Mysore Dasara 2024 | ಈ ಬಾರಿ ವಿಜೃಂಭಣೆಯ ದಸರಾಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

Update: 2024-08-12 13:39 GMT

"ದಸರಾ ಮಹೋತ್ಸವ ಜನರ ಉತ್ಸವ ಆಗಬೇಕು. ಕಳೆದ ವರ್ಷ ಕೊರೋನಾ-ಬರಗಾಲ ಕಾರಣಕ್ಕೆ ಹೆಚ್ಚು ವಿಜೃಂಭಣೆ ಮಾಡಲಿಲ್ಲ. ಈ ಬಾರಿ ವಿಜ್ರಂಭಣೆ ಇರಲಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ʼನಾಡಹಬ್ಬ ಮೈಸೂರು ದಸರಾ 2024ʼ ಉನ್ನತ ಮಟ್ಟದ ಸಭೆಯನ್ನು ಅಧಿಕಾರಿಗಳೊಂದಿಗೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ʻʻಕಳೆದ ವರ್ಷ ಕೊರೋನಾ, ಬರಗಾಲ ಇತ್ಯಾದಿ ಕಾರಣಗಳಿಂದ ಮೈಸೂರು ದಸರಾವನ್ನು ಅದ್ಧೂರಿಯಾಗಿ ನಡೆಸಲು ಆಗಿರಲಿಲ್ಲ. ಆದರೆ, ಈ ಬಾರಿ ದಸರಾಕ್ಕೆ ಕೊರತೆ ಮಾಡುವುದು ಬೇಡ. ಈ ಬಾರಿ ಮೈಸೂರು ದಸರಾ ವಿಜ್ರಂಭಣೆಯಿಂದ ನಡೆಯಲಿʼʼ ಎಂದು ಹೇಳಿದ್ದಾರೆ.

ʻʻರಾಜ್ಯದಲ್ಲಿ ಉತ್ತಮ ಮಳೆ, ಸಮೃದ್ದಿಯ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಅಕ್ಟೋಬರ್ 3 ರಿಂದ 12 ರವರೆಗೆ ನಡೆಯಲಿರುವ ದಸರಾ ನಡೆಯಲಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ‌ ಅವಕಾಶ ನೀಡಬೇಕು. ನಮ್ಮ ಕಲಾವಿದರು ಹೆಚ್ಚು ಸಮರ್ಥರಿದ್ದಾರೆ. ಟ್ಯಾಬ್ಲೋಗಳು ಹೆಚ್ಚು ಆಕರ್ಷಕ ಮತ್ತು ಅರ್ಥಪೂರ್ಣವಾಗಿರಬೇಕು. ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ಆಹಾರ, ವಸ್ತು ಪ್ರದರ್ಶನ, ಕುಸ್ತಿ ಪ್ರದರ್ಶನ, ದೀಪಾಂಲಕಾರ ಸೇರಿ ಪ್ರತಿಯೊಂದೂ ಆಕರ್ಷಣೀಯ ಮತ್ತು ಅರ್ಥಪೂರ್ಣ ಆಗಿರಬೇಕುʼʼ ಎಂದರು.

ʻʻಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಸಾರ್ಥಕ‌ ಕೆಲಸಗಳ ಪ್ರದರ್ಶನ ಮತ್ತು ತಿಳಿವಳಿಕೆ ಮೂಡಿಸಬೇಕು. ವಿಜೃಂಭಣೆಯ ನಾಡ ಹಬ್ಬಕ್ಕೆ ಅಗತ್ಯವಿದ್ದಷ್ಟು ಹಣವನ್ನು ನೀಡುತ್ತೇವೆ. ದೀಪಾಲಂಕಾರ ಈ ಬಾರಿ 21 ದಿನ ಇರಲಿ. ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲೆ, ಪ್ರತಿಭೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿʼʼ ಎಂದು ಸಭೆಯಲ್ಲಿ ಸಿಎಂ ತಿಳಿಸಿದ್ದಾರೆ.

ʻʻಟ್ಯಾಬ್ಲೋಗಳಲ್ಲಿ ಹೊಸತನ ಇರಲಿ. ಗೋಲ್ಡ್ ಕಾರ್ಡ್ ಗಳನ್ನು ಮುಂಚಿತವಾಗಿ ಮಾಡಿ. ಪಾರ್ಕಿಂಗ್, ಟ್ರಾಫಿಕ್, ಬಂದೋಬಸ್ತ್ ಕಡೆಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಕೊಡಬೇಕು. ಕರ್ನಾಟಕ ಸಂಭ್ರಮ 50 ನವೆಂಬರ್ ವರೆಗೂ ನಡೆಯಲಿದೆ. ದಸರಾದಲ್ಲಿ ಇದನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಿʼʼ ಎಂದು ಅಧಿಕಾರಿಗಳಿಗೆ ಸಿಎಂ ಸಲಹೆ ನೀಡಿದ್ದಾರೆ.

ʻʻಏರ್ ಶೋಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು. ಸ್ವಲ್ಪ ಹೆಚ್ಚಿನ ಸಮಯ ಏರ್ ಶೋ ನಡೆಸಲೂ ವಿನಂತಿಸಲಾಗುವುದು. ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು. ಮಾಮೂಲು ಹಳೆ ಪದ್ಧತಿಗಳಲ್ಲೇ ಮಾಡುವುದಕ್ಕಿಂತ ಅಪ್‌ಗ್ರೇಡ್‌ (ಉನ್ನತೀಕರಿಸಿ) ಮಾಡಿʼʼ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ದಸರಾ ಉದ್ಘಾಟನೆ ಯಾರಿಂದ ಮಾಡಿಸಬೇಕು ಎನ್ನುವ ತೀರ್ಮಾನವನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಿ ಸಭೆ ನಿರ್ಧರಿಸಿತು. ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಅವರು ನಾದಬ್ರಹ್ಮ ಹಂಸಲೇಖರಿಂದ ದಸರಾ ಮಹೋತ್ಸವದ ಉದ್ಘಾಟನೆ ಮಾಡಿಸಿದ್ದರು. ಈ ಬಾರಿ ಮುಖ್ಯಮಂತ್ರಿ ಯಾರಿಗೆ ಅವಕಾಶ ನೀಡಲಿದ್ದಾರೆ ಎನ್ನುವುದು ಕುತೂಹಲವಿದೆ.

Tags:    

Similar News