ಸಂಪುಟ ಬದಲಾವಣೆ | ಇಬ್ಬರಿಗೆ ಅವಕಾಶವೋ? ಇತರರಿಗೂ ಅದೃಷ್ಟವೋ?

ಈಗ ಒಬ್ಬಿಬ್ಬರಿಗೆ ಅವಕಾಶ ನೀಡಿ ಸಂಪುಟ ಬದಲಾವಣೆಯ ಚರ್ಚೆಗೆ ಇತಿಶ್ರೀ ಹಾಡಲಾಗುವುದೇ? ಅಥವಾ ಮೇಜರ್ ಸರ್ಜರಿ ಮೂಲಕ ಉಳಿದ ಸಂಪುಟ ಸದಸ್ಯರಿಗೆ ಎಚ್ಚರಿಕೆ ನೀಡುವ ಲೆಕ್ಕಾಚಾರ ಗೆಲ್ಲುವುದೇ ಎಂಬುದು ಸದ್ಯದ ಕುತೂಹಲ;

Update: 2024-11-27 13:16 GMT

ಉಪ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಬದಲಾವಣೆಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.

ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಆರಂಭವಾಗಿದ್ದ ಸಂಪುಟ ಬದಲಾವಣೆಯ ಚರ್ಚೆ ಕಳೆದ ಆರು ತಿಂಗಳಿಂದಲೂ ಚಾಲ್ತಿಯಲ್ಲಿದೆ. ಈ ನಡುವೆ, ಮುಡಾ ಪ್ರಕರಣ, ಉಪ ಚುನಾವಣೆಯ ಕಾರಣಗಳಿಂದಾಗಿ ಸಂಪುಟ ಸರ್ಜರಿ ಮುಂದಕ್ಕೆ ಹೋಗುತ್ತಲೇ ಇತ್ತು. ಇದೀಗ ಉಪ ಚುನಾವಣೆಯಲ್ಲಿ ಮೂರೂ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಹೊಸ ವಿಶ್ವಾಸದಲ್ಲಿದೆ. ಆ ಹಿನ್ನೆಲೆಯಲ್ಲಿ ಮತ್ತೆ ಸಂಪುಟ ಬದಲಾವಣೆಯ ವಿಷಯ ಪಕ್ಷದ ಪಡಸಾಲೆಯಲ್ಲಿ ಬಿಸಿಬಿಸಿ ಚರ್ಚೆಯ ವಸ್ತುವಾಗಿದೆ.

ಈ ನಡುವೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೆಹಲಿ ವರಿಷ್ಠರ ಭೇಟಿಗೆ ಹೋಗಿದ್ದಾರೆ. ಅವರ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದೆಹಲಿಗೆ ಹೊರಟಿದ್ದಾರೆ. ಹಾಗಾಗಿ ಈ ಬಾರಿ ಸಂಪುಟ ಬದಲಾವಣೆಯ ವಿಷಯ ದೆಹಲಿಯ ಮಾತುಕತೆಯಲ್ಲಿ ಆದ್ಯತೆಯ ವಿಷಯವಾಗಿದೆ. ವರಿಷ್ಠರು ಹಸಿರು ನಿಶಾನೆ ತೋರಿದರೆ ಬೆಳಗಾವಿ ಅಧಿವೇಶನಕ್ಕೂ ಮೊದಲೇ ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ ಪಕ್ಕಾ ಎನ್ನುವುದು ಕೆಪಿಸಿಸಿ ಮೂಲಗಳ ಮಾಹಿತಿ.

ನಾಗೇಂದ್ರಗೆ ಮತ್ತೆ ಅವಕಾಶ ಹೇಳಿಕೆ

ಅದರಲ್ಲೂ ಮುಖ್ಯವಾಗಿ ಎರಡು ವಾರದ ಹಿಂದೆ ಖುದ್ದು ಮುಖ್ಯಮಂತ್ರಿಗಳೇ ಸಂಪುಟ ಬದಲಾವಣೆಯ ಸೂಚನೆ ನೀಡಿದ್ದರು. ವಾಲ್ಮೀಕಿ ನಿಗಮ ಹಗರಣ ಆರೋಪದ ಹಿನ್ನೆಲೆಯಲ್ಲಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ಬಿ ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಮಾತನಾಡಿದ್ದ ಅವರು, ಸದ್ಯದಲ್ಲೇ ನಾಗೇಂದ್ರ ಅವರಿಗೆ ಮತ್ತೆ ಅವಕಾಶ ಕೊಡುತ್ತೇನೆ ಎಂದಿದ್ದರು. ಜೊತೆಗೆ ಅಬಕಾರಿ ಇಲಾಖೆಯ ಮೇಲೆ ಕೇಳಿಬಂದಿರುವ ಹಣ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಆರ್ ಬಿ ತಿಮ್ಮಾಪುರ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಸಮಾಧಾನಗೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಅವರ ರಾಜೀನಾಮೆ ಪಡೆಯುವ ನಿರ್ಧಾರಕ್ಕೆ ಉಭಯ ನಾಯಕರು ಬಂದಿದ್ದಾರೆ ಎಂದೂ ಹೇಳಲಾಗುತ್ತಿದೆ.

