ಮರೆಯಾದ ‘ಸಂಕಲ್ಪ’, ಚಿರಸ್ಥಾಯಿಯಾದ ‘ದೇವಿ’

೧೯೭೩ರಲ್ಲಿ ಬಿಡುಗಡೆಗೊಂಡ ‘ಸಂಕಲ್ಪ’ವನ್ನು ‘ಮೊದಲಿಗರ ಚಿತ್ರ’ ಎನ್ನಬಹುದು. ನಾಯಕ ನಟ ಅನಂತ್‌ನಾಗ್ ಈ ಚಿತ್ರದ ಮೂಲಕ ಸಿನೆಮಾ ರಂಗ ಪ್ರವೇಶಿಸಿದರು.;

Update: 2024-02-05 06:30 GMT

‘ಸಂಕಲ್ಪ’ ೧೧೭ ನಿಮಿಷ ಅವಧಿಯ ಕಪ್ಪು-ಬಿಳುಪು ಚಿತ್ರ. ೭೦ರ ದಶಕದಲ್ಲಿ ವರ್ಣ ಚಿತ್ರಕ್ಕೆ ಹೋಲಿಸಿದರೆ ಕಡಿಮೆ ವೆಚ್ಚ ತಗಲುತ್ತದೆ ಎಂದು ಕಲಾ, ಪ್ರಯೋಗಶೀಲ ಇಲ್ಲವೇ ಪರ್‍ಯಾಯ ಚಿತ್ರ ನಿರ್ಮಾಪಕರು ಕಪ್ಪು-ಬಿಳುಪನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇನ್ನೊಂದು ಕಾರಣ, ಕಪ್ಪು ಬಿಳುಪಿನಲ್ಲಿ ನಿರ್ಮಿಸಿದರೆ ಮಾತ್ರವೇ ಪರ್‍ಯಾಯ ಚಿತ್ರ ಎನ್ನುವ ಹಣೆಪಟ್ಟಿ ಸಿಗುತ್ತದೆ ಎನ್ನುವ ಅಭಿಪ್ರಾಯ.

ಆಗ ಪಶ್ಚಿಮ ಬಂಗಾಳದಲ್ಲಿ ಸತ್ಯಜಿತ್ ರೇ, ರಿತ್ವಿಕ್ ಘಟಕ್, ಮೃಣಾಲ್ ಸೇನ್ ಇನ್ನಿತರರು ಹಾಗೂ ಮಲೆಯಾಳಂನ ಜಾನ್ ಅಬ್ರಹಾಂ ಮತ್ತಿತರರು ಎರಡು ವರ್ಣಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಗಮನಾರ್ಹ ಅಂಶವೇನೆಂದರೆ, ಆ ಸಂದರ್ಭದಲ್ಲಿ ನಿರ್ಮಾಣಗೊಂಡ ಹೆಚ್ಚಿನ ಕಲಾ ಚಿತ್ರಗಳು ಕಪ್ಪು-ಬಿಳುಪು ಆಗಿದ್ದವು.

೧೯೭೩ರಲ್ಲಿ ಬಿಡುಗಡೆಗೊಂಡ ‘ಸಂಕಲ್ಪ’ವನ್ನು ‘ಮೊದಲಿಗರ ಚಿತ್ರ’ ಎನ್ನಬಹುದು. ನಾಯಕ ನಟ ಅನಂತ್‌ನಾಗ್ ಈ ಚಿತ್ರದ ಮೂಲಕ ಸಿನೆಮಾ ರಂಗ ಪ್ರವೇಶಿಸಿದರು(ವಾಣಿಜ್ಯಿಕ ಸಿನೆಮಾ). ನಿರ್ಮಾಪಕ/ನಿರ್ದೇಶಕ ಪ್ರೊ.ಪಿ.ವಿ.ನಂಜರಾಜ ಅರಸ್, ಸಿನೆಮಾಟೋಗ್ರಾಫರ್ ಎಸ್. ರಾಮಚಂದ್ರ(ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನ ಪದವೀದರ) ಅವರ ಮೊದಲ ಚಿತ್ರ ಇದಾಗಿತ್ತು. ವಿಜಯಭಾಸ್ಕರ್ ಸಂಗೀತ ಹಾಗೂ ಉಮೇಶ್ ಕುಲಕರ್ಣಿ ಸಂಕಲನಕಾರರು. ಅರಸ್ ಅವರಿಗೆ ಸಿನೆಮಾ ನಿರ್ಮಾಣ ಹೊಸದಾಗಿದ್ದರಿಂದ, ಆನಂತರ ಕನ್ನಡ ಸಿನೆಮಾದಲ್ಲಿ ತಮ್ಮದೇ ಛಾಪು ಮೂಡಿಸಿದ ಸುಂದರಕೃಷ್ಣ ಅರಸ್ ಹಾಗೂ ಆರ್.ಕೆ.ಪ್ರಸಾದ್, ಅರಸ್ ಅವರಿಗೆ ಸಹಾಯಕರಾಗಿದ್ದರು. ನಟ ವರ್ಗದವರು ಹವ್ಯಾಸಿ ರಂಗಭೂಮಿಗೆ ಸೇರಿದವರಾಗಿದ್ದರು. ೧೯೭೪ರಲ್ಲಿ ಚಿತ್ರವು ರಾಜ್ಯ ಚಲನಚಿತ್ರ ಪ್ರಶಸ್ತಿಯ ನಾನಾ ವಿಭಾಗಗಳಲ್ಲಿ ಏಳು ಪ್ರಶಸ್ತಿ ಗಳಿಸಿತು: ಸಂಗೀತ, ಸಿನೆಮಾಟೋಗ್ರಫಿ, ಸಂಕಲನ, ಶಬ್ದಗ್ರಹಣ, ನಿರ್ದೇಶನ, ಕಥೆ ಮತ್ತು ಚಿತ್ರಕತೆ; ಜತೆಗೆ, ಉತ್ತಮ ಬಾಲ ಕಲಾವಿದ. ಚಾರಿತ್ರಿಕ, ಪೌರಾಣಿಕ ಹಾಗೂ ಸ್ವಲ್ಪ ಮಟ್ಟಿಗೆ ಸಾಮಾಜಿಕ ವಿಷಯಗಳ ಸಿನೆಮಾಗಳಿಗೆ ಒಗ್ಗಿಹೋಗಿದ್ದ ಪ್ರೇಕ್ಷಕರು, ಸಿನೆಮಾ ನೋಡಿ ಸಂಪೂರ್ಣ ಶಾಕ್‌ಗೆ ಒಳಗಾದರು.

