ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳಗಳನ್ನು ಗುರುತಿಸುವ ಹಾಗೂ ಆಹಾರ ನೀಡುವ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಳ್ಳಲು ಚಿಂತನೆ ನಡೆಸಿದೆ. ನಾಯಿಗಳಿಗೆ ಆಹಾರ ನೀಡುವ ಕುರಿತು ನಾಗರಿಕರಿಂದ ಕೇಳಿ ಬಂದಿರುವ ದೂರಿನ ಅನ್ವಯ ಬಿಬಿಎಂಪಿ ಈ ಕುರಿತು ಚಿಂತನೆ ನಡೆಸಿದೆ.
ಶ್ವಾನಗಳಿಗೆ ಆಹಾರ ನೀಡುವ ಸ್ಥಳಗಳು ಆಟದ ಮೈದಾನ, ಸಾರ್ವಜನಿಕರ ಕಟ್ಟಡಗಳು ಸೇರಿದಂತೆ ಪ್ರಾದೇಶಗಳ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳು ಸೇರಿದಂತೆ ಮೆಟ್ಟಿಲುಗಳು ಮತ್ತು ಮಕ್ಕಳು, ಹಿರಿಯ ನಾಗರಿಕರು ಕಡಿಮೆ ಬಾರಿ ಭೇಟಿ ನೀಡುವ ಸ್ಥಳಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಆಹಾರ ನೀಡುವ ಬಗ್ಗೆ ಕ್ರಮಕೈಗೊಳ್ಳಲು ಚಿಂತನ ನಡೆಸಿದೆ.
ಈ ಬಗ್ಗೆ ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ಆಯುಕ್ತ ರವಿಕುಮಾರ್ ಮಾಹಿತಿ ನೀಡಿದ್ದು, ಬೆಳಗಿನ ಜಾವ 5 ಗಂಟೆಯೊಳಗೆ ಹಾಗೂ ರಾತ್ರಿ 10 ಗಂಟೆ ನಂತರ ಊಟ ಕೊಡಲು ಸಲಹೆ ನೀಡಿದ್ದಾರೆ.
ಬೆಳಗ್ಗೆ ರಸ್ತೆಗಳು, ಅಪಾರ್ಟ್ ಮೆಂಟ್ ಮುಂದೆ ಊಟ ಹಾಕೋದರಿಂದ ಕಿರಿಕಿರಿ ಉಂಟಾಗುತ್ತದೆ. ಮಕ್ಕಳು, ಹಿರಿಯರ ಮೇಲೆ ನಾಯಿಗಳು ದಾಳಿ ಮಾಡುವ ಸಾಧ್ಯತೆ ಹೆಚ್ಚು ಇರುತ್ತದೆ. ಹೀಗಾಗಿ ಟೈಮ್ ಫಿಕ್ಸ್ ಮಾಡಲು ಪಾಲಿಕೆ ಸಜ್ಜಾಗಿದ್ದು, ಕೆಲ ಜಾಗಗಳನ್ನ ಗುರ್ತಿಸಿ ಬೋರ್ಡ್ ಹಾಕ್ತೀವೆ ಎಂದ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಾಯಿಗೆ ಊಟ ಹಾಕುವ ವಿಚಾರಕ್ಕೆ ಬಹಳ ಗಲಾಟೆಗಳು ನಡೆಯುತ್ತಿದೆ. ಊಟ ಹಾಕುವವರಿಗೆ ಹಾಗೂ ಅಪಾರ್ಟ್ಮೆಂಟ್ ಓನರ್ಗಳಿಗೆ ದೊಡ್ಡ ದೊಡ್ಡ ಜಗಳ ಆಗಿದೆ, ಪೊಲೀಸ್ ಠಾಣೆವರೆಗೂ ಹೋಗಿ ಎಫ್ಐಆರ್ ಗಳು ಕೂಡ ದಾಖಲಾಗುತ್ತಿದೆ. ಆದ್ದರಿಂದ ಬೀದಿ ನಾಯಿಗಳಿಗೆ ಊಟ ಹಾಕುವ ಸ್ಥಳಗಳನ್ನು ನಿಗದಿ ಮಾಡಲು ಮುಂದಾಗಿದ್ದೇವೆ. ಅಲ್ಲದೇ ಊಟ ಹಾಕಲು ಸಮಯ ಕೂಡ ನಿಗದಿ ಮಾಡ್ತಿದ್ದೇವೆ. ಇದರಿಂದ ಎದುರಾಗುತ್ತಿರುವ ಸಮಸ್ಯೆ ಕಡಿಮೆ ಆಗುತ್ತೆ, ಸುಪ್ರೀಂ ಕೋರ್ಟ್ ಆದೇಶದಂತೆ ನಾವು ಈ ಕ್ರಮಕೈಗೊಳ್ಳುತ್ತೇವೆ. ಊಟ ಹಾಕುವ ಸ್ಥಳದಲ್ಲಿ ಬೋರ್ಡ್ಗಳನ್ನು ಹಾಕಿ ಮಾಹಿತಿ ನೀಡುತ್ತೇವೆ. ಅಲ್ಲದೇ ಏನಾದರೂ ಸಮಸ್ಯೆ ಆದರೆ ಯಾವ ಅಧಿಕಾರಯನ್ನು ಸಂಪರ್ಕ ಮಾಡಬೇಕು ಎಂದು ಫೋನ್ ನಂಬರ್ ಕೂಡ ಕೊಡ್ತೇವೆ ಎಂದು ರವಿಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟು 2,79,335 ಬೀದಿನಾಯಿಗಳನ್ನು ಗುರುತಿಸಲಾಗಿದೆ. ಇದರಲ್ಲಿ 165341 ಗಂಡು ನಾಯಿ, 82757 ಹೆಣ್ಣು ನಾಯಿಗಳಿದ್ದು, ಉಳಿದ 31237 ನಾಯಿಗಳನ್ನು ಬಗ್ಗೆ ಮಾಹಿತಿ ಲಭ್ಯವಿಲ್ಲ. ಒಟ್ಟು ನಾಯಿಗಳಲ್ಲಿ ಏಪ್ರಿಲ್ನಿಂದ ಸೆಪ್ಟೆಂಬರ್ ತಿಂಗಳ ವರೆಗೂ 77,555 ನಾಯಿಗಳಿಗೆ ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್ ಅನ್ನು ಬಿಬಿಎಂಪಿ ಮಾಡಿದೆ.