Donald Trump: ಟ್ರಂಪ್ 5.30 ಲಕ್ಷ ವಲಸಿಗರ ತಾತ್ಕಾಲಿಕ ಸ್ಥಾನಮಾನ ರದ್ದು; ಸಾಮೂಹಿಕ ಗಡೀಪಾರಿಗೆ ಸಿದ್ಧತೆ

ಟ್ರಂಪ್ ಅವರ ಈ ಆದೇಶವು ಅಕ್ಟೋಬರ್ 2022 ರಿಂದ ಅಮೆರಿಕಕ್ಕೆ ಬಂದಿರುವ ಈ ನಾಲ್ಕು ದೇಶಗಳ ಸುಮಾರು 5,32,000 ಜನರಿಗೆ ಅನ್ವಯಿಸುತ್ತದೆ.;

Update: 2025-03-22 08:06 GMT

ಡೊನಾಲ್ಡ್ ಟ್ರಂಪ್​.

ಅಕ್ರಮ ವಲಸಿಗರ ವಿರುದ್ಧ ಕ್ರಮಗಳನ್ನು ಮುಂದುವರಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಲಕ್ಷಾಂತರ ಕ್ಯೂಬನ್ನರು, ಹೈಟಿಯನ್ನರು, ನಿಕರಾಗುವನ್ನರು ಮತ್ತು ವೆನಿಜುವೆಲಾ ಜನರಿಗೆ ಇದ್ದ ಕಾನೂನು ರಕ್ಷಣೆ ವಾಪಸ್ ಪಡೆದುಕೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಸುಮಾರು 5.30 ಲಕ್ಷ ವಲಸಿಗರನ್ನು ಒಂದು ತಿಂಗಳಲ್ಲಿ ಗಡೀಪಾರು (Deportation) ಮಾಡುವ ಸುಳಿವು ನೀಡಿದ್ದಾರೆ.

ಟ್ರಂಪ್ ಅವರ ಈ ಆದೇಶವು ಅಕ್ಟೋಬರ್ 2022 ರಿಂದ ಅಮೆರಿಕಕ್ಕೆ ಬಂದಿರುವ ಈ ನಾಲ್ಕು ದೇಶಗಳ ಸುಮಾರು 5,32,000 ಜನರಿಗೆ ಅನ್ವಯಿಸುತ್ತದೆ. ಇವರೆಲ್ಲರೂ ಆರ್ಥಿಕ ಪ್ರಾಯೋಜಕರ (Financial Sponsors) ಮೂಲಕ ಅಮೆರಿಕಕ್ಕೆ ಬಂದಿದ್ದು, ಅಮೆರಿಕದಲ್ಲಿ 2 ವರ್ಷಗಳ ಕಾಲ ನೆಲೆಸಲು ಮತ್ತು ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈಗ ಫೆಡರಲ್ ರಿಜಿಸ್ಟರ್ನಲ್ಲಿ ನೋಟಿಸ್ ಪ್ರಕಟವಾದ 30 ದಿನಗಳ ನಂತರ ಅಥವಾ ಏಪ್ರಿಲ್ 24ರೊಳಗಾಗಿ ಇವರೆಲ್ಲರೂ ತಮ್ಮ ಕಾನೂನು ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಗೃಹ ಭದ್ರತೆ ಸಚಿವರಾದ ಕ್ರಿಸ್ಟಿ ನೋಮ್ ಹೇಳಿದ್ದಾರೆ.

ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಅಡಿಯಲ್ಲಿ CHNV ಎಂದು ಕರೆಯಲ್ಪಡುವ ಎರಡು ವರ್ಷಗಳ "ಪೆರೋಲ್" ಕಾರ್ಯಕ್ರಮವನ್ನು ಪರಿಚಯಿಸಲಾಗಿತ್ತು. ಇದು ವಲಸಿಗರಿಗೆ ಅಮೆರಿಕದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಕೆಲಸದ ಪರವಾನಗಿಗಳನ್ನು ಪಡೆಯಲು ಅನುವು ಮಾಡಿಕೊಟ್ಟಿತ್ತು. ಈಗ ಇದನ್ನು ಸರ್ಕಾರ ಕಡಿತಗೊಳಿಸುತ್ತಿದೆ. ಯುದ್ಧ ಅಥವಾ ರಾಜಕೀಯ ಅಸ್ಥಿರತೆ ಇರುವ ದೇಶಗಳ ಜನರಿಗೆ ಅಮೆರಿಕ ಪ್ರವೇಶಿಸಲು ಮತ್ತು ತಾತ್ಕಾಲಿಕವಾಗಿ ವಾಸಿಸಲು ಅವಕಾಶ ನೀಡಲೆಂದು ಬೈಡನ್ ಅವರು ಈ ಮಾನವೀಯ ಪೆರೋಲ್ ವ್ಯವಸ್ಥೆ ಜಾರಿ ಮಾಡಿದ್ದರು. ಆದರೆ, ಇದು "ವ್ಯಾಪಕವಾಗಿ ದುರುಪಯೋಗ" ಆಗುತ್ತಿದೆ ಎಂದು ಆರೋಪಿಸಿರುವ ಟ್ರಂಪ್, ಅದನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ.

ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲೇ ಟ್ರಂಪ್ ಅವರು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ಷಾಂತರ ಜನರನ್ನು ಗಡೀಪಾರು ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಜೊತೆಗೆ ವಲಸಿಗರಿಗೆ ಅಮೆರಿಕ ಪ್ರವೇಶಕ್ಕೆ ಮತ್ತು ವಾಸಕ್ಕೆ ಇದ್ದ ಕಾನೂನು ಮಾರ್ಗಗಳನ್ನೂ ಮುಚ್ಚುವುದಾಗಿ ತಿಳಿಸಿದ್ದರು.

ಏನಿದು 'ಮಾನವೀಯ ಪೆರೋಲ್' ಕಾರ್ಯಕ್ರಮ?

ಈವರೆಗೆ ಮಾನವೀಯ ಆಧಾರದಲ್ಲಿ ನೀಡಲಾಗುತ್ತಿದ್ದ ಪೆರೋಲ್ ಯೋಜನೆಯ ಫಲಾನುಭವಿಗಳು ತಮ್ಮ ಪೆರೋಲ್ ಅವಧಿ ಮುಗಿಯುವವರೆಗೆ ಅಮೆರಿಕದಲ್ಲಿ ಉಳಿಯಲು ಅವಕಾಶವಿತ್ತು. ಆದರೆ ಆಶ್ರಯ ಕೋರಿ, ವೀಸಾಗಳಿಗಾಗಿ ಮತ್ತು ಇತರೆ ಕೋರಿಕೆಗಳನ್ನು ಸಲ್ಲಿಸಿ ಅವರು ಸಲ್ಲಿಸುತ್ತಿದ್ದ ಅರ್ಜಿಗಳ ಪರಿಶೀಲನೆಯನ್ನು ಅಮೆರಿಕದ ಹೊಸ ಸರ್ಕಾರ ಈಗಾಗಲೇ ಸ್ಥಗಿತಗೊಳಿಸಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಈಗಾಗಲೇ ಹಲವರು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ. ಅಮೆರಿಕದ ನಾಗರಿಕರು ಮತ್ತು ವಲಸಿಗರ ಸಂಘಟನೆಗಳು ಮಾನವೀಯ ಪೆರೋಲ್ ಅನ್ನು ಕೊನೆಗೊಳಿಸಿದ್ದಕ್ಕಾಗಿ ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ಹೂಡಿವೆ.

ಬೈಡನ್ ಆಡಳಿತವು ಈ ನಾಲ್ಕು ದೇಶಗಳಿಂದ ಪ್ರತಿ ತಿಂಗಳು ಉದ್ಯೋಗ ಅರ್ಹತೆ ಹೊಂದಿರುವ 30,000 ಜನರಿಗೆ 2 ವರ್ಷಗಳವರೆಗೆ ಅಮೆರಿಕಕ್ಕೆ ಬರಲು ಅವಕಾಶ ನೀಡಿತ್ತು. ಅಕ್ರಮವಾಗಿ ಗಡಿ ದಾಟುವುದನ್ನು ತಡೆಯುವ ಮತ್ತು ಹೊಸ ಕಾನೂನು ಮಾರ್ಗಗಳ ಮೂಲಕ ಅಮೆರಿಕ ಪ್ರವೇಶಿಸಲು ಜನರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೈಡನ್ ಆಡಳಿತವು CHNV ಯೋಜನೆಯನ್ನು ಜಾರಿ ಮಾಡಿತ್ತು.

