ಕುಸುಮ್-ಸಿ ಯೋಜನೆ | 545 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಗುರಿ- ಸಚಿವ ಕೆ.ಜೆ.ಜಾರ್ಜ್ ಭರವಸೆ
ಕುಸುಮ್- ಸಿ ಯೋಜನೆಯಡಿ 93 ಸ್ಥಳಗಳಲ್ಲಿ 545 ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಘಟಕಕ್ಕೆ ಚಾಲನೆ ಸಿಗಲಿದ್ದು, ಇದರಿಂದ ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸಲು ಹೆಚ್ಚಿನ ಅನುಕೂಲವಾಗಲಿದೆ.;
ಕೃಷಿ ಫೀಡರ್ ಸೌರೀಕರಣಗೊಳಿಸಿ ಪಂಪ್ ಸೆಟ್‌ಗಳಿಗೆ ಹಗಲು ವಿದ್ಯುತ್ ಪೂರೈಕೆ ಮಾಡುವ ಕುಸುಮ್-ಸಿ ಯೋಜನೆಯಡಿ ಈಗಾಗಲೇ 200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಇನ್ನು ಕೆಲವೇ ತಿಂಗಳಲ್ಲಿ 545 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಹಾಸನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಅವರು, ಕುಸುಮ್- ಸಿ ಯೋಜನೆಯಡಿ ಈಗಾಗಲೇ ಸುಮಾರು 200 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ 93 ಸ್ಥಳಗಳಲ್ಲಿ 545 ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಘಟಕಗಳು ಚಾಲನೆಗೊಳ್ಳಲಿವೆ. ಇದರಿಂದ ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸಲು ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಕುಸುಮ್-ಸಿ ಯೋಜನೆಯಡಿ ಕೃಷಿ ಪಂಪ್ ಸೆಟ್‌ಗಳ ಫೀಡರ್ ಸೋಲರೈಸೇಷನ್ ಮೂಲಕ 2,400 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ ಹಾಕಿಕೊಂಡಿದೆ. ಇತ್ತೀಚೆಗೆ ಗೌರಿಬಿದನೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಸುಮ್-ಸಿ ಯೋಜನೆಯಡಿ ಸ್ಥಾಪಿಸಿರುವ ಸೋಲಾರ್ ವಿದ್ಯುತ್ ಘಟಕವನ್ನು ಉದ್ಘಾಟನೆ ಮಾಡಿದ್ದಾರೆ. ಫೀಡರ್ ಸೋಲರೈಸೇಷನ್ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ. ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
ಕುಸುಮ್-ಸಿ ಯೋಜನೆಯಡಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 4 ಎಕರೆ ಭೂಮಿ ಅಗತ್ಯವಿದೆ. ಸರ್ಕಾರಿ ಭೂಮಿ ಲಭ್ಯವಿದ್ದರೆ ಅದನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಆದರೆ, ಆ ಭೂಮಿಗೆ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಅನ್ನು ಖಾಸಗಿ ವಿದ್ಯುತ್ ಉತ್ಪಾದಕರು ಪಾವತಿಸಬೇಕು. ಆ ಮೊತ್ತವನ್ನು ಜಿಲ್ಲಾಧಿಕಾರಿಗಳ ಬಳಿ ಇಟ್ಟು ಉಪ ಕೇಂದ್ರ ಇರುವ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಖಾಸಗಿ ಭೂಮಿಯಾಗಿದ್ದರೆ, ವಿದ್ಯುತ್ ಉತ್ಪಾದನೆ ಗುತ್ತಿಗೆ ಪಡೆದ ಡೆವಲಪರ್‌ಗಳು ಗುತ್ತಿಗೆಗೆ ತೆಗೆದುಕೊಂಡು, ಭೂಮಾಲೀಕರಿಗೆ ಎಕರೆಗೆ ಕನಿಷ್ಠ 25 ಸಾವಿರ ರೂಪಾಯಿ ಪರಿಹಾರ ನೀಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಇದ್ದ 4 ಲಕ್ಷ ಅಕ್ರಮ ಪಂಪ್ ಸೆಟ್ ಗಳ ಪೈಕಿ 3 ಲಕ್ಷ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ. ಫೀಡರ್‌ಗಳಿಂದ 500 ಮೀಟರ್ ಒಳಗಿನ ಪಂಪ್‌ಸೆಟ್‌ಗಳಿಗೆ ಇಲಾಖೆಯೇ ಟ್ರಾನ್ಸ್‌ಫಾರ್ಮರ್ ಒದಗಿಸಲಿದೆ. 500 ಮೀಟರ್‌ನಿಂದ ಹೊರಗಿನ ಪಂಪ್‌ಸೆಟ್‌ಗಳಿಗೆ ಕುಸುಮ್-ಬಿ ಯೋಜನೆಯಡಿ ಸೋಲಾರ್ ಪಂಪ್‌ಸೆಟ್‌ಗಳನ್ನು ಒದಗಿಸಲಾಗುತ್ತದೆ. ಇಲಾಖೆ ಅಧಿಕಾರಿಗಳು ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಅಲ್ಲದೇ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಜನಪ್ರತಿನಿಧಿಗಳ ಬಳಿಗೆ ತೆರಳಿ ಅವರಿಂದ ಸಲಹೆಗಳನ್ನು ಪಡೆದು ಕೆಲಸ ಮಾಡಬೇಕು. ಅದನ್ನು ಬಿಟ್ಟು ಇಲಾಖೆಗೆ ಕೆಟ್ಟ ಹೆಸರು ಬರುವಂತೆ ಮಾಡಬೇಡಬಾರದು. ಆಸಕ್ತಿ ಇಲ್ಲದೆ ಕೆಲಸ ಮಾಡುವ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡುವ ಮೂಲಕ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು, ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯಡಿ ಶೇ.99.86 ಪ್ರಗತಿ ಸಾಧಿಸಿದ್ದು, ಸರ್ಕಾರದಿಂದ ಈವರೆಗೂ 375.09 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಗಂಗಾಕಲ್ಯಾಣ ಯೋಜನೆಯಲ್ಲಿ 1225 ಅರ್ಜಿಗಳು ಬಾಕಿ ಉಳಿದಿದೆ. ಜಿಲ್ಲೆಯಲ್ಲಿ 149031 ಐಪಿ ಸ್ಥಾವರಗಳಿದ್ದು, ವಿದ್ಯುತ್ ಮೂಲಸೌಕರ್ಯ ಕಲ್ಪಿಸಲು ಬಾಕಿ ಇರುವ 3658 ಕಾಮಗಾರಿಗಳನ್ನು 3 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಅಲ್ಲದೇ, ಕುಸುಮ್-ಬಿ ಯೋಜನೆಗೆ ಹಾಸನ ಜಿಲ್ಲೆಯಲ್ಲಿ ಒಟ್ಟು 1593 ಅರ್ಜಿಗಳ ನೋಂದಣಿಯಾಗಿದೆ. ತಾಲೂಕುವಾರು 38 ವಿದ್ಯುತ್ ವಿತರಣಾ ಕೇಂದ್ರಗಳಿದ್ದು, ಸೋಲಾರ್ ಮೂಲಕ 203.84 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಜಿಲ್ಲೆಯಲ್ಲಿ ಮಳೆಯಿಂದಾಗಿ 1500ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, 18 ಟ್ರಾನ್ಸ್‌ಫಾರ್ಮರ್‌ಗಳು ಹಾಗೂ 33 ಕಿ.ಮೀ ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿದ್ದು, ಒಟ್ಟು 2.5 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವಿವರಿಸಿದ್ದಾರೆ.