Israel Air strike| ಹಿಜ್ಬುಲ್ಲಾ ಕಮಾಂಡರ್ ಹತ್ಯೆ

1983 ರಲ್ಲಿ ಬೈರೂತಿನ ಅಮೆರಿಕ ರಾಯಭಾರ ಕಚೇರಿ ಮತ್ತು ಮರೈನ್ ಬ್ಯಾರಕ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ನೂರಾರು ಅಮೆರಿಕನ್ನರು ಹತ್ಯೆಯಾಗಿದ್ದರು. ಇಬ್ರಾಹಿಂ ಅಕಿಲ್‌ ಸ್ಪೋಟದಲ್ಲಿ ಪಾಲ್ಗೊಂಡಿದ್ದು,ಆತನ ತಲೆಗೆ ಅಮೆರಿಕ 7 ದಶಲಕ್ಷ ಡಾಲರ್ ಬಹುಮಾನ ಘೋಷಿಸಿತ್ತು.

Update: 2024-09-21 07:02 GMT
ಗಾಜಾ ನಗರದಲ್ಲಿ ಇಸ್ರೇಲಿನ ವೈಮಾನಿಕ ದಾಳಿ ನಂತರ ಕಾಣಿಸಿಕೊಂಡ ಬೆಂಕಿ ಮತ್ತು ಹೊಗೆ

ಬೈರೂತ್‌ನ ಕಟ್ಟಡವೊಂದರ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಹಿರಿಯ ಹಿಜ್ಬುಲ್ಲಾ ಕಮಾಂಡರ್ ಇಬ್ರಾಹಿಂ ಅಕಿಲ್ ಅವರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್‌ ಶುಕ್ರವಾರ (ಸೆಪ್ಟೆಂಬರ್ 20) ಹೇಳಿದೆ. 

ಹಿಜ್ಬುಲ್ಲಾದ ಭದ್ರಕೋಟೆಯಾದ ದಕ್ಷಿಣ ಬೈರೂತಿನ ಬಹುಮಹಡಿ ಕಟ್ಟಡ ವೈಮಾನಿಕ ದಾಳಿಯಿಂದ ನಾಶವಾಗಿದೆ. ಕಟ್ಟಡದಲ್ಲಿ ಹಿರಿಯ ಕಮಾಂಡರ್‌ಗಳ ಸಭೆ ನಡೆಯುತ್ತಿತ್ತು.ಅಕಿಲ್‌ ಸಾವನ್ನು ಹಿಜ್ಬುಲ್ಲಾ ದೃಢಪಡಿಸಿದೆ ಮತ್ತು ಅವನನ್ನು ಮಹಾನ್ ಜಿಹಾದಿ ನಾಯಕ ಎಂದು ಕರೆದಿದೆ. 

ವೈಮಾನಿಕ ದಾಳಿಯಲ್ಲಿ 14 ಮಂದಿ ಸಾವನ್ನಪ್ಪಿದ್ದು, 66 ಮಂದಿ ಗಾಯಗೊಂಡಿದ್ದಾರೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ಹೇಳಿದೆ. 

ಯುಎಸ್ ರಾಯಭಾರ ಕಚೇರಿ ಬಾಂಬ್ ದಾಳಿಯಲ್ಲಿ ಭಾಗಿ: ಬೈರೂತಿನ ಅಮೆರಿಕ ರಾಯಭಾರ ಕಚೇರಿ ಮತ್ತು ಮರೈನ್ ಬ್ಯಾರಕ್‌ ಮೇಲೆ ನಡೆಸಿದ 1983 ರ ಬಾಂಬ್ ಸ್ಫೋಟದಲ್ಲಿ ನೂರಾರು ಅಮೆರಿಕನ್ನರು ಹತ್ಯೆಯಾಗಿದ್ದರು. ಅಕಿಲ್‌ ಸ್ಪೋಟದಲ್ಲಿ ಪಾಲ್ಗೊಂಡಿದ್ದು, ಅಕಿಲ್ ತಲೆಗೆ ಅಮೆರಿಕ 7 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು. 

1980 ರ ದಶಕದಲ್ಲಿ ಹಲವು ಅಮೆರಿಕನ್ನರು ಮತ್ತು ಯುರೋಪಿಯನ್ನರ ಅಪಹರಣದಲ್ಲೂ ಅವರು ಪಾಲ್ಗೊಂಡಿದ್ದರು. 

ಹಿಜ್ಬುಲ್ಲಾಗೆ ದೊಡ್ಡ ಹೊಡೆತ: ಪೇಜರ್ ಮತ್ತು ವಾಕಿ-ಟಾಕಿ ಸ್ಫೋಟದಿಂದ 37 ಸದಸ್ಯರನ್ನುಕಳೆದುಕೊಂಡ ಹಿಜ್ಬುಲ್ಲಾಗೆ ಅಕಿಲ್‌ ಹತ್ಯೆ ಭಾರಿ ಹೊಡೆತ. ಏಕೆಂದರೆ, ಅಕಿಲ್‌ ಪ್ರಮುಖ ನಾಯಕರಲ್ಲಿ ಒಬ್ಬರು. ಇಸ್ರೇಲಿನ ಇಂಥದ್ಧೇ ವೈಮಾನಿಕ ದಾಳಿಗೆ ಕೆಲವು ವಾರಗಳ ಹಿಂದೆ ಮತ್ತೊಬ್ಬ ಹಿರಿಯ ಕಮಾಂಡರ್ ಫುಡ್ ಶುಕ್ರ್ ಅನ್ನು ಹಿಜ್ಬುಲ್ ಕಳೆದುಕೊಂಡಿದೆ. 

ಇರಾನಿನ ವಿದೇಶಾಂಗ ಸಚಿವಾಲಯವು ದಾಳಿಯನ್ನು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಖಂಡಿಸಿದೆ. ಆದರೆ, ಇಸ್ರೇಲಿನ ಮಿಲಿಟರಿ ವಕ್ತಾರರು, ರಾಷ್ಟ್ರೀಯ ಭದ್ರತೆಗಾಗಿ ಕಾರ್ಯಾಚರಣೆ ಅಗತ್ಯ ಎಂದು ಹೇಳಿದ್ದಾರೆ. 

ಅಕಿಲ್‌ ಸಾವಿಗೆ ಪ್ರತೀಕಾರವಾಗಿ, ಇಸ್ರೇಲಿ ಮಿಲಿಟರಿ ಸ್ಥಾನಗಳ ಮೇಲೆ ಹಿಜ್ಬುಲ್ಲಾ ಹತ್ತಾರು ರಾಕೆಟ್‌ಗಳನ್ನು ಹಾರಿಸಿದೆ.

Tags:    

Similar News