ಕೆಎಂಎಫ್‌ ಗೆ ಸಿಎಂ ಎಂಟ್ರಿ | ಸಿದ್ದರಾಮಯ್ಯ-ಡಿಕೆಶಿ ಬಲಾಬಲ ಪ್ರದರ್ಶನಕ್ಕೆ ಮತ್ತೊಂದು ವೇದಿಕೆ ಸಜ್ಜು

ಡಿ.ಕೆ.ಸುರೇಶ್‌ಗೆ ಪಟ್ಟಕಟ್ಟಲು ಡಿ.ಕೆ.ಶಿವಕುಮಾರ್‌ ಸಿದ್ಧತೆ ಕೈಗೊಂಡರೆ, ಮತ್ತೊಂದೆಡೆ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಶಾಸಕರನ್ನು ಅಧ್ಯಕ್ಷ ಗಾದಿಯಲ್ಲಿ ಕೂರಿಸಲು ರಣತಂತ್ರ ಹೆಣೆದಿದ್ದಾರೆ.;

Update: 2025-07-31 04:30 GMT

ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣದ ನಡುವೆ ನಡೆಯುತ್ತಿರುವ ಶೀತಲ ಸಮರ ಇದೀಗ ಸಹಕಾರ ರಂಗಕ್ಕೂ ಕಾಲಿಟ್ಟಿದೆ.

ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್‌) ಅಧ್ಯಕ್ಷ ಗಾದಿಗೆ ತೆರೆಮರೆಯಲ್ಲಿ ನಡೆಯುತ್ತಿದ್ದ ಲಾಬಿ ಇದೀಗ ಬಹಿರಂಗವಾಗಿ ಆರಂಭವಾಗಿದೆ.

ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಎರಡು ಬಣಗಳ ನಡುವೆ ಮುಸುಕಿನ ಗುದ್ದಾಟ ನಡೆದು, ಭಿನ್ನಮತೀಯ ಹೇಳಿಕೆಗಳಿಂದ ಪದೇ ಪದೇ ಮುಜುಗರ ಎದುರಾಗುತ್ತಿತ್ತು. ಪ್ರತಿ ಬಾರಿ ಹೈಕಮಾಂಡ್‌ ಮಧ್ಯಪ್ರವೇಶಿಸಿ ಭಿನ್ನಮತ ತಾತ್ಕಾಲಿಕ ಶಮನಗೊಳಿಸುವ ಸರ್ಕಸ್ ನಡೆಸುತ್ತಲೇ ಇತ್ತು. ಆದಾಗ್ಯೂ, ಇಬ್ಬರು ನಾಯಕರ ನಡುವಿನ‌ ಶೀತಲ ಸಮರ ಅಂತ್ಯವಾಗಿಲ್ಲ.‌ ಇದೀಗ ಕೆಎಂಎಫ್‌ ಗಾದಿಯ ಮೇಲೆ‌ ಕಣ್ಣಿಟ್ಟಿರುವ ಉಭಯ ನಾಯಕರು ಬಲಾಬಲ ಪ್ರದರ್ಶನಕ್ಕೂ ಕಸರತ್ತು ಆರಂಭಿಸಿದ್ದಾರೆ. ಇದಕ್ಕಾಗಿ ತಮ್ಮದೇ ಲೆಕ್ಕಾಚಾರದಲ್ಲಿ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. 

ಸೋದರನಿಗೆ ಪಟ್ಟ ಕಟ್ಟಲು ಡಿಕೆಶಿ ಸರ್ಕಸ್

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಸಹೋದರನಿಗೆ ಪಟ್ಟ ಕಟ್ಟಲು ಹಾಗೂ ಕೆಎಂಎಫ್ ನಲ್ಲಿ ಸಮುದಾಯ ಪ್ರಾಬಲ್ಯ ಸಾಧಿಸಲು ಡಿ.ಕೆ.ಸುರೇಶ್ ಅವರನ್ನು ನಿರ್ದೇಶಕ ಸ್ಥಾನದ ಮೂಲಕ ಬಮೂಲ್‌ ಅಧ್ಯಕ್ಷ ಸ್ಥಾನದಲ್ಲಿ ತಂದು ಕೂರಿಸಿದರು. ಈಗ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಡಿ.ಕೆ.ಸುರೇಶ್‌ಗೆ ಕೆಎಂಎಫ್‌ ಪಟ್ಟ ಕಟ್ಟಲು ತೆರೆಮರೆಯ ಸಿದ್ಧತೆ ನಡೆಸುತ್ತಿದ್ದಾರೆ. ಬಮೂಲ್ ಹಾಗೂ ಇತರೆ ಒಕ್ಕೂಟಗಳ ನಿರ್ದೇಶಕರನ್ನು ತಮ್ಮತ್ತ ಸೆಳೆಯುವ ಕಾರ್ಯತಂತ್ರದ ಮೊರೆ ಹೋಗಿದ್ದಾರೆ.

