HMT Land Denotification | ಐಎಫ್ಎಸ್ ಅಧಿಕಾರಿ ಅಮಾನತಿಗೆ ಸಚಿವ ಈಶ್ವರ ಖಂಡ್ರೆ ಶಿಫಾರಸು
ಗೋಕುಲ್ ಅವರನ್ನು ಅಮಾನತು ಮಾಡಿ ವಿಚಾರಣೆ ನಡೆಸಲು, ಮತ್ತೊಬ್ಬ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಹಾಗೂ ನಿವೃತ್ತಿ ಐ.ಎ.ಎಸ್. ಅಧಿಕಾರಿ ಮತ್ತು ಐ.ಎಫ್.ಎಸ್. ಅಧಿಕಾರಿ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲು ತಾವು ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಸಿರುವುದಾಗಿ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.;
14 ಸಾವಿರ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಎಚ್ಎಂಟಿ ಅರಣ್ಯ ಭೂಮಿಯ ಡಿನೋಟಿಫಿಕೇಷನ್ ಅನುಮತಿ ಕೋರಿ ಸುಪ್ರೀಂಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವ ಪ್ರಕರಣದಲ್ಲಿ ನಿವೃತ್ತ ಐಎಎಸ್, ಐಎಫ್ಎಸ್ ಮತ್ತು ಇಬ್ಬರು ಹಾಲಿ ಐಎಫ್ಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಶಿಫಾರಸು ಮಾಡಿದ್ದಾರೆ.
ಎಚ್ಎಂಟಿ ವಶದಲ್ಲಿರುವ ಭೂಮಿ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ನೀಡಿರುವ ಹಲವು ತೀರ್ಪು ಮತ್ತು ಅರಣ್ಯ ಸಂರಕ್ಷಣಾ ಕಾಯಿದೆ 1980ರ ಪ್ರಕಾರ ಇಂದಿಗೂ ಅದು ಅರಣ್ಯವೇ ಆಗಿದೆ. ಆದಾಗ್ಯೂ ಈ ಭೂಮಿ ಪರಭಾರೆ ಆಗಿದೆ. ರಿಯಲ್ ಎಸ್ಟೇಟ್ ಸಂಸ್ಥೆಗಳು ನೂರಾರು ಫ್ಲಾಟ್ ಕಟ್ಟಿದ್ದಾರೆ. ಧಾರಾವಾಹಿ, ಚಲನಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ವಾಣಿಜ್ಯ ಉದ್ದೇಶಕ್ಕೆ ಭೂಮಿ ಬಳಕೆ ಆಗುತ್ತಿದೆ. ಇದಕ್ಕೆ ಹೇಗೆ ಅವಕಾಶ ನೀಡಲಾಗಿದೆ ಎಂಬುದೇ ಪ್ರಶ್ನಾರ್ಥಕವಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಎಚ್ಎಂಟಿ ವಶದಲ್ಲಿರುವ ಅರಣ್ಯಭೂಮಿ 7 ಕೋಟಿ ಕನ್ನಡಿಗರ ಆಸ್ತಿ. ಇದನ್ನು ಕೆಲವೇ ಕೆಲವು ಅಧಿಕಾರಿಗಳು ಅಂದಿನ ಅರಣ್ಯ ಸಚಿವರ ಗಮನಕ್ಕೂ ತಾರದೆ, ಸಚಿವ ಸಂಪುಟದ ಪೂರ್ವಾನುಮತಿ ಪಡೆಯದೆ ಡಿನೋಟಿಫಿಕೇಷನ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರು ನಿವೃತ್ತ ಮತ್ತು ಇಬ್ಬರು ಹಾಲಿ ಸೇರಿ 4 ಅಧಿಕಾರಿಗಳಿಗೆ ನೋಟಿಸ್ ನೀಡಿದ್ದು, ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡಿರುವುದಾಗಿ ತಿಳಿಸಿದ್ದಾರೆ.
