ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಆರೋಪಿ, ಹಾಸನದ ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿ ತಿಂಗಳ ಬಳಿಕ ಗುರುವಾರ ತಡರಾತ್ರಿ ಭಾರತಕ್ಕೆ ಮರಳಿದ್ದು, ಕೊನೆಗೂ ಎಸ್‌ಐಟಿ ವಶಕ್ಕೆ ಒಳಪಟ್ಟಿದ್ದಾರೆ. ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಈಗ ಎಸ್‌ಐಟಿ ಬಲೆ ಬೀಸಿದೆ.
ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಗುರುವಾರ ತಡರಾತ್ರಿ ಬಂಧಿಸಿ, ಶುಕ್ರವಾರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಆರು ದಿನಗಳ ಕಾಲ ತಮ್ಮ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದೆ. ಇತ್ತ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಅವರು ಅಪಹರಣ ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಇದೀಗ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ಅವರಿಗೆ ವಿಚಾರಕೊಂಡಿರುವ ಭವಾನಿ ರೇವಣ್ಣ ಅವರನ್ನು ವಿಚಾರಣೆಗಾಗಿ ಹಾಜರಾಗುವಂತೆ ಎಸ್‌ಐಟಿ ನೊಟೀಸ್ ಜಾರಿಗೊಳಿಸಿದೆ.
ಶನಿವಾರ ಸಂಜೆಯೊಳಗೆ ವಿಚಾರಣೆ ಬರುವಂತೆ ಸೂಚಿಸಿದ್ದಾರೆ. ವಿಚಾರಣೆಗೆ ಹಾಜರಾದ ವೇಳೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಿದ್ದಾರೆ. ಈ ಸಂದರ್ಭದಲ್ಲಿ ಬಂಧನ ಮಾಡುವ ಸಾಧ್ಯತೆ ಹೆಚ್ಚಿದೆ. ಬಂಧನ ಭೀತಿಯಿಂದಾಗಿ ಭವಾನಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಿರೀಕ್ಷಣಾ ಜಾಮೀನು ನಿರಾಕರಣೆಯಾದ ಹಿನ್ನೆಲೆ ಸದ್ಯ ಪ್ರಕರಣದ ಬಗ್ಗೆ ಭವಾನಿ ರೇವಣ್ಣ ಅವರನ್ನು ವಿಚಾರಣೆ ನಡೆಸಲು ಎಸ್‌ಐಟಿ ವಶಕ್ಕೆ ಪಡೆಯುವ ಸಾಧ್ಯತೆ ಹೆಚ್ಚಿದೆ. ಭವಾನಿ ರೇವಣ್ಣ ಎಲ್ಲಿದ್ದಾರೆ ಎಂಬುದು ಎಸ್‌ಐಟಿ ತಂಡಕ್ಕೆ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಶೋಧ ಆರಂಭಿಸಿದೆ.
ಮನೆಯಲ್ಲಿ ಇಲ್ಲದ ಕಾರಣಕ್ಕೆ ಶುಕ್ರವಾರ ಬೆಳಿಗ್ಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ಅನ್ನು ಬಾಗಿಲಿಗೆ ಅಂಟಿಸಿ ಬಂದಿದ್ದರು. ಬೆಂಗಳೂರು, ಹಾಸನ, ಹೊಳೆನರಸೀಪುರದಲ್ಲಿ ಹುಡುಕಾಟ ಆರಂಭಿಸಲಾಗಿದೆ. ಮಾತ್ರವಲ್ಲ, ಸಂಬಂಧಿಕರ ಮನೆಗಳಲ್ಲೂ ಶೋಧ ಕಾರ್ಯ ನಡೆದಿದೆ.