Coastal Politics| ದಕ್ಷಿಣ ಕನ್ನಡ ಜಿಲ್ಲೆ: ಕಾಂಗ್ರೆಸ್ ಕಾರ್ಯಕರ್ತರ ಮೊಗದಲ್ಲಿ ಮಂದಹಾಸ

ಗಮನಾರ್ಹ ಅಂಶವೆಂದರೆ, ಸತತ ಎರಡು ಬಾರಿ ಗೆದ್ದಿರುವ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರ ಕ್ಷೇತ್ರ ಹಾಗೂ ಬಂಟ್ವಾಳದ ರಾಜೇಶ್ ನಾಯ್ಕ್ಅವರ ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ನಿಧಾನವಾಗಿ ಸಡಿಲವಾಗುತ್ತಿದೆ

Update: 2024-11-27 03:10 GMT

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ಬಿಜೆಪಿಯಿಂದ ಒಂದು ಸ್ಥಾನ ಸೆಳೆದಿದ್ದ ಕಾಂಗ್ರೆಸ್, ಲೋಕಸಭೆಯಲ್ಲಿ ನಿರೀಕ್ಷಿತ ಫಲಿತಾಂಶ ತೋರದೇ ಇದ್ದರೂ ಹೊಸಮುಖ ಕಣಕ್ಕಿಳಿಸುವ ಮೂಲಕ ಸಂಚಲನವನ್ನು ಉಂಟುಮಾಡಿತ್ತು. ಇದೀಗ ಹಲವು ಕಾರಣಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿದ್ದು, ಅದರಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ಹಲವು ಸ್ಥಾನಗಳನ್ನು ಬಿಜೆಪಿಯಿಂದ ಸೆಳೆದುಕೊಂಡಿದೆ.

ನವೆಂಬರ್ 23ರಂದು ರಾಜ್ಯದ ಹಲವೆಡೆ ಗ್ರಾಮ ಪಂಚಾಯಿತಿಗಳಿಂದ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆದಿತ್ತು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 27 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇವುಗಳ ಪೈಕಿ 23 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ. ಇವುಗಳಲ್ಲಿ ಸುಮಾರು 5 ಸ್ಥಾನಗಳು ಬಿಜೆಪಿಯದ್ದು ಎಂಬುದೀಗ ಬಿಜೆಪಿಗೆ ಕಸಿವಿಸಿ ಉಂಟುಮಾಡಿದೆ. ಇಡೀ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ಸೆಳೆದದ್ದು ಒಂದು ಕ್ಷೇತ್ರ ಮಾತ್ರ.

ಬೆಳ್ತಂಗಡಿ ತಾಲುಕಿನಲ್ಲಿ 3 ಸ್ಥಾನಗಳಲ್ಲಿ 3 ಕಾಂಗ್ರೆಸ್ ಬೆಂಬಲಿತರು, ಪುತ್ತೂರು ತಾಲೂಕಿನ 2 ಸ್ಥಾನಗಳಲ್ಲಿ 2 ಕಾಂಗ್ರೆಸ್ ಬೆಂಬಲಿತರು, ಸುಳ್ಯದಲ್ಲಿ 1 ಸ್ಥಾನದಲ್ಲಿ 1 ಬಿಜೆಪಿ ಬೆಂಬಲಿತರು, ಕಡಬ ತಾಲೂಕಿನ 1 ಸ್ಥಾನದಲ್ಲಿ 1 ಕಾಂಗ್ರೆಸ್ ಬೆಂಬಲಿತರು, ಬಂಟ್ವಾಳ ತಾಲೂಕಿನ 12 ಸ್ಥಾನಗಳಲ್ಲಿ 10 ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದಾರೆ. ಮೂಡುಬಿದಿರೆ ತಾಲೂಕಿನಲ್ಲಿ 1 ಕಾಂಗ್ರೆಸ್ ಬೆಂಬಲಿತರು, ಮಂಗಳೂರು ತಾಲೂಕಿನ 7 ಸ್ಥಾನಗಳಲ್ಲಿ 5 ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದಾರೆ.

