ಸಕಲ ಸರ್ಕಾರಿ ಗೌರವಗಳೊಂದಿಗೆ ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆಗೆ ಸಿಎಂ ಸೂಚನೆ

ಪದ್ಮಶ್ರೀ ಪುರಸ್ಕೃತೆ, ಪರಿಸರವಾದಿ "ಹಸಿರೆ ಉಸಿರು" ಎಂದು ಜೀವಿಸಿದ್ದ ವೃಕ್ಷಮಾತೆ, ಶತಾಯುಷಿ ಸಾಲು ಮರದ ತಿಮ್ಮಕ್ಕ ಅವರ ನಿಧನದ ಸುದ್ದಿ ಮನಸ್ಸಿಗೆ ಅತೀವ ನೋವು ತಂದಿದೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ತಿಳಿಸಿದ್ದಾರೆ.

Update: 2025-11-14 13:23 GMT

ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕನವರ ಮೃತದೇಹಕ್ಕೆ ಸಿಎಂ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು.

Click the Play button to listen to article

ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ(ನ.14) ಸಾಲು ಮರದ ತಿಮ್ಮಕ್ಕ ಅವರ ಅಂತಿಮ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 114 ವರ್ಷಗಳ ಕಾಲ ಬದುಕಿದ ಅನಾರೋಗ್ಯದಿಂದ ದೈವಾಧೀನರಾಗಿದ್ದಾರೆ. ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದಲ್ಲಿ ಮರಗಿಡಗಳನ್ನೇ ತಮ್ಮ ಮಕ್ಕಳಂತೆ ಸಾಕುತ್ತಿದ್ದರು. ಅವರು ನೆಟ್ಟಿರುವ ಮರಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿವೆ. ಪರಿಸರವಾದಿಯಾಗಿದ್ದ ತಿಮ್ಮಕ್ಕನವರ ಸೇವೆಯನ್ನು ಪರಿಗಣಿಸಿ , ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು ಎಂದರು.

ತಿಮ್ಮಕ್ಕ ಅವರ ಕೊನೆ ಆಸೆ: ಪರಿಶೀಲಿಸಿ ಕ್ರಮ

ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯವನ್ನು ಮಾಡಬೇಕು ಎಂದು ತಮ್ಮ ಕೊನೆ ಆಸೆಯನ್ನು ಪತ್ರದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸರ್ಕಾರ ಪರಿಶೀಲಿಸಿ ಪರಿಗಣಿಸಲಿದೆ. ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಸಾವಿನಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಕೊಡಲಿ. ತಿಮ್ಮಕ್ಕ ಅವರ ಅಂತ್ಯಕ್ರಿಯೆಯ ಬಗ್ಗೆ ಕುಟುಂಬದವರು ಮೂರು ಸ್ಥಳಗಳನ್ನು ಗುರುತು ಮಾಡಿದ್ದು, ಅಂತ್ಯಕ್ರಿಯೆ ಎಲ್ಲಿ ಮಾಡಬೇಕೆಂದು ಸದ್ಯದಲ್ಲಿಯೇ ನಿರ್ಧರಿಸಲಾಗುವುದು ಎಂದು ಹೇಳಿದರು.