ಇದೇ ಹೊತ್ತಿನಲ್ಲಿ ಶರಪಂಜರ, ಬಂಗಾರದ ಮನುಷ್ಯ, ನಾಗರಹಾವು ಮತ್ತಿತರ ವರ್ಣಚಿತ್ರಗಳು ಬಿಡುಗಡೆಗೊಂಡು, ರಾಜ್ಯದೆಲ್ಲೆಡೆ ಶತದಿನೋತ್ಸವ ಆಚರಿಸಿದ್ದವು. ಸಿನೆಮಾಪ್ರಿಯರಿಗೆ ಕಪ್ಪು-ಬಿಳುಪು ಚಿತ್ರವನ್ನು ವೀಕ್ಷಿಸುವುದು ಬೇರೆಯದೇ ಅನುಭವ ನೀಡಿತು. ದೀರ್ಘ ಶಾಟ್‌ಗಳು, ಮೌನ ಇತ್ಯಾದಿಯಿಂದ ಪ್ರಯೋಗಶೀಲ ಚಿತ್ರಗಳನ್ನು ನೋಡುವವರು ಇಲೈಟ್‌ಗಳು ಮಾತ್ರ ಎನ್ನುವ ಭಾವನೆಯಿತ್ತು. ವಾಸ್ತವವೆಂದರೆ, ಸಂಸ್ಕಾ ರ, ಅಬಚೂರಿನ ಪೋಸ್ಟ್‌ಆಫೀಸ್ ಮತ್ತಿತರ ಚಿತ್ರಗಳ ವೀಕ್ಷಕರಿಗೆ ಬೇರೆಯದೇ ‘ಲೋಕ’ವೊಂದು ಇದೆ ಎನ್ನುವುದು ಗೊತ್ತಾಯಿತು. ಸಂಸ್ಕಾರ ಮತ್ತು ವಂಶವೃಕ್ಷದ ಬಾಕ್ಸ್‌ಆಫೀಸ್ ಯಶಸ್ಸು ಹೂಡಿಕೆದಾರರಿಗೆ ಇಂಥದ್ದೇ ಇನ್ನಷ್ಟು ಸಿನೆಮಾ ಮಾಡಲು ಧೈರ್‍ಯ ತಂದುಕೊಟ್ಟಿತ್ತು.

ಪರ್‍ಯಾಯ ಸಿನೆಮಾಗಳ ಯುಗಾರಂಭಕ್ಕೆ ವೇದಿಕೆ ಸಿದ್ಧವಾಗಿತ್ತು. ಸಾಮಾಜಿಕ ವಿಷಯಗಳನ್ನು ಹೊಂದಿದ್ದ ಭೂದಾನ(ಜೀತಪದ್ಧತಿ ಮತ್ತು ಭೂಸುಧಾರಣೆ), ನಾಂದಿ(ದೈಹಿಕ ವೈಕಲ್ಯ-ಮಾತು ಹಾಗೂ ಶ್ರವಣ ಸಮಸ್ಯೆ), ಚಂದವಳ್ಳಿಯ ತೋಟ(ಅವಿಭಜಿತ ಭೂಮಾಲೀಕ ಕುಟುಂಬ ವ್ಯವಸ್ಥೆ), ಸಂಧ್ಯಾರಾಗ(ಔಪಚಾರಿಕ ಶಿಕ್ಷಣದ ಬದಲು ಶಾಸ್ತ್ರೀಯ ಸಂಗಿತ ಕಲಿತವರ ಸಮಸ್ಯೆ), ಬಂಗಾರದ ಹೂವು(ಕುಷ್ಠ ರೋಗಕ್ಕೆ ಸಂಬಂಧಿಸಿದ ನಿಷೇಧಗಳು), ಉಯ್ಯಾಲೆ(ನಿರ್ಲಕ್ಷಿತ ಪತ್ನಿಯ ಸಂಕಷ್ಟ), ಸರ್ವಮಂಗಳ(ಸ್ವಾತಂತ್ರ್ಯ ಹೋರಾಟ), ಗೆಜ್ಜೆಪೂಜೆ(ದೇವದಾಸಿ ಪದ್ಧತಿ), ಹಣ್ಣೆಲೆ ಚಿಗುರಿದಾಗ(ವಿಧವಾ ವಿವಾಹ) ಪರ್‍ಯಾಯ ಸಿನೆಮಾಗಳಿಗೆ ದಾರಿ ಸುಗಮ ಗೊಳಿಸಿಕೊಟ್ಟಿದ್ದವು. ಈ ಚಿತ್ರಗಳಲ್ಲಿ ರಾಜಕುಮಾರ್, ಕಲ್ಪನಾ, ಉದಯಕುಮಾರ್, ಅಶ್ವಥ್ ಮತ್ತಿತರರು ಪಾತ್ರ ನಿರ್ವಹಿಸಿದ್ದರು. ಚಿತ್ರಗಳ ನಿರ್ಮಾಣ ಗುಣಮಟ್ಟ ಉತ್ತಮವಾಗಿತ್ತು. ಭಾರತೀಯ ಸಿನೆಮಾದ ಅವಿ ಭಾಜ್ಯ ಅಂಗವಾದ ಹಾಡುಗಳು ಈ ಚಿತ್ರಗಳಲ್ಲಿ ಅರ್ಥಪೂರ್ಣವಾಗಿದ್ದವು ಮಾತ್ರವಲ್ಲದೆ, ಸಿನೆಮಾಗಳ ಸೌಂದರ್‍ಯ ಗುಣಮಟ್ಟವನ್ನು ಹೆಚ್ಚಿಸಿದ್ದವು. ಸಂಸ್ಕಾರದಂಥ ಚಿತ್ರ ಆಗಮಿಸಲು ಪರಿಸ್ಥಿತಿ ಅನುಕೂಲಕರವಾಗಿತ್ತು. ಚಿತ್ರದಲ್ಲಿ ಬ್ರಾಹ್ಮಣರನ್ನು ಚಿತ್ರೀಕರಿಸಿದ್ದ ರೀತಿಗೆ ಆಕ್ಷೇಪಗಳು/ಭಿನ್ನಾಭಿಪ್ರಾಯ ವ್ಯಕ್ತವಾದರೂ, ಜನರು ಸಂಸ್ಕಾರವನ್ನು ಸ್ವೀಕರಿಸಿದರು. ಇದು ತುರ್ತು ಪರಿಸ್ಥಿತಿಗಿಂತ ಮೊದಲಿನ ಕಾಲದ ಸಹಿಷ್ಣುತೆಯ ಮಟ್ಟವನ್ನು ತೋರಿಸುತ್ತದೆ.

ಸಂಸ್ಕಾರ ಬಿಡುಗಡೆಗೊಂಡ ಮೂರು ವರ್ಷಗಳ ನಂತರ ಸಂಕಲ್ಪ ಬಂತು. ಎರಡೂ ಚಿತ್ರಗಳು ‘ನಂಬಿಕೆಯ ಪ್ರಶ್ನೆ’ಯನ್ನು ನಿರ್ವಹಿಸಿದ್ದರೂ, ಅವು ವಿಷಯವನ್ನು ನಿಭಾಯಿಸಿದ ರೀತಿ ಭಿನ್ನವಾಗಿತ್ತು. ಸಂಸ್ಕಾರ ಅದೇ ಹೆಸರಿನ ಯು.ಆರ್.ಅನಂತಮೂರ್ತಿ ಅವರ ಕಾದಂಬರಿಯನ್ನು ಆಧರಿಸಿದ್ದು, ಇಂಗ್ಮರ್ ಬರ್ಗ್‌ಮನ್ ಅವರ ‘ದ ಸೆವೆಂನ್ತ್ ಸೀಲ್’ ವೀಕ್ಷಿಸಿದ ಬಳಿಕ ಅವರಿಗೆ ಚಿತ್ರದ ಆಲೋಚನೆ ಬಂದಿತು. ‘ಸೆವೆಂನ್ತ್ ಸೀಲ್’ನ ಮಧ್ಯಕಾಲೀನ ಸೆಟ್ಟಿಂಗ್ಸ್ ಅನಂತಮೂರ್ತಿ ಅವರನ್ನು ತೀರ್ಥಹಳ್ಳಿ ಸಮೀಪದ ಹುಟ್ಟೂರಿಗೆ ಕರೆದೊಯ್ದಿತು. ಸ್ವಗ್ರಾಮದಲ್ಲಿ ಮಧ್ಯಕಾಲೀನ ಹಾಗೂ ಆಧುನಿಕ ಜಗತ್ತನ್ನು ಸೃಷ್ಟಿಸುವುದು ಅವರಿಗೆ ಸುಲಭವಾಗಿತ್ತು. ಪಟ್ಟಾಭಿರಾಮ ರೆಡ್ಡಿ ಮತ್ತು ಗಿರೀಶ್ ಕಾರ್ನಾಡ್ ಬಳಿ ಪಠ್ಯ ಮತ್ತು ದೃಶ್ಯಾವಳಿ ಸಿದ್ದವಾಗಿತ್ತು. ಸಂಸ್ಕಾರದಂತಲ್ಲದೆ, ಸಂಕಲ್ಪ ಒಂದು ಆಲೋಚನೆಯನ್ನು ಆಧರಿಸಿತ್ತು; ಅದು ತಾರ್ಕಿಕತೆ ಮತ್ತು ಆಸ್ತಿಕತೆ ನಡುವಿನ ಸಂಘರ್ಷ.

ಭಾರತೀಯ ಸಿನೆಮಾ ಚರಿತ್ರೆಯ ಗಮನಾರ್ಹ ಅಂಶವೆಂದರೆ, ಸಿನೆಮಾ ಸಾಂಪ್ರದಾಯಿಕ ರಂಗಭೂಮಿಯ ಶಾಸನಬದ್ಧ ಮಗು ಇಲ್ಲವೇ ಸೋದರಸಂಬಂಧಿ. ಇದರಲ್ಲಿ ‘ಅವಾಸ್ತವಿಕ’ವಾದಂಥವೂ ಸೇರಿದ್ದು, ಇವು ಸಾಂಪ್ರದಾಯಿಕ ದೃಶ್ಯ ಕಾವ್ಯಾತ್ಮಕ ರಂಗಭೂಮಿಯೊಂದಿಗೆ ತಮ್ಮ ಸಂಬಂಧವನ್ನು ನಿರಂತರವಾಗಿ ಅನಾವರಣಗೊಳಿಸುತ್ತವೆ. ಇದು ಏಕೆಂದರೆ, ಪ್ರಾಯಶಃ ಧಾರ್ಮಿಕ ಆಚರಣೆಗಳು ನಾಟಕ ಹಾಗೂ ರಂಗಭೂಮಿಯ ಪೂರ್ವಜರಾಗಿರಬಹುದು. ಇದರಿಂದಾಗಿಯೇ ರಂಗಭೂಮಿ, ಸಿನೆಮಾ ಹಾಗೂ ಧಾರ್ಮಿಕ ಆಚರಣೆಗಳು ಸಂಪೂರ್ಣ ಮತಾಚರಣೆಗಳಾಗಿ ಬಿಟ್ಟಿವೆ. ಈ ಮೂರು ವಿಧಗಳು ಭಾಷೆ, ಸನ್ನೆ, ಸೆಟ್ಟಿಂಗ್ಸ್ ಮತ್ತು ಪಾತ್ರ ಗಳನ್ನು ಒಳಗೊಂಡ ಉತ್ಪ್ರೇಕ್ಷೆಯನ್ನು ಬಳಸುತ್ತವೆ. ಈ ಉತ್ಪ್ರೇಕ್ಷೆಯ ಮೂಲಾಂಶಗಳು ಸಮಾಜ ಹೇರಿದ ಸಂಪ್ರದಾಯಗಳು ಹಾಗೂ ಆಚರಣೆಗಳನ್ನು ಅನುಸರಿಸುತ್ತಿವೆ ಇಲ್ಲವೇ ಬೆಳೆಸುತ್ತಿವೆ. ಸಂಸ್ಕಾರ ಹಾಗೂ ಸಂಕಲ್ಪವನ್ನು ವೀಕ್ಷಿಸಿದ ಬಳಿಕ ಈ ಸಾದೃಶ್ಯ ನಿಜ ಎನ್ನಿಸುತ್ತದೆ.

