
ಯುಎಇಯ ಹೊಸ ಗೋಲ್ಡನ್ ವೀಸಾ ಭಾರತೀಯರಿಗೂ ಸಿಗುತ್ತದೆಯೇ?
ಈ ಹೊಸ ಗೋಲ್ಡನ್ ವೀಸಾ ಏನಿದು? ಯಾರು ಅರ್ಜಿ ಸಲ್ಲಿಸಬಹುದು? ಇದರಿಂದಾಗುವ ಲಾಭಗಳೇನು? ಮತ್ತು ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎಂಬುವದ ಸಂಪೂರ್ಣ ವಿವರ ಇಲ್ಲಿದೆ.
ಸಾಗರೋತ್ತರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ನುರಿತ ವೃತ್ತಿಪರರಿಗೆ ಯುಎಇ ಹೊಸ ಬಾಗಿಲು ತೆರೆದಿದೆ. ಇತ್ತೀಚೆಗೆ, ಯುಎಇ ಒಂದು ಹೊಸ ಮಾದರಿಯ ಗೋಲ್ಡನ್ ವೀಸಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದು ಹಿಂದೆ ಇದ್ದಂತೆ ದೊಡ್ಡ ಪ್ರಮಾಣದ ಆಸ್ತಿ ಅಥವಾ ವ್ಯಾಪಾರ ಹೂಡಿಕೆಗಳ ಅಗತ್ಯವಿಲ್ಲದೆ, ನಾಮನಿರ್ದೇಶನದ ಆಧಾರದ ಮೇಲೆ ವೀಸಾ ನೀಡುತ್ತದೆ. ಯುಎಇಯಲ್ಲಿ ಅತಿದೊಡ್ಡ ವಲಸಿಗ ಸಮುದಾಯಗಳಲ್ಲಿ ಒಂದಾದ ಭಾರತೀಯರಿಗೆ, ಇದು ಸ್ವಾಗತಾರ್ಹ ಬೆಳವಣಿಗೆ.
ಈ ಹೊಸ ಗೋಲ್ಡನ್ ವೀಸಾ ಏನಿದು? ಯಾರು ಅರ್ಜಿ ಸಲ್ಲಿಸಬಹುದು? ಇದರಿಂದಾಗುವ ಲಾಭಗಳೇನು? ಮತ್ತು ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎಂಬುವದ ಸಂಪೂರ್ಣ ವಿವರ ಇಲ್ಲಿದೆ.
ಯುಎಇಯ ಹೊಸ ಗೋಲ್ಡನ್ ವೀಸಾ ಕಾರ್ಯಕ್ರಮ ಎಂದರೇನು?
ಯುಎಇಯ ಈ ಪರಿಷ್ಕೃತ ಗೋಲ್ಡನ್ ವೀಸಾ ಕಾರ್ಯಕ್ರಮವು ಈಗ ನುರಿತ ವೃತ್ತಿಪರರ ವ್ಯಾಪ್ತಿಯನ್ನು ವಿಸ್ತರಿಸಿದೆ. ಇದು ವಿಜ್ಞಾನಿಗಳು, ಅಧಿಕಾರಿಗಳು, ಶಾಲಾ ಶಿಕ್ಷಕರು, ಪ್ರಾಂಶುಪಾಲರು, ವಿಶ್ವವಿದ್ಯಾನಿಲಯದ ಅಧ್ಯಾಪಕರು, ಮತ್ತು 15 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ನರ್ಸ್‌ಗಳು ಹಾಗೂ ಇತರೆ ಮುಂಚೂಣಿ ಕಾರ್ಯಕರ್ತರಿಗೆ ರತ್ನಗಂಬಳಿ ಹಾಸುತ್ತದೆ.
