ಎಸ್‌ಡಿಎಸ್ ವೀಸಾ ಯೋಜನೆ ರದ್ದು ಮಾಡಿದ ಕೆನಡಾ: ಭಾರತೀಯ ವಿದ್ಯಾರ್ಥಿಗಳಿಗೆ ಭಾರೀ ಹೊಡೆತ
ವಸತಿ ಕೊರತೆ ಮತ್ತು ಸಂಪನ್ಮೂಲ ನಿರ್ಬಂಧಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿರ್ವಹಿಸುವ ಕೆನಡಾದ ಕಾರ್ಯತಂತ್ರದ ಭಾಗವಾಗಿ ವೀಸಾ ವಿತರಣೆ ನಿಲ್ಲಿಸಲಾಗಿದೆ.;
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಟೂಡೆಂಟ್ ಡೈರೆಕ್ಟ್ ಸ್ಟ್ರೀಮ್ (ಎಸ್‌ಡಿಎಸ್) ವೀಸಾ ಕಾರ್ಯಕ್ರಮವನ್ನು ಕೆನಡಾ ಶುಕ್ರವಾರ (ನವೆಂಬರ್ 8) ಸ್ಥಗಿತಗೊಳಿಸಿದೆ. ಇದು ವಿದೇಶದಲ್ಲಿ ವ್ಯಾಸಂಗ ಮಾಡಲು ಯೋಜನೆ ಹಾಕಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ದೊಡ್ಡ ಹೊಡೆತ ನೀಡಲಿದೆ.
ಕಾರ್ಯಕ್ರಮವು ಹೆಚ್ಚಿನ ಬೇಡಿಕೆ ಮತ್ತು ಅತಿ ವೇಗದಲ್ಲಿ ಪ್ರಕ್ರಿಯೆ ಮುಗಿಸುವ ಒತ್ತಡದಲ್ಲಿತ್ತು. ಅಲ್ಲದೆ, ವಸತಿ ಕೊರತೆ ಮತ್ತು ಸಂಪನ್ಮೂಲ ನಿರ್ಬಂಧಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿರ್ವಹಿಸುವ ಕೆನಡಾದ ಕಾರ್ಯತಂತ್ರದ ಭಾಗವಾಗಿ ವೀಸಾ ವಿತರಣೆ ನಿಲ್ಲಿಸಲಾಗಿದೆ.
"ಕಾರ್ಯಕ್ರಮದ ಸಮಗ್ರತೆ ಬಲಪಡಿಸಲು, ವಿದ್ಯಾರ್ಥಿಗಳ ಕೊರತೆ ಪರಿಹರಿಸಲು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಅರ್ಜಿ ಪ್ರಕ್ರಿಯೆಯಲ್ಲಿ ಸಮಾನ ಮತ್ತು ನ್ಯಾಯಯುತ ಅವಕಾಶ ನೀಡಲು" ಈ ಯೋಜನೆ ನಿಲ್ಲಿಸಲಾಗುತ್ತಿದೆ ಎಂದು ಕೆನಡಾ ಸರ್ಕಾರ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಈಗ ರೆಗ್ಯುಲರ್ ಸ್ಟ್ರೀಮ್ ಮಾತ್ರ
ವಲಸೆ, ನಿರಾಶ್ರಿತರು ಮತ್ತು ಪೌರತ್ವ ಕೆನಡಾ (ಐಆರ್‌ಸಿಸಿ) ತನ್ನ ಫಾಸ್ಟ್ ಟ್ರ್ಯಾಕ್ ಸ್ಟಡಿ ಪರ್ಮಿಟ್ ಪ್ರಕ್ರಿಯೆಯಡಿ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಇದು ಸಾಕಷ್ಟು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ತ್ವರಿತವಾಗಿ ವೀಸಾಗಳನ್ನು ಪಡೆಯಲು ಸಹಾಯ ಮಾಡಿತ್ತು.
ಇನ್ನು ಮುಂದೆ ಎಲ್ಲಾ ಅಧ್ಯಯನ ಪರವಾನಗಿ ಅರ್ಜಿಗಳನ್ನು ಪ್ರಮಾಣಿತ ಅರ್ಜಿ ಪ್ರಕ್ರಿಯೆ ಬಳಸಿಕೊಂಡು ಸಲ್ಲಿಸಲಾಗುತ್ತದೆ. ಆದಾಗ್ಯೂ, ನವೆಂಬರ್ 8ರಂದು ಮಧ್ಯಾಹ್ನ 2 ಗಂಟೆಯವರೆಗೆ ಸ್ವೀಕರಿಸಿದ ಎಸ್ಡಿಎಸ್ ವೀಸಾ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗುವುದು, ಆದರೆ ಇದರ ನಂತರದ ಎಲ್ಲಾ ಅರ್ಜಿಗಳನ್ನು ನಿಯಮಿತ ಅಧ್ಯಯನ ಪರವಾನಗಿ ಸ್ಟ್ರೀಮ್ ಅಡಿಯಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ ಎಂದು ಕೆನಡಾ ಹೇಳಿದೆ.
ಬ್ರೆಜಿಲ್, ಚೀನಾ, ಕೊಲಂಬಿಯಾ, ಕೋಸ್ಟರಿಕಾ, ಭಾರತ, ಮೊರಾಕೊ, ಪಾಕಿಸ್ತಾನ, ಪೆರು, ಫಿಲಿಪೈನ್ಸ್ ಮತ್ತು ವಿಯೆಟ್ನಾಂ ಸೇರಿದಂತೆ 14 ದೇಶಗಳ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅಧ್ಯಯನ ಪರವಾನಗಿ ಅರ್ಜಿಗಳನ್ನು ತ್ವರಿತಗೊಳಿಸಲು ವಲಸೆ, ನಿರಾಶ್ರಿತರು ಮತ್ತು ಪೌರತ್ವ ಕೆನಡಾ (ಐಆರ್‌ಸಿಸಿ) 2018 ರಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತಂದಿತು.
ಭಾರತೀಯ ವಿದ್ಯಾರ್ಥಿಗಳಿಗೆ ಹೇಗೆ ಸಹಾಯ?
ಎಸ್‌ಡಿಎಸ್ ವೀಸಾ ಭಾರತೀಯ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು, ಏಕೆಂದರೆ ಅರ್ಜಿದಾರರು ಬಯೋಮೆಟ್ರಿಕ್ ದಾಖಲೆಗಳನ್ನು ಸಲ್ಲಿಸಿ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ 20 ದಿನಗಳಲ್ಲಿ ವೀಸಾ ಸಿಗುತ್ತಿತ್ತು.
ಇತ್ತೀಚಿನ ವರ್ಷಗಳಲ್ಲಿ ಎಸ್‌ಡಿಎಸ್ ಮತ್ತು ಎಸ್‌ಡಿಎಸ್ ಅಲ್ಲದ ಅರ್ಜಿದಾರರ ನಡುವಿನ ಅನುಮೋದನೆ ದರಗಳಲ್ಲಿನ ಅಂತರವು ವಿಶೇಷವಾಗಿ ಭಾರತದಿಂದ ವಿಸ್ತರಿಸಿದೆ ಎಂಬ ಅಂಶದಿಂದ ಇದನ್ನು ಅಳೆಯಬಹುದು.
ಸಾಮಾನ್ಯ ಸ್ಟ್ರೀಮ್‌ಗೆ ಹೋಲಿಸಿದರೆ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಎಸ್‌ಡಿಎಸ್ ಅನುಮೋದನೆ ದರಗಳು ವಿಶೇಷವಾಗಿ ಹೆಚ್ಚಾಗಿದೆ. ಎಸ್ಡಿಎಸ್ ಅರ್ಜಿದಾರರು 2021 ಮತ್ತು 2022 ರಲ್ಲಿ ಎಸ್ಡಿಎಸ್ ಅಲ್ಲದ ಅರ್ಜಿದಾರರಿಗಿಂತ ಮೂರು ಪಟ್ಟು ಹೆಚ್ಚಿನ ಅನುಮೋದನೆ ದರಗಳನ್ನು ಹೊಂದಿದ್ದರು.
ಎಸ್‌ಡಿಎಸ್ ಅರ್ಜಿದಾರರು 2022ರ ಅಂತ್ಯದ ವೇಳೆಗೆ 63% ಅನುಮೋದನೆ ದರ ಸಾಧಿಸಿದರೆ, ಎಸ್ಡಿಎಸ್ ಅಲ್ಲದ ಅರ್ಜಿದಾರರು ಕೇವಲ 19% ಅನ್ನು ಹೊಂದಿದ್ದರು. ಈ ಪ್ರವೃತ್ತಿ 2023 ರ ಆರಂಭದವರೆಗೂ ಮುಂದುವರಿಯಿತು/ ಭಾರತೀಯ ಎಸ್ಡಿಎಸ್ ಅರ್ಜಿದಾರರು 73% ಅನುಮೋದನೆ ದರ ತಲುಪಿದ್ದರು. ಇದು ಎಸ್ಡಿಎಸ್ ಅಲ್ಲದ ಅರ್ಜಿದಾರರಿಗೆ 10% ಅನುಮೋದನೆ ದರಕ್ಕೆ ವ್ಯತಿರಿಕ್ತವಾಗಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
"ಕೆನಡಾದ ಅಧ್ಯಯನ ಪರವಾನಗಿಗಳನ್ನು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಎಸ್‌ಡಿಎಸ್ ಆದ್ಯತೆಯ ಮಾರ್ಗವಾಗಿದೆ. 2022ರಲ್ಲಿ, 80% ಭಾರತೀಯ ಅರ್ಜಿದಾರರು ಎಸ್‌ಡಿಎಸ್ ಕಾರ್ಯಕ್ರಮವನ್ನು ಬಳಸಿದ್ದರು. ಇದು ಹಿಂದಿನ ವರ್ಷಗಳಿಗಿಂತ ಗಮನಾರ್ಹ ಹೆಚ್ಚಳವಾಗಿದೆ. 2023ರ ಜನವರಿಯಿಂದ ಮಾರ್ಚ್‌ವರೆಗೆ , ಐದು ಭಾರತೀಯ ವಿದ್ಯಾರ್ಥಿಗಳಲ್ಲಿ ನಾಲ್ವರು ಎಸ್ಡಿಎಸ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು 76% ಅನುಮೋದನೆ ದರವನ್ನು ಸಾಧಿಸಿದ್ದಾರೆ. ಸಾಮಾನ್ಯ ಸ್ಟ್ರೀಮ್ ಬಳಸುವವರಿಗೆ ಕೇವಲ 8% ಆಗಿತ್ತು " ಎಂದು ವರದಿ ತಿಳಿಸಿದೆ.