ಕೆಪಿಎಸ್‌ಸಿ ದುರವಸ್ಥೆ | ನೇಮಕಾತಿ ಆಯ್ಕೆ ಪಟ್ಟಿಯೇ ಕಾಣೆ! ಪೊಲೀಸರಿಗೆ ದೂರು

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ (ಸ್ಲಂ ಬೋರ್ಡ್) ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಆಯ್ಕೆ ಪಟ್ಟಿ ಕಾಣೆಯಾಗಿದೆ ಎಂದು ದೂರು ನೀಡಲಾಗಿದೆ

Update: 2024-03-31 09:32 GMT

ಸರ್ಕಾರಿ ಕಚೇರಿಗಳಿಂದ ಕಡತಗಳು ಕಾಣೆಯಾಗುವುದು ಹೊಸತೇನಲ್ಲ. ಕೆಲವು ಬಾರಿ ಕಟ್ಟಡಕ್ಕೆ ʼಅನಿರೀಕ್ಷಿತ ಬೆಂಕಿ ಅವಘಢʼ ಸಂಭವಿಸಿ ಸರ್ಕಾರಿ ದಾಖಲೆಗಳು ನಾಶವಾಗುವುದೂ ಇದೆ. ಇದೀಗ ಅಂತಹದ್ದೇ ಒಂದು ಪ್ರಕರಣದಲ್ಲಿ ಕೆಪಿಎಸ್‌ಸಿ ನೇಮಕಾತಿ ಆಯ್ಕೆ ಪಟ್ಟಿಯೇ ಕಾಣೆಯಾಗಿದೆ.

ಈ ಬಗ್ಗೆ ಆಯೋಗದ ಸಹಾಯಕ ಕಾರ್ಯದರ್ಶಿ ಜೆ.ರಾಘವೇಂದ್ರ ಅವರು ವಿಧಾನಸೌಧ ಠಾಣಾ ಪೊಲೀಸರಿಗೆ ದೂರು ನೀಡಿದ್ದು, 'ಕರ್ನಾಟಕ ಲೋಕಸೇವಾ ಆಯೋಗದ ಕಚೇರಿಯಲ್ಲಿದ್ದ ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಆಯ್ಕೆ ಪಟ್ಟಿ ನಾಪತ್ತೆಯಾಗಿದೆ' ಎಂದು ದೂರಿನಲ್ಲಿ ಹೇಳಿದ್ದಾರೆ.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ (ಸ್ಲಂ ಬೋರ್ಡ್) ಕಿರಿಯ ಎಂಜಿನಿಯರ್‌ಗಳ ನೇಮಕಾತಿಗೆ 2016ರ ಸೆಪ್ಟೆಂಬರ್ 24ರಂದು ಪರೀಕ್ಷೆ ನಡೆದಿತ್ತು. ಅದರ ನೇಮಕಾತಿಗೆ ಸಂಬಂಧಿಸಿದ ಕಡತ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

'ಆಯೋಗದ ಕಚೇರಿಯ ಎಲ್ಲಾ ಶಾಖೆಗಳಲ್ಲೂ ದಾಖಲೆಗಳಿಗಾಗಿ ಹುಡುಕಾಟ ನಡೆಸಲಾಗಿದೆ. ದಾಖಲೆಗಳು ಪತ್ತೆಯಾದಲ್ಲಿ ಕೂಡಲೇ ಶಾಖೆ-2 ಕ್ಕೆ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು. ಆದರೆ, ಆಯೋಗದ ಸಿಬ್ಬಂದಿಗಳು ಎಲ್ಲೆಡೆ ಶೋಧ ನಡೆಸಿದ್ದರೂ ಕಡತ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್‌ ಇಲಾಖೆಯ ಅಧಿಕಾರಿಗಳು, ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಆಯೋಗದ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಾಗಿದೆ. ಸಿಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ, ಆಯೋಗದಿಂದ ಎಲ್ಲಾ ಮಾಹಿತಿಗಳನ್ನು ಪಡೆಯುತ್ತಿದ್ದೇವೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಚ್ ಟಿ ಶೇಖರ್ ತಿಳಿಸಿದ್ದಾರೆ.

Tags:    

Similar News