ಅಲ್ಲದೆ, ಲೋಕಸಭಾ ಚುನಾವಣೆಯ ಬಳಿಕ ದೆಹಲಿ ವರಿಷ್ಠರ ಸೂಚನೆಯಂತೆ ಕೆಪಿಸಿಸಿ ಅಧ್ಯಕ್ಷರು ಸಚಿವರ ಕಾರ್ಯಕ್ಷಮತೆಯ ವರದಿ ಸಲ್ಲಿಸಿದ್ದರು. ಆ ವರದಿಯ ಹಿನ್ನೆಲೆಯಲ್ಲಿ ಖಾತೆಯನ್ನು ನಿಭಾಯಿಸುವಲ್ಲಿ ಸೋತಿರುವ ಆರರಿಂದ ಎಂಟು ಮಂದಿ ಸಚಿವರನ್ನು ಕೈಬಿಟ್ಟು ಆ ಸ್ಥಾನಗಳಿಗೆ ಪಕ್ಷದ ಹಿರಿಯ ಶಾಸಕರು ಮತ್ತು ಮುಖಂಡರಿಗೆ ಅವಕಾಶ ನೀಡುವ ಲೆಕ್ಕಾಚಾರ ಹೈಕಮಾಂಡ್ ಮಾಡಿದೆ. ಹಾಗಾಗಿ ಬಿ ಕೆ ಹರಿಪ್ರಸಾದ್, ಆರ್ ವಿ ದೇಶಪಾಂಡೆ, ಲಕ್ಷ್ಮಣ ಸವದಿ, ನರೇಂದ್ರಸ್ವಾಮಿ, ತನ್ವೀರ್ ಸೇಠ್, ಅಜಯ್ ಸಿಂಗ್ ಸೇರಿದಂತೆ ಏಳರಿಂದ ಎಂಟು ಮಂದಿಗೆ ಸಚಿವರಾಗುವ ಅವಕಾಶ ಇದೆ ಎನ್ನಲಾಗಿತ್ತು.

ಆದರೆ, ಆ ವೇಳೆಗೆ ಮುಡಾ ಹಗರಣ ಭುಗಿಲೆದ್ದ ಹಿನ್ನೆಲೆಯಲ್ಲಿ ಸಂಪುಟ ಬದಲಾವಣೆಯ ವಿಷಯ ಬದಿಗೆ ಸರಿದಿತ್ತು.

ಎರಡು ವರ್ಷದ ಅವಧಿ ಹೇಳಿಕೆ

ಇದೀಗ ಮತ್ತೆ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ದೆಹಲಿ ಯಾತ್ರೆಯ ಹಿನ್ನೆಲೆಯಲ್ಲಿ ಸಂಪುಟ ಬದಲಾವಣೆಯ ವಿಷಯ ಮುನ್ನೆಲೆಗೆ ಬಂದಿದೆ. ಅಲ್ಲದೆ, ಸ್ವತಃ ಡಿ ಕೆ ಶಿವಕುಮಾರ್ ಅವರೇ ಮಂಗಳವಾರ ಸಚಿವರಿಗೆ ಮತ್ತು ನಿಗಮ ಮಂಡಳಿಗೆ ನೇಮಕವಾಗಿರುವ ಶಾಸಕರಿಗೆ ಎರಡು ವರ್ಷಗಳ ಕಾಲಾವಧಿ ನೀಡಲಾಗಿತ್ತು ಎಂದು ಹೇಳುವ ಮೂಲಕ ಬದಲಾವಣೆಯ ಸೂಚನೆ ನೀಡಿದ್ದರು. ಅದರ ಬೆನ್ನಲ್ಲೇ ಸತೀಶ್ ಜಾರಕಿಹೊಳಿ, ಡಾ ಜಿ ಪರಮೇಶ್ವರ್ ಸೇರಿದಂತೆ ಹಲವು ಹಿರಿಯ ಸಚಿವರು ಕೂಡ ಸಚಿವ ಸಂಪುಟ ಬದಲಾವಣೆಯ ಸೂಚನೆಗಳನ್ನು ನೀಡಿದ್ದಾರೆ.

