Fire in Electric Showroom | ರಾಜಾಜಿನಗರ ಎಲೆಕ್ಟ್ರಿಕ್ ಶೋ ರೂಂಗೆ ಬೆಂಕಿ; ಬೈಕ್‌ಗಳು ಬೆಂಕಿಗಾಹುತಿ
ಒಕಿನೋವಾ ಎಲೆಕ್ಟ್ರಿಕ್ ವೆಹಿಕಲ್ ಶೋ ರೂಂನಲ್ಲಿದ್ದ ಒಟ್ಟು 74 ಬೈಕ್‌ಗಳಿದ್ದು, ಅವುಗಳ ಪೈಕಿ 19 ಬೈಕ್‌ಗಳು ಸಂಪೂರ್ಣ ಸುಟ್ಟಿವೆ. 9 ಬೈಕ್‌ಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ.;
ಬೆಂಗಳೂರಿನ ರಾಜಾಜಿನಗರದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಬೈಕ್ ಶೋ ರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರಾಜಕುಮಾರ್ ರಸ್ತೆಯಲ್ಲಿರುವ ಒಕಿನೋವಾ ಎಲೆಕ್ಟ್ರಿಕ್ ಬೈಕ್ ಶೋ ರೂಂನಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು, 19ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಕರಕಲಾಗಿವೆ.
ಬ್ಯಾಟರಿ ಓವರ್ ಚಾರ್ಜ್ ಆಗಿ ಸ್ಫೋಟಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಲೇ ಶೋ ರೂಂ ಸಿಬ್ಬಂದಿ ಹೊರಗೆ ಬಂದಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಒಕಿನೋವಾ ಎಲೆಕ್ಟ್ರಿಕ್ ಶೋ ರೂಂನಲ್ಲಿದ್ದ ಒಟ್ಟು 74 ಬೈಕ್‌ಗಳಿದ್ದು, ಅವುಗಳ ಪೈಕಿ 19 ಬೈಕ್‌ಗಳು ಸಂಪೂರ್ಣ ಸುಟ್ಟಿವೆ. 9 ಬೈಕ್‌ಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ.
ಕಳಪೆ ಬ್ಯಾಟರಿ ಬಳಕೆಯಿಂದ ಅಗ್ನಿ ಅವಘಡ
ಕಳಪೆ ಗುಣಮಟ್ಟದ ಬ್ಯಾಟರಿಗಳ ಸಂಗ್ರಹದಿಂದಲೇ ಅಗ್ನಿ ಅವಘಡ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಡಿಮೆ ಸ್ಫೀಡ್ ಹಾಗೂ ವ್ಯಾಟ್ ಹೊಂದಿರುವ ವಾಹನಗಳ ಮಾರಾಟಕ್ಕೆ ಮಾತ್ರ ಲೈಸನ್ಸ್ ಪಡೆದಿದ್ದ ಶೋ ರೂಂನವರು, ಅಕ್ರಮವಾಗಿ ಹೈಸ್ಪೀಡ್ ಮತ್ತು ಒಂದು ಕಿಲೋ ವ್ಯಾಟ್ ಸಾಮರ್ಥ್ಯದ ಕಳಪೆ ಬ್ಯಾಟರಿ ಬಳಸಿದ್ದರು ಎಂದು ತಿಳಿದು ಬಂದಿದೆ. ಶುಕ್ರವಾರವಷ್ಟೇ ಬೈಕ್ ಶೋ ರೂಂ ಮೇಲೆ ಆರ್‌ಟಿಒ ಅಧಿಕಾರಿಗಳು ದಾಳಿ ಮಾಡಿದ್ದರು. ಪರವಾನಗಿ ನಿಯಮ ಉಲ್ಲಂಘಿಸಿ ವಾಹನಗಳ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ದಾಳಿ ನಡೆಸಿದ್ದರು ಎಂದು ತಿಳಿದು ಬಂದಿದೆ.
ಅಗ್ನಿ ಅವಘಡದ ಕುರಿತು ಅಗ್ನಿಶಾಮಕ ಅಧಿಕಾರಿ ಕಿಶೋರ್ ಮಾತನಾಡಿ, ಮಧ್ಯಾಹ್ನ 2.06 ಕ್ಕೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ರಾಜಾಜಿನಗರ ಅಗ್ನಿಶಾಮಕ ದಳದ ಎರಡು ವಾಹನಗಳು ಬೆಂಕಿಯನ್ನು ನಂದಿಸಿವೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕೀಟ್ ಅಥವಾ ಬ್ಯಾಟರಿ ಸ್ಫೋಟದಿಂದ ಅಗ್ನಿ ಅವಘಡ ಸಂಭವಿಸಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ನವಂಬರ್ ತಿಂಗಳಲ್ಲಿ ರಾಜಾಜಿನಗರದ ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಬೆಂಕಿ ತಗುಲಿ, ಯುವತಿಯೊಬ್ಬರು ಸಜೀವದಹನವಾಗಿದ್ದರು.
2025 ಹೊಸ ವರ್ಷಾರಂಭದ ಮೊದಲ ದಿನವೇ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ ನಾರಾಯಣಪುರದಲ್ಲಿ ಬೈಕ್ ಶೋರೂಮಿಗೆ ಬೆಂಕಿ ತಗುಲಿ, ಯಮಹಾ ಬ್ರ್ಯಾಂಡಿನ ಸುಮಾರು 60ಬೈಕ್ ಗಳು ಸುಟ್ಟು ಕರಕಲಾಗಿದ್ದವು.