ಬಿಜೆಪಿ ಹಿಡಿತ ಸಡಿಲವಾಗುತ್ತಿದೆಯೇ?

ಇಲ್ಲಿ ಗಮನಾರ್ಹ ಅಂಶವೆಂದರೆ, ಸತತ ಎರಡು ಬಾರಿ ಗೆದ್ದಿರುವ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರ ಕ್ಷೇತ್ರ ಹಾಗೂ ಬಂಟ್ವಾಳದ ರಾಜೇಶ್ ನಾಯ್ಕ್ಅವರ ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ನಿಧಾನವಾಗಿ ಸಡಿಲವಾಗುತ್ತಿದೆ. ಮಂಗಳೂರು ಉತ್ತರದಲ್ಲಿ ಆಸ್ಕರ್ ಶಿಷ್ಯ ಎಂದೇ ಹೇಳಲಾಗುವ, ಇನಾಯತ್ ಆಲಿ ಫೀಲ್ಡಿಗಿಳಿದು ಕೆಲಸ ಮಾಡಿದ ಪರಿಣಾಮ ಕಾಂಗ್ರೆಸ್ ಜಯಗಳಿಸಿದೆ ಎಂದು ವಿಶ್ಲೇಶಿಸಲಾಗುತ್ತಿದ್ದರೆ, ಬಂಟ್ವಾಳದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಪ್ರಾಬಲ್ಯ ವೃದ್ಧಿಯಾಗಿದೆ ಎಂಬುದು ಸ್ಪಷ್ಟ. ಬಂಟ್ವಾಳದಲ್ಲಿ ಬಿಜೆಪಿಯ ಹಾಗೂ ಎಸ್.ಡಿ.ಪಿ.ಐ.ಯ ಹಿಡಿತದಲ್ಲಿದ್ದ ಸ್ಥಾನಗಳನ್ನೂ ಕಾಂಗ್ರೆಸ್ ಗೆದ್ದುಕೊಂಡಿರುವುದು ಬಜೆಪಿಗೆ ದೊಡ್ಡ ಹೊಡೆತ ನೀಡಿದಂತಾಗಿದೆ.

ಗ್ಯಾರಂಟಿಗಳು ಕೆಲಸ ಮಾಡ್ತಿವೆಯೇ?

ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಘೋಷಣೆ ಭಾರಿ ಸದ್ದು ಮಾಡಿತ್ತು. ಅದರಲ್ಲೂ ಪ್ರಿಯಾಂಕಾ ವಾಧ್ರಾ ಮಂಗಳೂರಿನ ಹೊರವಲಯದ ಅಡ್ಯಾರ್ ನಲ್ಲಿಯೇ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಘೋಷಿಸಿದ್ದರು. ಆ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2013ರ ಸ್ಥಿತಿ ಮರಳುತ್ತದೋ ಎಂಬ ಊಹೆ ಇತ್ತು. 2013ರಲ್ಲಿ ಸುಳ್ಯ ಹೊರತುಪಡಿಸಿದರೆ, ಮಿಕ್ಕೆಲ್ಲಾ ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದವು. 2018ರಲ್ಲಿ ಅದು ಉಲ್ಟಾ ಆಯಿತು. ಯು.ಟಿ.ಖಾದರ್ ಹೊರತುಪಡಿಸಿದರೆ, ಹೊಸಮುಖಗಳು ಆಯ್ಕೆಯಾದವು. ರಮಾನಾಥ ರೈ ಅವರಂಥ ಘಟಾನುಘಟಿಗಳೂ ಸೋಲಿನ ರುಚಿ ಉಂಡರು. 2023ರ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರವನ್ನು ಕಾಂಗ್ರೆಸ್ ಸೆಳೆದುಕೊಂಡದ್ದು ಹೆಚ್ಚುವರಿ ಲಾಭ. ಒಟ್ಟು 8ರಲ್ಲಿ ಕಾಂಗ್ರೆಸ್ 2, (ಯು.ಟಿ.ಖಾದರ್, ಅಶೋಕ್ ಕುಮಾರ್ ರೈ) ಬಿಜೆಪಿ 6. (ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಭಾಗೀರತಿ ಮುರುಳ್ಯ), ಆದರೆ ಗ್ಯಾರಂಟಿ ಯೋಜನೆ ಬಂದಾಗ ದಕ್ಷಿಣ ಕನ್ನಡ ಜಿಲ್ಲೆಯವರು ಅದನ್ನು ಪಡೆದುಕೊಳ್ಳುವುದರಲ್ಲಿ ಮಡಿವಂತಿಕೆ ಮಾಡಲಿಲ್ಲ. ಅದರ ಸಣ್ಣ ಪರಿಣಾಮ ಆಗುತ್ತಿದೆ ಎಂಬುದು ಈಗ ವಿಶ್ಲೇಷಣೆಗೆ ಕಾರಣವಾಗುತ್ತಿದೆ.

