ಅರಣ್ಯ ಸಂರಕ್ಷಣೆ | ನದಿ ನೀರು ಬಳಕೆದಾರರಿಗೆ ಗ್ರೀನ್ ಸೆಸ್: ಅರಣ್ಯ ಸಚಿವರ ಸೂಚನೆ
ರಾಜ್ಯದ ಅರಣ್ಯ ಸಂರಕ್ಷಣೆಗೆ ಹಣಕಾಸು ಹೊಂದಿಸಲು ವಿನೂತನ ದಾರಿ ಕಂಡುಕೊಂಡಿರುವ ರಾಜ್ಯ ಅರಣ್ಯ ಸಚಿವರು, ರಾಜ್ಯದ ಪಶ್ಚಿಮಘಟ್ಟ ಮೂಲದ ನದಿಗಳ ನೀರು ಬಳಕೆದಾರರಿಗೆ ಹಸಿರು ಸೆಸ್ ಹೇರಲು ಸೂಚನೆ ನೀಡಿದ್ದಾರೆ.
ಈ ಸಂಬಂಧ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ಸೂಚನೆ ನೀಡಿರುವ ಸಚಿವ ಈಶ್ವರ್ ಖಂಡ್ರೆ, ಪಶ್ಚಿಮಘಟ್ಟದಿಂದ ಹರಿಯುವ ನದಿ ನೀರು ಬಳಸುವ ನಗರ- ಪಟ್ಟಣಗಳಲ್ಲಿ ಕನಿಷ್ಟ ಮೊತ್ತದ ಹಸಿರು ಸೆಸ್ ಸಂಗ್ರಹಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಹಸಿರು ಸೆಸ್ ನಿಂದ ಸಂಗ್ರಹವಾಗುವ ಹಣವನ್ನು ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಬಳಕೆ ಮಾಡಬಹುದು. ವೃಕ್ಷ ಸಂವರ್ಧನೆ, ಅರಣ್ಯ ಸಂರಕ್ಷಣೆ ಜೊತೆಗೆ, ಕಾಡಿನಂಚಿನ ರೈತರ ಕೃಷಿ ಭೂಮಿ ಖರೀದಿಸಿ ಅಲ್ಲಿ ಅರಣ್ಯ ಬೆಳೆಸಲು ಬಳಸಲಾಗುವುದು ಎಂದು ಸಚಿವರು ಹೇಳಿದ್ದು, ವನ್ಯಜೀವಿ - ಮಾನವ ಸಂಘರ್ಷ ನಿಯಂತ್ರಿಸಲು ಸಹ ಸೆಸ್ ಹಣ ಬಳಕೆ ಮಾಡಲಾಗುವುದು ಎಂದಿದ್ದಾರೆ.
ಪಶ್ಚಿಮಘಟ್ಟಗಳು ತುಂಗಾ, ಭದ್ರಾ, ಕಾವೇರಿ, ಕಬಿನಿ, ಹೇಮಾವತಿ, ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಹಲವು ನದಿಗಳ ಮೂಲವೂ ಆಗಿದೆ. ರಾಜ್ಯದ ಹಲವು ನಗರ, ಪಟ್ಟಣ ಪ್ರದೇಶಗಳಿಗೆ ಈ ನದಿಗಳ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಮುಂದೆಯೂ ರಾಜ್ಯದ ನೀರಿನ ಅಗತ್ಯವನ್ನು ಈ ನದಿಗಳೇ ಪೂರೈಸಬೇಕಾಗುತ್ತದೆ. ಹೀಗಾಗಿ ಈ ಎಲ್ಲ ನದಿಗಳ ಮೂಲವಾಗಿರುವ ಪಶ್ಚಿಮಘಟ್ಟವನ್ನು ಸಂರಕ್ಷಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ನದಿಗಳು ತುಂಬಿ ಹರಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟಿರುವ ಸಚಿವರು, ಆ ನದಿ ಮೂಲಗಳಲ್ಲಿ ಅರಣ್ಯ ಸಂರಕ್ಷಣೆಗಾಗಿ ನದಿ ನೀರಿನ ಮೇಲೆ ಹೇರಲಾಗುವ ಹಸಿರು ಸೆಸ್ ಹಣ ಬಳಕೆಯಾಗಲಿದೆ ಎಂದು ಹೇಳಿದ್ದಾರೆ.
ಮಂಗಾರು ಮಳೆಯ ಮಾರುತಗಳನ್ನು ತಡೆದು ದೇಶದಾದ್ಯಂತ ವ್ಯಾಪಕ ಮಳೆ ಆಗುವಂತೆ ಮಾಡುವಲ್ಲಿ ಪಶ್ಚಿಮಘಟ್ಟಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಪಶ್ಚಿಮಘಟ್ಟದ ನದಿಗಳಿಂದ ನಗರ, ಪಟ್ಟಣಗಳಿಗೆ ಪೂರೈಕೆ ಆಗುವ ನೀರಿನ ಬಳಕೆಯ ಬಿಲ್ ನಲ್ಲಿ ಕೆಲವೇ ಕೆಲವು ರೂಪಾಯಿ ಹಸಿರು ಸೆಸ್ ವಿಧಿಸಿ ನಿಧಿ ಸಂಗ್ರಹಿಸಿದರೆ, ಅದನ್ನು ಪಶ್ಚಿಮಘಟ್ಟ ಅರಣ್ಯ ಅಭಿವೃದ್ಧಿಗಾಗಿ, ವೃಕ್ಷ ಸಂವರ್ಧನೆಗಾಗಿ, ಅರಣ್ಯದಂಚಿನ ರೈತರು ಸ್ವಯಂ ಪ್ರೇರಿತವಾಗಿ ಅರಣ್ಯ ಇಲಾಖೆಗೆ ಮಾರಾಟ ಮಾಡಲು ಇಚ್ಛಿಸುವ ಕೃಷಿ ಭೂಮಿ ಖರೀದಿಸಲು ಬಳಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅರಣ್ಯ ಸಂರಕ್ಷಿಸಲು ಮತ್ತು ವನ್ಯಜೀವಿ- ಮಾನವ ಸಂಘರ್ಷ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೂ ಈ ಹಣ ಬಳಸಬಹುದು, ಈ ನಿಟ್ಟಿನಲ್ಲಿ ಕಡತದಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.