ಸವಾಲುಗಳ ನಡುವೆಯೂ ದಸರಾ ಉದ್ಘಾಟನೆಗೆ ಅವಕಾಶ ನೀಡಿದ ಸರ್ಕಾರಕ್ಕೆ ಭಾನು ಮುಷ್ತಾಕ್ ಕೃತಜ್ಞತೆ
ಹಲವು ವಿವಾದಗಳು ಮತ್ತು ಸವಾಲುಗಳ ನಡುವೆಯೂ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸಲು ಅವಕಾಶ ನೀಡಿದ ರಾಜ್ಯ ಸರ್ಕಾರಕ್ಕೆ ಹಿರಿಯ ಸಾಹಿತಿ ಮತ್ತು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರು ಕೃತಜ್ಞತೆ ಸಲ್ಲಿಸಿದರು.
ತಮ್ಮ ದಸರಾ ಉದ್ಘಾಟನೆಯ ಕುರಿತಾದ ವಿವಾದಗಳು ಮತ್ತು ಸರ್ಕಾರದ ನಿರ್ಧಾರವನ್ನು ಉಲ್ಲೇಖಿಸಿ, ಇದು ನನಗೆ ಹೊಸದಲ್ಲ. ನಾನು ಇದುವರೆಗೆ ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ, ನೂರಾರು ಬಾರಿ ದೀಪ ಬೆಳಗಿಸಿದ್ದೇನೆ. ಪುಷ್ಪಾರ್ಚನೆ ಮತ್ತು ಮಂಗಳಾರತಿ ಸ್ವೀಕರಿಸಿದ್ದೇನೆ. ಇದು ನನಗೆ ಹೊಸ ಅನುಭವವೇನಲ್ಲ ಎಂದು ಭಾನು ಮುಷ್ತಾಕ್ ಹೇಳಿದರು.
ಆತ್ಮಕಥೆಯಲ್ಲಿ ಹಿಂದೂ ಧರ್ಮದೊಂದಿಗಿನ ಬಾಂಧವ್ಯ
ಭಾನು ಮುಷ್ತಾಕ್ ಅವರು ತಮ್ಮ ಆತ್ಮಕಥೆಯ ಬಗ್ಗೆಯೂ ಮಾಹಿತಿ ನೀಡಿದರು. "ನನ್ನ ಆತ್ಮಕಥೆ ನಾಳೆ ಬಿಡುಗಡೆಯಾಗಲಿದೆ. ಅದರಲ್ಲಿ ನನ್ನ ಮತ್ತು ಹಿಂದೂ ಧರ್ಮದ ನಡುವಿನ ಬಾಂಧವ್ಯ ಹೇಗಿದೆ ಎಂಬುದನ್ನು ನಾನು ಬರೆದಿದ್ದೇನೆ ಎಂದು ತಿಳಿಸಿದರು. ಎಷ್ಟೇ ರೀತಿಯ ಸವಾಲುಗಳು ಬಂದರೂ ಕೂಡ ದಿಟ್ಟವಾಗಿ ನಿಂತು, ತಮ್ಮ ದಸರಾ ಉದ್ಘಾಟನೆಗೆ ಆಹ್ವಾನಿಸಿದಕ್ಕೆ ಹಾಗೂ ನನಗೆ ನೈತಿಕ ಬೆಂಬಲ ನೀಡಿದ ಸರ್ಕಾರಕ್ಕೆ ನಾನು ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಭಾನು ಮುಷ್ತಾಕ್ ಹೇಳಿದರು.