ದಸರಾ ಗಜಪಯಣಕ್ಕೆ ಚಾಲನೆ | ಅಭಿಮನ್ಯು ನೇತೃತ್ವದ ಗಜಪಡೆಗೆ ಪುಷ್ಪಾರ್ಚನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಗಜ ಪಯಣಕ್ಕೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಳ್ಳಿ ಚೆಕ್ ಪೋಸ್ಟ್ ಬಳಿ ಬುಧವಾರ ಅದ್ಧೂರಿ ಸ್ವಾಗತ ನೀಡಲಾಯಿತು.;

Update: 2024-08-21 11:22 GMT
ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳು ಆಗಮಿಸಿವೆ.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಗಜ ಪಯಣಕ್ಕೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಳ್ಳಿ ಚೆಕ್ ಪೋಸ್ಟ್ ಬಳಿ ಬುಧವಾರ ಅದ್ಧೂರಿ ಸ್ವಾಗತ ನೀಡಲಾಯಿತು.

ನಾಲ್ಕು ವರ್ಷಗಳಿಂದ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊತ್ತಿರುವ ಅಭಿಮನ್ಯು ನೇತೃತ್ವದಲ್ಲಿ ಇತರ ಗಂಡು ಆನೆಗಳಾದ ಧನಂಜಯ, ಗೋಪಿ, ಭೀಮಾ, ರೋಹಿತ್, ಕಂಜನ್, ಹೊಸ ಆನೆ ಏಕಲವ್ಯ, ವರಲಕ್ಷ್ಮಿ ಮತ್ತು ಲಕ್ಷ್ಮಿ ಎಂಬ ಹೆಣ್ಣು ಆನೆಗಳಿಗೆ ಅತಿಥಿಗಳು ಪುಪ್ಪಾರ್ಚನೆ ಮಾಡಿದರು. 10.31ರ ಶುಭ ತುಲಾ ಲಗ್ನದಲ್ಲಿ ಮಂಗಳವಾದ್ಯದೊಂದಿಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ದಸರಾ ಕಾರ್ಯಾಧ್ಯಕ್ಷ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪೂಜೆ ಸಲ್ಲಿಸಿ, ಆನೆಗಳಿಗೆ ಬಾಳೆಹಣ್ಣು, ಬೆಲ್ಲ, ಕಬ್ಬು, ಚಕ್ಕುಲಿ, ಪೂರಿ ಉಂಡೆ, ಕರ್ಜಿ ಕಾಯಿ, ಕಜ್ಜಾಯ ಮತ್ತಿತರ ತಿನಿಸುಗಳನ್ನು ತಿನ್ನಿಸಿದರು.

ಸಚಿವ ಕೆ.ವೆಂಕಟೇಶ್, ಹುಣಸೂರು ಶಾಸಕ ಹರೀಶ್ ಗೌಡ, ಸಂಸದ ಸುನೀಲ್ ಬೋಸ್, ಮೈಸೂರು ಡಿಸಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತದ ಅಧಿಕಾರಿಗಳು, ಮೈಸೂರು ಜಿಪಂ ಸಿಇಒ ಕೆ.ಎಂ.ಗಾಯತ್ರಿ ಜತೆಗಿದ್ದರು.

ಭವ್ಯ ಮೆರವಣಿಗೆ 

ವೀರನಹೊಸಳ್ಳಿ ಚೆಕ್ ಪೋಸ್ಟ್ ಗೇಟ್ ನಿಂದ ವೇದಿಕೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭವ್ಯವಾದ ಮೆರವಣಿಗೆ ಸಾಗಿದ್ದು, ಮೆರವಣಿಗೆಯಲ್ಲಿ ವೀರಗಾಸೆ, ಪೂಜಾ ಕುಣಿತ, ಕಂಸಾಳೆ, ಚಂಡೆಮೇಳ ಸೇರಿದಂತೆ ನಾಲ್ಕು ಸಾಂಸ್ಕೃತಿಕ ಜಾನಪದ ಕಲಾ ತಂಡಗಳ 60 ಕಲಾವಿದರ ಪ್ರದರ್ಶನ ನಡೆಯಿತು.

ಕಳೆದ ಬಾರಿ ಅಂಬಾರಿ ಹೊತ್ತಿದ್ದ ಸಾವಿಗೀಡಾದ ಅರ್ಜುನ ಆನಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ವೇದಿಕೆ ಕಾರ್ಯಕ್ರಮ ಆರಂಭವಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ, ಸಚಿವ ಮಹದೇವಪ್ಪ, ಉತ್ತಮ ಮಳೆಯಾಗಿರುವುದರಿಂದ ಈ ಬಾರಿಯ ದಸರಾವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ರಾಜಕೀಯ ಬೆಳವಣಿಗೆಗಳು ದಸರಾ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಐಸಿಸಿ ಹಾಗೂ ಎಲ್ಲಾ 136 ಶಾಸಕರು ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದಾರೆ. ಅವರು ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.

ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಪ್ರಸ್ತಾವನೆ 

ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ದಸರಾದಲ್ಲಿ ಆನೆಗಳೇ ಪ್ರಧಾನ ಆಕರ್ಷಣೆ. ಈ ವರ್ಷವೂ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾನೆ. ಕಳೆದ ವರ್ಷ ಅಂಬಾರಿ ಹೊತ್ತಿದ್ದ ಅರ್ಜುನನ ಸಾವಿಗೀಡಾಗಿದ್ದು ಬೇಸರದ ಸಂಗತಿ. ಅರ್ಜುನ ಮರಣ ಹೊಂದಿದ ಸ್ಥಳ ಹಾಗೂ ಅದರ ಶಿಬಿರದಲ್ಲಿ ಹೊರತುಪಡಿಸಿ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಸ್ಮಾರಕ (ಅರ್ಜುನ ಪ್ರತಿಮೆ) ಸ್ಥಾಪಿಸಲು ಪ್ರಸ್ತಾವನೆ ಇದೆ. ಈ ಹಿಂದೆ ಮಹಾರಾಜರ ಆಳ್ವಿಕೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಮಾಸ್ತಿಗುಡಿ ಬಳಿ ಆನೆಗಳಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಬಳಿಕ ಆನೆಗಳು ಮೈಸೂರಿನವರೆಗೆ ನಡೆದುಕೊಂಡು ಹೋಗುತ್ತಿದ್ದವು. ಆದರೆ ಈಗ ಗಜಪಯಣ ಕಾರ್ಯಕ್ರಮದ ನಂತರ ಆನೆಗಳನ್ನು ಲಾರಿಗಳಲ್ಲಿ ಕೊಂಡೊಯ್ಯಲಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ದಸರಾ ಮಾವುತರು ಮತ್ತು ಕಾವಾಡಿಗಳನ್ನು ಗೌರವಿಸಲಾಯಿತು. ಯಶಸ್ವಿ ದಸರಾಕ್ಕೆ ತಾಂಬೂಲದೊಂದಿಗೆ ಔಪಚಾರಿಕವಾಗಿ ಆಹ್ವಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ವೀರನಹೊಸಳ್ಳಿ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬುಧವಾರ ಸಂಜೆ ವೇಳೆಗೆ ಆನೆಗಳು ಅರಣ್ಯಭವನ ಆವರಣ ತಲುಪಲಿವೆ.

ಎರಡನೇ ತಂಡದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ದೊಡ್ಡಹರವೆ ಲಕ್ಷ್ಮಿ ಹಾಗೂ ಹಿರಣ್ಯ ಆಗಮಿಸಲಿದ್ದಾರೆ. ಹರ್ಷ, ಪಾರ್ಥಸಾರಥಿ, ಅಯ್ಯಪ್ಪ ಮತ್ತು ಮಾಲಾದೇವಿಯನ್ನು ಮೀಸಲು ಆನೆಗಳಾಗಿ ಇರಿಸಲಾಗುವುದು.

ಕಾರ್ಯಕ್ರಮದಲ್ಲಿ ಎಪಿಸಿಸಿಎಫ್ ಕುಮಾರ್ ಪುಷ್ಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮೈಸೂರು ವೃತ್ತ) ಮಾಲತಿ ಪ್ರಿಯಾ, ಅರಣ್ಯ ಸಂರಕ್ಷಣಾಧಿಕಾರಿ (ಪ್ರಾಜೆಕ್ಟ್ ಟೈಗರ್) ಪಿ ರಮೇಶ್ ಕುಮಾರ್, ಡಿಸಿಎಫ್ ಮೈಸೂರು ವಿಭಾಗ (ವನ್ಯಜೀವಿ) ಐ ಬಿ ಪ್ರಭುಗೌಡ, ಡಿಸಿಎಫ್ (ಮೈಸೂರು ಪ್ರಾದೇಶಿಕ ವಿಭಾಗ) ಕೆ ಎನ್ ಬಸವರಾಜು, ಎಸಿಎಫ್ ಎನ್ಟಿಆರ್, ಡಿಸಿಎಫ್ ಲಕ್ಷ್ಮೀಕಾಂತ್, ಸೀಮಾ, ದಕ್ಷಿಣ ವಲಯದ ಡಿಐಜಿ ಬೋರಲಿಂಗಯ್ಯ, ಎಡಿಸಿ ಶಿವರಾಜು ಹಾಜರಿದ್ದರು. ಮುಡಾ ಅಧ್ಯಕ್ಷ ಮರಿಗೌಡ, ದೊಡ್ಡಹೆಜ್ಜೂರು ಗ್ರಾ.ಪಂ ಅಧ್ಯಕ್ಷೆ ಅಂಬಿಕಾ ಲೋಕೇಶ್ ಭಾಗವಹಿಸಿದ್ದರು. ಸುತ್ತಮುತ್ತಲಿನ ಗ್ರಾಮಗಳ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಈ ಮಧ್ಯೆ, ನಾಲ್ಕು ಮೀಸಲು ಆನೆಗಳು ಸೇರಿ ಒಟ್ಟು 18 ಆನೆಗಳಿಗೆ 87,50,000 ವಿಮೆ ಮಾಡಿಸಲಾಗಿದೆ. ಅರಣ್ಯಧಿಕಾರಿಗಳು, ಮಾವುತರು, ಕಾವಾಡಿಗಳಿಗೆ ತಲಾ 2 ಲಕ್ಷದಂತೆ 50 ಜನರಿಗೆ 1 ಕೋಟಿ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.

Tags:    

Similar News