ತುರ್ತು ಪರಿಸ್ಥಿತಿಗೆ ಮುನ್ನ ಸಂಕಲ್ಪ ಬಿಡುಗಡೆಗೊಂಡಾಗ, ಕರ್ನಾಟಕದಲ್ಲಿ ಬೌದ್ಧಿಕ ಮಥನವೊಂದು ನಡೆಯುತ್ತಿತ್ತು. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಶಾಂತಿನಾಥ ದೇಸಾಯಿ, ವ್ಯಾಸರಾಯ ಬಲ್ಲಾಳ, ಯಶ ವಂತ ಚಿತ್ತಾಲ, ಗೋಪಾಲಕೃಷ್ಣ ಅಡಿಗ, ರಾಮಚಂದ್ರ ಶರ್ಮಾ, ಪಿ.ಲಂಕೇಶ್, ದೇವನೂರು ಮಹಾದೇವ, ಆಲನಹಳ್ಳಿ ಕೃಷ್ಣ ಮತ್ತಿತರ ಲೇಖಕರಿಂದಾಗಿ ನವ್ಯ ಕಾವ್ಯ ಆಕಾರ ಪಡೆದುಕೊಳ್ಳುತ್ತಿತ್ತು. ಅದೇ ರೀತಿ, ಬಿ.ವಿ.ಕಾರಂತ, ಲಂಕೇಶ್ ಮತ್ತು ಇತರರ ತೊಡಗಿಕೊಳ್ಳುವಿಕೆಯಿಂದ ರಂಗಭೂಮಿಯ ಸುವರ್ಣ ಯುಗವಾಗಿತ್ತು. ದಲಿತ, ಬಂಡಾಯ, ಪ್ರಗತಿಪರ ಸಾಹಿತ್ಯ ಚಳವಳಿಗಳು ಅರಳುತ್ತಿದ್ದವು. ಕೆಲವು ವಿಚಾರವಾದಿ ಸಂಘಟನೆಗಳು ರಾಷ್ಟ್ರ ಮಟ್ಟದಲ್ಲಿ ಮಹೇಶ್ ಯೋಗಿಯಂಥ ‘ದೇವಮಾನವರು’ ಅಥವಾ ‘ಪವಾಡ ಪುರುಷ’ರನ್ನು ಹಾಗೂ ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ ಅವರು ಸತ್ಯಸಾಯಿಬಾಬಾರನ್ನು ಪ್ರಶ್ನಿಸಲು ಆರಂಭಿಸಿ ದರು. ಸ್ವಘೋಷಿತ ದೇವಮಾನವರ ವಂಚನೆಯನ್ನು ಬಹಿರಂಗಗೊಳಿಸಲು ಅಬ್ರಹಾಂ ಕೋವೂರ್ ಆರಂಭಿಸಿದ ವಿಚಾರವಾದಿಗಳ ಆಂದೋಲನವು ಜನಾಂಗವೊಂದನ್ನು ಪ್ರೇರೇಪಿಸಿತು.

ಇಟಲಿಯ ನವ್ಯವಾಸ್ತವತಾವಾದ, ಫ್ರೆಂಚ್ ಹಾಗೂ ಜಪಾನ್‌ನ ಅಲೆಗಳಿಂದ ಸ್ಪೂರ್ತಿ ಪಡೆದ ಚಿತ್ರನಿರ್ದೇಶಕರು, ಸಮಾಜದ ಒಂದು ವರ್ಗ ಮುಂದೊತ್ತುವ ಹಿಂದುತ್ವವು ದೇವಮಾನವರು ಮತ್ತು ಸಂತರ ಆಧಾರ ವಾದ ಮೂಢನಂಬಿಕೆಗಳಿಗೆ ಮತ್ತು ಅನುಚಿತ ಪೂಜೆಗೆ ಕಾರಣವಾಗುತ್ತದೆ ಎಂದು ಅರಿತು, ಅಂಥ ಸಾಮಾಜಿಕೋ-ರಾಜಕೀಯ ಸಂಗತಿಗಳನ್ನು ಕೈಗೆತ್ತಿಕೊಂಡರು; ಮುಖ್ಯವಾಹಿನಿ ಸಿನೆಮಾಗಳ ಹಾಡು-ನೃತ್ಯ ಮಾದರಿಯನ್ನು ತಿರಸ್ಕರಿಸಿದರು. ಕನ್ನಡದ ಪರ್‍ಯಾಯ ಸಿನೆಮಾ ಆಂದೋಲನದಲ್ಲಿ ಇದ್ದವರಲ್ಲಿ ಹೆಚ್ಚಿನವರು ವಿಶ್ವವಿದ್ಯಾನಿಲಯಗಳ ಅಧ್ಯಾಪಕರು. ಆದರೆ, ಇಟಾಲಿಯನ್, ಫ್ರೆಂಚ್, ಜಪಾನ್ ಮತ್ತು ಬಂಗಾಳದ ಪುನರುಜ್ಜೀವನ ಚಿತ್ರಗಳಿಂದ ಪ್ರಭಾವಿತರಾದರೂ, ನಿರ್ಮಾಪಕರು ‘ದೇಹ’ವನ್ನು ಅಳವಡಿಸಿಕೊಂಡರೇ ಹೊರತು, ಬರ್ಗ್‌ಮನ್, ಅಕಿರಾ ಕುರೋಸಾವ, ಜೀನ್ ರೆನಾರ್, ಫೆಲಿನಿ, ಸತ್ಯಜಿತ್ ರೇ, ಮೃಣಾಲ್ ಸೇನ್ ಮತ್ತು ಘಟಕ್ ಅವರ ಚಿತ್ರಗಳ ‘ಆತ್ಮ’ವನ್ನಲ್ಲ. ಹೆಚ್ಚಿನವರು ಯುರೋಪಿಯನ್ ಸಿನೆಮಾ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದರು. ಇಂಥ ಪ್ರಯತ್ನಗಳಲ್ಲಿ ಎನ್.ಲಕ್ಷ್ಮೀನಾರಾಯಣ, ಎಂ.ಆರ್. ವಿಠ್ಠಲ್, ಚದುರಂಗ ಸಫಲರಾದರು. ಈ ವಾದಕ್ಕೆ ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ಬಿ.ವಿ.ಕಾರಂತ್ ಅವರಂಥ ಅಪವಾದಗಳೂ ಇವೆ.