ಮಾಜಿ ಪ್ರಧಾನಿ ಹೆಚ್‌ಡಿಡಿ ಸಂತಾಪ

ಪದ್ಮಶ್ರೀ ಪುರಸ್ಕೃತೆ, ಪರಿಸರವಾದಿ "ಹಸಿರೆ ಉಸಿರು" ಎಂದು ಜೀವಿಸಿದ್ದ ವೃಕ್ಷಮಾತೆ, ಶತಾಯುಷಿ ಸಾಲು ಮರದ ತಿಮ್ಮಕ್ಕ ಅವರ ನಿಧನದ ಸುದ್ದಿ ಮನಸ್ಸಿಗೆ ಅತೀವ ನೋವು ತಂದಿದೆ. ಹಸಿರಿಲ್ಲದೆ ಬದುಕಿಲ್ಲ ಎಂದು ಜಗತ್ತಿಗೆ ತೋರಿಸಿಕೊಟ್ಟ ಮಾನವತಾವಾದಿ, ಮರಗಳನ್ನು ತಮ್ಮ ಮಕ್ಕಳಂತೆ ಪೋಷಿಸಿ ಬೆಳೆಸಿ ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರ ಪರಿಸರ ಸೇವೆ ಇಡೀ ಮನುಕುಲಕ್ಕೆ ಮಾದರಿ. ತಿಮ್ಮಕ್ಕನವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ʼಎಕ್ಸ್‌ʼ ಖಾತೆಯಲ್ಲಿ ತಿಳಿಸಿದರು.

ಉಸಿರು ಚೆಲ್ಲಿದ "ವೃಕ್ಷಮಾತೆ"

ಮರಗಳನ್ನೇ ತಮ್ಮ ಮಕ್ಕಳಂತೆ ಸಾಕಿ ಸಲಹಿದ ʻವೃಕ್ಷಮಾತೆʼ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರು ನಿಧನರಾದ ಸುದ್ದಿ ಅತೀವ ದುಖಃ ನೀಡಿದೆ. ನಿಸರ್ಗ ಪ್ರೀತಿಯ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಿದ್ದ ಅವರ ಅಸಾಮಾನ್ಯ ಬದುಕು ಮತ್ತು ಪರಿಸರಕ್ಕೆ ಅವರ ಕೊಡುಗೆ ಚಿರಸ್ಮರಣೀಯ. ವೃಕ್ಷಮಾತೆ ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕಾರ್ಯ ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿ ಉಳಿಯಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಶಿವರಾಜ್. ಎಸ್.ತಂಗಡಗಿ ಮಾತನಾಡಿ, ಸಾವಿರಾರು ಮರಗಳನ್ನು ನೆಟ್ಟು ‘ವೃಕ್ಷಮಾತೆ’ ಎಂದೇ ಹೆಸರುವಾಸಿಯಾಗಿದ್ದ ಪರಿಸರವಾದಿ, ಶತಾಯುಷಿ ಸಾಲುಮರದ ತಿಮ್ಮಕ್ಕ ಅವರ ನಿಧನದ ಸುದ್ದಿ ನೋವುಂಟು ಮಾಡಿದೆ. ಸುಮಾರು ನಾಲ್ಕೂವರೆ ಕಿ.ಮೀಟರ್ ಆಲದ ಮರಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿದ ಮಹಾನ್ ಮಾತೆ ತಿಮ್ಮಕ್ಕ. ಮರಗಳಿಗೆ ಬೇಲಿ ಹಾಕಿ, ನೀರು ಹಾಯಿಸಿ, ಕಾವಲು ಕಾಯುತ್ತಿದ್ದರು. ಅಂದಿನ ಕಾಲದಲ್ಲೇ ‌ಅವರ ಕೆಲಸದಿಂದ ದಾರಿಯಲ್ಲಿ‌ ಹೋಗುತ್ತಿದ್ದ ಲಕ್ಷಾಂತರ ಮಂದಿ ಆಶ್ರಯ ಪಡೆಯುತ್ತಿದ್ದರು.‌ ಇವರ ಪರಿಸರ ಕಾಳಜಿ ಇಡೀ‌ ವಿಶ್ವಕ್ಕೆ ಮಾದರಿಯಾಗಿದೆ. ಅವರು ತಮ್ಮ ಇಡೀ‌ ಜೀವನವನ್ನು ಪರಿಸರ ಕಾಳಜಿಗೆ ಮುಡಿಪಾಗಿಟ್ಟಿದ್ದರು. ರಾಜ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ತಿಳಿಸಿದರು.

Tags:    

Similar News