ಹೆಚ್ಚುವರಿ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆರ್.ಗೋಕುಲ್ ಅವರು, ತಾವು ಬೇಲಿಕೇರಿ ಪ್ರಕರಣದಲ್ಲಿ ಆಡಳಿತ ಪಕ್ಷದ ಶಾಸಕರಿಗೆ ಶಿಕ್ಷೆ ಆಗುವಂತೆ ಮಾಡಿದ ಕಾರಣ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂದು ತಿಳಿಸಿ, ರಕ್ಷಣೆ ಕೋರಿ ಸಿಬಿಐಗೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.
ಸರ್ಕಾರ ಅಧಿಕಾರಿಗಳನ್ನು ಬಲಿಪಶು ಮಾಡುತ್ತಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ, ಇದು ಸರ್ಕಾರದ ವಿರುದ್ಧ ಮಾಡಿರುವ ಸಂಪೂರ್ಣ ಸುಳ್ಳು ಆರೋಪ. 2024ರ ಸೆಪ್ಟೆಂಬರ್ 24ರಂದು ತಾವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ಟಿಪ್ಪಣಿ ಕಳಿಸಿ, ಸಚಿವ ಸಂಪುಟದ ಪೂರ್ವಾನುಮತಿ ಇಲ್ಲದೆ ಮಧ್ಯಂತರ ಅರ್ಜಿ ಹಾಕಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ. ಸೂಚನೆ ನೀಡಿದ ಒಂದು ತಿಂಗಳ ನಂತರ ಅಕ್ಟೋಬರ್ 2024ರಲ್ಲಿ ಬೇಲಿಕೇರಿ ತೀರ್ಪು ಬಂದಿದೆ. ಆರ್.ಗೋಕುಲ್ ತಮ್ಮ ತಪ್ಪು ಮುಚ್ಚಿಕೊಳ್ಳಲು ಸರ್ಕಾರದ ವಿರುದ್ಧ ಸಿಬಿಐಗೆ ಸುಳ್ಳು ಆರೋಪ ಮಾಡಿ ಪತ್ರ ಬರೆದಿದ್ದಾರೆ. ಇದು ಕೂಡ ಅಧಿಕಾರಿಯ ದುರ್ವರ್ತನೆ ಆಗುತ್ತದೆ ಅಥವಾ ಬೆದರಿಕೆಯ ತಂತ್ರ ಎಂದು ಭಾವಿಸಬಹುದಾಗಿದೆ ಎಂದು ಹೇಳಿದ್ದಾರೆ.
ಎಚ್ಎಂಟಿ ಅರಣ್ಯ ಭೂಮಿಗೆ ತಾವೇ ಖುದ್ದು ಭೇಟಿ ನೀಡಿದ್ದು, ಅಲ್ಲಿ ಇಂದಿಗೂ 280 ಎಕರೆಯಷ್ಟು ನೆಡುತೋಪು ಇದೆ. ಆದಾಗ್ಯೂ, ಸದರಿ ಭೂಮಿ ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಸುಪ್ರೀಂಕೋರ್ಟ್ ಗೆ ಮಧ್ಯಂತರ ಅರ್ಜಿಯಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ. ತಮ್ಮ ರಕ್ಷಣೆಗಾಗಿ ಸಿಬಿಐಗೆ ಪತ್ರ ಬರೆಯುವ ಅಧಿಕಾರಿ, ಎಚ್ಎಂಟಿ ಭೂಮಿಯಲ್ಲಿ ಅರಣ್ಯವಿದೆ. ಇದು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಮಧ್ಯಂತರ ಅರ್ಜಿ ಸಲ್ಲಿಸಲು ಬರುವುದಿಲ್ಲ ಎಂದು ಮುಖ್ಯಮಂತ್ರಿಗೆ ಏಕೆ ಪತ್ರ ಬರೆಯಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಇತರ ಸಂಸ್ಥೆಗಳ ವಶದಲ್ಲಿರುವ ಅರಣ್ಯಭೂಮಿ ಕುರಿತಂತೆ ಚರ್ಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಲು 2015ರಲ್ಲೇ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಆ ಸಮಿತಿಯ ಗಮನಕ್ಕೆ ಸಹ ತಾರದೆ, ಸಚಿವ ಸಂಪುಟದ ಅನುಮತಿ ಇಲ್ಲದೆ ಸುಪ್ರೀಂ ಕೋರ್ಟ್ ನಲ್ಲಿ ಡಿನೋಟಿಫಿಕೇಷನ್ ಅನುಮತಿ ಕೋರಿ 2020ರ ಜೂನ್ 20ರಂದು ಅರ್ಜಿ ಸಲ್ಲಿಸಲಾಗಿದೆ.