ಒಕ್ಕಲಿಗ ಸಮುದಾಯದ ದಾಳ ಉರುಳಿಸುತ್ತಿರುವ ಡಿಕೆ ಶಿವಕುಮಾರ್ ಅವರು ಹಳೆ‌ ಮೈಸೂರು ಹಾಗೂ ಬಯಲು ಸೀಮೆ ಜಿಲ್ಲೆಗಳಲ್ಲಿನ ಒಕ್ಕೂಟಗಳ ನಿರ್ದೇಶಕರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ‌ ಎಂದು ಮೂಲಗಳು ತಿಳಿಸಿವೆ. 

ಅಣ್ಣನ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿರುವ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಈಗಾಗಲೇ ಕೆಎಂಎಫ್ ಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಹೇಳಿಕೆ ನೀಡಲಾರಂಭಿಸಿದ್ದಾರೆ.

ಬೆಂಬಲಿಗರಿಗೆ ಪಟ್ಟ ಕಟ್ಟಲು ಸಿಎಂ ಪ್ಲಾನ್

ಡಿಕೆಶಿ ತಂತ್ರಗಾರಿಕೆಗೆ ಪ್ರತಿತಂತ್ರ ಹೆಣೆದಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರನ್ನು ಕೆಎಂಎಫ್ ಅಧ್ಯಕ್ಷ ಗಾದಿಯಲ್ಲಿ ಕೂರಿಸಲು ತಯಾರಿ ನಡೆಸಿದ್ದಾರೆ.

ಈ ಹಿಂದೆ ತಮ್ಮ ಬೆಂಬಲಿಗ ಶಾಸಕರಾದ ಭೀಮಾನಾಯ್ಕ್ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡಿದ್ದರು. ಈಗ ಡಿ.ಕೆ.ಶಿವಕುಮಾರ್ ಅವರು ತಮ್ಮ ಸೋದರನಿಗೆ ಪಟ್ಟ ಕಟ್ಟಲು ಮುಂದಾಗಿರುವುದಕ್ಕೆ ಟಾಂಗ್ ನೀಡಲು ಸಿದ್ದರಾಯಮ್ಮ ಕಾರ್ಯಸೂಚಿ ಸಿದ್ದಪಡಿಸಿದ್ದಾರೆ.

ಕುರುಬ ಸಮುದಾಯ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್‌ ಅವರನ್ನು ರಾಬಕೊವಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಂಡ ಸಿಎಂ ತನ್ಮೂಲಕ ಕೆಎಂಎಫ್‌ ಗಾದಿಗೆ ಪೈಪೋಟಿ ಆರಂಭಿಸುವಂತೆ ನೋಡಿಕೊಂಡಿದ್ದಾರೆ. ಸಿಎಂ ಸ್ಥಾನಕ್ಕಷ್ಟೇ ಎಂಬಂತಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ರಾಜಕೀಯ ಶೀತಲಸಮರ ಹಾಲು ಒಕ್ಕೂಟದಲ್ಲೂ ವಿಜೃಂಬಿಸಿ ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷ ಸ್ಥಾನ ಮುಟ್ಟಿದೆ.

ಇದರಿಂದ ಹಾಲು ಉತ್ಪಾದಕರ ಸಹಕಾರ ರಂಗದಲ್ಲೇ ಮುಂಚೂಣಿ ಸಂಸ್ಥೆಯಾಗಿರುವ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

ಸಿಎಂ ಬೆಂಬಲಿಗರಾದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಈಗಾಗಲೇ ಕೋಲಾರ ಹಾಲು ಒಕ್ಕೂಟ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತುಮುಲ್ ಅಧ್ಯಕ್ಷರಾದ ಪಾವಗಡ ವೆಂಕಟೇಶ್ ಕೂಡ ಸಿಎಂ ಆಪ್ತರು. ಹಾಲು ಒಕ್ಕೂಟಗಳಲ್ಲಿ ಸಿಎಂ ಬೆಂಬಲಿಗರೇ ಮೇಲುಗೈ ಸಾಧಿಸಿರುವ ಹಿನ್ನೆಲೆಯಲ್ಲಿ  ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಬಣ ಬಡಿದಾಟ ಜೋರಾಗಲಿದೆ. ಒಟ್ಟಾರೆ ಕೈ ಪಾಳಯದಲ್ಲಿ ಇದು ಹೊಸ ರಾಜಕೀಯ ಕ್ರಾಂತಿ ಸೃಷ್ಟಿಸುವ ಮುನ್ಸೂಚನೆ ನೀಡಿದೆ.