ಹಾಗಾಗಿ, ಈ ಬಾರಿ ಸಿದ್ದರಾಮಯ್ಯ ಸಂಪುಟ ಬದಲಾವಣೆ ನಿಶ್ಚಿತ ಎಂಬ ಮಾತು ಕೆಪಿಸಿಸಿ ವಲಯದಲ್ಲಿ ಜೋರಾಗಿದೆ. ಆದರೆ, ಸಚಿವ ಸಂಪುಟ ವಿಸ್ತರಣೆ ಮೂಲಕ ಮಂತ್ರಿಗಿರಿಗೆ ಒತ್ತಡ ತರುತ್ತಿರುವ ಪಕ್ಷದ ಮುಖಂಡರಿಗೆ ಅವಕಾಶ ನೀಡಲಾಗುವುದೋ? ಅಥವಾ ಒಂದೂವರೆ ವರ್ಷದ ಕಾರ್ಯವಿಧಾನವನ್ನು ಅಳೆದು ತೂಗಿ ಇಡೀ ಸಚಿವ ಸಂಪುಟವನ್ನೇ ಪುನರ್ ರಚಿಸಲಾಗುವುದೋ? ಎಂಬುದು ಮಾತ್ರ ಇನ್ನೂ ಒಗಟಾಗಿಯೇ ಉಳಿದಿದೆ.

ಎರಡು ಸ್ಥಾನವಷ್ಟೇ ತುಂಬಲು ಸಿಎಂ ಒಲವು?

ಸದ್ಯಕ್ಕೆ, ಬಿ ನಾಗೇಂದ್ರ ಅವರ ರಾಜೀನಾಮೆಯಿಂದ ಖಾಲಿ ಇರುವ ಒಂದು ಸ್ಥಾನ ಮತ್ತು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಮೇಲಿನ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಅವರಿಂದ ರಾಜೀನಾಮೆ ಪಡೆದು ತೆರವಾಗುವ ಸ್ಥಾನ ಸೇರಿ ಒಟ್ಟು ಎರಡು ಸ್ಥಾನಗಳಿಗೆ ಮಾತ್ರ ಹಿರಿಯರಿಗೆ ಅವಕಾಶ ನೀಡಿ, ತಮ್ಮ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡ ಬಳಿಕ ಸಂಪುಟ ಪುನರ್ ರಚನೆಯನ್ನು ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಆಸಕ್ತಿ ವಹಿಸಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಪಕ್ಷದ ಹೈಕಮಾಂಡ್ ಯೋಚನೆ ಬೇರೆಯೇ ಇದೆ. ಮುಖ್ಯವಾಗಿ ಕೆಲವು ಸಚಿವರ ಕಾರ್ಯವಿಧಾನದ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ವರಿಷ್ಠರು, ಕನಿಷ್ಟ ಆರರಿಂದ ಎಂಟು ಮಂದಿಯನ್ನು ಬದಲಾಯಿಸುವ ಯೋಚನೆಯಲ್ಲಿದ್ದಾರೆ. ಆ ಮೂಲಕ ಬಿ ಕೆ ಹರಿಪ್ರಸಾದ್, ತನ್ವೀರ್ ಸೇಠ್ ಮತ್ತಿತರ ನಾಯಕರಿಗೆ ಅವಕಾಶ ಕೊಡುವ ಮೂಲಕ ಜಾತಿ ಸಮೀಕರಣದೊಂದಿಗೆ ಸಂಪುಟದ ಕಾರ್ಯದಕ್ಷತೆಯನ್ನು ಹೆಚ್ಚಿಸುವ ಇರಾದೆ ವರಿಷ್ಠರದ್ದು. ಡಿ ಕೆ ಶಿವಕುಮಾರ್ ಕೂಡ ಆರೇಳು ಮಂದಿಯನ್ನು ಕೈಬಿಡುವ ಬಗ್ಗೆ ಒಲವು ಹೊಂದಿದ್ದಾರೆ ಎಂಬ ಮಾತೂ ಕೆಪಿಸಿಸಿ ಮೂಲಗಳಿಂದ ಕೇಳಿಬರುತ್ತಿದೆ.

ಹಾಗಾಗಿ, ಈಗ ಒಬ್ಬಿಬ್ಬರಿಗೆ ಅವಕಾಶ ನೀಡಿ ಸಂಪುಟ ಬದಲಾವಣೆಯ ಚರ್ಚೆಗೆ ಇತಿಶ್ರೀ ಹಾಡಲಾಗುವುದೇ? ಅಥವಾ ಮೇಜರ್ ಸರ್ಜರಿ ಮೂಲಕ ಉಳಿದ ಸಂಪುಟ ಸದಸ್ಯರಿಗೆ ಎಚ್ಚರಿಕೆ ನೀಡುವ ಲೆಕ್ಕಾಚಾರ ಗೆಲ್ಲುವುದೇ ಎಂಬುದು ಸದ್ಯದ ಕುತೂಹಲ. ನ.29ರಂದು ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಕಾರ್ಯಕಾರಿಣಿ ಸಭೆಯ ಬಳಿಕ ಈ ಕುತೂಹಲಕ್ಕೆ ಬಹುತೇಕ ತೆರೆ ಬೀಳಲಿದೆ.

Tags:    

Similar News