NICE Road Project |ನೈಸ್ ಅಕ್ರಮ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚನೆ; ನೈಸ್ ಯೋಜನೆ ವಿವಾದ ಏನು, ಎತ್ತ?
ನೈಸ್ ಸಂಸ್ಥೆಗೆ ಸಂಬಂಧಿಸಿ ವಿವಿಧ ನ್ಯಾಯಾಲಯಗಳಲ್ಲಿ 374 ಪ್ರಕರಣಗಳ ವಿಚಾರಣೆ ಬಾಕಿ ಇದೆ. ನೈಸ್ ಯೋಜನೆ ವಿಳಂಬದ ಕುರಿತು ಹಲವಾರು ಪ್ರಶ್ನೆಗಳು ಉದ್ಭವಿಸಿರುವ ಹಿನ್ನೆಲೆಯಲ್ಲಿ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚಿಸಲು ಸಂಪುಟ ಸಭೆ ನಿರ್ಣಯಿಸಲಿದೆ.;
ನೈಸ್ ಸಂಸ್ಥೆಯ (ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ರೋಡ್) ಹಾಗೂ ಇತರ ವಿಷಯಗಳ ಕುರಿತು ಪರಿಶೀಲಿಸಿ ಸಚಿವ ಸಂಪುಟಕ್ಕೆ ಶಿಫಾರಸು ಮಾಡಲು ಸಂಪುಟ ಉಪಸಮಿತಿ ರಚನೆಗೆ ಸಂಪುಟ ಸಭೆ ನಿರ್ಧರಿಸಿದೆ.
ನೈಸ್ ರಸ್ತೆ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾದ ಹಾಗೂ ಬಳಕೆಯಾಗಿರುವ ಭೂಮಿ, ರೈತರಿಂದ ಅಕ್ರಮವಾಗಿ ಭೂಮಿ ಖರೀದಿ, ಪರಾಭಾರೆ ಸೇರಿದಂತೆ ಇನ್ನಿತರ ವಿಚಾರಗಳನ್ನು ಪರಿಶೀಲಿಸುವ ಸಲುವಾಗಿ ಸಂಪುಟ ಉಪ ಸಮಿತಿ ರಚಿಸಲು ಸಚಿವ ಸಂಪುಟ ಸಭೆ ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಿದೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೈಸ್ ರಸ್ತೆಯ ಬಗ್ಗೆ ಒಂದು ದಿನದಲ್ಲಿ ಚರ್ಚೆ ನಡೆಸಲು ಸಾಧ್ಯವಿಲ್ಲ. ಅಕ್ರಮಗಳ ಪರಿಶೀಲನೆಗೂ ಮುನ್ನ ತಾಂತ್ರಿಕ ಹಾಗೂ ಕಾನೂನಾತ್ಮಕ ವಿಷಯಗಳನ್ನು ಅವಲೋಕಿಸಬೇಕಾಗಿದೆ. ಉಪ ಸಮಿತಿಗೆ ಇಂದು ಸಂಜೆ ಅಥವಾ ನಾಳೆಯೊಳಗೆ ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ.