ಲೋಕಸಭೆಯಲ್ಲೂ ಫೈಟ್ ನೀಡಿದ್ದ ಕಾಂಗ್ರೆಸ್:

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದ ಇಬ್ಬರೂ ಅಭ್ಯರ್ಥಿಗಳು ಲೋಕಸಭೆ ಸ್ಪರ್ಧೆಗೆ ಹೊಸಮುಖಗಳೇ ಆಗಿದ್ದವು. ಪ್ರಚಾರ ಸಂದರ್ಭ ಭಾರೀ ಪೈಪೋಟಿ. ಜತೆಗೆ ಜಾತಿ ಸಮೀಕರಣ ಬೇರೆ. ಆದರೆ ಕಳೆದ ಬಾರಿಗಿಂತ ಮತಗಳ ಅಂತರ ಕಡಿಮೆಯಾದರೂ ಬಿಜೆಪಿ ಗೆಲುವಿಗೆ ಇದು ಅಡ್ಡಿಯಾಗಲಿಲ್ಲ. ಬ್ರಿಜೇಶ್ ಚೌಟ ಬಿಜೆಪಿಯ ಸಾಂಪ್ರದಾಯಿಕ ಮತಗಳತ್ತ ಕಣ್ಣಿಟ್ಟಿದ್ದರು, ಕಾಂಗ್ರೆಸ್ ಅಭ್ಯರ್ಥಿ ಆರ್. ಪದ್ಮರಾಜ್ ಬಿಲ್ಲವ ಮತಗಳತ್ತ ಕಣ್ಣಿಟ್ಟಿದ್ದರು ಎಂದು ಹೇಳಲಾಗಿತ್ತು. ಸ್ವತಃ ಸಮುದಾಯದ ಮುಖಂಡರಾಗಿ ಜನಾರ್ದನ ಪೂಜಾರಿ ಅವರ ಶಿಷ್ಯನೆಂದೇ ಬಿಂಬಿಸಲ್ಪಟ್ಟಿದ್ದ ಪದ್ಮರಾಜ್ ಅವರು ಚುನಾವಣೆ ಪ್ರಚಾರದಲ್ಲೂ ಹಿಂದೆ ಬಿದ್ದಿರಲಿಲ್ಲ. ಜತೆಗೆ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಕೊಟ್ಟ ಕಾರಣ ಬಿಜೆಪಿ ಪಕ್ಷದೊಳಗೆ ಇದ್ದಿರಬಹುದಾದ ಮುನಿಸು, ಒಳಬೇಗುದಿಯ ಲಾಭ ತನಗಾಗಿದೆ ಎಂದು ಕಾಂಗ್ರೆಸ್ ನಂಬಿತ್ತು. ಮುಸ್ಲಿಂ ಸಮುದಾಯದ ಮತ ಈ ಸಲ ತನಗೇ ‘ಗ್ಯಾರಂಟಿ’ ಎಂಬುದು ಕಾಂಗ್ರೆಸ್ ಪಕ್ಷದ ನಂಬಿಕೆಯಾಗಿತ್ತು . ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನಿರಾಕರಿಸಿ, ಚೌಟ ಅವರಿಗೆ ನೀಡಿದ್ದು, ಒಂದು ಹಂತದಲ್ಲಿ ನಳಿನ್ ಬೆಂಬಲಿಗರೆನಿಸಿಕೊಂಡವರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿತ್ತು. ಅದೇನೇ ಇದ್ದರೂ ಬಿಜೆಪಿ ಗೆಲುವಿನ ಹಂತಕ್ಕೆ ಹೋಗಿ ಜಯಶಾಲಿಯಾಯಿತು. ಆದರೂ ಪದ್ಮರಾಜ್ ನೀಡಿದ ಫೈಟ್ ಮುಂದೆ ಕಾಂಗ್ರೆಸ್ ಗೆ ಶಕ್ತಿಯಾಯಿತು ಎಂದು ಹೇಳಲಾಗುತ್ತಿದೆ.

ನಾಯಕರು ಏನಂತಾರೆ?

ಈ ಕುರಿತು ಮಾತನಾಡಿದ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ತನ್ನ ಪ್ರಾಬಲ್ಯವನ್ನು ಸಾಧಿಸುತ್ತಿದೆ ಎಂದಿದ್ದಾರೆ. ಗ್ರಾಮ ಪಂಚಾಯಿತಿ ಉಪಚುನಾವಣೆ ಫಲಿತಾಂಶ ಮುಂದಿನ ಬೆಳವಣಿಗೆಯ ದಿಕ್ಸೂಚಿಯಾಗಿದೆ ಎಂದವರು ಸಂತಸಪಟ್ಟಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರಂತೂ ಗೆಲುವಿನಿಂದ ಸಂತುಷ್ಟರಾಗಿದ್ದಾರೆ. ಬಿಜೆಪಿಯವರು ತಂತ್ರಗಾರಿಕೆಯಿಂದಷ್ಟೇ ಗೆದ್ದಿದ್ದಾರೆ. ವಾಸ್ತವವಾಗಿ ಜನರ ಒಲವು ಕಾಂಗ್ರೆಸ್ ಕಡೆಗೆ ಇದೆ ಎಂಬುದು ರೈ ಬಲವಾದ ನಂಬಿಕೆ.

ಇನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಂಟ್ವಾಳದಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ ನಿಂದ ಬಿಜೆಪಿ ಸೆಳೆದಿದೆ ಎಂಬುದನ್ನು ಬೊಟ್ಟುಮಾಡುತ್ತಾರೆ. ಸಣ್ಣ ಸಣ್ಣ ಮತಗಳ ಅಂತರದಿಂದಷ್ಟೇ ನಾವು ಸೋತಿದ್ದೇವೆ ಎನ್ನುತ್ತಾರೆ.

ಫಲಿತಾಂಶ - ಮಂಗಳೂರು ತಾಲೂಕು:6 ಕಾಂಗ್ರೆಸ್

ಮಂಗಳೂರು ತಾಲೂಕಿನಲ್ಲಿ ಡಾ. ವೈ.ಭರತ್ ಶೆಟ್ಟಿ ಅವರ ಕ್ಷೇತ್ರದಲ್ಲೇ ಬಿಜೆಪಿಗೆ ಕಾಂಗ್ರೆಸ್ ಸೋಲಿನ ರುಚಿ ಉಣಿಸಿದೆ. ಮಂಗಳೂರು ತಾಲೂಕಿನ ಅಡ್ಯಾರಿನ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಗೌರವ್ ಶೆಟ್ಟಿ 590 ಮತ ಗಳಿಸಿ ಜಯಗಳಿಸಿದ್ದಾರೆ. ಇದು ಬಿಜೆಪಿ ಪ್ರಾಬಲ್ಯದ ಕ್ಷೇತ್ರವಾಗಿತ್ತು. ಗಂಜಿಮಠ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಸುನಿಲ್ ಗಂಜಿಮಠ 521 ಮತ ಗಳಿಸಿ ಗೆದ್ದಿದ್ದಾರೆ. ಇದು ಬಿಜೆಪಿ ಪ್ರಾಬಲ್ಯದ ಕ್ಷೇತ್ರ. ಜೋಕಟ್ಟೆಯ ತೋಕೂರು ಗ್ರಾಪಂನಲ್ಲೂ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ಫಯಾಜ್ 422 ಮತ ಗಳಿಸಿಗೆದ್ದಿದ್ದಾರೆ. ನೀರುಮಾರ್ಗ ಬೊಂಡಂತಿಲ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಶ್ರಫ್ ಗೆದ್ದಿದ್ದಾರೆ. ಮೂಡುಶೆಡ್ಡೆಯಲ್ಲಿ ಶಶಿಕಲಾ ಮತ್ತು ವಿಜಯಲಕ್ಷ್ಮೀ ಗೆದ್ದಿದ್ದಾರೆ. ಹಳೆಯಂಗಡಿ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಸುಚಿತ್ರ 556 ಮತ ಗಳಿಸಿ ಗೆದ್ದಿದ್ದಾರೆ.