ರಂಗಭೂಮಿ ಹಾಗೂ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಪ್ರೊ.ನಂಜರಾಜ ಅರಸ್, ಮೈಸೂರಿನ ಕೆಲವು ಸಿನೆಮಾಸಕ್ತರ ಬೆಂಬಲದಿಂದ ಸಂಕಲ್ಪವನ್ನು ತೆರೆಗೆ ತರಲು ಮುಂದಾದರು. ಅವರೇ ಹೇಳಿಕೊಂಡಂತೆ, ಬೆಂಗ

ಳೂರಿನ ಅಲಂಕಾರ್ ಥಿಯೇಟರ್‌ನಲ್ಲಿ ಕೆಲವೇ ಜನರಿಗಾಗಿ ‘ಬೆಳಗಿನ ಪ್ರದರ್ಶನ’ವಾಗಿ ತೆರೆ ಕಾಣುತ್ತಿದ್ದ ಸತ್ಯಜಿತ್ ರೇ, ಮೃಣಾಲ್ ಸೇನ್ ಹಾಗೂ ರಿತ್ವಿಕ್ ಘಟಕ್ ಅವರ ಸಿನೆಮಾಗಳಿಂದ ಪ್ರಭಾವಿತರಾಗಿದ್ದರು. ೧೯೬೦ರಲ್ಲಿ ಪ್ರೊವತ್ ಕುಮಾರ್ ಮುಖ್ಯೋಪಾಧ್ಯಾಯ ಅವರ ಸಣ್ಣ ಕತೆಯನ್ನು ಆಧರಿಸಿ ರೇ ನಿರ್ಮಿಸಿದ್ದ ‘ದೇವಿ’ಯನ್ನು ವೀಕ್ಷಿಸಿ, ಪ್ರಭಾವಿತನಾದೆ. ಮೈಸೂರಿನ ದುರ್ಗೆಯ ಅವತಾರ ಇರುವುದರಿಂದ, ಚಿತ್ರದ ಚೌಕಟ್ಟು’ ಮಾತ್ರ ತೆಗೆದುಕೊಂಡೆ ಎಂದು ಅವರು ವಾದಿಸಿದರು. ಅರಸ್ ಪ್ರಗತಿಪರ ಚಳವಳಿಯ ಭಾಗವಾಗಿದ್ದು, ದೇವರ ಅಸ್ತಿತ್ವ ಹಾಗೂ ದೇವಮಾನವರ ಪವಾಡಗಳನ್ನು ಆಂದೋಲನ ಪ್ರಶ್ನಿಸುತ್ತಿತ್ತು. ನಿಂಬೆಹಣ್ಣನ್ನು ಕುಂಬಳಕಾಯಿಯಾಗಿ ಬದಲಿಸಬೇಕೆಂದು ಸಾಯಿಬಾಬಾ ಅವರನ್ನು ಕೇಳಿದ್ದೆ ಎಂದು ಅರಸ್ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ‘ದೇವಿ’ಯಂಥ ಚಿತ್ರ ಮಾಡಬೇಕೆಂದು ಅವರಿಗೆ ಅನ್ನಿಸಿರಬಹುದು. ಅವರು ಬರೆದ ‘ದೇವರ ಕಣ್ಣು’ ಶೀರ್ಷಿಕೆಯ ಚಿತ್ರಕತೆಯು ಅರ್ಥಪೂರ್ಣ ಸಂಭಾಷಣೆ ಇದ್ದ ಕಾರಣ, ಸಂಕಲನ ಮೇಜಿನ ಮೇಲೆ ಸಂಕಲ್ಪ ಎಂದು ಬದಲಾಯಿತು.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ‘ಸಂಕಲ್ಪ’ ತಾರ್ಕಿಕತೆ ಮತ್ತು ಆಸ್ತಿಕತೆ ನಡುವಿನ ಸಂಘರ್ಷ ಕುರಿತದ್ದು. ಜರ್ಮನಿಯ ತತ್ವಶಾಸ್ತ್ರಜ್ಞರಾದ ಇಮ್ಯಾನ್ಯುಯೆಲ್ ಕ್ಯಾಂಟ್ ಹಾಗೂ ಫ್ರೆಡ್ರಿಕ್ ನೀಶೆ ಅವರ ದೇವರ ಅಸ್ತಿತ್ವ ಕುರಿತ ಹೇಳಿಕೆಗಳನ್ನುಳ್ಳ ಸಂವಾದದಿಂದ ಚಿತ್ರ ಆರಂಭಗೊಳ್ಳುತ್ತದೆ. ಭಕ್ತನ ಮನೆಗೆ ದೇವಮಾನವನೊಬ್ಬ ಭೇಟಿ ನೀಡಿದ ನಂತರ ಚಿತ್ರ ವೇಗ ಪಡೆದುಕೊಳ್ಳುತ್ತದೆ. ಉನ್ನತ ಶಿಕ್ಷಣ ಪಡೆದ ಭಕ್ತನ ಮಗ(ಅನಂತ ನಾಗ್) ಮತ್ತು ಸೊಸೆ ಗೌರಿ (ಬಿಂದು ಜೈದೇವ್) ನಿರೀಶ್ವರವಾದಿಗಳು. ವೃದ್ಧ ಮನೆ ಹಿಂದಿನ ನಿಕ್ಷೇಪವನ್ನು ತೆಗೆಯಲು ಹೋಮವೊಂದನ್ನು ಮಾಡಬೇಕೆಂದು ಗುರುವನ್ನು ಕೇಳಿಕೊಂಡಿರುತ್ತಾನೆ. ಗೌರಿ ಮೂಲಕ ಪ್ರಕ್ರಿಯೆ ಆರಂಭವಾಗುತ್ತದೆ. ಹೋಮದ ವೇಳೆ ಗುರುವಿನ ಶುದ್ಧತೆ ಮತ್ತು ಬ್ರಹ್ಮಚರ್‍ಯದಿಂದ ಹಲವು ಪವಾಡಗಳು ನಡೆಯುತ್ತವೆ. ಆದರೆ, ಇದು ಹೆಚ್ಚು ಕಾಲ ಮುಂದುವರಿಯುವುದಿಲ್ಲ. ಗೌರಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿಕೊಳ್ಳುತ್ತಾನೆ. ಇದರಿಂದ ದುರ್ಬಲಗೊಂಡು, ತನ್ನ ಅಧ್ಯಾತ್ಮಿಕ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಜ್ವರದಿಂದ ಬಳಲುತ್ತಿದ್ದ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಜುಗುಪ್ಸೆಗೊಂಡು, ತೆರಳುತ್ತಾನೆ. ಅವನ ಸ್ಥಾನವನ್ನು ಶಿಷ್ಯ ಭರ್ತಿ ಮಾಡುತ್ತಾನೆ. ಹೊಸ ಗುರುವಿನ ಮೆರವಣಿಗೆ ಹಾಗೂ ಸಾರ್ವಜನಿಕರು ಆತನಲ್ಲಿ ಇರಿಸಿರುವ ಭಕ್ತಿಯನ್ನು ಕಂಡ ಗೌರಿ, ಗುರುವಿನ ಹಿಡಿತದಿಂದ ಬಿಡಿಸಿಕೊಳ್ಳುತ್ತಾಳೆ; ಜನ ಯಾವಾಗ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುತ್ತಾರೆ ಹಾಗೂ ಮೂಢನಂಬಿಕೆಗಳನ್ನು ತೊರೆಯುತ್ತಾರೆ ಎಂದು ಆಶ್ಚರ್‍ಯಪಡುತ್ತಾಳೆ.

ಸಂಕಲ್ಪ ‘ಏಕನಾಭಿಬಿಂದು’(ಯೂನಿಫೋಕಲ್) ಕಥನಕ್ರಮವಲ್ಲ. ತಗ್ಗು ದನಿಯ ಲಾಲಿತ್ಯ, ಗಾಢವಾದ ಗತಿ ಹಾಗೂ ಹಾಡುಗಳಲ್ಲದೆ, ಮೌನದ ಶಕ್ತಿಯ ಬಗ್ಗೆ ಆಳವಾದ ಗೌರವವನ್ನು ಒಳಗೊಂಡಿದೆ. ಸಂಕಲ್ಪವನ್ನು ಮೂಢನಂಬಿಕೆಯ ವಿನಾಶಕರ ಶಕ್ತಿಯ ಅಧ್ಯಯನವಾಗಿ ನೋಡಬಹುದು. ಅಲ್ಲಿ ಯಾರೂ ದುಷ್ಟರಿಲ್ಲ. ಚಿತ್ರ ನಿರ್ಮಾಪಕರು ಪಾತ್ರಗಳನ್ನು ಕಪ್ಪು-ಬಿಳುಪು ಎಂದು ಚಿತ್ರಿಸುವ ಬದಲು ಕಂದು(ಗ್ರೇ) ಛಾಯೆಯಲ್ಲಿ ನೋಡುತ್ತಾರೆ. ಅನಂತ ನಾಗ್ ಮತ್ತು ಬಿಂದು ಜೈದೇವ್ ನಟನೆ ಉತ್ತಮವಾಗಿದೆ. ರಾಮಚಂದ್ರ ಅವರ ಛಾಯಾಗ್ರಹಣ ‘ಹಿಂದುತ್ವ’ದ ಕಟ್ಟಾಸಕ್ತಿಯು ಹೇಗೆ ಹಾದಿತಪ್ಪಿದ ಪೂಜೆಯಾಗುತ್ತದೆ ಎಂಬುದನ್ನು ಪ್ರತಿಫಲಿಸುತ್ತದೆ. ನಂಜರಾಜ ಅರಸ್ ಕರುಣೆ ಹಾಗೂ ಒಳನೋಟಗಳುಳ್ಳ ಕಥನವನ್ನು ಮೆದು ಧ್ವನಿಯಲ್ಲಿ ಆದರೆ, ಆಕರ್ಷಕವಾಗಿ ಹೇಳಿದ್ದಾರೆ. ಆದರೆ, ‘ನಂಬಿಕೆಯ ಪ್ರಶ್ನೆ’ ಯನ್ನು ನಿರ್ವಹಿಸುವಾಗ ಕೆಲವೊಮ್ಮೆ ನಾಟಕೀಯ ಎನಿಸುತ್ತಾರೆ ಹಾಗೂ ಪ್ರಯಾಸ ಪಡುತ್ತಾರೆ. ದೇವರು ಎಂಬ ಪರಿಕಲ್ಪನೆ ಅಸಂಗತ; ದೇವರು ಎನ್ನುವುದು ಮನುಷ್ಯರ ಅಪೀಮು. ಧಾರ್ಮಿಕತೆ ಎನ್ನುವುದು ಸಮಾಜದ ನೈತಿಕ ಪರಿಕಲ್ಪನೆ. ನಂಬಿಕೆ ಎನ್ನುವುದು ಬದುಕಿನ ಆಧಾರಸ್ತಂಭ. ಮನುಷ್ಯರು ಸೃಜನಶೀಲರಾಗಲು ದೇವರ ಅಗತ್ಯವಿದೆ ಎಂಬ ಹೇಳಿಕೆಗಳಿರುವ ಆಸ್ತಿಕ ಮತ್ತು ನಾಸ್ತಿಕರ ಸ್ವಗತದಂತೆ ಕಂಡುಬರುತ್ತದೆ.