ಹೊಸ ನೀತಿ ಏನು ಹೇಳುತ್ತದೆ?

ಟ್ರಂಪ್ ಸರ್ಕಾರದ ಅಡಿಯಲ್ಲಿ ರೂಪಿಸಲಾದ ಹೊಸ ನೀತಿಯ ಪ್ರಕಾರ, ಈ ರೀತಿಯಾಗಿ ದೇಶಕ್ಕೆ ಬಂದವರು ಪೆರೋಲ್ ಅವಧಿ ಮುಕ್ತಾಯದ ದಿನಾಂಕದ ಮೊದಲೇ ದೇಶದಿಂದ ನಿರ್ಗಮಿಸಬೇಕು. "ಈ ಪೆರೋಲ್ ತಾತ್ಕಾಲಿಕವಾಗಿದ್ದು, ಇದನ್ನು ಆಧಾರವಾಗಿಟ್ಟುಕೊಂಡು ಯಾವುದೇ ವಲಸೆ ಸ್ಥಾನಮಾನವನ್ನು ಯಾರೂ ಕೋರುವಂತಿಲ್ಲ" ಎಂದು ಸರ್ಕಾರ ಹೇಳಿದೆ.

ಟ್ರಂಪ್ ಸರ್ಕಾರದ ಈ ನಿರ್ಧಾರದ ವಿರುದ್ಧ ಮೊಕದ್ದಮೆ ಹೂಡಿರುವ ಸಂಸ್ಥೆಗಳಲ್ಲಿ ಒಂದಾದ ಜಸ್ಟೀಸ್ ಆಕ್ಷನ್ ಸೆಂಟರ್‌ನ ಸ್ಥಾಪಕಿ ಮತ್ತು ನಿರ್ದೇಶಕಿ ಕರೆನ್ ತುಮ್ಲಿನ್, ಈ ಕ್ರಮವನ್ನು "ನಿರ್ಲಕ್ಷ್ಯ, ಕ್ರೂರ ಮತ್ತು ಪ್ರತಿಕೂಲ ಪರಿಣಾಮ ಬೀರುವಂಥ ನಿರ್ಧಾರ" ಎಂದು ಕರೆದಿದ್ದಾರೆ. ಇದು "ದೇಶಾದ್ಯಂತ ಹಲವು ಕುಟುಂಬಗಳು ಮತ್ತು ಸಮುದಾಯಗಳಲ್ಲಿ ಅನಗತ್ಯ ಗೊಂದಲ ಹಾಗೂ ಆತಂಕವನ್ನು ಸೃಷ್ಟಿ ಮಾಡಲಿದೆ" ಎಂದೂ ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾ ಯುದ್ಧದ ಸಂದರ್ಭದಲ್ಲಿ ಅಮೆರಿಕಕ್ಕೆ ಪಲಾಯನ ಮಾಡಿರುವ ಸುಮಾರು 2,40,000 ಉಕ್ರೇನ್ ಪ್ರಜೆಗಳ ಪೆರೋಲ್ ಸ್ಥಾನಮಾನವನ್ನು ತೆಗೆದುಹಾಕುವುದಾಗಿ ಟ್ರಂಪ್ ಇತ್ತೀಚೆಗೆ ಘೋಷಿಸಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬೈಡನ್ ಸರ್ಕಾರವು ಮಾನವೀಯತೆಯ ಆಧಾರದಲ್ಲಿ ಹಲವು ಉಕ್ರೇನಿಯನ್ನರಿಗೆ ತನ್ನ ನೆಲದಲ್ಲಿ ಆಶ್ರಯ ನೀಡಿತ್ತು.

Tags:    

Similar News