ಟಾಯ್ಲೆಟ್ನಲ್ಲಿ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಇನ್ಫೋಸಿಸ್ ಉದ್ಯೋಗಿ ಬಂಧನ
ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್ ಸ್ವಪ್ನಿಲ್, ಜೂನ್ 30ರಂದು ಮಹಿಳಾ ಉದ್ಯೋಗಿಯೊಬ್ಬರು ವಾಶ್ ರೂಮ್ ಹೋಗಿದ್ದಾಗ ಗುಪ್ತವಾಗಿ ವಿಡಿಯೋ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾನೆ.;
ಸಾಂದರ್ಭಿಕ ಚಿತ್ರ
ಟಾಯ್ಲೆಟ್ ನಲ್ಲಿ ಗುಪ್ತವಾಗಿ ಮಹಿಳಾ ಸಹೋದ್ಯೋಗಿಗಳ ವಿಡಿಯೋ ಮಾಡುತ್ತಿದ್ದ ಇನ್ಫೋಸಿಸ್ ಉದ್ಯೋಗಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಾಂಗ್ಲಿ ಮೂಲದ 28 ವರ್ಷದ ಸ್ವಪ್ನಿಲ್ ನಾಗೇಶ್ ಮಲಿ ಎಂಬಾತ ಬಂಧಿತ.
ಬೆಂಗಳೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಹೀಲೆಕ್ಸ್ ಡಿಪಾರ್ಟ್ಮೆಂಟ್ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಸ್ವಪ್ನಿಲ್, ಜೂನ್ 30ರಂದು ಮಹಿಳಾ ಉದ್ಯೋಗಿಯೊಬ್ಬರು ಶೌಚಾಲಯಕ್ಕೆ ಹೋಗಿದ್ದಾಗ ಕದ್ದು ವಿಡಿಯೋ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.
ಘಟನೆ ವಿವರ
ಜೂನ್ 30ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಹಿಳೆಯೊಬ್ಬರು ಶೌಚಾಲಯಕ್ಕೆ ಹೋದಾಗ, ಎದುರಿನ ಬಾಗಿಲಿನಲ್ಲಿ ಯಾರೋ ವಿಡಿಯೋ ರೆಕಾರ್ಡ್ ಮಾಡುತ್ತಿರುವಂತೆ ಪ್ರತಿಬಿಂಬ ಕಂಡಿದೆ. ಅನುಮಾನಗೊಂಡು ಹೊರಬಂದಾಗ ಯಾರೂ ಕಾಣಲಿಲ್ಲ. ಮತ್ತೆ ಶೌಚಾಲಯಕ್ಕೆ ತೆರಳಿ ಕಾದಾಗ, ಆರೋಪಿ ಪ್ಯಾಂಟ್ ಬಿಚ್ಚಿ ಕಮೋಡ್ ಮೇಲೆ ನಿಂತು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಮಹಿಳೆಯ ಕಣ್ಣಿಗೆ ಬಿದ್ದಿದೆ. ಕೂಡಲೇ ಆ ಮಹಿಳೆ ಜೋರಾಗಿ ಕಿರುಚಾಡಿದ್ದು, ಭಯಭೀತನಾದ ಸ್ವಪ್ನಿಲ್ ಕ್ಷಮೆ ಕೇಳಿದ್ದಾನೆ. ಈ ವಿಚಾರ ತಿಳಿದ ಎಚ್‌ಆರ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ಸ್ವಪ್ನಿಲ್‌ನ ಮೊಬೈಲ್‌ನಲ್ಲಿ 30ಕ್ಕೂ ಹೆಚ್ಚು ಮಹಿಳೆಯರ ವಿಡಿಯೋಗಳು ಪತ್ತೆಯಾಗಿವೆ.
ವಿಷಯ ತಿಳಿಯುತ್ತಿದ್ದಂತೆ ಸಂಸ್ಥೆಯ ಆಡಳಿತ ಮಂಡಳಿ ಮುಜುಗರದಿಂದ ವಿಡಿಯೋಗಳನ್ನು ಡಿಲೀಟ್ ಮಾಡಿಸಿ, ಕೇವಲ ಕ್ಷಮೆ ಕೇಳಿಸಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದೆ ಎಂದು ಹೇಳಲಾಗಿದೆ.
ಆದರೆ, ಸಂತ್ರಸ್ತ ಮಹಿಳೆ ತನ್ನ ಪತಿಗೆ ಈ ವಿಷಯ ತಿಳಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಪತಿ, ಪ್ರತಿಷ್ಠಿತ ಸಂಸ್ಥೆಯಲ್ಲಿ ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ ಇಲ್ಲವೇ ಎಂದು ಕ್ಯಾಂಪಸ್ ಬಳಿ ಗಲಾಟೆ ಮಾಡಿದ್ದಾರೆ. ಅಲ್ಲದೆ, ತಪ್ಪಿತಸ್ಥನಿಗೆ ಶಿಕ್ಷೆಯಾಗಬೇಕು ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಡಿಸಿಪಿ ಸಾರಾ ಫಾತಿಮಾ ಹೇಳಿಕೆ
ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ನಿನ್ನೆ (ಜುಲೈ 01) ಸಂಜೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮಹಿಳೆ ವಾಶ್ ರೂಂಗೆ ಹೋದಾಗ ಒಬ್ಬ ವ್ಯಕ್ತಿ ಪಕ್ಕದ ವಾಶ್ ರೂಂನಿಂದ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಎಂದು ದೂರು ನೀಡಿದ್ದಾರೆ. ಸದ್ಯ ವಿಡಿಯೋ ರೆಕಾರ್ಡ್ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ. ರೆಕಾರ್ಡ್ ಮಾಡಲು ಬಳಸಿದ್ದ ಮೊಬೈಲ್ ಅನ್ನು ಎಫ್.ಎಸ್‌ಎಲ್ ಗೆ ಕಳುಹಿಸಲಾಗಿದೆ. ಆರೋಪಿ ಮಹಾರಾಷ್ಟ್ರದ ಸಾಂಗ್ಲಿಯವನಾಗಿದ್ದು, ಮೂರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ. ಬಿಇ ಮುಗಿಸಿ ಟೆಕ್ನಿಕಲ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದ" ಎಂದು ಮಾಹಿತಿ ನೀಡಿದ್ದಾರೆ.