ಮೂಡುಬಿದಿರೆ: 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು

ಬಿಜೆಪಿ ಹಿಡಿತದಲ್ಲಿರುವ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ನೆಲ್ಲಿಕಾರು ಗ್ರಾಪಂ ಉಪಚುನಾವಣೆಯ ಮಾಂಟ್ರಾಡಿ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಚಾರ್ಲ್ಸ್ ಗೆಲುವು ಸಾಧಿಸಿದ್ದಾರೆ. ಅವರು 583 ಮತಗಳನ್ನು ಪಡೆದಿದ್ದಾರೆ.

ಬೆಳ್ತಂಗಡಿ: ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬೆಂಬಲಿತರು:

ಬಿಜೆಪಿ ಫೈರ್ ಬ್ರಾಂಡ್ ಶಾಸಕ ಹರೀಶ್ ಪೂಂಜಾ ಪ್ರಾಬಲ್ಯದ ಬೆಳ್ತಂಗಡಿ ಕ್ಷೇತ್ರದ ಬೆಳ್ತಂಗಡಿ ತಾಲೂಕಿನ ಇಳಂತಿಲ 1ನೇ ವಾರ್ಡ್, ಕುವೆಟ್ಟುವಿನ 1ನೇ ವಾರ್ಡ್, ಉಜಿರೆ ಗ್ರಾಮ ಪಂಚಾಯಿತಿ 8ನೇ ವಾರ್ಡ್ ನಲ್ಲಿ ವಿವಿಧ ಕಾರಣಗಳಿಂದ ತೆರವಾದ ಗ್ರಾಪಂ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬೆಂಬಲಿತರು ಜಯಭೇರಿ ಬಾರಿಸಿದ್ದಾರೆ. ಕುವೆಟ್ಟು ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮಾಲತಿ ಎಸ್. 196 ಮತ ಗಳಿಸುವ ಮೂಲಕ ಗೆದ್ದರೆ, ಉಜಿರೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪ್ರೇಮಲತಾ 512 ಮತ ಗಳಿಸಿರು. ಇಳಂತಿಲದಲ್ಲಿ ಕಾಂಗ್ರೆಸ್ ಬೆಂಬಲಿತ ಕುಸುಮಾ 456 ಮತ ಗಳಿಸಿದ್ದಾರೆ.

