ಉಪಕುಲಪತಿ ನೇಮಕಾತಿ | ರಾಜ್ಯಪಾಲರ ಅಧಿಕಾರಕ್ಕೆ ಕಡಿವಾಣ: 'ಗುಜರಾತ್ ಮಾದರಿ' ಕಾಯ್ದೆಗೆ ಸಿದ್ಧತೆ
ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ಕೆಎಸ್‌ಯು) ಕಾಯಿದೆಗೆ ಹಲವಾರು ತಿದ್ದುಪಡಿ ಮಾಡುವುದರೊಂದಿಗೆ ಸರ್ಕಾರವು 42 ರಾಜ್ಯ ವಿಶ್ವವಿದ್ಯಾಲಯಗಳಿಗೆ ನಿರ್ಣಾಯಕ ಆಡಳಿತ ಸುಧಾರಣೆಗಳನ್ನು ಪರಿಚಯಿಸಲು ಸಜ್ಜಾಗಿದೆ.
ವಿಶ್ವವಿದ್ಯಾಲಯಗಳ ಮೇಲೆ ರಾಜ್ಯಪಾಲರು ಹೊಂದಿರುವ ಅಧಿಕಾರವನ್ನು ಮೊಟಕುಗೊಳಿಸಲು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ಕೆಎಸ್‌ಯು) ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರಾಜ್ಯದ 42 ವಿಶ್ವವಿದ್ಯಾಲಯಗಳಿಗೆ ನಿರ್ಣಾಯಕ ಆಡಳಿತ ಸುಧಾರಣೆ ತರಲು ರಾಜ್ಯ ಸರ್ಕಾರ ಸಜ್ಜಾಗಿದೆ.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮುಖ್ಯಮಂತ್ರಿಗಳನ್ನು ನೇಮಿಸಲು ಅಧಿಕಾರ ನೀಡುವ ಕರಡು ತಿದ್ದುಪಡಿ ಮಸೂದೆಗೆ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲೇ ರಾಜ್ಯದ ಎಲ್ಲಾ ವಿವಿಗಳ ಆಡಳಿತದ ಚುಕ್ಕಾಣಿಯನ್ನು ರಾಜ್ಯಪಾಲರಿಂದ ಕಿತ್ತುಕೊಳ್ಳಲು ಸರ್ಕಾರ ಮಹತ್ವದ ಹೆಜ್ಜೆ ಇಡುವುದರೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಮತ್ತೊಂದು ಮಜಲಿಗೆ ಹೊರಳಿದೆ.
ಈ ಬಗ್ಗೆ ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್, “ಕುಲಪತಿಗಳ ನೇಮಕವೂ ಸೇರಿದಂತೆ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ರಾಜ್ಯ ಸರ್ಕಾರಕ್ಕೆ ಪರಮಾಧಿಕಾರ ನೀಡುವ 'ಗುಜರಾತ್ ಮಾದರಿ' ಕಾಯ್ದೆ ಜಾರಿಗೆ ತರಲಾಗುತ್ತಿದೆ. ಗುಜರಾತ್‌ನಲ್ಲಿ ರಾಜ್ಯಪಾಲರ ಪಾತ್ರವು ಘಟಿಕೋತ್ಸವಕ್ಕೆ ಸೀಮಿತವಾಗಿದ್ದು, ಉಪಕುಲಪತಿಗಳ ನೇಮಕ ಮತ್ತು ಇತರ ಪ್ರಮುಖ ಆಡಳಿತಾತ್ಮಕ ನಿರ್ಧಾರಗಳು ರಾಜ್ಯ ಸರ್ಕಾರದ ಕೈಯಲ್ಲಿವೆ. ಇತರ ರಾಜ್ಯ ಸರ್ಕಾರಗಳು ಸಹ ಇದೇ ರೀತಿಯ ತಿದ್ದುಪಡಿಗಳನ್ನು ಮಾಡಿವೆ. ಆದರೆ ಕೆಲವು ಯಶಸ್ವಿಯಾಗಲಿಲ್ಲ. “ನಾವು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯಿದೆಗೆ ತಿದ್ದುಪಡಿಗಳನ್ನು ಮಾಡುತ್ತಿದ್ದೇವೆ. ಅದರ ಪರಿಶೀಲನೆಗೆ ಕಾನೂನು ವ್ಯವಹಾರಗಳ ಇಲಾಖೆಗೆ ಕಳುಹಿಸಬೇಕು, ನಂತರ ಸಂಪುಟದಲ್ಲಿ ಚರ್ಚಿಸಿ ವಿಧಾನಸಭೆಯಲ್ಲಿ ಮಂಡಿಸಲಾಗುವುದು. ತಿದ್ದುಪಡಿಗಳು ಪ್ರಾಥಮಿಕವಾಗಿ ವಿಶ್ವವಿದ್ಯಾನಿಲಯಗಳನ್ನು ಬಲಪಡಿಸಲು ಮತ್ತು ಆಡಳಿತಾತ್ಮಕ, ಹಣಕಾಸು ಮತ್ತು ಶೈಕ್ಷಣಿಕ ಅಂಶಗಳನ್ನು ಸುಧಾರಿಸಲು ಕೇಂದ್ರೀಕರಿಸುತ್ತವೆ" ಎಂದು ತಿಳಿಸಿದರು.
