‘ಯುದ್ಧಕಾಂಡ’ ಚಿತ್ರ ಆಗುವುದಕ್ಕೆ ಮಗಳು ಕಾರಣ; ಹೆಣ್ಣಿನ ಶೋಷಣೆಯ ವಿರುದ್ಧ ಅಜಯ್‍ ಹೋರಾಟ

ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕೇಂದರೆ ನ್ಯಾಯಾಂಗದಲ್ಲಿ ಒಂದಿಷ್ಟು ವಿಷಯಗಳು ಸರಿ ಹೋಗಬೇಕಿವೆ. ಈ ಚಿತ್ರ ರಾಷ್ಟ್ರಪತಿಗಳಿಗೂ ತಲುಪಬೇಕು ಎನ್ನುವುದು ನನ್ನ ಉದ್ದೇಶ’ ಎನ್ನುತ್ತಾರೆ.;

Update: 2025-04-05 12:35 GMT

ಅಜಯ್‌ ರಾವ್‌ 

Click the Play button to listen to article

ಅಜಯ್‍ ರಾವ್‍ ಅಭಿನಯದ ಮತ್ತು ನಿರ್ಮಾಣದ ‘ಯುದ್ಧಕಾಂಡ’ ಚಿತ್ರವು ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಇದೀಗ ಚಿತ್ರವು ಏಪ್ರಿಲ್‍ 18ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಈ ಚಿತ್ರವನ್ನು ಅವರು ನಿರ್ಮಿಸುತ್ತಿರುವುದಕ್ಕೆ ಕಾರಣ ಅವರ ಮಗಳಂತೆ. ಅದು ಹೇಗೆ ಎಂದು ಅವರೇ ಹೇಳಿಕೊಂಡಿದ್ದಾರೆ.

ಇದು ಹೆಣ್ಣಿನ ಮೇಲೆ ಆಧಾರಿತವಾದ ಸಿನಿಮಾ ಎನ್ನುವ ಅಜಯ್‍, ‘ಭಾರತದ ಅಷ್ಟೂ ಹೆಣ್ಣುಗಳನ್ನು ಪ್ರತಿನಿಧಿಸುವ ಒಂದು ಪಾತ್ರವನ್ನು ಅರ್ಚನಾ ಜೋಯಿಸ್ ಮಾಡಿದ್ದಾರೆ. ಚಿತ್ರದಲ್ಲಿ ನಾನು ಭರತ್‍ ಎಂಬ ಪಾತ್ರವನ್ನು ಮಾಡಿದ್ದೇನೆ. ಭರತ ಖಂಡವನ್ನು ಪ್ರತಿನಿಧಿಸುವ ಪಾತ್ರ. ಇದು ಧರ್ಮಕ್ಕಾಗಿ ಹೋರಾಟದ ಕುರಿತಾದ ಚಿತ್ರ. ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕೇಂದರೆ ನ್ಯಾಯಾಂಗದಲ್ಲಿ ಒಂದಿಷ್ಟು ವಿಷಯಗಳು ಸರಿ ಹೋಗಬೇಕಿವೆ. ಈ ಚಿತ್ರ ರಾಷ್ಟ್ರಪತಿಗಳಿಗೂ ತಲುಪಬೇಕು ಎನ್ನುವುದು ನನ್ನ ಉದ್ದೇಶ’ ಎನ್ನುತ್ತಾರೆ.

ಇಲ್ಲಿ ಯಾರೋ ಒಬ್ಬ ಒಬ್ಬ ಹೆಣ್ಣಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡುವ ಬದಲು, ಶೋಷಣೆ, ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರ ಕುರಿತಾದ ಚಿತ್ರ ಇದು ಎಂಬುದು ಅಜಯ್‍ ಮಾತು. ‘ನ್ಯಾಯ ಸಿಗದಿರುವುದು ಸಹ ಒಂದು ಅನ್ಯಾಯ. ಸಂತ್ರಸ್ತೆ ಎನ್ನುವುದುರ ಜೊತೆಗೆ ನ್ಯಾಯ ವಿಳಂಬವಾಗಿರುವ ಉದಾಹರಣೆಯಾಗಿ ಬಳಸಿಕೊಂಡಿದ್ದೇವೆ. ಈ ಕುರಿತಾಗಿ ಜಾಗೃತಿ ಮೂಡಿಸಬೇಕು. ಎಲ್ಲೋ ಒಂದು ಕಡೆ ಪ್ರಕರಣ ಸ್ವಲ್ಪ ಹಳೆಯದಾಗುತ್ತಿದ್ದಂತೆಯೇ ಮರೆತು ಹೋಗಿಬಿಡುತ್ತದೆ. ನಿರಂತರವಾಗಿ ಆ ಹೋರಾಟ ನಡೆಯುತ್ತಲೇ ಇರಬೇಕು. ನಾವು ವೇಗವಾಗಿ ಹೋಗುವಾಗ, ರಸ್ತೆಯಲ್ಲಿ ಒಂದು ಸ್ಪೀಡ್‍ ಬ್ರೇಕರ್ ಸಿಗುತ್ತದೆ. ನಾವು ವೇಗವಾಗಿ ಹೋಗುತ್ತಿದ್ದೇವೆ ಎಂದು ಅದು ಜ್ಞಾಪಿಸುತ್ತದೆ. ನಮ್ಮ ಸಿನಿಮಾ ಮೂಲಕ ಕೆಲವರಿಗೆ ನ್ಯಾಯ ಸಿಗುವುದು ತಡವಾಗುತ್ತಿದೆ ಎಂದು ಎಚ್ಚರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ಪ್ರಚಾರ ತೆಗೆದುಕೊಳ್ಳಬೇಕು ಎಂಬ ಆಸೆ ಇಲ್ಲ. ಸಿನಿಮಾ ಮೂಲಕ ಧ್ವನಿ ಎತ್ತವ ಪ್ರಯತ್ನ ಇದು’ ಎನ್ನುತ್ತಾರೆ ಅವರು.

ಈ ಕಥೆ ಕೇಳಿದಾಗ ಅಜಯ್‍ ಕಣ್ಣ ಮುಂದೆ ಅವರ ಮಗಳು ಬಂದಳಂತೆ. ‘ನನ್ಗೊಬ್ಬಳು ಮಗಳಿದ್ದಾಳೆ ಎನ್ನುವ ಒಂದೇ ಕಾರಣದಿಂದ ಈ ಚಿತ್ರ ಮಾಡಿದೆ. ಈ ಪರಿಸ್ಥಿತಿ ನನ್ನ ಮನೆಯಲ್ಲಿ ನನ್ನ ಮಗಳಿಗಾದರೆ ನಾನು ಕಾನೂನು ಕೈಗೆ ತೆಗೆದುಕೊಳ್ಳುತ್ತೇನಾ? ಯಾವ ರೀತಿ ಹೋರಾಟ ಮಾಡುತ್ತೇನೆ? ಈ ವಿಷಯ ಮಾತಾಡಬೇಕಾದರೆ ಭಾವುಕನಾಗುತ್ತೇನೆ. ಏಕೆಂದರೆ, ಅಷ್ಟೊಂದು ಕಿಚ್ಚಿದೆ ಈ ವಿಷಯದಲ್ಲಿ. ಆ ಕಥೆಯಲ್ಲಿ ಯಾವಾಗ ತಾಯಿ ಮತ್ತು ಮಗಳು ವಿಚಾರ ಬಂದಾಗ, ಸಾಕಷ್ಟು ಅತ್ತಿದ್ದೇನೆ. ಕಥೆ ಕೇಳಿದಾಗಲೆಲ್ಲಾ ನೋವಾಗಿದೆ. ಪ್ರತಿ ಬಾರಿ ಎಡಿಟಿಂಗ್‍ ಟೇಬಲ್‍ನಲ್ಲಿ ಅತ್ತಿದ್ದೇನೆ, ಪ್ರತಿ ಬಾರಿ ಸಿನಿಮಾ ನೋಡಿದಾಗ ಅತ್ತಿದ್ದೇನೆ. ಅದಕ್ಕೆ ಕಾರಣ ನನ್ನ ಮಗಳು’ ಎನ್ನುತ್ತಾರೆ ಅವರು.

ಮಹಿಳೆಯರ ಮೇಲೆ ದೌರ್ಜನ್ಯ ತಡೆಗಟ್ಟಲು ಕಾನೂನು ಬೇಕು ಎನ್ನುವ ಅಜಯ್‍, ‘ಒಂದು ಹೆಣ್ಣಿಗೆ ಅತ್ಯಾಚಾರ ಆದರೆ ಏನಾಗಬಹುದು? ಮತ್ತು ಸರಿಯಾದ ಸಮಯಕ್ಕೆ ನ್ಯಾಯ ಸಿಗದಿದ್ದಾಗ ನಾವು ಕಾನೂನು ಕೈಗೆತ್ತಿಕೊಂಡರೆ ನಾವು ಅಪರಾಧಿಗಳಾಗುತ್ತೇವೆ. ನಾವು ಗಾಡಿಯಲ್ಲಿ ಚಲಿಸುವಾಗ ಹೆಲ್ಮೆಟ್‍ ಹಾಕಿಕೊಳ್ಳಬೇಕು ಎಂದು ಸರ್ಕಾರ ಹೇಳುತ್ತದೆ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾದಾಗ ಅದಕ್ಕೆ ಏನೂ ಕಾಳಜಿ ತೋರಿಸುತ್ತೀರಾ? ಅದಕ್ಕೇನು ಕಾನೂನು ಮಾಡುತ್ತೀರಾ? ಆ ನಂತರ ಒಂದಿಷ್ಟು ಕಾನೂನುಗಳಿವೆ. ಆಗದಿರುವುದಕ್ಕೆ ಏನು ಮಾಡುತ್ತೀರಿ? ಬೇರೆ ಎಲ್ಲದಕ್ಕೂ ಮುಂಜಾಗ್ರತೆ ಇದೆ? ಆದರೆ, ಹೆಣ್ಣಿನ ವಿಷಯದಲ್ಲಿ ಯಾವುದೇ ಮುಂಜಾಗ್ರತೆ ಇಲ್ಲ. ಈ ಚಿತ್ರದ ಮೂಲಕ ನಮ್ಮ ಸಲಹೆ, ಅಭಿಪ್ರಾಯ ಕೊಡುವ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ.

‘ಯುದ್ಧಕಾಂಡ’ ಚಿತ್ರಕ್ಕೆ ಪವನ್‍ ಭಟ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಅಜಯ್‍ ರಾವ್,‍ ಅರ್ಚನಾ ಜೋಯಿಸ್‍, ಪ್ರಕಾಶ್‍ ಬೆಳವಾಡಿ, ಟಿ.ಎಸ್.‍ ನಾಗಾಭರಣ ಮುಂತಾದವರು ನಟಿಸಿದ್ದಾರೆ.

Tags:    

Similar News