ಯಲಹಂಕದ ಲಾಡ್ಜ್‌ನಲ್ಲಿ ಬೆಂಕಿ ಅವಘಡ: ಪ್ರೇಮಿಗಳಿಬ್ಬರು ಸಾವು; ಆತ್ಮಹತ್ಯೆ ಶಂಕೆ
ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಕೊಠಡಿಯನ್ನು ಪರಿಶೀಲಿಸಿದಾಗ, ಯುವಕ ರಮೇಶ್ ಬಡ್ಡಿವಡ್ಡರ್ ಸಜೀವ ದಹನವಾಗಿರುವುದು ಕಂಡುಬಂದಿದೆ. ಆದರೆ ಯುವತಿ ಕಾವೇರಿ ಬಡಿಗೇರ್ ಅವರ ಮೃತದೇಹ ಶೌಚಾಲಯದೊಳಗೆ ಪತ್ತೆಯಾಗಿದೆ.
ಸಾಂದರ್ಭಿಕ ಚಿತ್ರ
ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕೂಲ್ ಕಂಫರ್ಟ್ ಲಾಡ್ಜ್‌ನ ಕೊಠಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಪ್ರೇಮಿಗಳಿಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತರನ್ನು ರಮೇಶ್ ಬಡ್ಡಿವಡ್ಡರ್ (25) ಮತ್ತು ಕಾವೇರಿ ಬಡಿಗೇರ್ (22) ಎಂದು ಗುರುತಿಸಲಾಗಿದೆ.
ಲಾಡ್ಜ್‌ಗೆ ನೀಡಿದ್ದ ಗುರುತಿನ ಚೀಟಿಗಳ ಆಧಾರದ ಮೇಲೆ ಮೃತರ ಹೆಸರುಗಳನ್ನು ಪೊಲೀಸರು ದೃಢಪಡಿಸಿದ್ದಾರೆ. ಕೂಲ್ ಕಂಫರ್ಟ್ ಲಾಡ್ಜ್ ಕಿಚನ್ ಸಿಕ್ಸ್ ಫ್ಯಾಮಿಲ್ ರೆಸ್ಟೋರೆಂಟ್ ಕಟ್ಟಡದಲ್ಲಿದ್ದು, ಎಂಟು ಕೊಠಡಿಗಳನ್ನು ಹೊಂದಿದೆ. ಈ ಜೋಡಿ ಕಳೆದ ಎಂಟು ದಿನಗಳಿಂದ ಲಾಡ್ಜ್‌ನಲ್ಲಿ ತಂಗಿದ್ದರು ಎಂದು ತಿಳಿದು ಬಂದಿದೆ. ಕಾವೇರಿ ಸಮೀಪದ ಕಟ್ಟಡದಲ್ಲಿರುವ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಜೋಡಿ ತಂಗಿದ್ದ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಕೊಠಡಿಯನ್ನು ಪರಿಶೀಲಿಸಿದಾಗ, ಯುವಕ ರಮೇಶ್ ಬಡ್ಡಿವಡ್ಡರ್ ಸಜೀವ ದಹನವಾಗಿರುವುದು ಕಂಡುಬಂದಿದೆ. ಆದರೆ ಯುವತಿ ಕಾವೇರಿ ಬಡಿಗೇರ್ ಅವರ ಮೃತದೇಹ ಶೌಚಾಲಯದೊಳಗೆ ಪತ್ತೆಯಾಗಿದೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ.
ಆತ್ಮಹತ್ಯೆ ಶಂಕೆ
ಸಿ.ಸಿ.ಟಿ.ವಿ. ದೃಶ್ಯಾವಳಿಗಳಲ್ಲಿ ಮಧ್ಯಾಹ್ನದ ವೇಳೆಗೆ ಕಾವೇರಿ ಕೊಠಡಿಯಲ್ಲಿ ಇದ್ದು, ರಮೇಶ್ ಒಂದು ಬಾಟಲಿ ಹಿಡಿದುಕೊಂಡು ಹೊರಗೆ ಹೋಗಿ ಮತ್ತೆ ಕೊಠಡಿಗೆ ವಾಪಸ್ ಬಂದಿರುವುದು ದಾಖಲಾಗಿದೆ. ಹೀಗಾಗಿ, ರಮೇಶ್ ಪೆಟ್ರೋಲ್ ಖರೀದಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇಬ್ಬರ ನಡುವೆ ಜಗಳ ನಡೆದಿರಬಹುದು. ಜಗಳದ ನಂತರ ಯುವಕ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಇದರಿಂದ ಹೆದರಿದ ಯುವತಿ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಅಲ್ಲಿ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.