ಪುತ್ತೂರು ತಾಲೂಕು: 2 ಸ್ಥಾನಗಳೂ ಕಾಂಗ್ರೆಸ್ ತೆಕ್ಕೆಗೆ

ಶಾಸಕ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಗೆ ಬಲ ತಂದುಕೊಟ್ಟಿದ್ದಾರೆ ಎಂಬುದು ಪುತ್ತೂರಿನಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಗೊತ್ತಾಗುತ್ತಿದೆ. ಅದರಲ್ಲೂ ಬಿಜೆಪಿ ಕೋಟೆ ಒಳಹೊಕ್ಕು ಅದನ್ನೂ ನಿಸ್ತೇಜ ಮಾಡುತ್ತಿದ್ದಾರೆಯೇ ಎಂದು ಭಾಸವಾಗುವಂತೆ ಅವರ ನಡವಳಿಕೆಗಳು ಕಾಣಿಸುತ್ತಿವೆ. ಇದೀಗ ಪುತ್ತೂರಿನಲ್ಲೂ ಕಾಂಗ್ರೆಸ್ ಕಮಾಲ್ ಮಾಡಿದೆ. ಪುತ್ತೂರು ತಾಲೂಕಿನಲ್ಲಿ ಕಾಂಗ್ರೆಸ್ ಬಿಜೆಪಿ ವಶದಲ್ಲಿದ್ದ ಒಂದು ಸ್ಥಾನವನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುವ ಮೂಲಕ ಸ್ಥಾನಲಾಭ ಮಾಡಿಕೊಂಡಿದೆ. ಅರಿಯಡ್ಕ ಗ್ರಾಮ ಪಂಚಾಯಿತಿಯ ಮಾಡ್ನೂರು 2ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ವಿನಯ ಕುಮಾರ್ 423 ಮತ ಗಳಿಸಿ ಗೆದ್ದಿದ್ದಾರೆ. ಕೆದಂಪಾಡಿ ವಾರ್ಡ್ 4ರಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮೆಲ್ವಿನ್ ಮೊಂತೆರೊ 272 ಮತಗಳಿಸಿ ಗೆದ್ದಿದ್ದಾರೆ.

ಕಡಬ ತಾಲೂಕು: ಕಾಂಗ್ರೆಸ್ ಜಯಭೇರಿ

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಲ್ಸಮ್ಮ ಎ.ಜೆ. 312 ಮತ ಗಳಿಸಿ ಗೆದ್ದಿದ್ದಾರೆ. ಬಿಜೆಪಿ ಕೈಯಲ್ಲಿದ್ದ ಸ್ಥಾನವೀಗ ಕಾಂಗ್ರೆಸ್ ವಶವಾಗಿದೆ.

ಸುಳ್ಯ ತಾಲೂಕು: ಬಿಜೆಪಿಗೆ ಜಯ

ಬಿಜೆಪಿ ಪ್ರಾಬಲ್ಯವಿರುವ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಪಂಚಾಯಿತಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನವೀನ್ ಮುರೂರು 301 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಅವರಿಗೆ 568 ಮತ ಬಂದರೆ, ಕಾಂಗ್ರೆಸ್ ಬೆಂಬಲಿತ ಕೃಷ್ಣ ಮಣಿಯಾಣಿ ಅವರಿಗೆ 267 ಮತ ದೊರಕಿದವು.

