ರಾಜ್ಯಕ್ಕೆ ಡಿಕೆಶಿಗೆ ನಾಯಕತ್ವ ಸಿಗಲಿ; ರಂಭಾಪುರಿ ಶ್ರೀಗಳ ಅಭಿಮತ
ರಾಜ್ಯದಲ್ಲಿ ನಾಯಕತ್ವದ ಕುರಿತು ಕಾಂಗ್ರೆಸ್ ನಾಯಕರಲ್ಲಿಯೇ ಚರ್ಚೆ ನಡೆಯುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಈ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕತ್ವವೇ ಸ್ಪಷ್ಟಪಡಿಸಬೇಕು ಎಂದು ಒತ್ತಿ ಹೇಳಿದರು.;
ಕರ್ನಾಟಕದ ರಾಜಕಾರಣದಲ್ಲಿ ಕಾಂಗ್ರೆಸ್‌ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೊಡುಗೆ ಅನನ್ಯವಾಗಿದೆ. ಅವರ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದ್ದು, ರಾಜ್ಯಕ್ಕೆ ಅವರಂತಹ ನಾಯಕರ ಅಗತ್ಯವಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಮಠದ ವೀರ ಸೋಮೇಶ್ವರ ಸ್ವಾಮೀಜಿ ಬಲವಾಗಿ ಪ್ರತಿಪಾದಿಸಿದ್ದಾರೆ.
ತಾಲ್ಲೂಕಿನ ಬಿಜ್ಜಹಳ್ಳಿಯಲ್ಲಿ ಭಾನುವಾರ ನಡೆದ ಇಷ್ಟಲಿಂಗ ಪೂಜೆ, ಅಡ್ಡಪಲ್ಲಕ್ಕಿ ಉತ್ಸವ ಮತ್ತು ಗ್ರಾಮದ ಸಿದ್ಧೇಶ್ವರ ಬೆಟ್ಟಕ್ಕೆ ನಿರ್ಮಿಸಲಾದ ಮೆಟ್ಟಿಲುಗಳ ಉದ್ಘಾಟನಾ ಸಮಾರಂಭದಲ್ಲಿ ಮತ್ತು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಡಿಕೆ ಶಿವಕುಮಾರ್ ಅವರಿಗೆ ಉನ್ನತ ಸ್ಥಾನ ಸಿಗಬೇಕು ಎಂದು ಆಶಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಸಮಾಲೋಚಿಸಿ ಒಂದು ಒಪ್ಪಂದಕ್ಕೆ ಬಂದಿದ್ದರು. ಅದರಂತೆ, ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಆ ಒಪ್ಪಂದದ ಸ್ವರೂಪ ಏನೆಂಬುದು ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಮಾತ್ರ ತಿಳಿದಿದೆ. ಆ ಒಪ್ಪಂದದಂತೆ ನಡೆದುಕೊಂಡರೆ ರಾಜಕಾರಣಿಗಳಿಗೆ ಗೌರವ ದೊರೆಯುತ್ತದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ನಾಯಕತ್ವದ ಕುರಿತು ಕಾಂಗ್ರೆಸ್ ನಾಯಕರಲ್ಲಿಯೇ ಚರ್ಚೆ ನಡೆಯುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಈ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕತ್ವವೇ ಸ್ಪಷ್ಟಪಡಿಸಬೇಕು ಎಂದು ಒತ್ತಿ ಹೇಳಿದರು. ಶಿವಕುಮಾರ್ ಅವರು ಎಲ್ಲಾ ಜಾತಿ ಮತ್ತು ವರ್ಗಗಳ ನಾಯಕ ಎಂಬ ಮಾತು ರಾಜ್ಯಾದ್ಯಂತ ಕೇಳಿಬರುತ್ತಿದೆ. ಜಾತಿ ಮತ್ತು ಧರ್ಮಗಳ ನಡುವೆ ಭೇದಭಾವ ಸೃಷ್ಟಿಸುವ ನಾಯಕರ ಬದಲು, ಇಂತಹ ಸಮನ್ವಯದ ನಾಯಕರ ಅಗತ್ಯ ಸಮಾಜಕ್ಕಿದೆ ಎಂದು ತಿಳಿಸಿದರು.
