Milk Price Hike | ಹಾಲಿನ ದರ ಹೆಚ್ಚಳ: ಸಿಎಂ ಸಭೆಯಲ್ಲಿ ಏನಾಯ್ತು ತೀರ್ಮಾನ?
ಹಾಲಿನ ದರ ಏರಿಕೆಯ ಕುರಿತು ಕೆಎಂಎಫ್ ಅಧ್ಯಕ್ಷರು, ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಗೂ ಸಹಕಾರ ಮತ್ತು ಪಶುಸಂಗೋಪನೆ ಇಲಾಖೆಗಳ ಅಧಿಕಾರಿಗಳ ಜತೆ ಸೋಮವಾರ ಚರ್ಚೆ ನಡೆಸಿದ ಬಳಿಕ ಸಿಎಂ ತಮ್ಮ ನಿಲುವು ವ್ತಕ್ತಪಡಿಸಿದ್ದಾರೆ.;
ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಹಾಲಿನ ದರವನ್ನು ಹೆಚ್ಚಿಸುವ ಬಗ್ಗೆ ಸಲ್ಲಿಸಿದ ಪ್ರಸ್ತಾವದ ಕುರಿತು ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಚರ್ಚಿಸಿ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ಹಾಲಿನ ದರ ಏರಿಕೆಯ ಕುರಿತು ಕೆಎಂಎಫ್ ಅಧ್ಯಕ್ಷರು, ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಗೂ ಸಹಕಾರ ಮತ್ತು ಪಶುಸಂಗೋಪನೆ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ.
ರೈತರ ಲಾಭವೇ ಮೊದಲ ಆದ್ಯತೆ
ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಹಾಲು ಒಕ್ಕೂಟಗಳ ಉದ್ದೇಶ ರೈತರಿಗೆ ಲಾಭ ಮಾಡಿಕೊಡುವುದೇ ಹೊರತು, ಸ್ವತಃ ಲಾಭ ಪಡೆಯುವುದು ಅಲ್ಲ. ಹೀಗಾಗಿ, ದರ ಹೆಚ್ಚಳಕ್ಕೆ ಅನುಮತಿ ನೀಡಿದರೆ, ಅದರಿಂದ ಬರುವ ಲಾಭ ಸಂಪೂರ್ಣವಾಗಿ ರೈತರಿಗೆ ತಲುಪಬೇಕು" ಎಂದು ಸ್ಪಷ್ಟಪಡಿಸಿದರು.
ಒಕ್ಕೂಟಗಳ ವೆಚ್ಚ ನಿಯಂತ್ರಣದ ಸೂಚನೆ
ಹಾಲು ಒಕ್ಕೂಟಗಳ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು. "ಅಗತ್ಯಕ್ಕಿಂತ ಹೆಚ್ಚಾಗಿ ಗುತ್ತಿಗೆ ಆಧಾರದ ಮೇಲೆ ಜನರನ್ನು ನೇಮಕ ಮಾಡಬಾರದು. ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಅನಗತ್ಯ ಆಡಳಿತ ವೆಚ್ಚವೇ ಕೆಲವು ಒಕ್ಕೂಟಗಳನ್ನು ನಷ್ಟಕ್ಕೆ ದೂಡುತ್ತಿದೆ" ಎಂದು ಅವರು ಒತ್ತಿ ಹೇಳಿದರು.
ಬಳ್ಳಾರಿ ಹಾಲು ಒಕ್ಕೂಟವು ₹1.43 ಕೋಟಿ ನಷ್ಟದಲ್ಲಿರುವ ಉದಾಹರಣೆಯನ್ನು ಪ್ರಸ್ತಾಪಿಸಿದ ಅವರು, ಫೆಬ್ರವರಿ ಅಂತ್ಯದ ವೇಳೆಗೆ ಮೂರು ಒಕ್ಕೂಟಗಳು ನಷ್ಟ ಅನುಭವಿಸಿದ್ದರ ಬಗ್ಗೆ ಅವರು ವಿವರಿಸಿದರು. ಮುಂದಿನ ಮೂರು ತಿಂಗಳೊಳಗೆ ಆಡಳಿತ ವೆಚ್ಚವನ್ನು ಶೇ.2.5ಕ್ಕೆ ಇಳಿಸಲು ಹಾಗೂ ಆರು ತಿಂಗಳಲ್ಲಿ ಶೇ.2ಕ್ಕಿಂತ ಕಡಿಮೆಗೊಳಿಸಲು ಸಿಎಂ ಸೂಚನೆ ನೀಡಿದರು.
ಹಾಲಿನ ದರ ಹೆಚ್ಚಳದ ಪ್ರಸ್ತಾವನೆ
ಕೆಎಂಎಫ್ ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ದರವನ್ನು ₹3 ಹೆಚ್ಚಳ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರೈತ ಸಂಘಟನೆಗಳ ಒತ್ತಡದ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ಹೆಚ್ಚಿನ ಬೆಲೆ ಒದಗಿಸಲು ಈ ಬೇಡಿಕೆ ಇಟ್ಟಿರುವುದಾಗಿ ಮೂಲಗಳು ತಿಳಿಸಿವೆ.
ಸರ್ಕಾರದ ನಿಲುವು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಕರ್ನಾಟಕದಲ್ಲಿ ಇತರ ರಾಜ್ಯಗಳಿಗಿಂತ ಹಾಲಿನ ದರ ಕಡಿಮೆ ಇದೆ. ದರ ಹೆಚ್ಚಿಸಿದರೆ ಉತ್ಪಾದನೆ ಹೆಚ್ಚಾಗಿ ರೈತರಿಗೆ ಲಾಭವಾಗುತ್ತದೆ" ಎಂದು ಹೇಳಿದ್ದು, ಆ ಮೂಲಕ ಸಚಿವ ಸಂಪುಟ ಸಭೆಯ ಬಳಿಕ ಹಾಲಿನ ದರ ಹೆಚ್ಚಳದ ಸೂಚನೆ ನೀಡಿದ್ದಾರೆ.