ಸತೀಶ್ ಭೇಟಿಯಾಗಿ ಗೌಪ್ಯ ಮಾತುಕತೆ..!

ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ರಾಘವೇಂದ್ರ ಹಿಟ್ನಾಳ್ ಅವರು ಬುಧವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ವಿಭಾಗದ ಹಾಲು ಒಕ್ಕೂಟದ ಚುಕ್ಕಾಣಿ ಹಿಡಿದಿರುವ ಹಿಟ್ನಾಳ್, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ತೆರೆಮರೆಯಲ್ಲಿ ಪೈಪೋಟಿ ನೀಡುತ್ತಿದ್ದಾರೆ‌ ಎಂಬುದಕ್ಕೆ ಇದು ಪುಷ್ಠಿ ನೀಡಿದೆ. 

ಕೆಎಂಎಫ್‌ ಮಾಜಿ ಅಧ್ಯಕ್ಷ ಭೀಮಾನಾಯ್ಕ್‌ ಸಹ ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಸ್ಪರ್ಧೆಯಿಂದ ಹಿಂದೇಟು ಹಾಕುವಂತೆ ಮನವೊಲಿಕೆ ಮಾಡುವಲ್ಲಿ ಸಿದ್ದರಾಮಯ್ಯ ಬಣ ಯಶಸ್ವಿಯಾಯಿತು. ಒಮ್ಮೆ ಕೆಎಂಎಫ್‌ ಅಧ್ಯಕ್ಷರಾಗಿರುವ ಕಾರಣ ಮತ್ತೊಮ್ಮೆ ಆ ಹುದ್ದೆಗೆ ಸ್ಪರ್ಧೆ ಮಾಡುವುದು ಬೇಡ. ಬೇರೊಬ್ಬರಿಗೆ ಅವಕಾಶ ನೀಡಬೇಕು ಎಂದು ಹೇಳಿ ಮನವೊಲಿಕೆ ಮಾಡಲಾಯಿತು ಎಂದು ಮೂಲಗಳು ಹೇಳಿವೆ. 

ಸಚಿವ ಸ್ಥಾನ ಸಿಗದಿರುವುದಕ್ಕೆ ಕೆಎಂಎಫ್‌ ಹುದ್ದೆ ಕೊಡಿಸುವ ಪ್ರಯತ್ನ

ಶಾಸಕ ರಾಘವೇಂದ್ರ ಹಿಟ್ನಾಳ್‌ ಕೊಪ್ಪಳ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ರಾಘವೇಂದ್ರ ಹಿಟ್ನಾಳ್‌ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಕುರುಬ ಸಮುದಾಯಕ್ಕೆ ಸೇರಿದ ಅವರಿಗೆ ಸಚಿವ ಸ್ಥಾನ ಕೊಡಿಸಲು ಲಾಬಿ ಸಹ ನಡೆದಿತ್ತು. ಆದರೆ, ಕುರುಬ ಸಮುದಾಯದ ಬೈರತಿ ಸುರೇಶ್‌ಗೆ ಸಚಿವ ಸ್ಥಾನ ಸಿಕ್ಕಿರುವುದರಿಂದ ಒಂದೇ ಸಮುದಾಯದವರಿಗೆ ಸಚಿವ ಸ್ಥಾನ ನೀಡುವುದು ಸರಿಯಲ್ಲ ಎಂದು ಮಾತುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಹಿಟ್ನಾಳ್ ಅವರನ್ನು ರಾಬಕೊವಿ ಹಾಲು ಒಕ್ಕೂಟದ ಮೂಲಕ ಕೆಎಂಎಫ್ ಗೆ ತಂದು ಕೂರಿಸುವ ಪ್ಲಾನ್ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸಚಿವ ಸ್ಥಾನ ವಂಚಿತರಾಗಿರುವುದಕ್ಕೆ ಪರ್ಯಾಯವಾಗಿ ಕೆಎಂಎಫ್‌ ಹುದ್ದೆ ನೀಡಿ ಸಮಾಧಾನ ಮಾಡುವ ಉದ್ದೇಶವನ್ನೂ ಸಿದ್ದರಾಮಯ್ಯ ಹೊಂದಿದ್ದಾರೆ ಎನ್ನಲಾಗಿದೆ. ಈ ನಡುವೆ, ಕೋಲಾರ ಹಾಲು ಒಕ್ಕೂಟ ಅಧ್ಯಕ್ಷ ಕೆ.ವೈ.ನಂಜೇಗೌಡ ಸಹ ಕೆಎಂಎಫ್‌ ಅಧ್ಯಕ್ಷ ಗಾದಿಯ ಆಕಾಂಕ್ಷಿಯಾಗಿದ್ದಾರೆ.  ಇದರಿಂದ ಕಾಂಗ್ರೆಸ್‌ನಲ್ಲಿಯೇ ಜಿದ್ದಾಜಿದ್ದಿ ಪ್ರಾರಂಭವಾದಂತಾಗಿದೆ. 

