ʼಎಚ್‌ಎಂಟಿʼಗೆ ಮತ್ತೆ ಆತ್ಮ ನಿರ್ಭರ? ಪುನಶ್ಚೇತನಾ ಕ್ರಮಕ್ಕೆ ಕೇಂದ್ರ ಕೈಗಾರಿಕಾ ಸಚಿವಾಲಯ ಸೂಚನೆ
ಕೇಂದ್ರ ಸರ್ಕಾರದ ʼಆತ್ಮನಿರ್ಭರʼ ಪರಿಕಲ್ಪನೆಯ ಮೂಲಕ ಹೆಚ್ ಎಂಟಿ ಕಂಪನಿಯನ್ನು ಪುನರುಜ್ಜೀವನಗೊಳಿಸಬಹುದು. ಪ್ರಧಾನಿ ನರೇಂದ್ರ ಮೋದಿ ಆಲೋಚನೆಯಂತೆ ಚಿಂತಿಸಿ ಕಂಪನಿಯ ಚೇತರಿಕೆಗೆ ಮುಂದಾಗಿ. ಅದಕ್ಕೆ ಅಗತ್ಯವಾದ ನೆರವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಒಂದು ಕಾಲದಲ್ಲಿ ವೈಭವಯುತವಾಗಿ ಮೆರೆದಿದ್ದ, ಆದರೆ ಈಗ ದುಸ್ಥಿತಿಗೆ ಬಂದಿರುವ ಬೆಂಗಳೂರಿನ ವಿಶ್ವಪ್ರಸಿದ್ಧ ಎಚ್‌ಎಂಟಿ ವಾಚುಗಳ ಕಂಪೆನಿಗೆ ಮತ್ತೆ ಕಾಯಕಲ್ಪ ನೀಡಲು ಕೆಂದ್ರ ಬೃಹತ್ ಕೈಗಾರಿಕಾ ಸಚಿವಾಲಯ ಪುನಶ್ಚೇತನಾ ಕ್ರಮಕ್ಕೆ ಮುಂದಾಗಿದ್ದು ಈ ಬಗ್ಗೆ ವಿಸ್ತೃತ ವರದಿಯನ್ನು ಪಡೆಯಲು ನಿರ್ಧರಿಸಿದೆ.
ಅಳಿವಿನಂಚಿನಲ್ಲಿರುವ ಭಾರತದ ಹೆಮ್ಮೆಯ ಎಚ್‌ಎಂಟಿ ಮತ್ತೆ ಪುಟಿದೆದ್ದು ನಿಲ್ಲುತ್ತದೆಯೇ? ಕರ್ನಾಟಕದವರೇ ಆದ ಬೃಹತ್ ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಎಚ್‌ಎಂಟಿಗೆ ಕಾಯಕಲ್ಪ ನೀಡುತ್ತಾರೆಯೇ? ಎಚ್‌ಎಂಟಿ ಸಂಸ್ಥೆ ಮತ್ತು ಎಚ್ಎಂಟಿ ಬೇರಿಂಗ್ಸ್ ಸಂಸ್ಥೆಯನ್ನು ಮುಚ್ಚಲು ನಿರ್ಧರಿಸಿದ್ದ ಕೆಂದ್ರದ ಎನ್‌ಡಿಎ ಸರ್ಕಾರದ ನಿರ್ಧಾರವನ್ನು ಬದಲಿಸಿ ಅದೇ ಎನ್‌ಡಿಎ ಸರ್ಕಾರದಲ್ಲಿ ಸಂಸ್ಥೆಯನ್ನು ಮತ್ತೆ ಪುನಶ್ಚೇತನಗೊಳಿಸಲು ಕುಮಾರಸ್ವಾಮಿ ಅವರಿಂದ ಸಾಧ್ಯವೇ ಎಂಬ ಪ್ರಶ್ನೆಗಳಿಗೆ ಸಚಿವರೇ ಉತ್ತರಿಸಬೇಕಿದೆ.
ಆದರೆ, ಕೇಂದ್ರ ಸರ್ಕಾರದ ʼಆತ್ಮನಿರ್ಭರʼ ಪರಿಕಲ್ಪನೆಯ ಮೂಲಕ ಹೆಚ್ ಎಂಟಿ ಕಂಪನಿಯನ್ನು ಪುನರುಜ್ಜೀವನಗೊಳಿಸಬಹುದು. ಪ್ರಧಾನಿ ನರೇಂದ್ರ ಮೋದಿ ಆಲೋಚನೆಯಂತೆ ಚಿಂತಿಸಿ ಕಂಪನಿಯ ಚೇತರಿಕೆಗೆ ಮುಂದಾಗಿ. ಅದಕ್ಕೆ ಅಗತ್ಯವಾದ ನೆರವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸದ್ಯಕ್ಕೆ ವಾಚುಗಳಲ್ಲದೆ, ರಕ್ಷಣಾ ಇಲಾಖೆಗೆ, ಬಾಹ್ಯಾಕಾಶ ಯೋಜನೆಗಳಿಗೆ ಎಚ್‌ಎಂಟಿ ಪರಿಕರಗಳನ್ನು ತಯಾರಿಸಿ ಕೊಡುತ್ತಿದೆ. ದೇಶದ ಉದ್ದಗಲಕ್ಕೂ ಕಂಪನಿಯ ಉತ್ಪಾದನಾ ಘಟಕಗಳು ಇದ್ದರೂ ಕಂಪನಿಯ ಕ್ಷಮತೆ ಕಡಿಮೆಯಾಗಿದೆ. ಜತೆಗೆ ಎಚ್‌ಎಂಟಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಷ್ಟದ ಜತೆಗೆ ಆರ್ಥಿಕ ಬಿಕ್ಕಟ್ಟು, ನ್ಯಾಯಾಲಯಗಳಲ್ಲಿ ಮೊಕದ್ದಮೆ ಇತ್ಯಾದಿ ಸಂಕಷ್ಟಗಳನ್ನು ಎದುರಿಸುತ್ತಿದೆ. ಇದಕ್ಕೆ ಕೇಂದ್ರದ ನೆರವನ್ನೂ ಯಾಚಿಸಲಾಗಿದೆ.
ಈ ಸಂಬಂಧ ಶನಿವಾರ ಬೆಂಗಳೂರಿನಲ್ಲಿ HMT (ಹಿಂದೂಸ್ತಾನ್ ಮಶೀನ್ ಅಂಡ್ ಟೂಲ್ಸ್) ಕಂಪನಿಯ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂಸ್ಥೆಯ ಉನ್ನತಾಧಿಕಾರಿಗಳ ಸಭೆ ನಡೆಸಿ ಎಚ್‌ಎಂಟಿ ಪುನರುತ್ಥಾನದ ಬಗ್ಗೆ ವಿವರವಾಗಿ ಚರ್ಚಿಸಿದರು.
ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ ಸೇರಿ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಸಚಿವರು; ಕಂಪನಿ ಕಾರ್ಯ ಚಟುವಟಿಕೆ ಬಗ್ಗೆ ಪ್ರಾತ್ಯಕ್ಷಿಕೆ ವೀಕ್ಷಿಸಿ ಸಮಗ್ರ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಎಚ್‌ಎಂಟಿ ವಹೀವಾಟು, ನಿವ್ವಳ ಲಾಭ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವ ಕುಮಾರಸ್ವಾಮಿ ಅವರು; ಕಂಪನಿಯ ಆರ್ಥಿಕತೆ, ಉತ್ಪಾದನೆ, ಇನ್ನಿತರೆ ಸ್ಥಿತಿಗತಿಗಳ ಬಗ್ಗೆ ಸಚಿವರು ಅಧಿಕಾರಿಗಳ ಜತೆ ಚರ್ಚಿಸಿದರು.
ಎಚ್‌ಎಂಟಿ ಇತಿಹಾಸ
ಎಂಭತ್ತರ ದಶಕದಲ್ಲಿ 'ದೇಶದ ಸಮಯ ಪಾಲಕ' ಎಂದೇ ಕರೆಯಲ್ಪಡುತ್ತಿದ್ದ ಎಚ್ಎಂಟಿ ಕಂಪೆನಿ ಒಡೆತನದ ಜಮೀನನ್ನು ಕರ್ನಾಟಕ ಸರಕಾರ ಇಸ್ರೋಗೆ ೨೦೧೮ರಲ್ಲಿ ಹಸ್ತಾಂತರಿಸಿತ್ತು. ಆ ಮೂಲಕ ಎಚ್ಎಂಟಿ ಸಂಸ್ಥೆಯ ಕೊನೆ ದಿನಗಳಿಗೆ ನಾಂದಿ ಹಾಡಲಾಗಿತ್ತು.
ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಯ ಪಕ್ಕದ ಸುಮಾರು 120 ಎಕರೆ ಜಮೀನಿನಲ್ಲಿ ಹರಡಿಕೊಂಡಿದ್ದ ಎಚ್ ಎಂ ಟಿ ಕಂಪೆನಿಯನ್ನು ಮುಚ್ಚುವ ನಿರ್ಧಾರಕ್ಕೆ ಎನ್‌ಡಿಎ ಸರಕಾರ ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು 'ಮೇಕ್ ಇನ್ ಇಂಡಿಯಾ' ಬಗ್ಗೆ ಮುತುವರ್ಜಿ ವಹಿಸಿದ್ದರೂ ಪಕ್ಕಾ ಭಾರತೀಯ ಸಂಸ್ಥೆ ಎಚ್‌ಎಂಟಿಯ ಅಸೆ ಕಮರಿಹೋಗುತ್ತಿತ್ತು. 2016ರಲ್ಲೇ ಎಚ್ಎಂಟಿ ಮತ್ತು ಎಚ್ಎಂಟಿ ಬೇರಿಂಗ್ಸ್ ಸಂಸ್ಥೆಯನ್ನು ಮುಚ್ಚುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿತ್ತು. ಕೆಂದ್ರದ ಬಿಜೆಪಿ ಸರ್ಕಾರದ ನಿರ್ಧಾರದ ಬಳಿಕ ಸಂಸ್ಥೆಯ ಒಡೆತನದಲ್ಲಿದ್ದ 109.32 ಎಕರೆ ಜಮೀನನ್ನು ಆಗಿನ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್, ಇಸ್ರೋ ಸಂಸ್ಥೆಗೆ ಹಸ್ತಾಂತರಿಸಿದ್ದರು. . 2016ರಲ್ಲೇ ಎಚ್ಎಂಟಿ ಮತ್ತು ಎಚ್ಎಂಟಿ ಬೇರಿಂಗ್ಸ್ ಸಂಸ್ಥೆಯನ್ನು ಮುಚ್ಚುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿತ್ತು.
ಶ್ರೀನಗರ, ಬೆಂಗಳೂರು ಮತ್ತು ತುಮಕೂರು, ರಾಣಿಭಾಗ್ ಹೀಗೆ ನಾಲ್ಕು ಕಡೆ ಎಚ್ಎಂಟಿ ಕೈಗಡಿಯಾರ ಘಟಕಗಳು ಕೆಲಸ ನಿರ್ವಹಿಸುತ್ತಿದ್ದವು. ಇವುಗಳ ಪೈಕಿ ತುಮಕೂರಿನ ಎಚ್ಎಂಟಿ. ಕಾರ್ಖಾನೆ ನಾಲ್ಕನೆಯ ಘಟಕವಾಗಿ 1978ರಲ್ಲಿ ಸ್ಥಾಪನೆಯಾಗಿ, ಅತ್ಯಂತ ಸಕ್ರಿಯವಾಗಿದ್ದ ಘಟಕ ಎಂದೇ ಹೆಸರಾಗಿತ್ತು. ವರ್ಷಕ್ಕೆ ಸುಮಾರು 20 ಲಕ್ಷ ವಾಚು ತಯಾರಿಸುವ ಸಾಮರ್ಥ್ಯ ಹೊಂದಿದ್ದ ತುಮಕೂರು ಘಟಕ, 2,200 ಕಾರ್ಮಿಕರನ್ನು ಹೊಂದಿತ್ತು. 10 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಕಾಂಟ್ರ್ಯಾಕ್ಟ್ ಮೂಲಕ ಉದ್ಯೋಗ ಒದಗಿಸಿದ್ದ ಹಿರಿಮೆ ಇದರದ್ದಾಗಿತ್ತು.
ಕುಮಾರಸ್ವಾಮಿ ಸೂಚನೆ
ಒಂದು ಕಾಲದಲ್ಲಿ ವೈಭವಯುತವಾಗಿ ಮೆರೆದಿದ್ದ ಕಂಪನಿ ಇವತ್ತು ದುಸ್ಥಿತಿಗೆ ಬಂದಿದೆ. ಕಂಪನಿಯನ್ನು ಮತ್ತಷ್ಟು ಸದೃಢ ಮಾಡಿ. ಅದಕ್ಕೆ ಅಗತ್ಯವಾದ ಉಪ ಕ್ರಮ ಕೈಗೊಳ್ಳಿ. ಅದಕ್ಕೆ ಅಗತ್ಯವಾದ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿ ಎಂದು ಎಚ್‌ಎಂಟಿ ಅಧ್ಯಕ್ಷ ರಾಜೇಶ್ ಕೊಹ್ಲಿ ಅವರಿಗೆ ಸಚಿವರು ಸೂಚಿಸಿದ್ದಾರೆ.