ವಿಧಾನ ಪರಿಷತ್ ಚುನಾವಣೆ | 17 ಮಂದಿಯ ಆಯ್ಕೆ ನಿರ್ಣಯ ಇಂದು
ಸ್ಪರ್ಧೆ ಇಲ್ಲದೆ ಇರುವುದರಿಂದ ಎಲ್ಲಾ 11 ಮಂದಿಯೂ ಅವಿರೋಧವಾಗಿ ಮೇಲ್ಮನೆಗೆ ಪ್ರವೇಶಿಸುವುದು ಬಹುತೇಕ ನಿಶ್ಚಿತವಾಗಿದೆ. ಅವರೊಂದಿಗೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ಚುನಾಯಿತರಾಗುವವರು ಯಾರು ಎಂಬುದು ಕೂಡ ಇಂದು(ಜೂ.6)ಯೇ ನಿರ್ಧಾರವಾಗಲಿದೆ.;
ವಿಧಾನ ಪರಿಷತ್ನ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳ ತಲಾ ಮೂರು ಸ್ಥಾನಗಳಿಗೆ ಜೂನ್ 3ರಂದು ನಡೆದ ಚುನಾವಣೆಯ ಮತ ಎಣಿಕೆ ಜೂ.6ರಂದು ನಡೆಯಲಿದ್ದು, ಸಂಜೆಯ ವೇಳೆಗೆ ಫಲಿತಾಂಶ ಹೊರಬೀಳಲಿದೆ.
ಮತ ಎಣಿಕೆ ಕಾರ್ಯ ಬೆಳಿಗ್ಗೆಯಿಂದಲೇ ಆರಂಭವಾಗಲಿದ್ದು, ಎಲ್ಲಾ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಚುನಾವಣೆಯಲ್ಲಿ ಎಲ್ಲಾ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮೇಲೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಎರಡು ಕಡೆ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡಕ್ಕೂ ಪ್ರಬಲ ಬಂಡಾಯ ಅಭ್ಯರ್ಥಿಗಳು ಪ್ರತಿಸ್ಪರ್ಧೆ ನೀಡಿದ್ದು, ಚುನಾವಣಾ ಫಲಿತಾಂಶ ಕುತೂಹಲ ಕೆರಳಿಸಿದೆ.
ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಶೇ.65.86 ರಷ್ಟು ಮತದಾನವಾಗಿದ್ದರೆ, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಶೇ.78.19 ರಷ್ಟು ಮತದಾನವಾಗಿದೆ. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಶೇ.69.51ರಷ್ಟು ಮತದಾನವಾಗಿದೆ. ಹಾಗೇ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಶೇ.88.07ರಷ್ಟು, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.82.56 ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.95.27ರಷ್ಟು ಮತದಾನವಾಗಿದೆ.
ಆಯನೂರು ಮಂಜುನಾಥ್, ಮರಿತಿಬ್ಬೇಗೌಡ ಅವರು ತಾವು ಆಯ್ಕೆಯಾಗಿದ್ದ ಪಕ್ಷಗಳಿಗೆ ರಾಜೀನಾಮೆ ನೀಡಿ ಪಕ್ಷಾಂತರ ಮಾಡಿದ ಹಿನ್ನೆಲೆಯಲ್ಲಿ ತಮ್ಮ ಪರಿಷತ್ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಹಾಗೇ ಜೂ.21ರಂದು ಅವಧಿಪೂರ್ಣಗೊಳಿಸಿ ಪರಿಷತ್ನಿಂದ ನಿವೃತ್ತರಾಗುತ್ತಿರುವ ಡಾ ಚಂದ್ರಶೇಖರ ಪಾಟೀಲ, ಡಾ ವಿ ಎ ನಾರಾಯಣಸ್ವಾಮಿ, ಎ ದೇವೇಗೌಡ, ಎಸ್ ಎಲ್ ಭೋಜೇಗೌಡ ಅವರ ಸ್ಥಾನಗಳೂ ಖಾಲಿಯಾಗುತ್ತಿವೆ. ಆ ಹಿನ್ನೆಲೆಯಲ್ಲಿ ಒಟ್ಟು ಆರು ಸ್ಥಾನಗಳಿಗೆ ಚುನಾವಣೆ ಘೋಷಿಸಲಾಗಿತ್ತು.
ಸದ್ಯ ಎಲ್ಲಾ ಆರು ಮಂದಿಯೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಚುನಾವಣಾ ಕಣಕ್ಕಿಳಿದಿದ್ದು, ಕೆಲವು ಪಕ್ಷವನ್ನು ಬದಲಿಸಿ ಕಣಕ್ಕಿಳಿದಿದ್ದರೆ, ಮತ್ತೆ ಕೆಲವರು ಹಳೆಯ ಪಕ್ಷ, ಚಿಹ್ನೆಯ ಅಡಿಯಲ್ಲೇ ಚುನಾವಣಾ ಎದುರಿಸಿದ್ದಾರೆ.
11 ಸ್ಥಾನಗಳಿಗೆ ಅವಿರೋಧ ಆಯ್ಕೆ
ಈಗಾಗಲೇ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆ ಗಡುವು ಕೂಡ ಮುಗಿದಿರುವ ವಿಧಾನಸಭೆಯಿಂದ ಆಯ್ಕೆಯಾಗುವ 11 ಪರಿಷತ್ ಸ್ಥಾನಗಳಿಗೆ ಈ ಬಾರಿ ಎಲ್ಲರೂ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಜೂ.13ರಂದು ಮತದಾನ ಘೋಷಿಸಲಾಗಿದ್ದು, ಜೂ.4ರಂದು ನಾಮಪತ್ರ ಪರಿಶೀಲನೆ ನಡೆದಿದ್ದು, ಎಲ್ಲಾ ನಾಮಪತ್ರಗಳೂ ಕ್ರಮಬದ್ಧವಾಗಿವೆ ಎಂದು ಘೋಷಿಸಲಾಗಿದೆ. ನಾಮಪತ್ರ ವಾಪಸ್ ಪಡೆಯಲು ಜೂ.6 ಕೊನೆಯ ದಿನವಾಗಿರುವ ಆ ಹಿನ್ನೆಲೆಯಲ್ಲಿ ನಾಳೆಯೇ ಅಭ್ಯರ್ಥಿಗಳ ಅವಿರೋಧ ಆಯ್ಕೆಯನ್ನು ಘೋಷಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ನಿಂದ ಏಳು ಮಂದಿ ಕಣದಲ್ಲಿದ್ದು, ಐವಾನ್ ಡಿಸೋಜಾ, ಕೆ ಗೋವಿಂದರಾಜ್, ಜಗದೇವ್ ಗುತ್ತೇದಾರ್, ಬಿಲ್ಕೀಷ್ ಬಾನು, ಎನ್ ಎಸ್ ಬೋಸರಾಜು, ಡಾ ಯತೀಂದ್ರ ಸಿದ್ದರಾಮಯ್ಯ ಮತ್ತು ಎ ವಸಂತಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಮೂವರು ಕಣದಲ್ಲಿದ್ದು, ಸಿ ಟಿ ರವಿ, ಮಾರುತಿರಾವ್ ಮುಳೆ ಹಾಗೂ ಎನ್ ರವಿಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ನಿಂದ ಟಿ ಎನ್ ಜವರಾಯಿ ಗೌಡ ನಾಮಪತ್ರ ಸಲ್ಲಿಸಿದ್ದಾರೆ.
ಸ್ಪರ್ಧೆ ಇಲ್ಲದೆ ಇರುವುದರಿಂದ ಈ ಎಲ್ಲಾ 11 ಮಂದಿಯೂ ಅವಿರೋಧವಾಗಿ ಮೇಲ್ಮನೆಗೆ ಪ್ರವೇಶಿಸುವುದು ಬಹುತೇಕ ನಿಶ್ಚಿತವಾಗಿದ್ದು, ಅವರೊಂದಿಗೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ಚುನಾಯಿತರಾಗುವವರು ಯಾರು ಎಂಬುದು ಕೂಡ ನಾಳೆ(ಜೂ.6)ಯೇ ನಿರ್ಧಾರವಾಗಲಿದೆ. ಹಾಗಾಗಿ ಒಟ್ಟು 17 ಮಂದಿ ಹೊಸ ಸದಸ್ಯರು ವಿಧಾನ ಪರಿಷತ್ ಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ.