ಟೆಸ್ಲಾ ಕಾರುಗಳಿಗೆ ಹಾನಿ ಮಾಡಿದರೆ 20 ವರ್ಷ ಜೈಲು: ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಎಲಾನ್ ಮಸ್ಕ್ ಟ್ರಂಪ್ ಪರ ಪ್ರಚಾರ ನಡೆಸಿದ್ದರು ಮತ್ತು ಚುನಾವಣಾ ಪ್ರಚಾರಕ್ಕೆ ದೇಣಿಗೆ ನೀಡಿದ್ದರು.;
ಅಮೆರಿಕದಲ್ಲಿ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಾರುಗಳನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಕಠಿಣ ಎಚ್ಚರಿಕೆ ನೀಡಿದ್ದಾರೆ. ಟೆಸ್ಲಾ ಕಾರುಗಳನ್ನು ಧ್ವಂಸಗೊಳಿಸುವವರಿಗೆ 20 ವರ್ಷಗಳ ಜೈಲು ಶಿಕ್ಷೆ ಖಚಿತ ಎಂದು ಅವರು ಘೋಷಿಸಿದ್ದಾರೆ.
ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಜಾಲತಾಣ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. "ಟೆಸ್ಲಾ ಕಾರುಗಳನ್ನು ಹಾಳು ಮಾಡುವವರು 20 ವರ್ಷ ಜೈಲಿಗೆ ಹೋಗುವ ಸಾಧ್ಯತೆ ಇದೆ. ಅವರಿಗೆ ಹಣಕಾಸಿನ ನೆರವು ನೀಡುವವರಿಗೂ ಇದೇ ಶಿಕ್ಷೆ ಕಾದಿದೆ. ನಾವು ನಿಮ್ಮನ್ನು ಹುಡುಕುತ್ತಿದ್ದೇವೆ!" ಎಂದು ಅವರು ಬರೆದುಕೊಂಡಿದ್ದಾರೆ.
ಟೆಸ್ಲಾ ಆಸ್ತಿಗಳ ಮೇಲೆ ಇತ್ತೀಚೆಗೆ ನಡೆದ ಹಿಂಸಾತ್ಮಕ ದಾಳಿಗಳನ್ನು ಅಮೆರಿಕದ ಅಟಾರ್ನಿ ಜನರಲ್ ಪಾಮ್ ಬೊಂಡಿ "ದೇಶೀಯ ಭಯೋತ್ಪಾದನೆಗಿಂತ ಕಡಿಮೆಯಿಲ್ಲ" ಎಂದು ಬಣ್ಣಿಸಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ. ಈ ದಾಳಿಗಳಲ್ಲಿ ಭಾಗಿಯಾಗಿರುವವರು, ದಾಳಿಗಳನ್ನು ಸಂಘಟಿಸುವವರು ಮತ್ತು ಹಣಕಾಸಿನ ನೆರವು ನೀಡುವವರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಶಪಥ ಮಾಡಿದ್ದಾರೆ.
ಎಲಾನ್ ಮಸ್ಕ್ ಅಮೆರಿಕದ ಸರ್ಕಾರಿ ದಕ್ಷತಾ ಇಲಾಖೆಯ (ಡಿಒಜಿಇ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದ ನಂತರ ಟೆಸ್ಲಾ ವಾಹನಗಳು, ಡೀಲರ್‌ಶಿಪ್‌ಗಳು ಮತ್ತು ಚಾರ್ಜಿಂಗ್ ಕೇಂದ್ರಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಇತ್ತೀಚೆಗೆ ಅಮೆರಿಕದಾದ್ಯಂತ ಟೆಸ್ಲಾ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಕಳೆದ ವಾರ ದುಷ್ಕರ್ಮಿಗಳು ಟೆಸ್ಲಾ ಕಾರುಗಳನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದರಿಂದ ಹಲವು ಕಾರುಗಳು ಬೆಂಕಿಗಾಹುತಿಯಾಗಿದ್ದವು.
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಎಲಾನ್ ಮಸ್ಕ್ ಟ್ರಂಪ್ ಪರ ಪ್ರಚಾರ ನಡೆಸಿದ್ದರು ಮತ್ತು ಚುನಾವಣಾ ಪ್ರಚಾರಕ್ಕೆ ದೇಣಿಗೆ ನೀಡಿದ್ದರು. ಟ್ರಂಪ್‌ಗೆ ಆಪ್ತರಾಗಿರುವ ಮಸ್ಕ್ ಪ್ರಸ್ತುತ ಸರ್ಕಾರದಲ್ಲಿ ಉನ್ನತ ಸ್ಥಾನವನ್ನು ಗಳಿಸಿದ್ದಾರೆ ಮತ್ತು ಕಾರ್ಯದಕ್ಷತಾ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.