ನೈಸ್ ರಸ್ತೆಯ ಅಕ್ರಮಗಳ ಕುರಿತು ಈಗಾಗಲೇ ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿ, ಎ.ಟಿ. ರಾಮಸ್ವಾಮಿ ಸಮಿತಿ, ಸಾರ್ವಜನಿಕ ಲೆಕ್ಕ ಪರಿಶೋಧನಾ ಸಮಿತಿ, ವಿಧಾನ ಪರಿಷತ್ ನಲ್ಲಿ ತೆಗೆದುಕೊಂಡ ತೀರ್ಮಾನ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶಗಳನ್ನು ಸಂಪುಟ ಉಪ ಸಮಿತಿ ಪರಿಶೀಲನೆ ನಡೆಸಿ, ಎರಡು ಅಥವಾ ಮೂರು ತಿಂಗಳಲ್ಲಿ ಸಂಪುಟಕ್ಕೆ ಶಿಫಾರಸು ಮಾಡಲಿದೆ ಎಂದು ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಪ್ರಸ್ತುತ, ನೈಸ್ ಸಂಸ್ಥೆಗೆ ಸಂಬಂಧಿಸಿ ರಾಜ್ಯದ ಸಿವಿಲ್ ನ್ಯಾಯಾಲಯಗಳಲ್ಲಿ 189 ಪ್ರಕರಣಗಳ ವಿಚಾರಣೆ ಬಾಕಿ ಇದೆ. ಹೈಕೋರ್ಟ್‌ನಲ್ಲಿ 164 ಹಾಗೂ ಸುಪ್ರೀಂಕೋರ್ಟ್‌ನಲ್ಲಿ 21 ಪ್ರಕರಣಗಳ ವಿಚಾರಣೆ ಬಾಕಿ ಇದೆ. ನೈಸ್ ಯೋಜನೆ ವಿಳಂಬದ ಕುರಿತು ಹಲವಾರು ಪ್ರಶ್ನೆಗಳು ಉದ್ಭವಿಸಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭೂ ವ್ಯಾಜ್ಯದ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ತೀರ್ಪು ನೀಡಿದ್ದು, ಭೂಸ್ವಾಧೀನ ರದ್ದುಪಡಿಸಿವೆ ಎಂದು ವಿವರಿಸಿದ್ದಾರೆ.
ನೈಸ್ ಯೋಜನೆ ಏನು?
ಬೆಂಗಳೂರು-ಮೈಸೂರು ನಡುವೆ 111 ಕಿ.ಮೀ.ಗಳ ಎಕ್ಸ್‌ಪ್ರೆಸ್ ಹೆದ್ದಾರಿ, 41ಕಿ. ಮೀ. ಫೆರಿಫೆರಲ್ ರಸ್ತೆ, 9.8 ಕಿ.ಮೀ.ಗಳ ಲಿಂಕ್ ರಸ್ತೆ ನಿರ್ಮಾಣಕ್ಕೆ ನೈಸ್ ಸಂಸ್ಥೆ ಹಾಗೂ ಸರ್ಕಾರದ ಮಧ್ಯೆ 1997 ರಲ್ಲಿ ಒಪ್ಪಂದವಾಗಿತ್ತು.
13,237 ಎಕರೆ ಖಾಸಗಿ ಜಮೀನು ಮತ್ತು 6,956 ಎಕರೆ ಸರ್ಕಾರಿ ಜಮೀನು ಸ್ವಾಧೀನಕ್ಕೆ ಸರ್ಕಾರವು ನೈಸ್ ಸಂಸ್ಥೆಯೊಂದಿಗೆ ಫ್ರೇಮ್ ವರ್ಕ್ ಒಪ್ಪಂದ( ಎಫ್‌ಡಬ್ಲ್ಯುಎ) ಮಾಡಿಕೊಂಡಿತ್ತು.
1998-99 ರಲ್ಲಿ 23,625 ಎಕರೆ ಖಾಸಗಿ ಜಮೀನು ಹಾಗೂ 5,688 ಎಕರೆ ಸರ್ಕಾರಿ ಜಮೀನು ಭೂಸ್ವಾಧೀನ ಮಾಡಿಕೊಳ್ಳಲು ಸಚಿವ ಸಂಪುಟದ ಅನುಮೋದನೆ ಪಡೆಯದೇ ಕೆಐಎಡಿಬಿ ಒಪ್ಪಂದ ಮಾಡಿಕೊಂಡಿತ್ತು.
