KPSC SCAM:ಸರ್ಕಾರಕ್ಕೆ ಹೈಕೋರ್ಟ್ ಚಾಟಿ; ​​ನೇಮಕ ಅಕ್ರಮ ಸಿಬಿಐಗೆ ತನಿಖೆಗೆ ವಹಿಸುವ ಎಚ್ಚರಿಕೆ

ಅಲೆಕ್ಸಾಂಡನಂಥವರೂ ಕಾಲದಲ್ಲಿ ನಾಶವಾಗಿ ಹೋಗಿದ್ದಾರೆ. ಅಕ್ರಮಗಳು ನಡೆಯುವುದಕ್ಕೆ ಬಿಡವುದಿಲ್ಲ ಹಾಗೂ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ನ್ಯಾಯಪೀಠ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.;

Update: 2025-03-18 15:29 GMT

ಕೆಪಿಎಸ್​ಸಿ ಕಚೇರಿ ಇರುವ ಉದ್ಯೋಗ ಸೌಧ (ಸಂಗ್ರಹ ಚಿತ್ರ)

ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ಪೂರೈಕೆ ವಿಭಾಗಕ್ಕೆ ಸಹಾಯಕ ಎಂಜಿನಿಯರ್‌ಗಳ ನೇಮಕದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿರುದ್ಧ ಕಟು ಪದಗಳಿಂದ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ವಹಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಂಗಳವಾರ ಅಭಿಪ್ರಾಯಪಟ್ಟಿದೆ. 

ಸಹಾಯಕ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ಮಾಡಿರುವ ಶಿಫಾರಸಿಗೆ ತಡೆ ನೀಡಬೇಕು ಎಂಬ ಮನವಿ ತಿರಸ್ಕರಿಸಿದ ರಾಜ್ಯ ಆಡಳಿತಾತ್ಮಕ ನ್ಯಾಯಾಧೀಕರಣದ ಆದೇಶ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್‌ ಮತ್ತಿತರರು ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ರಾಮಚಂದ್ರ ಹುದ್ದಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ಹಂತದಲ್ಲಿ ನ್ಯಾಯ ಪೀಠವು “ ಏನೇ ಮಾಡಿದರೂ ನಡೆಯುತ್ತದೆ ಎಂಬ ಸೊಕ್ಕಿನ ನಡತೆ ಸರಿಯಲ್ಲ. ಅಲೆಕ್ಸಾಂಡರ್‌ನಂಥವರೂ  ನಾಶವಾಗಿ ಹೋಗಿದ್ದಾನೆ. ಏನೇ ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಸರಿಯಲ್ಲ. ನಾವು ಹಾಗೆ ಮಾಡಲು ಬಿಡುವುದಿಲ್ಲ. ತಪ್ಪು ಮಾಡಿದವರು ಅನುಭವಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿತು. 

“ಪ್ರತಿವಾದಿಯಾಗಿರುವ ಎಲ್ಲರಿಗೂ ತಿಳಿಸುವುದೇನೆಂದರೆ ಸೂಕ್ತ ಸಂದರ್ಭದಲ್ಲಿ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವ ಸಾಧ್ಯತೆ ಪರಿಶೀಲಿಸಬಹುದು. ಈ ಸಂಬಂಧ  ಪರ, ವಿರೋಧ ಆಕ್ಷೇಪಣೆ ಸಲ್ಲಿಸಬಹುದು. ಅರ್ಹ ನಿರ್ಧಾರವನ್ನು ಸೂಕ್ತ ಸಂದರ್ಭದಲ್ಲಿ ಕೈಗೊಳ್ಳಲಾಗುವುದು. ವಿಚಾರಣೆಯ ವೇಳೆ ಸಿಬಿಐ/ಎನ್‌ಐಎ ಪರ ವಕೀಲ ಪಿ ಪ್ರಸನ್ನಕುಮಾರ ಅವರು ಹಾಜರಿರಬೇಕು” ಎಂದು ಆದೇಶಿಸಿದ ಕೋರ್ಟ್​​ ವಿಚಾರಣೆ  ಮುಂದೂಡಿತು.