'ಜಿ. ಪರಮೇಶ್ವರ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸಿದ್ದರು. ಆದರೆ, ಅಂದಿನ ರಾಷ್ಟ್ರಪತಿಯವರು ಮಸೂದೆಗೆ ಒಪ್ಪಿಗೆ ನೀಡಲಿಲ್ಲ. ಗುಜರಾತ್ ಸರ್ಕಾರ ಈಗ ಹೊಸ ಕಾಯ್ದೆ ಜಾರಿಗೆ ತಂದಿದೆ. ಅಲ್ಲಿನ ಕಾಯ್ದೆ ಪ್ರಕಾರ, ಕುಲಪತಿ, ಪ್ರಭಾರ ಕುಲಪತಿ, ನೇಮಕಾತಿಯಲ್ಲಿ ರಾಜ್ಯಪಾಲರಿಗಿಂತ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವಿದೆ. ಕುಲಸಚಿವ, ಮೌಲ್ಯಮಾಪನ ಕುಲಸಚಿವ, ಹಣಕಾಸು ಅಧಿಕಾರಿ, ಸಿಂಡಿಕೇಟ್ ಸದಸ್ಯರ ನೇಮಕಾತಿಯನ್ನೂ ರಾಜ್ಯ ಸರ್ಕಾರವೇ ಮಾಡುತ್ತದೆ' ಎಂದು ಅವರು ತಿಳಿಸಿದರು.
ಉಪಕುಲಪತಿಗಳ ನೇಮಕ ಹೇಗೆ?
ಈಗ ಉಪಕುಲಪತಿ ಹುದ್ದೆಗೆ ಮೂರು ಅರ್ಹ ಅಭ್ಯರ್ಥಿಗಳನ್ನು ಶಿಫಾರಸು ಮಾಡಲು ಸರ್ಕಾರವು ಶೋಧನಾ ಸಮಿತಿಯನ್ನು ರಚಿಸುತ್ತದೆ. ಈ ಪಟ್ಟಿಯನ್ನು ರಾಜ್ಯಪಾಲರ ಕಚೇರಿಗೆ ಕಳುಹಿಸಲಾಗುತ್ತದೆ. ಅಲ್ಲಿ ರಾಜ್ಯಪಾಲರು ಸರ್ಕಾರದೊಂದಿಗೆ ಸಮಾಲೋಚಿಸಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಉಪಕುಲಪತಿಗಳ ನೇಮಕದಲ್ಲಿ ರಾಜ್ಯಪಾಲರದ್ದೇ ಅಂತಿಮ ಮಾತು. ಆದರೆ ಒಂದು ವೇಳೆ ಪ್ರಸ್ತಾವಿತ ತಿದ್ದುಪಡಿಯು ಕಾನೂನಾದರೆ, ರಾಜ್ಯ ಸರ್ಕಾರವು ಸಮಿತಿಯು ಸೂಚಿಸುವ ಮೂರು ಹೆಸರುಗಳಿಂದ ಒಂದೇ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸುತ್ತದೆ. ಇದು ಉಪಕುಲಪತಿಗಳ ನೇಮಕದಲ್ಲಿ ಮುಖ್ಯಮಂತ್ರಿ ನಿರ್ಣಾಯಕ ಪಾತ್ರ ವಹಿಸುವ ಗುಜರಾತ್, ತಮಿಳುನಾಡು ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳ ಉಲ್ಲೇಖಗಳನ್ನು ಈ ಕರಡು ಮಸೂದೆ ಹೊಂದಿದೆ.
ಉಪಕುಲಪತಿಗಳನ್ನು ಗುಜರಾತ್ ಹೇಗೆ ನೇಮಿಸುತ್ತದೆ?
ಗುಜರಾತ್ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಕಾಯಿದೆ 2023 ರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಪ್ರಕಾರ, ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರು, ವಿಶ್ವವಿದ್ಯಾಲಯ ಅಥವಾ ಸಂಸ್ಥೆಯ ನಿರ್ದೇಶಕರು, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಪ್ರತಿನಿಧಿ ಮತ್ತು ರಿಜಿಸ್ಟ್ರಾರ್ ಅನ್ನು ಒಳಗೊಂಡಿರುವ ಶೋಧನಾ ಸಮಿತಿಯು ಇರುತ್ತದೆ. ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಉಪಕುಲಪತಿ ನೇಮಕಾತಿಗಾಗಿ ಪರಿಗಣನೆಗೆ ಉತ್ತಮ ಅಭ್ಯರ್ಥಿಗಳ ಪಟ್ಟಿಯನ್ನು ಇದು ಶಿಫಾರಸು ಮಾಡುತ್ತದೆ. ಪಟ್ಟಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಅರ್ಹತೆಯ ಬಗ್ಗೆ ವಿವರವಾದ ಬರವಣಿಗೆಯೊಂದಿಗೆ ವರದಿಯನ್ನು ಸಲ್ಲಿಸಲಾಗುತ್ತದೆ. ರಾಜ್ಯ ಸರ್ಕಾರ ಅವರಲ್ಲಿ ಒಬ್ಬರನ್ನು ಉಪಕುಲಪತಿಯಾಗಿ ನೇಮಿಸುತ್ತದೆ.
ರಾಜ್ಯದಲ್ಲಿ ಕೂಡ ಅದೇ ಮಾದರಿಯಲ್ಲಿ ವಿವಿಗಳ ನೇಮಕಾತಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸರ್ಕಾರ ಮುಂದಾಗಿದ್ದು, ಸೆಪ್ಟೆಂಬರ್‌ನಲ್ಲಿ ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಎಸ್‌ಯು ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಅವರ ಮೇಲಿರುವ ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿರುವ ನಡುವೆಯೇ ಈ ಕ್ರಮ ಕೈಗೊಳ್ಳಲಾಗಿದೆ.