ಈ ಕಾರ್ಯಕ್ರಮದ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ ಕಂಟೆಂಟ್ ಕ್ರಿಯೇಟರ್‌ಗಳು, ಯೂಟ್ಯೂಬರ್‌ಗಳು, ಪಾಡ್‌ಕಾಸ್ಟರ್‌ಗಳು ಮತ್ತು 25 ವರ್ಷ ಮೇಲ್ಪಟ್ಟ ಮಾನ್ಯತೆ ಪಡೆದ ಇ-ಸ್ಪೋರ್ಟ್ಸ್ ವೃತ್ತಿಪರರನ್ನೂ ಇದರಲ್ಲಿ ಸೇರಿಸಲಾಗಿದೆ. ಐಷಾರಾಮಿ ಯಾಚ್ ಮಾಲೀಕರು ಮತ್ತು ಕಡಲ ವಲಯದ ಅಧಿಕಾರಿಗಳು ಸಹ ಈ ವೀಸಾಗೆ ಅರ್ಹರಾಗಿದ್ದಾರೆ.
ಹಿಂದಿನ ಗೋಲ್ಡನ್ ವೀಸಾ ಯೋಜನೆಯು ಮುಖ್ಯವಾಗಿ ಉದ್ಯಮಿಗಳು, ಉನ್ನತ ವಿದ್ಯಾರ್ಥಿಗಳು, ಹೂಡಿಕೆದಾರರು ಮತ್ತು ಅತಿ ಹೆಚ್ಚು ನುರಿತ ವೃತ್ತಿಪರರಿಗೆ ಮೀಸಲಾಗಿತ್ತು. ಅದಕ್ಕೆ ಹೋಲಿಸಿದರೆ, ಇದು ಗಮನಾರ್ಹ ಬದಲಾವಣೆ ತಂದಿದೆ.
ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ ಹೇಗೆ?
ಹೊಸ ನಾಮನಿರ್ದೇಶನ ಆಧಾರಿತ ನೀತಿಯ ಅಡಿಯಲ್ಲಿ, ಭಾರತೀಯರು AED 100,000 (ಸುಮಾರು ₹23.3 ಲಕ್ಷ) ಶುಲ್ಕ ಪಾವತಿಸುವ ಮೂಲಕ ಯುಎಇಯ ಪ್ರತಿಷ್ಠಿತ ಗೋಲ್ಡನ್ ವೀಸಾವನ್ನು ಪಡೆಯಬಹುದು ಎಂದು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವವರು ಫಸ್ಟ್ಪೋಸ್ಟ್ಗೆ ತಿಳಿಸಿದ್ದಾರೆ.
ಈ ಯೋಜನೆಯ ಮೊದಲ ಹಂತದಲ್ಲಿ, ಭಾರತ ಮತ್ತು ಬಾಂಗ್ಲಾದೇಶವನ್ನು ಆಯ್ಕೆ ಮಾಡಲಾಗಿದೆ. ರಾಯದ್ ಗ್ರೂಪ್ ಎಂಬ ಸಲಹಾ ಸಂಸ್ಥೆಗೆ ಭಾರತದಲ್ಲಿ ನಾಮನಿರ್ದೇಶನ ಆಧಾರಿತ ಅರ್ಜಿ ಪ್ರಕ್ರಿಯೆಯನ್ನು ನಿರ್ವಹಿಸುವ ಜವಾಬ್ದಾರಿ ವಹಿಸಲಾಗಿದೆ. ರಾಯದ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ರಾಯದ್ ಕಮಲ್ ಅಯೂಬ್, ಇದು ಭಾರತೀಯರಿಗೆ ಯುಎಇಯಲ್ಲಿ ದೀರ್ಘಕಾಲೀನ ವಾಸ ಖಾತರಿಪಡಿಸಲು "ಸುವರ್ಣಾವಕಾಶ" ಎಂದು ಬಣ್ಣಿಸಿದ್ದಾರೆ. ಅವರ ಅಂದಾಜಿನ ಪ್ರಕಾರ, ಮುಂದಿನ ಮೂರು ತಿಂಗಳಲ್ಲಿ 5,000 ಕ್ಕೂ ಹೆಚ್ಚು ಭಾರತೀಯರು ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಹೊಸ ಗೋಲ್ಡನ್ ವೀಸಾ ಕಾರ್ಯಕ್ರಮಕ್ಕೆ ಅರ್ಹ ಮತ್ತು ವಿಶ್ವಾಸಾರ್ಹ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ಯುಎಇ ಖಚಿತಪಡಿಸಿಕೊಳ್ಳಲು ಸುಸಂಘಟಿತ ಪ್ರಕ್ರಿಯೆಯನ್ನು ಹೊಂದಿದೆ:
1. ಹಿನ್ನೆಲೆ ಪರಿಶೀಲನೆ: “ಯಾವುದೇ ಅರ್ಜಿದಾರರು ಈ ಗೋಲ್ಡನ್ ವೀಸಾಕ್ಕೆ ಅರ್ಜಿ ಸಲ್ಲಿಸಿದಾಗ, ನಾವು ಮೊದಲು ಅವರ ಹಿನ್ನೆಲೆಯನ್ನು ಪರಿಶೀಲಿಸುತ್ತೇವೆ. ಇದರಲ್ಲಿ ಹಣ ವರ್ಗಾವಣೆ ವಿರೋಧಿ (anti-money laundering) ಮತ್ತು ಕ್ರಿಮಿನಲ್ ದಾಖಲೆಗಳ ಪರಿಶೀಲನೆಗಳು, ಹಾಗೆಯೇ ಅವರ ಸಾಮಾಜಿಕ ಮಾಧ್ಯಮದ ಪರಿಶೀಲನೆ ಕೂಡ ಸೇರಿರುತ್ತದೆ” ಎಂದು ರಾಯದ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ರಾಯದ್ ಕಮಲ್ ಅಯೂಬ್ ಪಿಟಿಐಗೆ ತಿಳಿಸಿದ್ದಾರೆ.
2. ಆರ್ಥಿಕ/ಸಾಮಾಜಿಕ ಕೊಡುಗೆಯ ಮೌಲ್ಯಮಾಪನ: ಮೂಲ ಹಿನ್ನೆಲೆ ಪರಿಶೀಲನೆಗಳಲ್ಲದೆ, ಅರ್ಜಿದಾರರು ಯುಎಇಯ ಆರ್ಥಿಕತೆ ಅಥವಾ ಸಮಾಜಕ್ಕೆ ಹೇಗೆ ಕೊಡುಗೆ ನೀಡಬಹುದು ಎಂಬುದನ್ನೂ ಮೌಲ್ಯಮಾಪನ ಮಾಡಲಾಗುತ್ತದೆ. ಇದು ಸಂಸ್ಕೃತಿ, ಹಣಕಾಸು, ವ್ಯಾಪಾರ, ವಿಜ್ಞಾನ, ಸ್ಟಾರ್ಟ್‌ಅಪ್‌ಗಳು ಮತ್ತು ವೃತ್ತಿಪರ ಸೇವೆಗಳಂತಹ ಕ್ಷೇತ್ರಗಳನ್ನು ಒಳಗೊಂಡಿದೆ.
3. ಅಂತಿಮ ನಿರ್ಧಾರ: ಈ ಎಲ್ಲಾ ಪರಿಶೀಲನೆಗಳು ಪೂರ್ಣಗೊಂಡ ನಂತರ, ರಾಯದ್ ಗ್ರೂಪ್ ಅರ್ಜಿಯನ್ನು ಯುಎಇ ಸರ್ಕಾರಕ್ಕೆ ರವಾನಿಸುತ್ತದೆ, ಅದು ನಾಮನಿರ್ದೇಶನ ಆಧಾರಿತ ಗೋಲ್ಡನ್ ವೀಸಾಕ್ಕೆ ಅರ್ಜಿದಾರರು ಅರ್ಹರೇ ಎಂಬುದರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.
4. ಅರ್ಜಿ ಸಲ್ಲಿಸುವ ಸುಲಭ ವಿಧಾನ: ಅರ್ಜಿದಾರರು ಈ ಪ್ರಕ್ರಿಯೆಯನ್ನು ಪ್ರಾರಂಭಿಸಲು ದುಬೈಗೆ ಪ್ರಯಾಣಿಸುವ ಅಗತ್ಯವಿಲ್ಲ. ತಮ್ಮ ತವರೂರಿನಿಂದಲೇ ಪೂರ್ವ-ಅನುಮೋದನೆ ಪಡೆಯಬಹುದು. “ಅರ್ಜಿಗಳನ್ನು ಭಾರತ ಮತ್ತು ಬಾಂಗ್ಲಾದೇಶದಲ್ಲಿರುವ ಒನ್ ವಾಸ್ಕೊ (One Vasco) (ವೀಸಾ ಸಹಾಯಕ ಸೇವಾ ಕಂಪನಿ) ಕೇಂದ್ರಗಳು, ನಮ್ಮ ನೋಂದಾಯಿತ ಕಚೇರಿಗಳು, ನಮ್ಮ ಆನ್‌ಲೈನ್ ಪೋರ್ಟಲ್ ಅಥವಾ ನಮ್ಮ ಮೀಸಲಾದ ಕಾಲ್ ಸೆಂಟರ್ ಮೂಲಕ ಸಲ್ಲಿಸಬಹುದು” ಎಂದು ಕಮಲ್ ವಿವರಿಸಿದ್ದಾರೆ.
