ಪರಿಷತ್‌ನಲ್ಲಿ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024’ ಅಂಗೀಕಾರ

ಅಂದು ಕೆಂಪೇಗೌಡರು ಬೆಂಗಳೂರಿಗೆ ಹೇಗೆ ಅಡಿಪಾಯ ಹಾಕಿದರೋ ಅದೇ ರೀತಿ ನಾವು ಕೂಡ ಕಾಲಮಾನಕ್ಕೆ ತಕ್ಕಂತೆ ಸುಭದ್ರ ಅಡಿಪಾಯ ಹಾಕಲು ಮುಂದಾಗಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.;

Update: 2025-03-12 15:22 GMT

ಆಡಳಿತ ವೀಕೆಂದ್ರಿಕರಣದ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸುವ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024’ಕ್ಕೆ ವಿಧಾನ ಪರಿಷತ್ತಿನಲ್ಲಿ ಬುಧವಾರ ಅಂಗೀಕಾರ ದೊರೆಯಿತು.

ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ ʼಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ʼ ಅನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿ, ವಿಧೇಯಕದ ಉದ್ದೇಶ ವಿವರಿಸಿದರು.

ನಂತರ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ವಿಧೇಯಕ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ, ಆಕ್ಷೇಪಗಳನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ವಿರೋಧ ಪಕ್ಷಗಳ ಸದಸ್ಯರು ಅನೇಕ ಉತ್ತಮ ಸಲಹೆ ನೀಡಿದ್ದಾರೆ. ಅಂದು ಕೆಂಪೇಗೌಡರು ಬೆಂಗಳೂರಿಗೆ ಹೇಗೆ ಅಡಿಪಾಯ ಹಾಕಿದರೋ ಅದೇ ರೀತಿ ನಾವು ಕೂಡ ಕಾಲಮಾನಕ್ಕೆ ತಕ್ಕಂತೆ ಸುಭದ್ರ ಅಡಿಪಾಯ ಹಾಕಲು ಮುಂದಾಗಿದ್ದೇವೆ. ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ದೃಷ್ಟಿಯಿಂದ ನಿಮ್ಮೆಲ್ಲರ ಸಲಹೆ ಪಡೆದು ಈ ವಿಧೇಯಕವನ್ನು ಉತ್ತಮ ಮೂರ್ತಿ ಮಾಡಲು ಮುಂದಾಗಿದ್ದೇವೆ” ಎಂದು ತಿಳಿಸಿದರು.

“ಬೆಂಗಳೂರನ್ನು ನಾವು ಛಿದ್ರಗೊಳಿಸುತ್ತಿಲ್ಲ, ಗಟ್ಟಿಗೊಳಿಸಲು ಮುಂದಾಗಿದ್ದೇವೆ. ಉತ್ತರಾಖಂಡ, ಜಾರ್ಖಂಡ್, ತೆಲಂಗಾಣದಲ್ಲಿ ಇಂತಹ ಪ್ರಯತ್ನ ಮಾಡಿದ್ದಾರೆ. ಮೈಸೂರು ಜಿಲ್ಲೆ ನಂತರ ಚಾಮರಾಜನಗರವಾಗಿ ವಿಭಜನೆಯಾಯಿತು. ಬೆಂಗಳೂರು ಜಿಲ್ಲೆ ನಗರ, ಗ್ರಾಮಾಂತರ ಹಾಗೂ ರಾಮನಗರವಾಗಿ ವಿಭಜನೆಯಾಯಿತು. ಗದಗ ಜಿಲ್ಲೆ ಹಾವೇರಿಯಾಗಿ ವಿಭಜನೆಯಾಯಿತು. ಇದೆಲ್ಲವು ಆಗಿದ್ದು ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಹಾಗೂ ಆಡಳಿತಾತ್ಮಕ ಉದ್ದೇಶದಿಂದ. ಹೀಗಾಗಿ ಇಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಅಧಿಕಾರ ವಿಕೇಂದ್ರೀಕರಣ, ಆರ್ಥಿಕ ಸ್ವಾಯತ್ತತೆ, ತೆರಿಗೆ ಸಂಗ್ರಹ ಉದ್ದೇಶದಿಂದ ಈ ವಿಧೇಯಕ ಮಾಡಲು ಹೊರಟಿದ್ದೇವೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಇದ್ದರೆ ಒಂದು ಪಾಲಿಕೆಯಲ್ಲಿ ತೆರಿಗೆ ಪ್ರಮಾಣ ಹೆಚ್ಚಳ, ಮತ್ತೊಂದು ಪಾಲಿಕೆಯಲ್ಲಿ ತೆರಿಗೆ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ” ಎಂದು ತಿಳಿಸಿದರು.

“ವಿಶ್ವದ ನಾಯಕರು ಮೊದಲಿಗೆ ಬೆಂಗಳೂರಿಗೆ ಬಂದು ನಂತರ ದೇಶದ ಇತರ ನಗರಗಳಿಗೆ ಹೋಗುವ ಕಾಲ ಬಂದಿದೆ ಎಂದು ವಾಜಪೇಯಿ ಅವರು ತಿಳಿಸಿದ್ದರು. ಈ ಸಾಧನೆ ಕೇವಲ ಎಸ್.ಎಂ ಕೃಷ್ಣ ಅವರ ಸರ್ಕಾರದಿಂದ ಮಾತ್ರ ಆಗಿದೆ ಎಂದು ನಾನು ಹೇಳುವುದಿಲ್ಲ. ಮಹಾರಾಜರ ಕಾಲದಿಂದ ಬಂದ ಪರಂಪರೆ, ಸಂಸ್ಕೃತಿ, ಹವಾಮಾನ, ಶಿಕ್ಷಣ, ಪ್ರಕೃತಿ ಕಾರಣಗಳಿಂದಾಗಿ ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಬೆಂಗಳೂರು ಅನೇಕ ಕ್ಷೇತ್ರಗಳಲ್ಲಿ ತನ್ನದೆ ಆದ ಹೆಸರು ಗಳಿಸಿದೆ. ಐಟಿ ಸಿಟಿ, ಗಾರ್ಡನ್ ಸಿಟಿ, ನಿವೃತ್ತರ ಸ್ವರ್ಗ ಎಂದು ಹೆಸರು ಪಡೆದಿದೆ. ಇಲ್ಲಿ ಓದಿರುವ ಅನೇಕರು ವಿಶ್ವದ ಅನೇಕ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಲ್ಲಿ ಪ್ರತಿಭಾವಂತ ಮಾನವ ಸಂಪನ್ಮೂಲ ಹೊಂದಿದೆ. ಹೀಗಾಗಿ ಈ ನಗರಕ್ಕೆ ಹೊಸ ರೂಪ ನೀಡುವ ಉದ್ದೇಶದಿಂದ ಸುದೀರ್ಘ ಚರ್ಚೆ ಮಾಡಿ ನಾವು ಈ ಮಸೂದೆ ರೂಪಿಸಿದ್ದೇವೆ” ಎಂದು ತಿಳಿಸಿದ್ದಾರೆ.

Similar News