ಅರಸ್ ತಮ್ಮ ವಿಚಾರವಾದಿ ನಿಲುವನ್ನು ದೃಢೀಕರಿಸಲು ಮನಶಾಸ್ತ್ರಜ್ಞ ನಂದು ಹಾಗೂ ಗುರು ಮೂಲಕ ವಶೀಕರಣ ತಂತ್ರವನ್ನು ತರುತ್ತಾರೆ. ವಿಷಯ ಇಲ್ಲವೇ ಆಲೋಚನೆ ಕೇಳುವ ಬೌದ್ಧಿಕತೆಯನ್ನು ತರುವಲ್ಲಿ ಚಿತ್ರ ಈ ಹಂತದಲ್ಲಿ ಹಿಂದೆ ಬೀಳುತ್ತದೆ. ಆದರೆ, ರಾಮಚಂದ್ರ ಅವರ ಕ್ಯಾಮೆರಾ ತನ್ನ ದೃಶ್ಯ ಪ್ರಜ್ಞೆ ಹಾಗೂ ಅಂತರ್‌ದೃಷ್ಟಿಯ ಮೂಲಕ ಪಠ್ಯವನ್ನು ರಕ್ಷಿಸುತ್ತದೆ. ಅದರಲ್ಲೂ ಆ ಕ್ಲೋಸ್‌ಅಪ್ ಶಾಟ್‌ಗಳು. ಆದರೆ, ನಾವು ಸಂಕಲ್ಪವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದರೆ, ಸಂಕಲ್ಪ ಹಾಗೂ ದೇವಿ ನಡುವಿನ ಸಾಮ್ಯತೆಯು ಕಥೆಗೆ ಸಂಬಂಧಿಸಿದಂತೆ ಬೆರಗುಗೊಳಿಸುವಂತೆ ಇದೆ. ದೇವಿಯಲ್ಲಿ ೧೬ನೇ ಶತಮಾನದ ಬಂಗಾಳದ ಮೇಲ್ಜಾತಿಯ ಜಮೀನುದಾರರ ಮನೆತನಕ್ಕೆ ಸೇರಿದ ಉಮಾಪ್ರಸಾದ್(ಸೌಮಿತ್ರ ಚಟರ್ಜಿ)ರನ್ನು ಮದುವೆಯಾಗಿರುವ ದಯಾಮಯಿ(ಶರ್ಮಿಳಾ ಟ್ಯಾಗೋರ್) ಸುಃಖಮಯ ದಾಂಪತ್ಯ ನಡೆಸುತ್ತಿದ್ದಾರೆ. ಸಂಕಲ್ಪದಲ್ಲಿ ಅದು ನಂದು ಮತ್ತು ಗೌರಿ. ದೇವಿಯಲ್ಲಿ ದಯಾಮಯಿಯನ್ನು ಆಕೆಯ ಮಾವ ನೀನು ದೈವಾಂಶಸಂಭೂತಳು ಎಂದು ಒಪ್ಪಿಸಿದರೆ, ನಂದುವಿನ ತಂದೆ ನಿಕ್ಷೇಪದ ದುರಾಸೆಯಿಂದ ಗೌರಿಯನ್ನು ಬಲಿಪಶು ಆಗಿಸುತ್ತಾನೆ. ಸಂಕಲ್ಪದಲ್ಲಿ ಅನಂತನಾಗ್ ಮನೆ ಗುಡಿಯಾಗಿ ಪರಿವರ್ತನೆಯಾದರೆ, ದೇವಿಯಲ್ಲಿ ಕೂಡ ಇದು ಸಂಭವಿಸುತ್ತದೆ. ಎರಡೂ ಚಿತ್ರಗಳಲ್ಲಿ ದೇವಿ ಮಾನವಕಾರುಣ್ಯ ಪ್ರದರ್ಶಿಸುತ್ತಾಳೆ. ದೇವಿಯ ಶಕ್ತಿಯಿಂದ ಕಾಯಿಲೆ ಬಿದ್ದ ಮೊದಲ ಮಗು ಗುಣಹೊಂದಿದರೆ, ಎರಡೂ ಚಿತ್ರಗಳಲ್ಲಿ ಎರಡನೆಯ ಹಾಗೂ ಕುಟುಂಬದ ಸ್ವಂತ ಶಿಶು ಮೃತಪಡುತ್ತವೆ.

ರೇ ಅವರ ಚಿತ್ರ ಧಾರ್ಮಿಕ ಗೀಳಿನ ಬಗ್ಗೆ ಎಚ್ಚರಿಕೆಯಿಂದ ಹೆಣೆದ ಸೂಕ್ಷ್ಮ ಅಧ್ಯಯನವಾಗಿದ್ದು, ಛಬ್ಬಿ ಬಿಶ್ವಾಸ್ ತನ್ನ ಸೊಸೆ ದಯಾಮಯಿ(ಶರ್ಮಿಳಾ ಟ್ಯಾಗೋರ್) ಕಾಳಿಯ ಅವತಾರವೆಂದು ನಂಬುತ್ತಾನೆ. ಚಿತ್ರ ಮೂಢನಂಬಿಕೆ ಹಾಗೂ ಮತಭ್ರಾಂತಿಯ ವಿನಾಶಕರ ಪ್ರವೃತಿಯ ಎದುರು ಪ್ರಬಲ ವಾದವನ್ನು ಮಂಡಿಸುತ್ತದೆ; ದಯಾಮಯಿ ಕ್ರಮೇಣ ತನ್ನ ವೈಯಕ್ತಿಕತೆಯ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾಳೆ. ಸಂಶಯಕ್ಕೆ ಎಡೆಯೇ ಇಲ್ಲದಂತೆ, ಚಿತ್ರದ ಕಟ್ಟುವಿಕೆ ಅಪೂರ್ವವಾಗಿದೆ. ಆದರೆ, ಅದರ ಭಾರತೀಯ ಕಾಳಜಿಗಳು ವಿಸ್ತೃತ ಆಸಕ್ತಿ ಹೊಂದಿವೆಯೇ ಎನ್ನುವುದು ವಿವಾದಾಸ್ಪದ ಅಂಶ. ರೇ ಅವರ ಸ್ಪಷ್ಟ ಮುನ್ನೋಟ ಹಾಗೂ ನಿರೂಪಣೆಯಲ್ಲಿ ಕಾವ್ಯಾತ್ಮಕ ಮಾರ್ಗವು ದೇವಿಯನ್ನು ಗಾಢವಾದ ಒಗಟಾಗಿಸುತ್ತದೆ; ಅದೇ ಹೊತ್ತಿನಲ್ಲಿ ಅನಿಶ್ಚಿತ ಹಾಗೂ ಆಶ್ಚರ್‍ಯಕರವಾಗಿಸುತ್ತದೆ. ಕಾಯಿಲೆಪೀಡಿತರು ಹಾಗೂ ಕಾಳಿಯ ಭಕ್ತರ ‘ಯೆ ಬರ್ ತೊರೆ ಚಿನೆಚಿ ಮಾ’ ಎಂಬ ಹಾಡಿನ ಹಿನ್ನೆಲೆಯಲ್ಲಿ ೧೯ನೇ ಶತಮಾನದ ಮಹಲು ದೇವಾಲಯವಾಗಿ ಪರಿವರ್ತನೆಯಾದರೆ, ಶರ್ಮಿಳಾ ಟ್ಯಾಗೋರ್ ಅವರ ಶೂನ್ಯ-ಭಾವರಹಿತ ಮುಖವು ತಾರ್ಕಿಕತೆ ಹಾಗೂ ಕುರುಡು ನಂಬಿಕೆಯ ನಡುವಿನ ಸಂಘರ್ಷವನ್ನು ಬಿಂಬಿಸುತ್ತದೆ. ಚಿತ್ರದ ಅಂತ್ಯ ಸಿನೆಮಾಪ್ರಿಯರ ಮನಸ್ಸಿನಲ್ಲಿ ಇಂದಿಗೂ ಉಳಿದುಕೊಂಡಿದ್ದು, ದಯಾಮಯಿ ತನ್ನ ಭವಿಷ್ಯದ ಅನಿಶ್ಚಿತತೆ ನಡುವೆಯೇ ಎಲ್ಲವನ್ನೂ ತೊರೆಯು ತ್ತಾಳೆ. ಶೂನ್ಯದಲ್ಲಿ ಕರಗುವ ಮುನ್ನ ಆಕೆಯ ನೋಟವು ಇಂದಿಗೂ ಮಹಿಳೆಯರು ಎದುರಿಸಬೇಕಾದ ಸಂಕಷ್ಟಗಳನ್ನು ತೆರೆದಿಡುತ್ತದೆ. ವಿಜ್ಞಾನ ವಿ/ಎಸ್ ಧರ್ಮ ಮತ್ತಿತರ ಸಮಸ್ಯೆಗಳು, ಕುರುಡು ನಂಬಿಕೆ ಹಾಗೂ ಸ್ವಪ್ರತಿಷ್ಠೆಯ ಹುಚ್ಚು ತರುವ ಅಪಾಯಗಳನ್ನು ಚಿತ್ರ ಒಳಗೊಂಡಿದೆ.

