ಕೋವಿಶೀಲ್ಡ್ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ
ಕೋವಿಶೀಲ್ಡ್ ಲಸಿಕೆ ಪರಿಣಾಮಗಳ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.;
ಬೆಂಗಳೂರು: ಕೋವಿಶೀಲ್ಡ್ ಲಸಿಕೆ ಪರಿಣಾಮಗಳ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
"ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು, ದಿಢೀರ್ ಹೃದಯಾಘಾತ ಸಂಭವಿಸಿ ಪ್ರಾಣ ಹಾನಿಯಾಗುವುದು ವರದಿ ಆಗುತ್ತಿದೆ. ಆದ ಕಾರಣ ಆರೋಗ್ಯ ಇಲಾಖೆಯು ತಿಳಿಸಿರುವ ಮಾಹಿತಿ ಪ್ರಕಾರ ವಿದ್ಯಾರ್ಥಿಗಳು, ಪೋಷಕರು ಪ್ರಿಡ್ಜ್‌ನಲ್ಲಿ ಇಟ್ಟಿರುವ ನೀರು, ತಂಪು ಪಾನೀಯಗಳು ಕುಡಿಯಬಾರದು. ಐಸ್ ಕ್ರೀಮ್ ಸೇವಿಸಬಾರದು" ಎಂದು ಚಿಕ್ಕಬಳ್ಳಾಪುರ ನಗರದ ಸಿದ್ದರಾಮಯ್ಯ ಕಾನೂನು ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆ ಹೊರಡಿಸಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಸ್ಪಷ್ಟನೆ ನೀಡಿದೆ.
"ಮೇಲೆ ತಿಳಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತಮ್ಮ ಪೋಷಕರಿಗೆ ಮತ್ತು ಇತರರಿಗೂ ತಿಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗಿತ್ತು. ಇನ್ನೂ ಎರಡು ತಿಂಗಳು ಬೇಸಿಗೆ ಹೆಚ್ಚಾಗುತ್ತದೆ. ಆ ಕಾರಣದಿಂದ ಎಲ್ಲರೂ ತಲೆಗೆ ಟೋಪಿ ಅಥವಾ ಬಟ್ಟೆ ಧರಿಸಬೇಕು. ಛತ್ರಿ ಹಿಡಿದು ಓಡಾಡಬೇಕು. ಈ ವಿಷಯವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸುತ್ತ ತಮ್ಮ ಪೋಷಕರು ಮತ್ತು ಇತರರಿಗೆ ತಿಳಿಸಬೇಕು" ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು.