ಸಂಚಾರ ನಿಯಮ ಉಲ್ಲಂಘನೆ: ಬಸ್‌ಗೆ 16 ಚಲನ್‌, 23,120 ರೂ.ದಂಡ ಬಾಕಿ

ತೆಲಂಗಾಣದಲ್ಲಿ ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಈ ಖಾಸಗಿ ಬಸ್‌ಗೆ ಒಟ್ಟು 16 ಸಂಚಾರ ನಿಯಮ ಉಲ್ಲಂಘನೆಗಳ ಚಲನ್‌ಗಳನ್ನು ವಿಧಿಸಲಾಗಿದ್ದು, ಒಟ್ಟು 23,120 ದಂಡ ಬಾಕಿ ಇದೆ ಎಂದು ಪ್ರಾದೇಶಿಕ ಸಾರಿಗೆ ಕಚೇರಿ ಮಾಹಿತಿ ನೀಡಿದೆ.

ಜನವರಿ 27, 2024 ಮತ್ತು ಅಕ್ಟೋಬರ್ 9, 2025ರ ನಡುವೆ ಬಸ್ 16 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ. ಈ ಪೈಕಿ ಒಂಬತ್ತು ಉಲ್ಲಂಘನೆಗಳು 'ಪ್ರವೇಶ ನಿಷೇಧ' ವಲಯಗಳಿಗೆ ಪ್ರವೇಶಿಸಿದ್ದಕ್ಕೆ ಸಂಬಂಧಿಸಿದ್ದು, ಉಳಿದ ಉಲ್ಲಂಘನೆಗಳು ಅತಿ ವೇಗ ಮತ್ತು ಅಪಾಯಕಾರಿ ಚಾಲನೆಗೆ ಸಂಬಂಧಿಸಿವೆ.

ವೇಮುರಿ ಕಾವೇರಿ ಟ್ರಾವೆಲ್ಸ್ ಒಡೆತನದ ಈ ಬಸ್ ಅನ್ನು ಒಡಿಶಾದ ರಾಯಗಡ ನಿವಾಸಿ ವೇಮುರಿ ವಿನೋದ್ ಕುಮಾರ್ ನಿರ್ವಹಿಸುತ್ತಿದ್ದರು.

ಸಾರಿಗೆ ಇಲಾಖೆಯ ಹೇಳಿಕೆ

ಆಂಧ್ರಪ್ರದೇಶ ಸಾರಿಗೆ ಇಲಾಖೆಯ ಹೇಳಿಕೆಯ ಪ್ರಕಾರ, ಈ ಬಸ್ ಅನ್ನು DD01 N9490 ಸಂಖ್ಯೆಯ ಅಡಿಯಲ್ಲಿ ನೋಂದಾಯಿಸಲಾಗಿದೆ. ಅಧಿಕಾರಿಗಳು ಈ ಕುರಿತು ಮಾತನಾಡಿದ್ದು, ಬಸ್ ಯಾಂತ್ರಿಕವಾಗಿ ಉತ್ತಮವಾಗಿತ್ತು ಮತ್ತು ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದಾಗ ಉಂಟಾದ ತೀವ್ರ ಪರಿಣಾಮದಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿಸಿದ್ದಾರೆ.

ಈ ಬಸ್ 'ಕಾವೇರಿ ಟ್ರಾವೆಲ್ಸ್' ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದನ್ನು ಮೂಲತಃ ಮೇ 2, 2018 ರಂದು ದಮನ್ ಮತ್ತು ಡಿಯುನಲ್ಲಿ ನೋಂದಾಯಿಸಲಾಗಿತ್ತು. ಈ ವಾಹನವು ಏಪ್ರಿಲ್ 30, 2030 ರವರೆಗೆ ಮಾನ್ಯವಾಗಿರುವ ಪ್ರವಾಸಿ ಪರವಾನಗಿ, ಮಾರ್ಚ್ 31, 2027 ರವರೆಗೆ ಮಾನ್ಯವಾಗಿರುವ ಫಿಟ್‌ನೆಸ್ ಪ್ರಮಾಣಪತ್ರ ಮತ್ತು ಏಪ್ರಿಲ್ 20, 2026 ರವರೆಗೆ ಮಾನ್ಯ ವಿಮೆಯನ್ನು ಹೊಂದಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Update: 2025-10-24 06:13 GMT

Linked news