ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ | ಮತ್ತೊಬ್ಬ ಆರೋಪಿ ಎನ್‌ಐಎ ವಶಕ್ಕೆ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡು, ವಿದೇಶಕ್ಕೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.;
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡು, ವಿದೇಶಕ್ಕೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ (ಜೂ.4) ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ.
ರಿಯಾಜ್ ಯೂಸುಫ್ ಹಾರಳ್ಳಿ ಅಲಿಸ್ ರಿಯಾಜ್ ಬಂಧಿತ ಆರೋಪಿಯಾಗಿದ್ದು, ರಿಯಾಜ್ ಬಂಧನದಿಂದ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇದುವರೆಗೆ ಬಂಧಿತ ಆರೋಪಿಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಆರೋಪಿ ಮುಂಬೈ ವಿಮಾನ ನಿಲ್ದಾಣದ ಮೂಲಕ ಪರಾರಿಯಾಗುವ ಯತ್ನದಲ್ಲಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಇದಕ್ಕೂ ಮೊದಲು ವಿದೇಶದಲ್ಲೇ ಇದ್ದ ರಿಯಾಜ್, ನಾಪತ್ತೆಯಾಗಿರುವ ಅಬ್ದುಲ್ ರೆಹಮಾನ್ ಸೂಚನೆ ಪ್ರಕಾರ ಭಾರತಕ್ಕೆ ಮರಳಿದ್ದ. ಇತ್ತೀಚೆಗೆ ಬಂಧಿತನಾಗಿದ್ದ ಮುಸ್ತಫಾ ಪೈಚಾರ್ ಎಂಬ ಆರೋಪಿಗೆ ಸಕಲೇಶಪುರದಲ್ಲಿ ವಾಸ್ತವ್ಯ ಹೂಡಲು ಸಹಕರಿಸಿದ್ದ ಎನ್ನಲಾಗಿದೆ.
ಏನಿದು ಘಟನೆ?
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26 ರಂದು ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಎಂಬಾತನನ್ನು, ಆತನ ಕೋಳಿ ಅಂಗಡಿ ಬಳಿಯೇ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಗಾಯಗೊಂಡಿದ್ದ ಪ್ರವೀಣ್ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇದಾದ ಬಳಿಕ ದುಷ್ಕರ್ಮಿಗಳು ವಿವಿಧ ಕಡೆಗಳಿಗೆ ಪರಾರಿಯಾಗಿದ್ದರು.
ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಮಾಜಿ ಕಾರ್ಯದರ್ಶಿ ಮತ್ತು ಸೇವಾ ತಂಡದ ಮುಖ್ಯಸ್ಥ ಪೈಚಾರ್ ಪ್ರಕರಣದ ಮುಖ್ಯ ಸಂಚುಕೋರನಾಗಿದ್ದ. ಈತ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿ, ಆರೋಪಿಗಳ ತಂಡವನ್ನು ಒಟ್ಟುಗೂಡಿಸಿ, ಅಪರಾಧದ ಬಳಿಕ ಇತರರೊಂದಿಗೆ ಪರಾರಿಯಾಗಿದ್ದ. ಆದರೆ ಕಳೆದ ಮೇ 10 ರಂದು ಹಾಸನ ಜಿಲ್ಲೆಯ ಸಕಲೇಶಪುರದ ಆನೆಮಹಲ್ ಬಳಿ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಮುಸ್ತಾಫ ಪೈಚಾರ್ (43) ನನ್ನು ಅರೆಸ್ಟ್ ಮಾಡಿದ್ದರು.