ಬಿಎಂಐಸಿಇ ಯೋಜನೆಗೆ ಸಂಬಂಧಿಸಿ ಕೆಐಎಡಿಬಿ ಕಾಯ್ದೆಯಂತೆ 25,616 ಎಕರೆ ಅನುಸೂಚಿತ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಘೋಷಿಸಲಾಗಿತ್ತು. ಖಾಸಗಿಯವರ 18,058 ಎಕರೆಗೆ ಪ್ರಾಥಮಿಕ ಅಧಿಸೂಚನೆಯಾದರೆ, 4,809 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. 13,249 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಿರಲಿಲ್ಲ. 2,268 ಎಕರೆಗೆ ಐತೀರ್ಪು ರಚಿಸಿ 316 ಕೋಟಿ ರೂ. ಪರಿಹಾರವನ್ನು ಭೂಮಾಲೀಕರಿಗೆ ವಿತರಣೆ ಮಾಡಲಾಗಿತ್ತು.
ನೈಸ್ ಸಂಸ್ಥೆಗೆ ಇಲ್ಲಿಯವರೆಗೂ 2,191 ಎಕರೆ ಖಾಸಗಿ ಜಮೀನು ಮತ್ತು 5 ಸಾವಿರ ಎಕರೆ ಸರ್ಕಾರಿ ಜಮೀನನ್ನು ಹಸ್ತಾಂತರ ಮಾಡಲಾಗಿದೆ. 2 ಎಕರೆ ಸರ್ಕಾರಿ ಜಮೀನು ಸೇರಿದಂತೆ 1,699 ಎಕರೆ ಜಮೀನಿಗೆ ಕೆಐಎಡಿಬಿಯಿಂದ ನೈಸ್ ಸಂಸ್ಥೆಗೆ ಶುದ್ದ ಕ್ರಯಪತ್ರ ಮಾಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ನೈಸ್ ರಸ್ತೆ ವಿವಾದ ಏನು?
ನೈಸ್ ರಸ್ತೆ ಕಾಮಗಾರಿ ಎರಡೂವರೆ ದಶಕದಿಂದ ವಿಳಂಬವಾಗಿದೆ. ರೈತರ ಭೂಮಿಯನ್ನು ಖರೀದಿಸಿದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಯೋಜನೆಗೆ ಬಳಸದ ಸರ್ಕಾರಿ ಭೂಮಿಯನ್ನು ವಾಪಸ್ ನೀಡಬೇಕು ಎಂಬುದು ಸರ್ಕಾರದ ವಾದ.
ನೈಸ್ ರಸ್ತೆಯು ಫೆರಿಫೆರಲ್ ರಸ್ತೆ, ಲಿಂಕ್ ರಸ್ತೆ ಮತ್ತು ಎಕ್ಸ್‌ಪ್ರೆಸ್ ಹೆದ್ದಾರಿಯ ಸ್ವಲ್ಪ ಭಾಗವನ್ನು ಮಾತ್ರ ಪೂರ್ಣಗೊಳಿಸಿತ್ತು. ನೈಸ್ ಸಂಸ್ಥೆಗೆ ಹೆಚ್ಚುವರಿ ಭೂಮಿ ಒದಗಿಸಿಕೊಡದ ಕಾರಣ ಯೋಜನೆ ಸ್ಥಗಿತಗೊಳಿಸಿತ್ತು. ಈ ಮಧ್ಯೆ ರಾಜ್ಯ ಸರ್ಕಾರವೇ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಿಸಿದೆ. ಹೀಗಿರುವಾಗ ನೈಸ್ ರಸ್ತೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಹಲವರ ವರದಿಗಳು ಶಿಫಾರಸು ಮಾಡಿವೆ.
ಬಿಎಂಐಸಿ ಯೋಜನೆಗಾಗಿ ನೈಸ್ ಸಂಸ್ಥೆಗೆ ಮಂಜೂರಾಗಿದ್ದ 756 ಎಕರೆ ಜಾಗವನ್ನು ನೈಸ್ ಮಾಲೀಕರು ಪರಭಾರೆ ಮಾಡಿರುವುದು ಲೋಕೋಪಯೋಗಿ ಇಲಾಖೆ ತನಿಖೆಯಿಂದಲೂ ಬಹಿರಂಗವಾಗಿತ್ತು.
