KPSC ಪರೀಕ್ಷೆ ಮುಂದೂಡಿಕೆ ಇಲ್ಲ, ಆ.27ಕ್ಕೆ ಪರೀಕ್ಷೆ: ಸರ್ಕಾರದ ಸ್ಪಷ್ಟನೆ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ರಾಜ್ಯಪಾಲರಿಗೆ ಭಾನುವಾರ ಮನವಿ ಸಲ್ಲಿಸಲು ತೆರಳುವಾಗ ಪೊಲೀಸರು ವಶಕ್ಕೆ ಪಡೆದರು.;
ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಮಂಗಳವಾರ (ಆ.57) ನಡೆಸಲು ಉದ್ದೇಶಿಸಿರುವ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಆ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ, ಪೂರ್ವನಿಗದಿಯಂತೆ ಮಂಗಳವಾರವೇ (ಆ.27ಕ್ಕೆ) ಪರೀಕ್ಷೆ ನಡೆಸುವುದಾಗಿ ಹೇಳಿದೆ.
ಈ ಕುರಿತು ಸುದೀರ್ಘ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು, ʻʻಕೆಪಿಎಸ್‌ಸಿ ಮೂಲಕ ಆಗಸ್ಟ್ 27ರಂದು ನಿಗದಿಪಡಿಸಿರುವ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯನ್ನು ಮುಂದೂಡಲು ಆಗ್ರಹಿಸಿ ಕೆಎಎಸ್ ಆಕಾಂಕ್ಷಿಗಳ ಸಣ್ಣ ಗುಂಪೊಂದು ಲಾಬಿ ನಡೆಸುತ್ತಿದೆ. ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಿದ್ದು, ನಿಗದಿತ ದಿನದಂದೇ ಪರೀಕ್ಷೆ ನಡೆಸಲು ಆಯೋಗ ನಿರ್ಧಾರ ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ʻʻಕೆಎಎಸ್ ಆಕಾಂಕ್ಷಿಗಳ ಸಣ್ಣ ಗುಂಪೊಂದು ಕೆಪಿಎಸ್‌ಸಿ, ಡಿಪಿಎಆರ್ ಮತ್ತು ಸಿಎಂಒನ ಎಲ್ಲಾ ಪ್ರಮುಖ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದಾರೆ. ವಾಟ್ಸಾಪ್ ಸಂದೇಶಗಳ ಸುರಿಮಳೆ ಸುರಿಸುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ನನ್ನ ಫೋನ್ ಅನ್ನು ನಾನು ಏರೋಪ್ಲೇನ್ ಮೋಡ್‌ನಲ್ಲಿ ಇಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕೆಪಿಎಸ್‌ಸಿ ಸುತ್ತ ಅನುಮಾನಗಳ ಹುತ್ತ ಎಂಬಂತಹ ಪದಗಳನ್ನು ಬಳಸಿ ಸಾಕಷ್ಟು ತಪ್ಪು ಮಾಹಿತಿ ಹರಡಿ ಹಗರಣ ನಡೆದಿದೆ ಎಂಬಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆʼʼ ಎಂದು ಹೇಳಿದರು.
ʻʻಕೆಪಿಎಸ್‌ಸಿ ಅಥವಾ ಸರ್ಕಾರವು ನೀಡಿರುವ ಹೆಚ್ಚುವರಿ ಅವಕಾಶ ಮತ್ತು ವಯೋಮಿತಿ ಸಡಿಲಿಕೆಯನ್ನು ಪಡೆದ ಸುಮಾರು ಈ 1500 ವಿದ್ಯಾರ್ಥಿಗಳ (ವಯೋಮಿತಿ ಸಡಿಲಿಕೆ ನೀಡಿದ ನಂತರ ತಡವಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ) ಈ ಲಾಬಿಗೆ ಮಣಿದರೆ ಸುಮಾರು 2.5 ಲಕ್ಷಕ್ಕೂ ಹೆಚ್ಚು ಅರ್ಜಿದಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಏಕೆಂದರೆ, ಈ 2.5 ಲಕ್ಷ ಅಭ್ಯರ್ಥಿಗಳು ಪೂರ್ಣ ಸಿದ್ಧತೆ ನಡೆಸಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಬರಲು ತಮ್ಮ ಪ್ರಯಾಣದ ಟಿಕೆಟ್‌ಗಳನ್ನು ಕೂಡ ಕಾಯ್ದಿರಿಸಿದ್ದಾರೆ. ವಯೋಮಿತಿ ಸಡಿಲಿಕೆಯಿಂದಾಗಿ ಹೆಚ್ಚುವರಿ ಅವಕಾಶ ಪಡೆದಿರುವವರು ಪರೀಕ್ಷೆ ಮುಂದೂಡಿಕೆಯಾದರೆ ಸಂಕಷ್ಟಕ್ಕೆ ಒಳಗಾಗಲಿದ್ದಾರೆʼʼ ಎಂದು ತಿಳಿಸಿದ್ದಾರೆ.
ʻʻಈ ಮೊದಲು ಫೆ.26ರಂದು ಪೂರ್ವಭಾವಿ ಪರೀಕ್ಷೆಯನ್ನು ಮೇ 5ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಬಳಿಕ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದರಿಂದ 2ನೇ ಬಾರಿಗೆ ಜು.7ಕ್ಕೆ ನಿಗದಿಯಾಯಿತು. ಆ ವೇಳೆಗೆ ಯುಪಿಎಸ್‌ಸಿ ಪರೀಕ್ಷೆ ಎದುರಾಗಿದ್ದರಿಂದ ಜು.21ಕ್ಕೆ ದಿನಾಂಕವನ್ನು ಮರುಪರಿಷ್ಕರಿಸಲಾಯಿತು. ಈ ಕುರಿತು ಜೂ.21ಕ್ಕೆ ದಿನಾಂಕ ಘೋಷಿಸಿದಾಗ 2017-18ರ ಸಾಲಿನ ಅಭ್ಯರ್ಥಿಗಳು ಹೆಚ್ಚುವರಿ ಅವಕಾಶ ಪಡೆಯಲು ವಯೋಮಿತಿಯ ಗರಿಷ್ಠ ಸಡಿಲಿಕೆಯನ್ನು ಕಳೆದುಕೊಂಡಿದ್ದರು. ಅವರಿಗೆ ಅನುಕೂಲ ಮಾಡಿಕೊಡಲು ಸಾಫ್ಟ್ ವೇರ್‌ನಲ್ಲಿ ಸಣ್ಣ ಪ್ರಮಾಣದ ಬದಲಾವಣೆ ಮಾಡಬೇಕಾಯಿತು. ಜುಲೈ 6ಕ್ಕೆ ಇದು ಪೂರ್ಣಗೊಂಡಿದ್ದು, ಜು.21ಕ್ಕೆ 1560 ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದವು. ಇದರಿಂದಾಗಿ ಆ.25ಕ್ಕೆ ಮೂರನೇ ಬಾರಿಗೆ ದಿನಾಂಕ ನಿಗದಿಪಡಿಸಲಾಗಿತ್ತು. ಈ ನಡುವೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟ ಐಬಿಪಿಎಸ್ ಪರೀಕ್ಷೆಗಳಿಗೆ ಜು.1ರಂದು ದಿನಾಂಕ ಘೋಷಣೆಯಾಗಿತ್ತು. ಆದರೆ ಅದರ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ. ಆನ್‌ಲೈನ್‌ನಲ್ಲೂ ಲಭ್ಯವಿರಲಿಲ್ಲ, ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಿ ಆ.25ರ ಬದಲಾಗಿ 27ರಂದು ಪರೀಕ್ಷೆ ನಡೆಸಲು ಆ.3ರಂದು ಹೊಸ ದಿನಾಂಕವನ್ನು ಘೋಷಿಸಲಾಯಿತುʼʼ ಎಂದು ತಿಳಿಸಿದ್ದಾರೆ.
