ಜಾರ್ಖಂಡ್: ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ಚಂಪೈ ಸೊರೇನ್
x

ಜಾರ್ಖಂಡ್: ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ಚಂಪೈ ಸೊರೇನ್

ನಿಕಟಪೂರ್ವ ಸಿಎಂ ಹೇಮಂತ್ ಸೊರೆನ್ ಬಂಧನದ ನಂತರ ಫೆಬ್ರವರಿ 2 ರಂದು ಜೆಎಂಎಂ ಶಾಸಕಾಂಗ ಪಕ್ಷದ ನಾಯಕ ಚಂಪೈ ಸೊರೆನ್ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.


ರಾಂಚಿ: ರಾಜ್ಯ ವಿಧಾನಸಭೆಯಲ್ಲಿ ಸೋಮವಾರ(ಫೆ.5) ನಡೆದ ವಿಶ್ಜಾಸಮತ ಯಾಚನೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಆಡಳಿತಾರೂಢ ಮೈತ್ರಿಕೂಟವು ನಿರ್ಣಾಯಕ ವಿಶ್ವಾಸ ಮತವನ್ನು ಗೆದ್ದಿದೆ.

81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಚಂಪೈ ಸೊರೆನ್ ನೇತೃತ್ವದ ಸರ್ಕಾರ 47 ಮತಗಳನ್ನು ಪಡೆದಿದೆ.

ಜೆಎಂಎಂ ಶಾಸಕಾಂಗ ಪಕ್ಷದ ನಾಯಕ ಚಂಪೈ ಸೊರೆನ್ ಫೆ. 2 ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನಿಕಟಪೂರ್ವ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಕಳೆದ ವಾರ ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದ ನಂತರ, ಅವರ ಸ್ಥಾನಕ್ಕೆ ಚಂಪೈ ಅವರನ್ನು ಆಯ್ಕೆ ಮಾಡಲಾಗಿತ್ತು.

ಪ್ರಸ್ತುತ ಇಡಿ ಬಂಧನದಲ್ಲಿರುವ ಜೆಎಂಎಂ ನಾಯಕ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿಧಾನಸಭೆಗೆ ಹಾಜರಾಗಿ ಚಂಪೈ ಸೊರೆನ್ ನೇತೃತ್ವದ ಸರ್ಕಾರದ ವಿಶ್ವಾಸ ಮತ ಯಾಚನೆಯಲ್ಲಿ ಭಾಗವಹಿದ್ದರು. ರಾಂಚಿಯ ವಿಶೇಷ ನ್ಯಾಯಾಲಯವು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ಗೆ ವಿಶ್ವಾಸಮತ ಯಾಚನೆ ಕಲಾಪದಲ್ಲಿ ಭಾಗವಹಿಸಲು ಅನುಮತಿ ನೀಡಿದೆ.

ವಿಶ್ವಾಸಮತದ ಮುನ್ನ ಬಿಜೆಪಿಯು ತಮ್ಮನ್ನು ಬೇಟೆಯಾಡಲು ಪ್ರಯತ್ನಿಸಬಹುದು ಎಂಬ ಆಡಳಿತರೂಢ ಮೈತ್ರಿಕೂಟದ ಭಯದ ನಡುವೆಯೇ ಸುಮಾರು 38 ಶಾಸಕರು ಫೆಬ್ರವರಿ 2 ರಂದು ಎರಡು ವಿಮಾನಗಳಲ್ಲಿ ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದ ರಾಜಧಾನಿ ಹೈದರಾಬಾದ್ಗೆ ತೆರಳಿದ್ದರು.

ರಾಜ್ಯ ಸಚಿವ ಅಲಂಗೀರ್ ಆಲಂ ಭಾನುವಾರ (ಫೆಬ್ರವರಿ 4) "ನಮ್ಮ ಶಾಸಕರು ಒಗ್ಗಟ್ಟಾಗಿದ್ದಾರೆ ಮತ್ತು 81 ಸದಸ್ಯರ ವಿಧಾನಸಭೆಯಲ್ಲಿ ನಮಗೆ 48 ರಿಂದ 50 ಶಾಸಕರ ಬೆಂಬಲವಿದೆ" ಎಂದು ಹೇಳಿದ್ದರು.

ಕಳೆದ ವಾರ ಸಮ್ಮಿಶ್ರ ಸರ್ಕಾರ ಬಿಡುಗಡೆ ಮಾಡಿದ ವಿಡಿಯೋದಲ್ಲಿ ತನಗೆ 48 ಶಾಸಕರ ಬೆಂಬಲವಿದೆ ಎಂದು ಹೇಳಲಾಗಿತ್ತು. ಜೆಎಂಎಂ, ಕಾಂಗ್ರೆಸ್ ಮತ್ತು ಆರ್ಜೆಡಿ ನಡುವಿನ ಮೈತ್ರಿಯು 47 ಶಾಸಕರನ್ನು ಹೊಂದಿದೆ ಮತ್ತು ಇದನ್ನು ಒಬ್ಬ ಸಿಪಿಎಂಎಲ್ (ಎಲ್) ಶಾಸಕರು ಹೊರಗಿನಿಂದ ಬೆಂಬಲಿಸಿದ್ದಾರೆ. ಆಡಳಿತಾರೂಢ ಮೈತ್ರಿಕೂಟದ ಶಾಸಕರು ಭಾನುವಾರ ಸಂಜೆ (ಫೆ.4) ಹೈದರಾಬಾದ್ನಿಂದ ರಾಂಚಿಗೆ ವಾಪಸ್ಸಾದ ನಂತರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು.

Read More
Next Story