ನೈಸ್ ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿದ್ದ ಹಲವು ಪ್ರಕರಣಗಳಲ್ಲಿ ನೈಸ್ ವಿರುದ್ಧವಾಗಿ ತೀರ್ಪುಗಳು ಬಂದಿದೆ. ಅಲ್ಲದೇ ಸ್ವಾಧೀನ ಮಾಡಿಕೊಂಡ ಭೂಮಿ ವಾಪಸ್ ಪಡೆಯುವಂತಿದೆ ಆದೇಶಗಳಾಗಿವೆ. ಈ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಿರುವುದರಿಂದ ಹಲವು ಪ್ರಕರಣಗಳ ವಿಚಾರಣೆ ಬಾಕಿ ಇದೆ.
ಸದನ ಸಮಿತಿ ವರದಿ ಹೇಳಿದ್ದೇನು?
2013ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೈಸ್ ಯೋಜನೆಗೆ ಸಂಬಂಧಿಸಿ ತನಿಖೆ ನಡೆಸಲು ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಸರ್ಕಾರ ಸದನ ಸಮಿತಿ ರಚಿಸಿತ್ತು. 2016 ರಲ್ಲಿ ಸಮಿತಿ ವರದಿ ನೀಡಿ, ನೈಸ್ ಯೋಜನೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಹೆಚ್ಚುವರಿ ಭೂಮಿ ಹಿಂಪಡೆಯಬೇಕು ಶಿಫಾರಸು ಮಾಡಲಾಗಿತ್ತು. ಆದರೆ, ವರದಿ ನೀಡಿ 9 ವರ್ಷ ಕಳೆದರೂ ಈವರೆಗೆ ಯಾವುದೇ ಸರ್ಕಾರ ಕ್ರಮ ಜರುಗಿಸಿಲ್ಲ.
ಜಮೀನು ವಾಪಸ್ ಪಡೆಯಲು ಯತ್ನ
2020 ಫೆ. 18 ರಂದು ನೈಸ್ ಕಂಪನಿಯಿಂದ 370 ಎಕರೆ ಭೂಮಿ ವಾಪಸ್ ಪಡೆಯುವ ಸಂಬಂಧ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ಸರ್ಕಾರ ನಿರ್ಧರಿಸಿತ್ತು. ಈ ಸಂಬಂಧ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚಿಸಲು ನಿರ್ಧರಿಸಲಾಗಿತ್ತು. ಆದರೆ, ಮುಂದಿನ ಪ್ರಕ್ರಿಯೆಗಳು ಯಾವುದೇ ಫಲ ನೀಡಿರಲಿಲ್ಲ.
600 ಕೋಟಿ ಮೌಲ್ಯದ ಜಮೀನು
600 ಕೋಟಿ ರೂ. ಮೌಲ್ಯದ 370 ಎಕರೆ ಜಮೀನಿಗೆ ಸಂಬಂಧಿಸಿ ರಾಜ್ಯ ಸರ್ಕಾರ ಹಾಗೂ ನೈಸ್ ಸಂಸ್ಥೆ ನಡುವೆ ವಾಜ್ಯವಿದೆ. ಬೆಂಗಳೂರು-ಮೈಸೂರು ಹೆದ್ದಾರಿಯ ಅಕ್ಕಪಕ್ಕದ ರೈತರಿಂದ ಕೃಷಿ ಭೂಮಿ ಖರೀದಿ ಮಾಡಿದ್ದು, ನಿಯಮ ಬಾಹಿರವಾಗಿ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಪರಭಾರೆ ಮಾಡಿದೆ ಎಂಬ ಆರೋಪವೂ ಕೇಳಿಬಂದಿದೆ.