ʼವ್ಯವಹಾರ ನಡೆದಿರುವುದು ಎಸ್‌ಎಸ್‌ಎಲ್‌ಸಿ ಓದಿದವನಿಗೂ ಗೊತ್ತಾಗುತ್ತೆʼ

ವಿಚಾರಣೆಯ ಒಂದು ಹಂತದಲ್ಲಿ ಕೆಪಿಎಸ್‌ಸಿ ಪರ ವಕೀಲರು “ಸಹಾಯಕ ಎಂಜಿನಿಯರ್‌ ನೇಮಕ ಹಗರಣದ ತನಿಖೆಗಾಗಿ ಕೆಪಿಎಸ್‌ಸಿಯ ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂಬ ಮಾಹಿತಿಯನ್ನು 2024ರ ಫೆಬ್ರವರಿ 2ರಂದು ಮುಖ್ಯ ಕಾರ್ಯದರ್ಶಿಗೆ ತಿಳಿಸಲಾಗಿತ್ತು.  ಎಫ್‌ಐಆರ್‌ ದಾಖಲಿಸಲು ಕೆಪಿಎಸ್‌ಸಿ ಕಾರ್ಯದರ್ಶಿಗೆ ತಿಳಿಸಿತ್ತು. ಆದರೆ, ಅವರು ಎಫ್‌ಐಆರ್‌ ದಾಖಲಿಸಿರಲಿಲ್ಲ. ಎಲ್ಲಾ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿದೆ,'' ಎಂದರು.

ಈ ವೇಳೆ ನ್ಯಾಯಪೀಠ, ಕೆಪಿಎಸ್‌ಸಿ ತಿಳಿಸಿದರೂ ಸರ್ಕಾರವು ಹೇಗೆ ನೇಮಕ ಆದೇಶಗಳನ್ನು ನೀಡಿದೆ ಎಂದು ಅಡ್ವೊಕೇಟ್‌ ಜನರಲ್‌ ಅವರನ್ನುಪ್ರಶ್ನಿಸಿತು. ಅವರು “ಸಹಾಯಕ ಎಂಜಿನಿಯರ್‌ಗಳ ಅಗತ್ಯವಿತ್ತು. ಇದೇ ಸಂದರ್ಭದಲ್ಲಿ ಕಿರಿಯ ಎಂಜಿನಿಯರ್‌ಗಳ ನೇಮಕ  ನಡೆಯುತ್ತಿತ್ತು” ಎಂದು ಸಮರ್ಥನೆ ನೀಡಲು ಮುಂದಾದರು.  ಕೆರಳಿದ ಪೀಠವು “ಹಾಗಾದರೆ ಮಾರ್ಕೆಟ್‌ನಲ್ಲಿ ಕುಳಿತಿರುವವರನ್ನು ಕೂರಿಸಿಬಿಡಿ. ಸಿಐಡಿ ತನಿಖೆ ಅಗತ್ಯವಿದೆ ಎಂದು ಮುಖ್ಯ ಕಾರ್ಯದರ್ಶಿಗೆ ಲಿಖಿತವಾಗಿ ಹೇಳಿರುವಾಗ ನೇಮಕ ಆದೇಶ ನೀಡಿರುವುದು ವಿಶೇಷ ನಡೆ.  ವ್ಯವಹಾರ ಏನಾಗಿದೆ ಎಂದು ಎಸ್‌ಎಸ್‌ಎಲ್‌ಸಿ ಓದಿರುವವರಿಗೂ ಗೊತ್ತಿರುತ್ತದೆ. ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿದ್ದು ಮುಜುಗರವಾಗಲಿದೆ ಮಿಸ್ಟರ್‌ ಅಡ್ವೊಕೇಟ್‌ ಜನರಲ್‌” ಎಂದೂ ಮೌಖಿಕವಾಗಿ ಹೇಳಿತು. 

Tags:    

Similar News