ಹಿಂಗಾರು ಬೆಳೆ ಹಾನಿ | ಮುಂದಿನ ವಾರ ರೈತರ ಖಾತೆಗೆ ಪರಿಹಾರ ಜಮಾ- ಕೃಷ್ಣ ಬೈರೇಗೌಡ

ಹಿಂಗಾರು ಹಂಗಾಮಿನ ಬೆಳೆ ಹಾನಿಗೆ ಸಂಬಂಧಿಸಿ ಕಳೆದ ಒಂದು ತಿಂಗಳಿಂದ ಕಂದಾಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಜಂಟಿ ಸಮೀಕ್ಷೆ ನಡೆಸಿದೆ. ಅಂಕಿ- ಅಂಶಗಳ ದಾಖಲೀಕರಣ ಕೂಡ ಮುಕ್ತಾಯ ಹಂತದಲ್ಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ

Update: 2024-11-30 07:49 GMT

ಪ್ರಸಕ್ತ ಹಿಂಗಾರು ಅವಧಿಯಲ್ಲಿ ರಾಜ್ಯಾದ್ಯಂತ 1,58,087 ಹೆಕ್ಟೇ‌ರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಮುಂದಿನ ವಾರದಲ್ಲಿ ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಜಮೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಹಿಂಗಾರು ಹಂಗಾಮಿನಲ್ಲಿ ಆಗಿರುವ ಬೆಳೆ ಹಾನಿಗೆ ಸಂಬಂಧಿಸಿ ಕಳೆದ ಒಂದು ತಿಂಗಳಿಂದ ಕಂದಾಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಜಂಟಿ ಸಮೀಕ್ಷೆ ನಡೆಸಿದೆ. ಅಂಕಿ- ಅಂಶಗಳ ದಾಖಲೀಕರಣ ಕೂಡ ಮುಕ್ತಾಯ ಹಂತದಲ್ಲಿದೆ. ಹಿಂಗಾರು ಅವಧಿಯಲ್ಲಿ ಒಟ್ಟು 120 ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಿದ್ದು, ಮುಂದಿನ ವಾರ ಹಣ ಜಮೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 642 ಕೋಟಿ ರೂ. ಹಣ ಲಭ್ಯವಿದೆ. ಈ ಹಣದಲ್ಲೇ ಪರಿಹಾರ ವಿತರಿಸಲಾಗುವುದು. ಮುಂಗಾರು ಹಂಗಾಮಿನಲ್ಲಿ 77,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿತ್ತು. ಹಲವೆಡೆ ಮನೆಗಳು ಕುಸಿದು ಪ್ರಾಣಹಾನಿಯೂ ಆಗಿತ್ತು. ಮುಂಗಾರು ಬೆಳೆ ಪರಿಹಾರ, ಆಸ್ತಿಪಾಸ್ತಿ, ಪ್ರಾಣಹಾನಿಗೆ ಪರಿಹಾರವಾಗಿ 162 ಕೋಟಿ ರೂ. ಪರಿಹಾರವನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಐದು ಸಾವಿರ ರೈತರಿಗೆ ಸಾಗುವಳಿ ಚೀಟಿ

ಬಗ‌ರ್ ಹುಕುಂ ಅಡಿ ಸಾಗುವಳಿ ಮಾಡುತ್ತಿರುವ ಅರ್ಹ ಫಲಾನುಭವಿಗಳ ಪೈಕಿ 5 ಸಾವಿರ ಅರ್ಜಿಗಳನ್ನು ಬಗ‌ರ್ ಹುಕುಂ ಸಮಿತಿ ಎದುರು ಮಂಡಿಸಿ ಡಿ.15 ರೊಳಗೆ ಸಾಗುವಳಿ ಚೀಟಿ ನೀಡಲಾಗುವುದು. ಜನವರಿ ವೇಳೆಗೆ ಈ ಗುರಿ 15 ಸಾವಿರದಿಂದ 20 ಸಾವಿರಕ್ಕೆ ಏರಿಕೆ ಮಾಡಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. 

ಬಗರ್ ಹುಕುಂ ಅಡಿಯಲ್ಲಿ ಜಮೀನು ಮಂಜೂರಾತಿಗೆ ಸಲ್ಲಿಕೆಯಾದ ಅರ್ಜಿಗಳ ಪೈಕಿ 1.26 ಲಕ್ಷ ಅರ್ಜಿಗಳನ್ನು ಮಾತ್ರ ಅರ್ಹ ಎಂದು ಪರಿಗಣಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಬಗರ್ ಹುಕುಂ ಸಮಿತಿ ಎದುರು ಇಡಲಾಗಿದೆ. ಆದರೆ, ಆ ಸಂಖ್ಯೆ ಸಮಾಧಾನಕರವಾಗಿಲ್ಲ. ಹೀಗಾಗಿ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಗುರಿ ನಿಗದಿಪಡಿಸಲಾಗಿದೆ. ಬಗರ್ ಹುಕುಂ ಯೋಜನೆಯ ಅಡಿ ಅರ್ಹ ಫಲಾನುಭವಿಗಳಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗುವುದು' ಎಂದು ತಿಳಿಸಿದ್ದಾರೆ.

ಅಭಿಯಾನ ಮಾದರಿಯಲ್ಲಿ ಪೋಡಿ ದುರಸ್ತಿ ಮಾಡಲು ಡಿಜಿಟಲ್ ಪ್ರಕ್ರಿಯೆಗೆ ತಂತ್ರಾಂಶ ರೂಪಿಸಲಾಗಿದೆ. ರಾಜ್ಯದಲ್ಲಿ ಒಟ್ಟು 1,96 ಲಕ್ಷ ಸರ್ಕಾರಿ ಸರ್ವೇ ನಂಬ‌ರ್ ಇದ್ದು, ಅವುಗಳನ್ನು ದುರಸ್ತಿಗೊಳಿಸಬೇಕು ಎಂಬುದು ನಮ್ಮ ಗುರಿ. ಈ ಸಂಬಂಧ ಡೇಟಾ ಎಂಟ್ರಿ ಕೆಲಸವೂ ನಡೆಯುತ್ತಿದೆ. ಈ ಕೆಲಸ ಸಂಪೂರ್ಣವಾದರೆ 20 ಲಕ್ಷದಿಂದ 25 ಲಕ್ಷ ರೈತ ಕುಟುಂಬಗಳ ಹಲವು ದಶಕಗಳ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags:    

Similar News