ʻʻಮುಂದಿನ ಎರಡು ತಿಂಗಳ ಅವಧಿಯಲ್ಲಿ ಭಾನುವಾರಗಳಂದು ಬಿಡುವಿಲ್ಲದ ಕಾರಣ ವಾರದ ಕೆಲಸದ ದಿನವೇ ಪರೀಕ್ಷೆ ನಡೆಸಲಾಗುತ್ತಿದೆ. ಎರಡೂವರೆ ಲಕ್ಷ ವಿದ್ಯಾರ್ಥಿಗಳು ಇದಕ್ಕೆ ತಯರಾಗಿದ್ದಾರೆ. ಕಾಗದಪತ್ರಗಳ ಮುದ್ರಣಕ್ಕೆ ನಾಲ್ಕರಿಂದ 5 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಸುದೀರ್ಘ ಕಾಲದವರೆಗೂ ಮುದ್ರಿತ ದಸ್ತವೇಜುಗಳನ್ನು ರಕ್ಷಿಸುವುದು ಸೂಕ್ತವಲ್ಲ. ಪ್ರಶ್ನೆಪತ್ರಿಕೆ ಬಹಿರಂಗದಂತಹ ಅಪಾಯಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ವಾರದ ರಜಾ ದಿನವೇ ಪರೀಕ್ಷೆ ನಡೆಸುತ್ತೇವೆʼʼ ಎಂದು ಹೇಳಿದರು.
ರಾಜಕೀಯ ಸ್ವರೂಪ ಪಡೆದ ಪ್ರತಿಭಟನೆ: ಲಾಠಿ ಪ್ರಹಾರ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ರಾಜ್ಯಪಾಲರಿಗೆ ಭಾನುವಾರ ಮನವಿ ಸಲ್ಲಿಸಲು ತೆರಳುವಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಪೊಲೀಸರ ಕ್ರಮವನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು ನೇತೃತ್ವದಲ್ಲಿ ಕಾರ್ಯಕರ್ತರು ವಿಜಯನಗರ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕೆಲವು ಅಭ್ಯರ್ಥಿಗಳು ಮತ್ತು ಯುವ ಮೋರ್ಚಾ ಕಾರ್ಯಕರ್ತರು ಠಾಣೆಯ ಒಳಗೆ ನುಗ್ಗಲು ಯತ್ನಿಸಿದರು. ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದರು. ಆಗ ಕೆಲವರಿಗೆ ಲಾಠಿ ಏಟು ಬಿದ್ದು ಗಾಯಗಳಾದವು. ʻʻಠಾಣೆ ಮುಂದೆ ಧರಣಿ ನಡೆಸುವಾಗ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ನ್ಯಾಯಯುತ ಬೇಡಿಕೆ ಮುಂದಿಟ್ಟು ತೆರಳುತ್ತಿದ್ದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ದೌರ್ಜನ್ಯ ಎಸಗಿದ್ದಾರೆʼʼ ಎಂದು ಧೀರಜ್ ಮುನಿರಾಜು ಆರೋಪಿಸಿದರು.
ʻʻಪರೀಕ್ಷೆ ಮುಂದೂಡಬೇಕು ಎಂದು ವಿದ್ಯಾರ್ಥಿಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಅವರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರತಿಭಟನೆಯನ್ನು ಪೊಲೀಸ್ ಬಲ ಬಳಸಿ ಹತ್ತಿಕ್ಕುವ ಕೆಲಸ ಮಾಡುತ್ತಿದೆʼʼ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ದೂರಿದರು.
ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಖಂಡಿಸಿದ್ದಾರೆ. ಇದು ಅಮಾನವೀಯ. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಹೋದ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಯುವ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ರಾಜ್ಯ ಬಿಜೆಪಿ ಯುವ ಅಧ್ಯಕ್ಷ ಧೀರಜ್ ಮುನಿರಾಜು ನೇತೃತ್ವದ ನಿಯೋಗ ಕೆಪಿಎಸ್‌ಸಿ ಪರೀಕ್ಷೆಗಳನ್ನು ಮುಂದೂಡುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದೆ.