ಯುವ ರಾಜಕುಮಾರ್ ಕೈಯಲ್ಲಿ ರಕ್ತ; ಹೋರಾಟಕ್ಕೆ ಸಜ್ಜಾದ ಡಾ. ರಾಜ್ ಮೊಮ್ಮಗ
ಡಾ. ರಾಜಕುಮಾರ್ ಮೊಮ್ಮಗ ಯುವ ರಾಜಕುಮಾರ್ ಅಭಿನಯದ ಮೊದಲ ಚಿತ್ರ ಬಿಡುಗಡೆಯಾಗಿ ಆರು ತಿಂಗಳುಗಳೇ ಆಗಿವೆ. ಯುವ ಅಭಿನಯದ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಈಗ ಕೊನೆಗೂ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ‘ಎಕ್ಕ’ ಎಂಬ ಚಿತ್ರದಲ್ಲಿ ಯುವ ನಟಿಸುತ್ತಿದ್ದು, ಈ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಿದೆ.
ಯುವ ರಾಜಕುಮಾರ್ ಅವರ ಮುಂದಿನ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ನಿರ್ದೇಶಿಸಿದ್ದ ರೋಹಿತ್, ‘ಎಕ್ಕ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಬರವಣಿಗೆಯಲ್ಲಿ ವಿಕ್ರಂ ಹತ್ವಾರ್, ರೋಹಿತ್ ಕೈಜೋಡಿಸಿದ್ದಾರೆ.
ಈ ಚಿತ್ರದಲ್ಲಿ ಯುವ ಕೈಗೆ ರಕ್ತ ಮೆತ್ತಿಕೊಂಡಿದೆ. ಮೊದಲ ಚಿತ್ರದಲ್ಲೂ ಯುವ ಹೊಡೆದಾಡಿದ್ದರು. ಆದರೆ, ಈ ಚಿತ್ರದಲ್ಲಿ ಇನ್ನೂ ಜಾಸ್ತಿ ಹೊಡೆದಾಡುವ ಮುನ್ಸೂಚನೆ ಪೋಸ್ಟರ್‍ನಲ್ಲೇ ಸಿಕ್ಕಿದೆ. ಮಟನ್ ಮಾರ್ಕೆಟ್‍ನಲ್ಲಿ ಹೊಡೆದಾಡಿ ರಕ್ತಸಿಕ್ತನಾಗಿರುವ ಯುವ ಅವರ ಪೋಸ್ಟರ್ ಬಿಡುಗಡೆಯಾಗಿದೆ. ಮೊದಲ ಚಿತ್ರದಲ್ಲೇ ಆ್ಯಕ್ಷನ್ ಹೀರೋ ಆಗಿದ್ದ ಯುವ, ಈ ಚಿತ್ರದಲ್ಲೂ ಅದನ್ನೇ ಮುಂದುವರೆಸುವ ಲಕ್ಷಣಗಳು ಕಾಣುತ್ತಿವೆ. ಇಷ್ಟಕ್ಕೂ ಯುವ ಯಾಕೆ ಹೊಡೆದಾಡುತ್ತಿದ್ದಾರೆ, ಅವರ ಕೈಗೆ ಯಾಕೆ ರಕ್ತ ಅಂಟಿದೆ ಎಂಬ ವಿಷಯಗಳನ್ನು ಸದ್ಯ ಚಿತ್ರತಂಡ ಬಹಿರಂಗಪಡಿಸಿಲ್ಲ.
ಈ ಚಿತ್ರವನ್ನು ಕನ್ನಡದ ಮೂರು ಜನಪ್ರಿಯ ನಿರ್ಮಾಣ ಸಂಸ್ಥೆಗಳು ನಿರ್ಮಿಸುವುದಕ್ಕೆ ಮುಂದೆ ಬಂದಿರುವುದು ವಿಶೇಷ. ಪಿ.ಆರ್.ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ ಮತ್ತು ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆಗಳಡಿ, ಈ ಚಿತ್ರವನ್ನು ಅಶ್ವಿನಿ ಪುನೀತ್ ರಾಜಕುಮಾರ್, ಜಯಣ್ಣ, ಭೋಗೇಂದ್ರ, ಕಾರ್ತಿಕ್ ಗೌಡ ಮತ್ತು ಯೋಗಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಯುವ ರಾಜಕುಮಾರ್ ಅಭಿನಯದ ಚಿತ್ರವೊಂದನ್ನು ನಿರ್ಮಿಸುವ ಆಸೆಯನ್ನು ಅಶ್ವಿನಿ ಪುನೀತ್ ವ್ಯಕ್ತಪಡಿಸಿದ್ದರು. ಈಗ ಅವರು ಸಹ ಈ ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.
‘ಎಕ್ಕ’ ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್. ಕುಮಾರ್ ಸಂಕಲನವಿದೆ. ಇದೇ ತಿಂಗಳು ಚಿತ್ರೀಕರಣ ಪ್ರಾರಂಭವಾಗಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ.