Karnataka By-Election | 3 ಕ್ಷೇತ್ರಗಳ ಉಪ ಚುನಾವಣೆ: 64 ನಾಮಪತ್ರ ಸ್ವೀಕೃತ
ಉಪ ಚುನಾವಣೆ ನಡೆಯಲಿರುವ ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ಈ ಮೂರೂ ಕ್ಷೇತ್ರಗಳಿಗೆ ಸಲ್ಲಿಕೆಯಾದ ನಾಮಪತ್ರ ಪರಿಶೀಲನೆ ಸೋಮವಾರ ನಡೆದಿದ್ದು, ಒಟ್ಟು 64 ನಾಮಪತ್ರಗಳು ಅಂಗೀಕಾರಗೊಂಡಿವೆ.;
ಉಪ ಚುನಾವಣೆ ನಡೆಯಲಿರುವ ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ಕ್ಷೇತ್ರಗಳಿಗೆ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ಸೋಮವಾರ ನಡೆದಿದ್ದು, ಒಟ್ಟು 64 ನಾಮಪತ್ರಗಳು ಅಂಗೀಕಾರಗೊಂಡಿವೆ.
ಈ ಮೂರೂ ಕ್ಷೇತ್ರಗಳಿಗೆ ಒಟ್ಟು 121 ನಾಮಪತ್ರಗಳು ಸಲ್ಲಿಕೆ ಆಗಿದ್ದವು. ಪರಿಶೀಲನೆಯ ವೇಳೆ 24 ನಾಮಪತ್ರಗಳು ತಿರಸ್ಕೃತಗೊಂಡಿವೆ. ಈ ಪೈಕಿ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ಇನ್ನೊಬ್ಬ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ನಡೆ ಇನ್ನೂ ನಿಗೂಢವಾಗಿಯೇ ಇದೆ.
ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಸಂಡೂರು (ಬಂಗಾರು ಹನುಮಂತು) ಮತ್ತು ಶಿಗ್ಗಾವಿಯಿಂದ (ಭರತ್ ಬೊಮ್ಮಾಯಿ) ಬಿಜೆಪಿ ಅಭ್ಯರ್ಥಿಗಳು, ಚನ್ನಪಟ್ಟಣದಲ್ಲಿ ಜೆಡಿಎಸ್ (ನಿಖಿಲ್ ಕುಮಾರಸ್ವಾಮಿ) ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ಕ್ರಮವಾಗಿ ಇ. ಅನ್ನಪೂರ್ಣ, ಯಾಸೀರ್ ಅಹ್ಮದ್ ಖಾನ್ ಪಠಾಣ ಮತ್ತು ಸಿ.ಪಿ. ಯೋಗೇಶ್ವರ್ ನಾಮಪತ್ರ ಸಲ್ಲಿಸಿದ್ದಾರೆ.
ಸಂಡೂರಿನಲ್ಲಿ 7, ಶಿಗ್ಗಾವಿ 19, ಚನ್ನಪಟ್ಟಣದಲ್ಲಿ ಅತೀ ಹೆಚ್ಚು 38 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿವೆ. ಈ ಮೂರೂ ಕ್ಷೇತ್ರಗಳಲ್ಲಿ ಒಟ್ಟು 45 ಪಕ್ಷೇತರರು ಮತ್ತು ಮಾನ್ಯತೆ ಪಡೆಯದ ನೋಂದಾಯಿತ 13 ಪಕ್ಷಗಳ ಅಭ್ಯರ್ಥಿಗಳ ನಾಮಪತ್ರಗಳೂ ಅಂಗೀಕಾರಗೊಂಡಿವೆ. ನಾಮಪತ್ರ ಹಿಂಪಡೆಯಲು ಇದೇ 30 ಕೊನೆಯ ದಿನ.