂರ್ಣ ಮುಕ್ತ ಅಧಿಕಾರ ಕೊಡಬೇಕು. ಆ ಮೂಲಕ ಸಂತ್ರಸ್ತೆಯರಿಗೆ ತಮಗಾದ ಅನ್ಯಾಯಕ್ಕೆ ಈ ಸರ್ಕಾರ ನ್ಯಾಯ ಕೊಡಲಿದೆ ಎಂಬ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು” ಎಂದರು.
ಆಯೋಗ ಗಂಭೀರವಾಗಿ ಪರಿಗಣಿಸಿದೆ
ಸಂತ್ರಸ್ತೆಯರ ವಿವರಗಳನ್ನು ಮಾಧ್ಯಮಗಳು ಬಹಿರಂಗಪಡಿಸುತ್ತಿರುವ ಕುರಿತು ʼದ ಫೆಡರಲ್ ಕರ್ನಾಟಕʼಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ ಅವರು, “ಮಾಧ್ಯಮಗಳಲ್ಲಿ ಸಂತ್ರಸ್ತೆಯರ ವಿವರಗಳನ್ನು ಪ್ರಕಟಿಸುತ್ತಿರುವುದನ್ನು ಗಮನಿಸಿದ್ದೇನೆ. ಇದು ಸಲ್ಲದು. ತನಿಖೆಯ ದೃಷ್ಟಿಯಿಂದ ಮಾತ್ರವಲ್ಲದೆ, ಆ ಮಹಿಳೆಯರ ಘನತೆಯ ವಿಷಯದಲ್ಲೂ ಇದು ಅಪಾಯಕಾರಿ ನಡೆ. ಇದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರ ಮತ್ತು ತನಿಖಾ ಸಂಸ್ಥೆಯೊಂದಿಗೆ ಆಯೋಗ ಈ ಬಗ್ಗೆ ಮಾತನಾಡಲಿದೆ” ಎಂದು ಹೇಳಿದರು.
“ಮಾಧ್ಯಮಗಳು ಕೂಡ ಇಂತಹ ಸೂಕ್ಷ್ಮ ವಿಷಯದಲ್ಲಿ ಸಂಯಮದಿಂದ ವರದಿ ಮಾಡಬೇಕು. ಪ್ರಕರಣದ ತನಿಖೆಗೆ ಅಡ್ಡಿಯಾಗದಂತೆ ಮತ್ತು ಸಂತ್ರಸ್ತೆಯರು ದೂರು ನೀಡಲು ಮುಂದೆ ಬರಲು ಹಿಂಜರಿಯದಂತೆ ವರದಿ ಮಾಡಲು ಮಾಧ್ಯಮಗಳಿಗೆ ಮನವಿ ಕೋರುವೆ. ಅದೇ ಹೊತ್ತಿಗೆ ಈ ಬಗ್ಗೆ ಕಡಿವಾಣ ಹಾಕಲು ಸೂಕ್ತ ಕ್ರಮ ವಹಿಸುವಂತೆ ಸರ್ಕಾರಕ್ಕೂ ಕೋರುವೆ” ಎಂದು ಅವರು ಹೇಳಿದರು.
ಈ ನಡುವೆ, ಪ್ರಕರಣದ ದಿಟ್ಟ ತನಿಖೆ ಮತ್ತು ಸಂತ್ರಸ್ತೆಯರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಪತ್ರ ಬರೆದಿದ್ದಾರೆ. “ಸಂತ್ರಸ್ತೆಯರಿಗೆ ಎಲ್ಲಾ ನೆರವನ್ನು ನೀಡಬೇಕಾದ ಮತ್ತು ಇಂತಹ ಘೋರ ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಕಾನೂನು ವ್ಯಾಪ್ತಿಗೆ ತರಬೇಕಾದ ಸಾಮೂಹಿಕ ಹೊಣೆಗಾರಿಕೆ ನಮ್ಮ ಮೇಲಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆರೋಪಿಗಳ ಬಂಧನ ವಿಳಂಬ ಮತ್ತು ಸಂತ್ರಸ್ತೆಯ ರಕ್ಷಣೆಯ ವಿಷಯದಲ್ಲಿ ರಾಜ್ಯ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ ಎಂಬ ಹಿನ್ನೆಲೆಯಲ್ಲೇ ದಿಲ್ಲಿಯಿಂದ ಈ ಸಂದೇಶ ಬಂದಿರಬಹುದೆ? ಎಂಬ ಅನುಮಾನಕ್ಕೂ ಈ ಪತ್ರ ಕಾರಣವಾಗಿದೆ.