ದಸರೆಯ ಮೊದಲ ದಿನವೇ ಘಜ್ನಿ ಸಂಸ್ಕೃತಿ ಮೆರೆದ ಸರ್ಕಾರ; ಬಿ.ವೈ.ವಿಜಯೇಂದ್ರ ಆರೋಪ

Update: 2024-10-03 13:36 GMT

ಮೈಸೂರು ದಸರೆಯ ಮೊದಲ ದಿನವೇ ಕಾಂಗ್ರೆಸ್ ನೇತೃತ್ವದ ಸರ್ಕಾರ ಘಜ್ನಿ ಮಹಮದ್ ಸಂಸ್ಕೃತಿ ಮೆರೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಹಿಂದೂ ದೇವಾಲಯಗಳನ್ನು ಧ್ವಂಸ ಗೊಳಿಸಿದ ಕುಖ್ಯಾತಿಯ ಘಜ್ನಿ ಮಹಮದ್ ನ ಸಂಸ್ಕೃತಿಯನ್ನೇ ನಾಡ ಹಬ್ಬ ದಸರೆಯ ಸಂದರ್ಭದಲ್ಲಿ ಮೆರೆಯುವ ಮೂಲಕ ಸರ್ಕಾರ ಕನ್ನಡ ನಾಡಿನ ಮಹನೀಯರನ್ನು ಅವಮಾನಿಸಿದೆ. ಇದು ನಾಡಹಬ್ಬಕ್ಕೆ ಬಳಿದ ಕಪ್ಪುಮಸಿಯಂತಾಗಿದೆ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಒಂದು ಭಾಗವಾಗಿದ್ದ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ನಾಡಿನ ಕಲೆ, ಸಂಸ್ಕೃತಿಯ ವೈಭವವನ್ನು ಸಾರುವ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಇದನ್ನು ಆಸ್ವಾದಿಸಲು ಬರುವ ಪ್ರೇಕ್ಷಕ ವೃಂದಕ್ಕೆ ಕನ್ನಡ ನಾಡು, ನುಡಿ, ಪರಂಪರೆಗೆ ಮಹಾನ್ ಕೊಡುಗೆ ಕೊಟ್ಟ ಮಹನೀಯರನ್ನು ಸ್ಮರಿಸುವ ನಾಮಫಲಕಗಳನ್ನು ಅಳವಡಿಸಲಾಗುತ್ತಿತ್ತು. ಪುರಂದರದಾಸರು, ಕನಕದಾಸರು, ದ.ರಾ ಬೇಂದ್ರೆ, ಕುವೆಂಪು, ಡಾ.ರಾಜ್ ಕುಮಾರ್, ವಿ.ಕೃ ಗೋಕಾಕ್, ಟಿ.ಎನ್. ಬಾಲಕೃಷ್ಣ, ಸಂಗೀತ ದಿಗ್ಗಜರಾದ ವಾಸುದೇವಾಚಾರ್ಯ, ಪಿಟೀಲು ಚೌಡಯ್ಯ ಇಂತಹ ಅನೇಕ ಮಹನೀಯರ ನಾಮಫಲಕಗಳನ್ನು ಅಳವಡಿಸಿ ವಸ್ತು ಪ್ರದರ್ಶನಕ್ಕೆ ಬರುವವರಿಗೆ ಅವರನ್ನು ಸ್ಮರಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿತ್ತು.

ಆದರೆ, ಈಗ ಮಾಜಿ ಮೇಯರ್ ಅಯೂಬ್ ಖಾನ್ ಅವರನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್ ಸರ್ಕಾರ ಇತ್ತೀಚೆಗಷ್ಟೇ ನೇಮಿಸಿದ್ದು ಇದೀಗ ನಾಡಹಬ್ಬ ನವರಾತ್ರಿಯ ಆರಂಭದ ದಿನವೇ ಪರಂಪರೆ, ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಮಹಾನ್ ಕೊಡುಗೆ ಕೊಟ್ಟ ಸಾಧಕರ ಸ್ಮರಿಸುವ ಫಲಕಗಳನ್ನೆಲ್ಲ ಕಿತ್ತೆಸೆದು ಘಜ್ನಿ ಸಂಸ್ಕೃತಿ ಮೆರೆಸಲಾಗಿದೆ. ಈ ಕೂಡಲೇ ಇದ್ದ ಸ್ಥಳದಲ್ಲೇ ನಾಮಫಲಕಗಳನ್ನು ಅಳವಡಿಸಿ ರಾಜ್ಯ ಸರ್ಕಾರ ನಾಡಿನ ಜನತೆಯ ಕ್ಷಮೆಯಾಚಿಸಬೇಕು. ಸ್ವತಃ ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾಗೂ ಅವರ ನೆರಳಿನಲ್ಲೇ ನಡೆದಿರುವ ದುಷ್ಕೃತ್ಯದ ಹೊಣೆ ಹೊರಬೇಕು ಎಂದು ಒತ್ತಾಯಿಸಿದ್ದಾರೆ.

Tags:    

Similar News