ಕುಟುಂಬ ಸದಸ್ಯರಿಗೆ ಅರ್ಹತೆ ಇದೆಯೇ?
ಹೌದು, ಕುಟುಂಬ ಸದಸ್ಯರನ್ನೂ ಈ ವೀಸಾ ಒಳಗೊಂಡಿದೆ!
ಕಮಲ್ ಅವರ ಪ್ರಕಾರ, ನಾಮನಿರ್ದೇಶನ ಆಧಾರಿತ ಗೋಲ್ಡನ್ ವೀಸಾ ಪಡೆಯುವವರು ತಮ್ಮ ಕುಟುಂಬ ಸದಸ್ಯರನ್ನು ಯುಎಇಗೆ ಕರೆತರಲು ಅನುಮತಿಸಲಾಗುತ್ತದೆ. ವಾಸ್ತವವಾಗಿ, ವೀಸಾ ಹೊಂದಿರುವವರಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮತ್ತು ದೇಶದಲ್ಲಿ ವ್ಯಾಪಾರ ಅಥವಾ ವೃತ್ತಿಪರ ಚಟುವಟಿಕೆಗಳಲ್ಲಿ ಭಾಗವಹಿಸುವ ಆಯ್ಕೆಯೂ ಇದೆ. ಆಸ್ತಿ ಆಧಾರಿತ ವೀಸಾಗಳಂತೆ, ಆಸ್ತಿ ಮಾರಾಟವಾದಾಗ ರದ್ದುಗೊಳ್ಳುವ ಬದಲು, ನಾಮನಿರ್ದೇಶನ ಆಧಾರಿತ ಗೋಲ್ಡನ್ ವೀಸಾ ಶಾಶ್ವತವಾಗಿತ್ತದೆ.
ಈ ಉಪಕ್ರಮವು ಭಾರತದೊಂದಿಗಿನ ಸಂಬಂಧಗಳನ್ನು ಬಲಪಡಿಸಲು ಯುಎಇನ ಉಪಕ್ರಮ ಎನ್ನಲಾಗಿದೆ. ಯಾಕೆಂದರೆ, ಪ್ರಾಯೋಗಿಕ ಯೋಜನೆಗೆ ಮೊದಲ ದೇಶವಾಗಿ ಆಯ್ಕೆ ಮಾಡಲಾಗಿದೆ. 2022ರ ರ ಮೇನಲ್ಲಿ ಜಾರಿಗೆ ಬಂದ ಎರಡೂ ರಾಷ್ಟ್ರಗಳ ನಡುವೆ ಜಾರಿಗೆ ಬಂದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ದ ನಂತರ ಬಂದಿದೆ. ಈ ವೀಸಾ ವಿಶಾಲವಾದ CEPA-ಸಂಬಂಧಿತ ತಂತ್ರದ ಭಾಗವಾಗಿದ್ದು, ಪಾಲುದಾರ ದೇಶಗಳೊಂದಿಗೆ ಸಹಯೋಗ ಸುಧಾರಿಸುವ ಗುರಿಯನ್ನು ಹೊಂದಿದೆ. ಭಾರತ ಮತ್ತು ಬಾಂಗ್ಲಾದೇಶ ಮೊದಲ ಹಂತದ ಭಾಗವಾಗಿದ್ದರೆ, ಚೀನಾ ಸೇರಿದಂತೆ ಇತರ CEPA ಸದಸ್ಯರನ್ನು ಭವಿಷ್ಯದಲ್ಲಿ ಈ ಕಾರ್ಯಕ್ರಮಕ್ಕೆ ತರಬಹುದು.