ಕಾಲ್ತುಳಿತ: ಅಧಿಕಾರಿಗಳ ಅಮಾನತಿಗೆ ನಟಿ ರಮ್ಯಾ ಅಸಮಾಧಾನ

 ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಅಧಿಕಾರಿಗಳನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್‌ನ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅಸಮಾಧಾನ ಹೊರಹಾಕಿದ್ದಾರೆ.  

‘ಆರ್‌ಸಿಬಿ ಗೆಲುವು ಸಾಧಿಸಿದ ರಾತ್ರಿ ರಾಜ್ಯಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಮಾಲ್‌ಗಳು ಹಾಗೂ ಬೀದಿಗಳಲ್ಲಿ ಜನರು ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಆಗ ಒಂದೇ ಒಂದು ಅಹಿತಕರ ಘಟನೆಯೂ ನಡೆದಿರಲಿಲ್ಲ. ಕಾಲ್ತುಳಿತ ಸುಮ್ಮನೆ ಸಂಭವಿಸಿಲ್ಲ. ಅದನ್ನು ಸೃಷ್ಟಿ ಮಾಡಲಾಗುತ್ತದೆ. ರಾಜ್ಯ ಸರ್ಕಾರ, ಅಧಿಕಾರಿಗಳು, ಆರ್​ಸಿಬಿ, ಪೊಲೀಸರು, ಕೆಎಸ್‌ಸಿಎ ಮತ್ತು ಸಾರ್ವಜನಿಕರ ಸಾಮೂಹಿಕ ವೈಫಲ್ಯದಿಂದ ಕಾಲ್ತುಳಿತ ದುರಂತ ಸಂಭವಿಸಿದೆʼ ಎಂದು ರಮ್ಯಾ ಹೇಳಿದ್ದಾರೆ.

‘ಗೆಲುವನ್ನು ಸಂಭ್ರಮಿಸಲು ಬಂದ ಮುಗ್ಧರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಈ ಸಾವಿಗೆ ಕಾರಣ ಪತ್ತೆ ಮಾಡಿ, ನ್ಯಾಯ ಒದಗಿಸಲು ಪ್ರಾಮಾಣಿಕ ಆತ್ಮಾವಲೋಕನ ಅಗತ್ಯವಿದೆ. ಇಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಿದ ನಿರ್ಧಾರವು ಯೋಚಿಸದೇ ತೆಗೆದುಕೊಂಡ ಕ್ರಮದಂತೆ ಕಾಣುತ್ತದೆ. ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವ ಮೊದಲು ತನಿಖಾ ವರದಿಗಾಗಿ ಕಾಯಬೇಕಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

Update: 2025-06-07 06:40 GMT

Linked news