ಉನ್ನತ ಸ್ಥಾನವನ್ನು ಪಡೆಯುವ ವಿಷಯದಲ್ಲಿ ಶಿವಕುಮಾರ್ ಅವರ ಪ್ರಯತ್ನಗಳು ವಿಫಲವಾಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ ಶ್ರೀಗಳು, ಮುಂದಿನ ದಿನಗಳಲ್ಲಿ ಅವರು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬಹುದು ಎಂಬ ನಂಬಿಕೆ ಇದೆ ಎಂದರು. ರಾಜ್ಯದಾದ್ಯಂತ ಜನರ ಸಮಸ್ಯೆಗಳನ್ನು ಶಾಂತಚಿತ್ತದಿಂದ ಆಲಿಸಿ, ಪರಿಹರಿಸುತ್ತಿರುವ ಶಿವಕುಮಾರ್ ಅವರನ್ನು ಉನ್ನತ ಸ್ಥಾನದಲ್ಲಿ ನೋಡುವ ಭಾಗ್ಯ ಜನರಿಗೆ ಸಿಗಲಿ ಎಂದು ಆಶಿಸಿದರು.
ಪಕ್ಷದಲ್ಲಿನ ಒಪ್ಪಂದಕ್ಕೆ ಬದ್ಧರಾಗಿ ನಡೆದರೆ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ರಾಷ್ಟ್ರೀಯ ನಾಯಕರಿಗೆ ನೆಮ್ಮದಿ ಸಿಗುತ್ತದೆ ಮತ್ತು ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ದೊರೆಯುತ್ತದೆ ಎಂದು ರಂಭಾಪುರಿ ಶ್ರೀಗಳು ನುಡಿದರು. ಒಂದು ಪ್ರಶ್ನೆಗೆ ಉತ್ತರಿಸಿದ ಅವರು, "ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕರೆ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನು ಪಕ್ಷದ ರಾಷ್ಟ್ರೀಯ ನಾಯಕರೇ ಹೇಳಬೇಕು, ಬೇರೆಯವರು ಹೇಳಿದರೆ ಪ್ರಯೋಜನವಿಲ್ಲ. ರಾಜಕೀಯದಲ್ಲಿ ನೀತಿ ಮತ್ತು ನಿಯತ್ತು ಇದ್ದರೆ ಒಳ್ಳೆಯದಾಗುತ್ತದೆ. ಹಿಂದೆ ಬಿಜೆಪಿಯಲ್ಲಿ ನಡೆದ ಬೆಳವಣಿಗೆಗಳು ಎಲ್ಲರಿಗೂ ತಿಳಿದಿವೆ. ಕಾಂಗ್ರೆಸ್‌ನಲ್ಲಿ ಅಂತಹ ಪರಿಸ್ಥಿತಿ ಸಂಭವಿಸಬಾರದು" ಎಂದು ಎಚ್ಚರಿಸಿದರು.
ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆ?
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಕಾಂಗ್ರೆಸ್‌ನ ಕೆಲ ನಾಯಕರೇ ಹೇಳುತ್ತಿರುವುದನ್ನು ಸ್ವಾಮೀಜಿ ಉಲ್ಲೇಖಿಸಿದರು. ಅಲ್ಲದೆ, ಗ್ಯಾರಂಟಿ ಯೋಜನೆಗಳು ಅನೇಕ ಜನರಿಗೆ ಇನ್ನೂ ತಲುಪಿಲ್ಲ ಎಂಬ ಅಪವಾದವೂ ಇದೆ ಎಂದರು. "ಅಭಿವೃದ್ಧಿಗಾಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಎಂದು ನಾವು ಹೇಳುವುದಿಲ್ಲ. ಆದರೆ, ಅದರ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನೂ ಮಾಡಬೇಕು" ಎಂದು ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.