ಕೇವಲ 25 ದಿನಗಳ ಅಂತರದಲ್ಲಿ ಅಂದರೆ 15.07.2020ರಲ್ಲಿ ಉನ್ನತ ಮಟ್ಟದ ಸಭೆಯಲ್ಲಿ “1980ರ ಪೂರ್ವದಲ್ಲಿ ವಿವಿಧ / ಸರ್ಕಾರಿ ಸಂಸ್ಥೆಗಳಿಗೆ ಆದ ಪ್ರದೇಶಗಳ ಮಂಜೂರಾತಿಗಳ ಬಗ್ಗೆ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಅಂತಹ ಅರಣ್ಯ ಪ್ರದೇಶಗಳ ಡಿನೋಟಿಫಿಕೇಶನ್ ಪ್ರಸ್ತಾವನೆಯನ್ನು ಕ್ಯಾಬಿನೆಟ್ ನಿರ್ಧಾರಕ್ಕಾಗಿ ಸಲ್ಲಿಸಲು ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆರವರಿಗೆ ಸೂಚಿಸಿದೆ’ ಎಂಬ ನಿರ್ಣಯ ಮಾಡಲಾಗಿದೆ. ಆದಾಗ್ಯೂ ಈ ಬಗ್ಗೆ ಘಟನೋತ್ತರ ಅನುಮತಿ ಪಡೆದಿಲ್ಲ. ಹೀಗಾಗಿ ನಾಲ್ಕು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು ಎಂದಿದ್ದಾರೆ.
ಈಗ ಗೋಕುಲ್ ಅವರನ್ನು ಅಮಾನತು ಮಾಡಿ ವಿಚಾರಣೆ ನಡೆಸಲು, ಮತ್ತೊಬ್ಬ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಹಾಗೂ ನಿವೃತ್ತಿ ಐ.ಎ.ಎಸ್. ಅಧಿಕಾರಿ ಮತ್ತು ಐ.ಎಫ್.ಎಸ್. ಅಧಿಕಾರಿ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲು ತಾವು ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಸಿರುವುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂಕೋರ್ಟ್ಗೆ ಮಮಧ್ಯಂತರ ಅರ್ಜಿ ಸಲ್ಲಿಸಿದ ವಿಷಯ ಗಮನಕ್ಕೆ ಬರುತ್ತಿದ್ದಂತೆ ಅರ್ಜಿ ಹಿಂಪಡೆಯಲು ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಹಿಂಪಡೆಯಲು ಸಚಿವ ಸಂಪುಟದ ಅನುಮತಿಯನ್ನೂ ಪಡೆಯಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೃಹತ್ ಉದ್ಯಾನ ನಿರ್ಮಾಣ: ಖಂಡ್ರೆ
ಎಚ್ಎಂಟಿ ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ಉತ್ತರ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಿಣ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಮುಂದಿನ ಪೀಳಿಗೆಗೆ ಶ್ವಾಸತಾಣ (ಲಂಗ್ಸ್ ಸ್ಪೇಸ್) ಉಳಿಸುವುದು ತಮ್ಮ ಗುರಿ. ಈ ಅಂಶದೊಂದಿಗೆ ಮಧ್ಯಂತರ ಅರ್ಜಿ ಹಿಂಪಡೆಯಲು ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕುವ ಪೂರ್ವದಲ್ಲೇ ತಾವು ಸ್ಪಷ್ಟಪಡಿಸಿರುವುದಾಗಿ ಈಶ್ವರ ಖಂಡ್ರೆ ಹೇಳಿದ್ದಾರೆ.