೧೯೭೦ರಲ್ಲಿ ಸಾಂಪ್ರದಾಯಿಕ ಬ್ರಾಹ್ಮಣ ಸಮಾಜ ‘ಸಂಸ್ಕಾರ’ಕ್ಕೆ ವ್ಯಕ್ತಪಡಿಸಿದ ಪ್ರತಿರೋಧದಂತೆ, ರೇ ಅವರ ‘ದೇವಿ’ ಕೂಡ ಧಾರ್ಮಿಕ ಮುಖಂಡರಿಂದ ವಿರೋಧ ಎದುರಿಸಿತು. ಕೆಲವು ಪ್ರತಿಭಟನಾಕಾರರು ‘ಚಿತ್ರ ಹಿಂದುತ್ವದ ಮೇಲಿನ ದಾಳಿ ನಡೆಸಿದೆ’ ಎಂದು ಚಿತ್ರದ ಅಂತಾರಾಷ್ಟ್ರೀಯ ಬಿಡುಗಡೆಗೆ ತಡೆಯೊಡ್ಡಲು ಪ್ರಯತ್ನಿಸಿದರು. ಅದರೆ, ಚಿತ್ರ ಬಿಡುಗಡೆಗೊಂಡಿತು ಹಾಗೂ ಹಲವು ರಾಷ್ಟ್ರೀಯ ಪ್ರಶಸ್ತಿಗಳು, ರಾಷ್ಟ್ರಪತಿಯವರ ಚಿನ್ನದ ಪದಕಕ್ಕೆ ಪ್ರಾಪ್ತವಾಯಿತು. ಆದರೆ, ‘ಸಂಕಲ್ಪ’ಕ್ಕೆ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ.

೧೯ನೇ ಶತಮಾನದ ಜಮೀನ್ದಾರ ವರ್ಗದ ಬದುಕಿನ ಮಾರ್ಗಗಳ ಛಿದ್ರಗೊಳ್ಳುವಿಕೆಯೊಳಗೇ ಅಮಲೇರಿಸುವ ಸೌಂದರ್‍ಯವಿರುವುದನ್ನು ಕಾಣುವ ರೇ ಅವರ ಭಾವನೆಗಳಲ್ಲಿ ‘ದೇವಿ’ಯ ಯಶಸ್ಸು ಇದೆ. ಅದು ಅವನತಿಯನ್ನು ಕುರಿತ ಅಪರೂಪದ ಹಾಗೂ ಪ್ರಾಮಾಣಿಕ ಚಿತ್ರಗಳಲ್ಲೊಂದು. ಅರಸ್ ‘ಸಂಕಲ್ಪ’ದಲ್ಲಿ ಸಮಾಜವನ್ನು ಕಾಡುತ್ತಿರುವ ಹಲವು ಕೆಡುಕುಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರಾದರೂ, ಅದೇ ಹೊತ್ತಿನಲ್ಲಿ ಅವನತಿಯ ಹಾದಿ ಹಿಡಿದಿದ್ದ ಪಿತೃಪ್ರಧಾನ ಸಮಾಜವನ್ನು ಚಿತ್ರಿಸುವಲ್ಲಿ ವಿಫಲರಾದರು. ಆಗ ಹಿಂದುಳಿದ ವರ್ಗಗಳ ನಾಯಕ, ಮುಖ್ಯಮಂತ್ರಿ ದೇವರಾಜ ಅರಸು ಮಹತ್ವಾಕಾಂಕ್ಷಿ ‘ಉಳುವವನೇ ಹೊಲದೊಡೆಯ’ ಭೂ ಸುಧಾರಣೆ ಕಾರ್‍ಯಕ್ರಮವನ್ನು ಆರಂಭಿಸಿದ್ದರು.

ಸಂಕಲ್ಪ ಚಿತ್ರದ ಟೀಕಾಕಾರರು ಅದೊಂದು ಉತ್ತಮ ಚಿತ್ರ ಎಂದು ಶ್ಲಾಘಿಸುತ್ತಾರೆ. ಆದರೆ, ‘ಭಾರತೀಯವೆನ್ನುವ ಅಥವಾ ಹಿಂದೂ ಸಂಪ್ರದಾಯದ ಎಲ್ಲವನ್ನೂ ಟೀಕಿಸುವ ಎಡಪಂಥೀಯರ ಗೀಳು’ ಎಂದೂ ಟೀಕಿಸುತ್ತಾರೆ. ‘ಸಂಕಲ್ಪ’ ಜನರ ಮನಸ್ಸಿನಿಂದ ಮರೆಯಾಗಿರುವುದು ದುರದೃಷ್ಟಕರ. ಆದರೆ, ‘ದೇವಿ’ ಕುರಿತು ಈಗಲೂ ಚರ್ಚೆ ನಡೆಯುತ್ತದೆ ಮತ್ತು ವಿವಿಧ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

Tags:    

Similar News