ಕೆಎಂಎಫ್‌ ಅಧ್ಯಕ್ಷ ಸ್ಥಾನ ಬಲಶಾಲಿ

ಕೆಎಂಎಫ್ ಅಧ್ಯಕ್ಷ ಸ್ಥಾನ ರಾಜಕೀಯವಾಗಿಯೂ ಪ್ರಾಮುಖ್ಯತೆ ಪಡೆದಿದೆ. ರಾಜ್ಯಾದ್ಯಂತ ಸುಮಾರು 25 ಲಕ್ಷ ಹಾಲು ಉತ್ಪಾದಕರಿದ್ದಾರೆ. ಐತಿಹಾಸಿಕವಾಗಿಯೂ ಕೆಎಂಎಫ್ ಅಧ್ಯಕ್ಷ ಸ್ಥಾನ ತುಂಬಾ ಬಲಶಾಲಿಯಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪುತ್ರ ಎಚ್ ಡಿ ರೇವಣ್ಣ ಅವರು 2009 ರವರೆಗೆ 15 ವರ್ಷ ಕೆಎಂಎಫ್ ಅಧ್ಯಕ್ಷರಾಗಿದ್ದರು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಕುಟುಂಬ ಹಿಡಿತ ಸಾಧಿಸಿದಂತೆ ಮುಂದಿನ ವರ್ಷಗಳಲ್ಲಿ ಕೆಎಂಎಫ್‌ ಮೇಲೆ ಪ್ರಾಬಲ್ಯ ಮೆರೆಯಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರಾಜಕೀಯ ತಂತ್ರಗಾರಿಕೆ ಹೂಡಿದ್ದರು. ಆದರೆ, ಪಕ್ಷದಲ್ಲಿಯೇ ಪೈಪೋಟಿ ಇರುವ ಕಾರಣ ಎಷ್ಟರ ಮಟ್ಟಿಗೆ ಅದು ಯಶಸ್ವಿಯಾಗಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. 

ಆಗಸ್ಟ್‌ನಲ್ಲಿ ಕೆಎಂಎಫ್‌ ಚುನಾವಣೆ? 

ರಾಜ್ಯದ 16 ಹಾಲು ಒಕ್ಕೂಟಗಳ ಚುನಾವಣೆ ನಡೆದಿರುವ ಹಿನ್ನೆಲೆಯಲ್ಲಿ ಕೆಎಂಎಫ್‌ ಚುನಾವಣೆ ನಡೆಸಲು ವೇದಿಕೆ ಸಜ್ಜಾಗಿದೆ. ಎಲ್ಲಾ ಒಕ್ಕೂಟಗಳ ಅಧ್ಯಕ್ಷರ ಆಯ್ಕೆಯಾಗಿದೆ. ಇದೀಗ ಈ ಎಲ್ಲಾ ಅಧ್ಯಕ್ಷರು ಕೆಎಂಎಫ್‌ ಅಧ್ಯಕ್ಷರ ನೇಮಕ ಮಾಡಲಿದ್ದಾರೆ. ಎಲ್ಲ ಚುನಾವಣೆಗಳು ಮುಗಿದಿರುವ ಕಾರಣ ಕೆಎಂಎಫ್‌ ಚುನಾವಣೆ ಬಾಕಿ ಉಳಿದಿದೆ. ಆಗಸ್ಟ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಅಖಾಡ ಸಜ್ಜಾಗುತ್ತಿದ್ದು, ಪೈಪೋಟಿ ತೆರೆಮರೆಯಲ್ಲಿ ನಡೆಯುತ್ತಿದೆ. ರಾಜಕೀಯ ಅಸ್ತಿತ್ವಕ್ಕಾಗಿ ಡಿ.ಕೆ.ಸುರೇಶ್‌ಗೆ ಕೆಎಂಎಫ್‌ ಅಧ್ಯಕ್ಷ ಸ್ಥಾನ ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಹಿಟ್ನಾಳ್‌ ಮತ್ತು ನಂಜೇಗೌಡ ಅವರಿಗೂ ರಾಜಕೀಯವಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನ ಪ್ರಮುಖವಾಗಿದೆ ಎಂದು ಹೇಳಲಾಗಿದೆ. 

Tags:    

Similar News