ಬಂಟ್ವಾಳ ತಾಲೂಕು 12ರಲ್ಲಿ 10 ಕಾಂಗ್ರೆಸ್ ಕಡೆಗೆ

ಕಾಂಗ್ರೆಸ್ ನ ದಕ್ಷಿಣ ಕನ್ನಡ ಜಿಲ್ಲೆಯ ಅನಭಿಷಿಕ್ತ ದೊರೆ, ಮಾಜಿ ಸಚಿವ ರಮಾನಾಥ ರೈ ಅವರ ಕಾರ್ಯಕ್ಷೇತ್ರ ಬಂಟ್ವಾಳದಲ್ಲಿ 2018ರಿಮದ ಬಿಜೆಪಿ ಶಾಸಕರ ಕಾರುಬಾರು. ಅವರಿಗೆ ಆಗಾಗ್ಗೆ ಎದಿರೇಟು ನೀಡುವ ಕಾರ್ಯವನ್ನು ರೈ ಮಾಡುತ್ತಾರೆ. ಇದೀಗ ಬಂಟ್ವಾಳ ತಾಲೂಕಿನ 11 ಗ್ರಾಪಂ ಸ್ಥಾನಗಳು ಹಾಗೂ 1 ಪುರಸಭೆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ. ಗ್ರಾಪಂಗಳಲ್ಲಿ 9 ಹಾಗೂ ಪುರಸಭೆಯಲ್ಲಿ 1 ಸೇರಿ 10 ಮಂದಿ ಕಾಂಗ್ರೆಸ್ ಬೆಂಬಲಿತರೇ ಜಯಗಳಿಸಿದ್ದಾರೆ. ಪುರಸಭೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಸದಸ್ಯ ವಲಸೆ ಹೋದ ಹಿನ್ನೆಲೆಯಲ್ಲಿ ಸ್ಥಾನ ತೆರವಾಗಿತ್ತು. ಅದನ್ನು ಕಾಂಗ್ರೆಸ್ ಉಳಿಸಿಕೊಂಡಿದ್ದು, ಪುರುಷೋತ್ತಮ ಬಂಗೇರ 496 ಮತ ಗಳಿಸಿ ಗೆದ್ದಿದ್ದಾರೆ. ಸಜೀಪಮುನ್ನೂರು ಗ್ರಾಪಂನ 3 ಸ್ಥಾನಗಳಲ್ಲಿ ಎಸ್.ಡಿ.ಪಿ.ಐ. ಬೆಂಬಲಿತರಿದ್ದ ಕಡೆ ಚುನಾವಣೆ ನಡೆದಿದ್ದು, ಇದೀಗ ಅವುಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಇಸ್ಮಾಯಿಲ್ ನಂದಾವರ ಕೋಟೆಮನೆ 566 ಮತ, ಧನಂಜಯ ಶೆಟ್ಟಿ 594 ಗೆದ್ದಿದ್ದಾರೆ. ಪಂಜಿಕಲ್ಲು ಗ್ರಾಪಂನಲ್ಲಿ ಹಿಂದೆ ಬಿಜೆಪಿ ಬೆಂಬಲಿತರಿದ್ದ ಎರಡೂ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. 1ನೇ ವಾರ್ಡ್ ನಲ್ಲಿ ರಾಜೇಶ್ ಗೌಡ 508 ಮತ, 2ನೇ ವಾರ್ಡ್ ನಲ್ಲಿ ಕೇಶವ ಪೂಜಾರಿ 540 ಮತ ಗಳಿಸಿ ಗೆದ್ದಿದ್ದಾರೆ. ಪೆರ್ನೆ ಗ್ರಾಪಂನಲ್ಲಿ ಕಾಂಗ್ರೆಸ್ ಸ್ಥಾನ ಉಳಿಸಿಕೊಂಡಿದ್ದು, ನಳಿನಿ ಗೆದ್ದಿದ್ದಾರೆ. ಚೆನ್ನೈತೋಡಿಯಲ್ಲೂ ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಂಡಿದ್ದು, ಜಯಂತಿ ಗೆಲುವು ಸಾಧಿಸಿದ್ದಾರೆ. ಸಜೀಪಮೂಡ ದಲ್ಲೂ ಕಾಂಗ್ರೆಸ್ ಸ್ಥಾನ ಉಳಿಸಿಕೊಂಡಿದ್ದು ಕರೀಂ ಗೆದ್ದಿದ್ದಾರೆ. ಅಮ್ಟಾಡಿಯಲ್ಲಿ ಕಾಂಗ್ರೆಸ್ ಸ್ಥಾನ ಗಳಿಸಿಕೊಂಡಿದ್ದು, ಇಲ್ಲಿ ಕೇಶವ ಜೋಗಿ 361 ಮತ ಗಳಿಸಿದ್ದಾರೆ. ಮಂಚಿಯಲ್ಲಿ ಬಿಜೆಪಿ ಬೆಂಬಲಿತ ರಾಜೇಶ್ ನೂಜಿಪ್ಪಾಡಿ ವಿಜಯಿಯಾಗಿದ್ದಾರೆ. ಇದು ಬಿಜೆಪಿ ಪ್ರಾಬಲ್ಯದ ಜಾಗವಾದರೂ ಇಲ್ಲಿ ಗ್ರಾಪಂ ಕಾಂಗ್ರೆಸ್ ಬೆಂಬಲಿತರ ಹಿಡಿತದಲ್ಲಿದೆ. ಬಡಗಬೆಳ್ಳೂರಿನಲ್ಲಿ ಹಿಂದೆ ಕಾಂಗ್ರೆಸ್ ಬೆಂಬಲಿತರ ಕೈಯಲ್ಲಿದ್ದ ಸ್ಥಾನವನ್ನು ಬಿಜೆಪಿ ಗೆದ್ದಿದೆ. ಮೋಹನದಾಸ್ 477 ಮತಗಳಿಸಿ ಗೆದ್ದರು.

Tags:    

Similar News